ADVERTISEMENT

ಜಡಿ ಮಳೆಯೂ... ಕೆಂಚಣ್ಣನ ಕಂಬಳಿಯೂ....

ಕೃಷ್ಣಿ ಶಿರೂರ
Published 3 ಜುಲೈ 2021, 19:31 IST
Last Updated 3 ಜುಲೈ 2021, 19:31 IST
ಕಂಬಳಿ ಹೊದ್ದ ಕೆಲಸಗಾರರು
ಕಂಬಳಿ ಹೊದ್ದ ಕೆಲಸಗಾರರು   

ಮಲೆನಾಡಿನಲ್ಲಿ ಮುಂಗಾರು ಮಳೆ ಸದ್ದು ಮಾಡುತ್ತಿದೆ. ನಮ್ಮ ಹುಬ್ಬಳ್ಳಿಯಲ್ಲಿ ದಿನಕ್ಕೆರಡು ಬಾರಿ ಮಳೆ ಬಯೋಮೆಟ್ರಿಕ್ ಹಾಜರಿಯಂತೆ ಹಾಜರಾತಿ ಕೊಟ್ಟು ಹೋಗುತ್ತಿದೆ. ಮೋಡ ಮುಸುಕಿದ, ಆಗೀಗ ಹನಿಸುವ ಮಳೆ ಕೂಡ ಮನವನ್ನು ಬಾಲ್ಯಕ್ಕೆ ಎಳೆದೊಯ್ಯುತ್ತಿವೆ. ಜೂನ್‌ 7 ಬಂತೆಂದರೆ ನನ್ನೂರು ಕಾನಸೂರಿನಲ್ಲಿ ಧೋ... ಎಂದು ರಚ್ಚೆ ಹಿಡಿಯುವ ಮಕ್ಕಳಂತೆ ಒಂದೇ ಸಮನೆ ಹೊಯ್ಯುವ ಮಳೆಗೆ ಒಂದೆರಡು ಮಾಹೆ ಬಿಡುಗಡೆಯೇ ಇರುತ್ತಿರಲಿಲ್ಲ. ಮೃಗಶಿರ, ಆರಿದ್ರ, ಪುಷ್ಯ, ಪುನರ್ವಸು... ಹೀಗೆ ಒಂದಕ್ಕಿಂತ ಒಂದು ಮಳೆ ಪೈಪೋಟಿಗೆ ಬಿದ್ದು ಸುರಿದವೆಂದರೆ ನೇಸರನಿಗೆ ಇಣುಕಲು ಒಂದಿನಿತು ಜಾಗವೇ ಇರುತ್ತಿರಲಿಲ್ಲ. ಚಳಿ–ಗಾಳಿಯುಳ್ಳ ಜಡಿಮಳೆಗೆ ಕೊಡೆ ಸಾಲುತ್ತಿರಲಿಲ್ಲ. ಇರೊದೊಂದೇ ಪ್ರಬಲ ಅಸ್ತ್ರವೆಂದರೆ ಅದು ಕಂಬಳಿ ಕೊಪ್ಪೆಯೇ ಆಗಿತ್ತು.

ಅದಕ್ಕೆ ಮಳೆಗಾಲಕ್ಕೆ ಮೊದಲೇ ಹಾನಗಲ್‌ನ ಕಂಬಳಿ ಕೆಂಚಣ್ಣ ನಮ್ಮೂರಲ್ಲಿ ಮಳಿಗೆ ತೆರೆಯುತ್ತಿದ್ದ. ಕಂಬಳಿ ಕುರಿಯ ಉಣ್ಣೆಯಿಂದ ನೇಯುವ ಕಂಬಳಿಯ ಪಿಂಡಿಗಳನ್ನು ಕೆಂಚಣ್ಣ ತನ್ನ ಮಳೆಗಾಲದ ಕಾಯಂ ಮಳಿಗೆಯ ಚಾವಣಿ ಮುಟ್ಟುವವರೆಗೂ ಪೇರಿಸಿಡುತ್ತಿದ್ದ. ಅಷ್ಟೊಂದು ಬೇಡಿಕೆ ಕೆಂಚಣ್ಣನ ಕಂಬಳಿಗಿತ್ತು. ಕೆಂಚಣ್ಣ ತನ್ನ ಕಂಬಳಿಗಳ ಮಾರಾಟಕ್ಕೆ ಕಾನಸೂರನ್ನೇ ಆಯ್ಕೆ ಮಾಡಿಕೊಳ್ಳಲೂ ಕಾರಣವಿದೆ. ನಮ್ಮ ಕಾನಸೂರು ಹೇಗಿತ್ತೆಂದರೆ ಶಿರಸಿ–ಸಿದ್ದಾಪುರ ನಡುವೆ ಮೇನ್‌ ರೋಡಿನಲ್ಲೇ ಸಿಗುವ ಊರು. ಕಾನಸೂರು ಪುಟ್ಟದಾದರೂ ಅದು ಸುತ್ತಲಿನ ಮೂವತ್ತರಷ್ಟು ಹಳ್ಳಿಗಳಿಗೆ ವ್ಯಾವಹಾರಿಕ ಕೇಂದ್ರವಾಗಿತ್ತು. 15 ಕಿ.ಮೀ ದೂರದಲ್ಲಿರೋ ಶಿರಸಿ ಅಥವಾ 27 ಕಿ.ಮೀ ದೂರ ಇರೋ ಸಿದ್ದಾಪುರಕ್ಕೆ ಹೋಗಬೇಕೆಂದರೆ ಕಾನಸೂರಿಗೇ ಬಂದು ಬಸ್‌ ಹಿಡಿಯಬೇಕು. ಇವೆರಡು ಕಡೆ ಹೋಗಿಲ್ಲವೆಂದರೂ ಕೆಲವರಿಗೆ ಸಂಜೆ ವೇಳೆಗೆ ಕೊಂಚ ಬಿಡುವು ಮಾಡಿಕೊಂಡು ಕಾನಸೂರಿಗೆ ಬಂದು ಹೋಗಲೇ ಬೇಕು. ಬರದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ ಎನ್ನುತ್ತಾರಲ್ಲ ಹಾಗೇ. ಹಾಗೆ ಬಂದವರು ಕೆಂಚಣ್ಣನ ಕಂಬಳಿ ಮಳಿಗೆ ಕಡೆ ಹೆಜ್ಜೆ ಹಾಕಿ ಈ ಮಳೆಗಾಲಕ್ಕೆ ಒಂದೆರಡು ಇರಲಿ ಎಂದು ಕಂಬಳಿ ಖರೀದಿ ಮಾಡದೇ ಇರುತ್ತಿರಲಿಲ್ಲ.

ಕಂಬಳಿ ಒದ್ದೆಯಾಗದಂತೆ ಪ್ಲಾಸ್ಟಿಕ್‌ ಹೊದಿಕೆಯ ರಕ್ಷಣೆ

ಕಿರು ಕೃಷಿ ಹಿಡುವಳಿದಾರರೇ ಹೆಚ್ಚಿರುವ ನಮ್ಮೂರು ಮತ್ತೆ ಸುತ್ತಲಿನ ಊರವರಿಗೆ ಕಂಬಳಿಯ ವಾರ್ಷಿಕ ಖರೀದಿ ಇದ್ದೇ ಇರುತ್ತದೆ. ಗದ್ದೆ ಹೂಟಿ ಮಾಡುವವರಿಂದ ಹಿಡಿದು ಭತ್ತದ ಸಸಿ ಕಿತ್ತು ನೆಡುವವರಿಗೂ ಕಂಬಳಿ ಕೊಪ್ಪೆಯೇ ಬೇಕು. ಅದರಲ್ಲೂ ನಮ್ಮ ಹೆಣ್ಣಾಳುಗಳು ಬುದ್ಧಿವಂತಿಕೆ ತೋರುತ್ತಿದ್ದರು. ಕಂಬಳಿ ಒದ್ದೆಯಾಗಿ ನೀರು ಒಳಗೆ ಬಂದರೆ ಕಷ್ಟ ಎಂಬ ಮುಂದಾಲೋಚನೆಯಿಂದ ಕಂಬಳಿ ಮೇಲೆ ಪ್ಲಾಸ್ಟಿಕ್‌ ಕೊಪ್ಪೆಯನ್ನೂ ಹೊದ್ದುಕೊಳ್ಳುತ್ತಿದ್ದರು. ಬರೀ ಪ್ಲಾಸ್ಟಿಕ್‌ ಕೊಪ್ಪೆಯಾದರೆ ಗಾಳಿಗೆ ಹಾರಿ ಹೋಗುವುದೇ ಹೆಚ್ಚು. ಕಂಬಳಿಯಾದರೆ ಒಜ್ಜೆಗೆ ಹಾರದು. ದನ ಮೇಯಿಸಲು ಹೋಗುವವರಿಗಂತೂ ಕಂಬಳಿಯೇ ಲೇಸು. ಮುಖ ಬಿಟ್ಟರೆ ಪೂರ್ತಿ ದೇಹವನ್ನು ಕಂಬಳಿ ಮುಚ್ಚಿಕೊಳ್ಳುವುದರಿಂದ ಮಳೆ,ಚಳಿಯಿಂದ ರಕ್ಷಣೆ ಜೊತೆಗೆ ಕಾಡಿನ ಸೊಳ್ಳೆಗಳಿಂದಲೂ ರಕ್ಷಣೆ ಸಿಗಲಿದೆ. ಹೊಸ ಕಂಬಳಿ ಹಾಲಿ ವರ್ಷಕ್ಕೆ ಕೊಪ್ಪೆ ಮಾಡಿಕೊಂಡರೆ, ಕಳೆದ ವರ್ಷದ್ದು ರಾತ್ರಿ ಬೆಚ್ಚನೆಯ ಹೊದಿಕೆಯಾಗಿ ದಿನವೂ ಮಡಿಚಿಡುವ ಹಾಸಿಗೆಯೊಳಗೆ ಜಾಗ ಪಡೆದಿರುತ್ತಿದ್ದವು. ಕಂಬಳಿಗಳ ರೊಟೇಷನ್‌ ಪ್ರಕ್ರಿಯೆ ನಡೆಯುತ್ತಲೇ ಇರುತ್ತಿದ್ದರಿಂದ ಕೆಂಚಣ್ಣನ ಕಂಬಳಿಗೆ ಪ್ರತಿ ಮಳೆಗಾಲದಲ್ಲೂ ಬೇಡಿಕೆ ಇದ್ದೇ ಇರುತ್ತಿತ್ತು. ಕನಿಷ್ಠ 2 ಕಂಬಳಿಯಿಂದ ಗರಿಷ್ಠ ಅರ್ಧ ಡಜನ್‌ ಕಂಬಳಿ ಒಬ್ಬೊಬ್ಬರ ಮನೆ ಸೇರುತ್ತಿತ್ತು. ಅಷ್ಟಕ್ಕೂ ಕೆಂಚಣ್ಣನ ಮಳಿಗೆ ಕೇವಲ ಕಂಬಳಿ ಮಾರಾಟಕ್ಕೆ ಸೀಮಿತವಾಗಿರಲಿಲ್ಲ. ಕಂಬಳಿ ಖರೀದಿಗೆ ಬರುವವರು ಅವರ ಕಷ್ಟ–ಸುಖ ಹಂಚಿಕೊಳ್ಳುವ ವೇದಿಕೆಯೂ ಆಗಿರ್ತಿತ್ತು. ವರ್ಷದ ಮಳೆ, ಬೆಳೆ; ಮನೆಯಲ್ಲಿ ನಡೆದ, ನಡೆಯಬೇಕಾದ ಶುಭಕಾರ್ಯ, ಸುಖ–ದುಃಖ ಎಲ್ಲವೂ ಮೆಲಕು ಹಾಕುವ 8X8 ಚದುರ ಅಡಿ ಅಗಲದ ಜಾಗವೂ ಆಗಿತ್ತು.

ADVERTISEMENT

ಮೃಗಶಿರ ನಕ್ಷತ್ರದ 14 ಮಳೆ ಮುಗಿಯುತ್ತಲೇ ಆರಿದ್ರ (ಆರ್ದ್ರ) ಮಳೆ ಹಿಡಿಯುತ್ತಿತ್ತು. ಇದು ಕೂಡ 14 ದಿನದ ಮಳೆ ನಕ್ಷತ್ರ. ಆರಿದ್ರ ಮಳೆ ಎಂದರೆ ಎಷ್ಟೋ ಮಂದಿಗೆ ಮನೆಯಲ್ಲಿ ಉಣ್ಣುವ ಪ್ರಮೇಯವೇ ಇರುತ್ತಿರಲಿಲ್ಲ. ದಿನಂಪ್ರತಿ ಒಬ್ಬೊಬ್ಬರ ಮನೆಯಲ್ಲಿ ಆರಿದ್ರ ಮಳೆ ಹಬ್ಬದೂಟ ಉಣ್ಣುವ ಯೋಗಾಯೋಗ. ಮಧ್ಯಾಹ್ನ ಒಬ್ಬರ ಮನೆಯಲ್ಲಾದರೆ, ರಾತ್ರಿ ಮತ್ತೊಬ್ಬರ ಮನೆಯಲ್ಲಿ. ಆರಿದ್ರ ಮಳೆ ಹಬ್ಬಕ್ಕೆ ಕೋಳಿಗಳಿಗೆ ಬಹು ಬೇಡಿಕೆ. ಕೆಲವರ ಮನೆಯಲ್ಲಿ ಹಬ್ಬಕ್ಕೆಂದೇ ಕೋಳಿಗಳನ್ನು ಸಾಕುತ್ತಿದ್ದರು. ಅದೂ ನಾಟಿ ಕೋಳಿಗಳು. ರುಚಿಗೆ ಸಾಟಿಯೇ ಇರದು. ಜೊತೆಗೆ ಕಡಬು ಒಳ್ಳೆ ಕಾಂಬಿನೇಷನ್‌. ಅನ್ನವಂತೂ ಇದ್ದೇ ಇರುತ್ತಿತ್ತು. ಈ ಹಬ್ಬದಲ್ಲಿ ಊರವರಿಗೆಲ್ಲ ಹೊಟ್ಟೆ ಬಿರಿಯುವಷ್ಟು ಬಾಡೂಟ. ಊಟಕ್ಕೆ ಕೂರುವಲ್ಲೂ ಕಂಬಳಿಯ ಹಾಸು ಇರುತ್ತಿತ್ತು. ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋಗೋದು ಇದ್ದೇ ಇರುತ್ತಿತ್ತು. ಹೀಗೆ ಎಲ್ಲರ ಮನೆಯ ಆರಿದ್ರ ಮಳೆ ಹಬ್ಬಕ್ಕೆ ಕೆಂಚಣ್ಣನಿಗೂ ಆತ್ಮೀಯ ಆಹ್ವಾನವಿರುತ್ತಿತ್ತು. ಅತ್ತ ಜೋರು ವ್ಯಾಪಾರದ ನಡುವೆ ಇತ್ತ ಹಬ್ಬಕ್ಕೆ ಕರೆದವರ ಮನೆಗೆ ಹೋಗದಿದ್ದರೆ ಬಿಡಿಯ. ಇಂಥ ಬಿಡುವಿಲ್ಲದ ಸಮಯದಲ್ಲೇ ಬಿಡುವು ಮಾಡಿಕೊಂಡು ಕೆಂಚಣ್ಣ ಕೋಳಿ ಊಟಕ್ಕೆ ಹಾಜರಾಗುತ್ತಿದ್ದ.

ಕಂಬಳಿಯೊಳಗಿನ ನಗು

ಊಟಕ್ಕೆ ಬಂದಾಗ ಕೆಲವರದ್ದು ಕಂಪ್ಲೆಂಟ್‌ ಇರ್ತಿತ್ತು. ಕೆಲವರ ಹೊಗಳಿಕೆಯೂ ಇರುತ್ತಿತ್ತು. ‘ಕೆಂಚಣ್ಣ ಈ ವರ್ಷದ ಕಂಬಳಿ ಅಷ್ಟು ಒಳ್ಳೆದಿಲ್ಲೊ’ ‘ಕಂಬಳಿ ಕುಸಿಯುವಾಗಲೇ ಹರಿದಿದೆ ನೋಡ’ ‘ಕಂಬಳಿ ರೊಣೆ ಬಾಳ ಉದುರ್ತಿದ್ಯೋ’ ‘ಯಾಕೋ ಕಂಬಳಿ ಒಳಗೆ ನೀರ ಬರ್ತಿದ್ಯೋ....’ ಎಂಬಿತ್ಯಾದಿ ಕಂಪ್ಲೆಂಟುಗಳ ಜೊತೆಗೆ ‘ಕೆಂಚಣ್ಣ...ಹೋದ್‌ ವರ್ಷದ ಕಂಬಳಿ ಒಳ್ಳೆ ಬಂತ್ ನೋಡು‘ ಅನ್ನುವ ಶ್ಲಾಘನೀಯ ಮಾತೂ ಇರುತ್ತಿದ್ದವು.

ಕಂಬಳಿ ಒಳ್ಳೆ ಬಾಳಿಕೆ ಬರಬೇಕೆಂದರೆ ಕಂಬಳಿ ತಂದ ನಂತರ ಒಂದಷ್ಟು ಪ್ರೊಸೆಸ್‌ ಮಾಡಬೇಕು. ಇಲ್ಲಾಂದ್ರೆ ಮಳೆ ನೀರು ಒಳಗೆ ಬರೋದು, ಹರಿಯೋದು ಇದ್ದೇ ಇರುತ್ತದೆ. ಕೆಂಚಣ್ಣನಿಂದ ಖರೀದಿಸಿ ತರುವ ಕಂಬಳಿಗಳನ್ನು ನನ್ನ ಅಜ್ಜ ಹೇಗೆ ಪ್ರೊಸೆಸ್‌ ಮಾಡ್ತಿದ್ರು ಅನ್ನೋದನ್ನ ಇಲ್ಲಿ ಹೇಳಲೇ ಬೇಕು.

ಹೊಸ ಕಂಬಳಿ ತಂದ ಮೇಲೆ ಮೊದಲು ಅದರ ಕರೆ (ಕುಚ್ಚು)ಕಟ್ಟಿಕೊಳ್ಳಬೇಕು. ಸಂಜೆ ಒಂದು ಬಕೆಟ್‌ನಲ್ಲಿ ನೀರು ತುಂಬಿ ನೆನೆಸಿಡಬೇಕು. ಒಂದೀಡಿ ದಿನ ಅಂದರೆ ಮಾರನೇ ದಿನ ಸಂಜೆ ಆ ಕಂಬಳಿಯನ್ನು ನಾಲ್ಕೈದು ಬಾರಿ ನೀರಿನಲ್ಲಿ ಜಾಡಿಸಿಟ್ಟುಕೊಳ್ಳಬೇಕು. ಆಗೆಲ್ಲ ಒಂದು ಕಂಬಳಿ ತೊಳೆಯಬೇಕೆಂದರೆ ಬಾವಿ ನೀರು ಸೇದುತ್ತಿರಲಿಲ್ಲ. ಹೆಂಚಿನ ಮನೆಗೆ ಜೋಡಿಸಿದ ಹರಿಣಿಯಿಂದ ನಿರಂತರವಾಗಿ ಧೋ ಎಂದು ಸುರಿಯುವ ನೀರೇ ಸಾಕಾಗುತ್ತಿತ್ತು. ಹೀಗೆ ತೊಳೆದ ನಂತರ ಅದರ ನೀರೆಲ್ಲ ಒಸರಿ ಹೋಗುವಂತೆ ಇಡಬೇಕು. ನೀರೆಲ್ಲ ಇಳಿದು ಹೋದ ಮೇಲೆ ಒಂದು ಗೋಣಿಚೀಲದ ಮೇಲೆ ಅದನ್ನು ಕುಸಿಯಬೇಕು. ಕುಸಿಯೋದು ಅಂದರೆ ಕಂಬಳಿಯನ್ನು ನೆರಿಗೆಮಾಡಿ ಮಡಚಿಕೊಂಡು ಮೇಲಕ್ಕೇತ್ತಿ ಸೆಳೆಯುವುದು. ಎಷ್ಟು ಸೆಳೆಯುತ್ತೇವೋ ಅಷ್ಟು ಗುಣಮಟ್ಟ ಹೆಚ್ಚಲಿದೆ. ಇಷ್ಟು ಮಾಡಿದ ಮೇಲೆ ಕಂಬಳಿಯನ್ನು ಹೊಡಚಲ ಹೊಗೆಯಲ್ಲಿ ಹರಗಬೇಕು.

ಮಳೆ,ಚಳಿಯಿಂದ ರಕ್ಷಣೆಗೆ ಕಂಬಳಿ ಕೊಪ್ಪೆ

ಹೊಡಚಲು ಅಂದರೆ ನಮ್ಮ ಮಲೆನಾಡಿನಲ್ಲಿ ಕಂಬಳಿ ಒಣಗಿಸಲು ಮಾಡುವ ಅಗ್ಗಷ್ಟಿಕೆ. ಹೆಚ್ಚಾಗಿ ಬಚ್ಚಲ ಮನೆಯಲ್ಲೆ ಇರುವ ವಿಶಾಲ ಜಾಗದಲ್ಲಿ ಹೊಡಚಲು ಹಾಕುವುದು ಪದ್ಧತಿ. ಮಲೆನಾಡಿನ ರೈತಾಪಿ ಮನೆಗಳಲ್ಲಿ ಮಳೆಗಾಲದಲ್ಲಿ ಈ ಹೊಡಚಲು ಬೇಕೆಬೇಕು. ಇದಕ್ಕಾಗಿಯೇ ಒಣ ಮರದ ಕುಂಟೆಗಳನ್ನು ಬೇಸಿಗೆಯಲ್ಲೇ ಸಿದ್ಧಮಾಡಿಟ್ಟುಕೊಳ್ಳುವರು. ಎರಡು ಕುಂಟೆ ಹಾಕಿ ಬೆಂಕಿ ಒಟ್ಟಿದರೆ ತಿಂಗಳವರೆಗೂ ನಂದುತ್ತಿರಲಿಲ್ಲ. ಹೊಡಚಲ ಮೇಲೆ ಕಂಬಳಿ ಒಣಗಲು ಹಾಕಲು ಅನುಕೂಲವಾಗುವ ಹಾಗೆ ಮಾಳಿಗೆ ಕೆಳಗೆ ಅಟ್ಟಲನ್ನು ಉದ್ದಕ್ಕೆ ಇಳಿಬಿಟ್ಟು ಕಟ್ಟುವುದು. ಬೆಳಿಗ್ಗೆಯಿಂದ ಸಂಜೆವರೆಗೂ ತಲೆ ಮೈಯನ್ನು ಬೆಚ್ಚಗಿರುವ ಕಂಬಳಿ ಕೊಪ್ಪೆ ಮಳೆಗೆ ನೆನೆದು ಒದ್ದೆಯಾಗಿರುವುದರಿಂದ ನಾಳೆಗೆ ಮತ್ತೆ ಒಣ ಕಂಬಳಿಯಾಗಿಸಲು ಅವುಗಳನ್ನು ಈ ಹೊಡಚಲ ಮೇಲೆ ಒಣಗಿಸಲೇ ಬೇಕು. ಹೀಗೆ ನಾಲ್ಕೈದು ಕಂಬಳಿಗಳನ್ನು ಒಟ್ಟಿಗೆ ಒಣಗಿಸಬಹುದು. ರಾತ್ರಿಯಿಡಿ ಹೊಡಚಲ ಬೆಂಕಿಯಲ್ಲಿ ಒಣಗುವ ಕಂಬಳಿ ಮತ್ತೆ ಬೆಳಿಗ್ಗೆ ಕೊಪ್ಪೆಯಾಗಿ ಮುಡಿ ಏರಲು ರೆಡಿ. ಹೊಡಚಲು ಹೊಗೆಯಲ್ಲಿ ಒಣಗಿ ಒಣಗಿ ಕಂಬಳಿ ಬಣ್ಣ ಕಪ್ಪಾಗುತ್ತಿದ್ದರೆ ಅಂಥ ಕಪ್ಪಿಟ್ಟ ಕಂಬಳಿ ಬಾಳಿಕೆ ಬರೋದು ಹೆಚ್ಚು.

ಹೀಗೆ ಹೊಡಚಲಲ್ಲಿ ಕಂಬಳಿಯನ್ನು ಒಣಹಾಕಿದ ವೇಳೆ ಕುಂಟೆ ಒಳಗೆ ಗುಮ್ಮುತ್ತಿದ್ದ ಬೆಂಕಿಯನ್ನು ಜಾಸ್ತಿ ಮಾಡಲಾಗುತ್ತಿತ್ತು. ಕುಂಟೆಯ ನಿಗಿನಿಗಿ ಕೆಂಡ ಕಣ್ಣು ಕುಕ್ಕುತ್ತಿದ್ದರೆ ಚಳಿಯಿಂದ ಬೆಚ್ಚಗೆ ಇರಲು ಹೊಡಚಲ ಹತ್ತಿರ ಮನೆಮಂದಿಯೆಲ್ಲ ಕುಳಿತು ಪಟಂಗ ಹೊಡೆಯೋ ಗಮ್ಮತ್ತು ಈಗಿಲ್ಲ. (ಈಗೆಲ್ಲ ಅದಕ್ಕಾಗಿ ಫೈರ್‌ ಕ್ಯಾಂಪ್‌ ಅನ್ನೋದು ಪ್ರಚಲಿತದಲ್ಲಿದೆ.) ಹೀಗೆ ಕುಳಿತಾಗಲೇ ನೆನಪಾಗೋದು ಸಂಗ್ರಹಿಸಿಟ್ಟ ಗೇರು ಬೀಜ ಮತ್ತೆ ಮಣ್ಣೂಡಿಯಿಟ್ಟ ಹಲಸಿನ ಬೀಜ. ಆದರೆ ಇವೆರಡನ್ನು ಸುಟ್ಟು ತಿನ್ನೋದು ಅಷ್ಟು ಸುಲಭದ ಮಾತಲ್ಲ. ಗೇರು ಬೀಜ ಬೆಂಕಿಗೆ ಹಾಕಿದರೆ ಬೀಜದ ಕವಚದೊಳಗಿನ ಎಣ್ಣೆ ಸುಟ್ಟು ಹೋಗುವವರೆಗೂ ದೂರ ಇರಲೇ ಬೇಕು. ಹಾಗೇ ಹಲಸಿನ ಬೀಜವನ್ನು ಕೂಡ ಬೆಂಕಿಗೆ ಹಾಕುವಾಗ ಸಿಪ್ಪೆಗೆ ಗಾಯ ಮಾಡಿ ಹಾಕಬೇಕು. ಇಲ್ಲಾಂದ್ರೆ ಬೀಜ ಢಂ ಎಂದು ಸಿಡಿದು ಕೆಂಡ ಸಮೇತ ಮೈಗೆ ತಾಗೋದು.

ಅಷ್ಟೊತ್ತಿಗಾಗಲೇ ಹೊಡಚಲಲ್ಲಿ ಒಣಗುವ ಕಂಬಳಿಯಿಂದ ಒಂದು ಬಗೆಯ ವಾಸನೆ ಹೊಮ್ಮಲು ಶುರುವಿಟ್ಟರೆ ಅದರ ಜೊತೆಗೆ ಸುಟ್ಟ ಗೇರು ಬೀಜ, ಹಲಸಿನ ಬೀಜದ ಸುವಾಸನೆ ಸೇರಿಕೊಂಡು ಮುಂಗಾರಿನ ಗಮ್ಮತ್ತು ಹೆಚ್ಚುತ್ತಿತ್ತು. ಈಗಲೂ ಮುಂಗಾರು ಅಂದರೆ ಕಾಡೋದು ಅದೇ ಸುಟ್ಟ ಗೇರು, ಹಲಸಿನ ಬೀಜದ ಫ್ಲೇವರ್ರು.... ಹೊಡಚಲ ಹೊಗೆಯಲ್ಲಿ ಹೊರಬಿದ್ದ ಕಂಬಳಿಯ ಘಮಲು. ಆಹಾ... ಎಂಥ ಸುಂದರ ದಿನಗಳು ಅವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.