ADVERTISEMENT

ಪಂಜರ (ಕಥೆ)

ದೀಪಾವಳಿ ಕಥೆ ಸ್ಪರ್ಧೆ 2019, ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಅದೀಬ್ ಅಖ್ತರ್
Published 16 ನವೆಂಬರ್ 2019, 19:30 IST
Last Updated 16 ನವೆಂಬರ್ 2019, 19:30 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

‌ಭ್ರೂಣಗಳನ್ನು ಎಸೆದು ಬರುವಾಗ ಬಹಳಷ್ಟು ಸಂದರ್ಭದಲ್ಲಿ ಭ್ರೂಣಗಳಿಗೆ ಜೀವ ಬಂದು ಅವುಗಳು ಹಿಂಬಾಲಿಸುತ್ತಿರುವಂತೆ ದಿನೇಶನಿಗೆ ಭ್ರಮೆಯಾಗುತ್ತಿತ್ತು...

ಮುಂಜಾನೆ ನಾಲ್ಕಕ್ಕಿಂತ ಮುಂಚೆ ಎಚ್ಚರಗೊಳ್ಳುತ್ತಿದ್ದ ದಿನೇಶ ಇಂದು ಸುಮಾರು ಹದಿನೈದು ನಿಮಿಷ ತಡವಾಗಿ ಎಚ್ಚರಗೊಂಡು ಬೇಗ ಬೇಗನೇ ಸಿದ್ಧನಾಗಿ ಮಾಮೂಲಿನಂತೆ ಮನೆಯಲ್ಲಿ ಮಲಗಿರುವ ಪೈಕಿ ಯಾರಿಗೂ ಎಬ್ಬಿಸದೆ ಹೊರ ಬಂದು ಮನೆ ಮುಂದೆ ನಿಂತಿರುವ ಕಾರು ಹತ್ತಿದ.

ಕಾರು ಚಲಿಸುತ್ತ ರಾತ್ರಿ ಕಂಡ ಕನಸಿನ ಗುಂಗಿನಿಂದ ಇನ್ನೂ ಹೊರ ಬಂದಿಲ್ಲವೆನಿಸುತ್ತಿತ್ತು.

ADVERTISEMENT

ಅವನು ಕೆಲಸಕ್ಕಿದ್ದ ಕ್ಲಿನಿಕ್‌ನ ಡಾ. ಗಿರೀಶ್ ಅವನನ್ನು ಪಂಜರದೊಳಗೆ ಕೂಡಿ ಹಾಕಿ ಚೂಪಾದ ಸಲಕರಣೆಯಿಂದ ಅವನ ದೇಹಕ್ಕೆ ಚುಚ್ಚಿ ಚುಚ್ಚಿ ದೇಹವನ್ನು ಚೂರು ಚೂರು ಮಾಡಲು ಪ್ರಯತ್ನಿಸುತ್ತಿರುವಂತೆ ಭಾಸವಾಯಿತು. ದೇಹದಿಂದ ರಕ್ತ ಹರಿಯಲು ತೊಡಗಿತ್ತು. ಅವನು ಎಷ್ಟೇ ಕಿರುಚಿಕೊಂಡರೂ ಬಿಡುತ್ತಿರಲಿಲ್ಲ. ‘ನೀವು ಹೇಳಿದ ಕೆಲಸ ನಿಷ್ಠೆಯಿಂದ ಮಾಡುತ್ತಿದ್ದೇನಲ್ಲ, ಹೊರಗಿನವರಿಗೆ ಯಾವ ಸುಳಿವು ಸಿಗದಂತೆ. ಇಂಥದರಲ್ಲಿ ನನಗೇಕೆ ಈ ಶಿಕ್ಷೆ’ ಎಂದು ಅಂಗಲಾಚಿದರೂ ಇವನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ.

ಅಂಥ ಕನಸ್ಸನ್ನು ಅವನು ತನ್ನ ಇದುವರೆಗಿನ ತನ್ನ ನಲವತ್ತು ವಯಸ್ಸಿನಲ್ಲಿ ನೋಡಿರಲಿಲ್ಲ. ಕನಸಿನಿಂದ ಕಿರಿಚಿಕೊಂಡು ಎದ್ದು ತುಂಬ ಸಮಯದವರೆಗೆ ಸುಧಾರಿಸಿಕೊಂಡಿದ್ದ.

ಪಂಜರ ಚಿಕ್ಕದಾಗಿತ್ತು. ಅವನ ದೇಹಕ್ಕಿಂತ ಒಂದಿಷ್ಟು ದೊಡ್ಡದಿರಬಹುದೇನೋ. ಅವನು ಕಿರಿಚಿಕೊಂಡಷ್ಟೂ ಗಿರೀಶ ಪಂಜರದ ಸುತ್ತ ಸುತ್ತಾಡಿ ಎಲ್ಲಾ ಕಡೆಯಿಂದ ಚುಚ್ಚುತ್ತಿದ್ದ.

ಈಗಾಗಲೇ ತಡವಾಗಿ ಹೋಗಿದ್ದರಿಂದ ಅತಿ ವೇಗವಾಗಿ ಕಾರು ಚಲಾಯಿಸುತ್ತ, ಕನಸಿನ ಗುಂಗಿನಿಂದ ಹೊರ ಬರಲು ಪ್ರಯತ್ನಿಸಿದ. ಅದೇ ಗುಂಗಿನಲ್ಲಿದ್ದರೆ ಖಂಡಿತವಾಗಿ ಅಪಘಾತವಾಗಿ ಹೋಗುತ್ತೆಂದೆನಿಸಿತು.

ಗಿರೀಶ್‌ನ ಬಳಿ ಕಾರಿನ ಚಾಲಕನಾಗಿ ಸೇರಿಕೊಂಡು ನಾಲ್ಕು ವರ್ಷವಾಗಿತ್ತು. ಕೆಲಸಕ್ಕೆ ಸೇರಿದ ಬಳಿಕ ಗಿರೀಶ್‌ಗೆ ದಿನೇಶನಲ್ಲಿ ವಿಶ್ವಾಸ ಬಂದು, ಆಮೇಲೆ ರಹಸ್ಯವಾಗಿ ಮಾಡುವ ಒಂದು ಕೆಲಸ ಹೇಳಿದ. ದಿನೇಶ ತುಂಬ ಯೋಚಿಸಿ ಅದನ್ನು ಮಾಡಲು ಒಪ್ಪಿಕೊಂಡಿದ್ದ– ತುಂಬಾ ಜವಾಬ್ದಾರಿಯ ಕೆಲಸವದು.

ಮುಂಜಾನೆ ಸ್ವಲ್ಪ ಕತ್ತಲೆಯಿರುವಾಗಲೇ ಕೆಲಸವನ್ನು ಮುಗಿಸಿದ ಬಳಿಕ ಸಾಮಾನ್ಯವಾಗಿ ಅವನಿಗೆ ಮಾಡಲು ಯಾವ ಕೆಲಸವೂ ಇರುತ್ತಿರಲಿಲ್ಲ.

ಒಮ್ಮೊಮ್ಮೆ ಗಿರೀಶ್‌ನ ಹೆಂಡತಿ ಸುಮತಿಗೆ ಯಾವುದಾದರೋ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗ ಬೇಕಾಗಿತ್ತು–ಸುಮತಿ ಸಮಾಜ ಸೇವಕಿಯಾಗಿದ್ದಳು. ಸಭೆ ಸಮಾರಂಭಗಳಿಗೆ ಹೋಗುತ್ತಿದ್ದಳು. ವಿಶೇಷವಾಗಿ ಹೆಣ್ಣು ಮಕ್ಕಳ ಶಾಲೆಗಳಲ್ಲಿ ಅವಳನ್ನು ಮುಖ್ಯ ಅತಿಥಿಯನ್ನಾಗಿ ಕರೆಯುತ್ತಿದ್ದರು. ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಳು. ಅವಳು ಭಾಷಣ ಮಾಡುತ್ತ ಒಮ್ಮೊಮ್ಮೆ ಕಣ್ಣೀರು ಸಹ ಹಾಕಿಬಿಡುತ್ತಿದ್ದಳು. ಅವಳ ಭಾಷಣಕ್ಕೆ ಮರಳಾಗಿ ಹೆಣ್ಣು ಮಕ್ಕಳು ಚಪ್ಪಾಳೆ ಹೊಡೆಯುತ್ತಿದ್ದರು. ಆಮೇಲೆ ವಿಷಯ ಏನೆಂದರೆ ಅವಳು ಮುಂದೆ ನಡೆಯುವ ನಗರಪಾಲಿಕೆ ಚುನಾವಣೆಯಲ್ಲಿ ತನ್ನ ವಾರ್ಡ್‌ನಿಂದ ಸ್ಪರ್ಧಿಸಬೇಕೆಂದು ಮನಸ್ಸು ಮಾಡಿಕೊಂಡಿದ್ದಳು. ರಾಜಕೀಯದಲ್ಲಿ ಸಕ್ರಿಯವಾಗಿರಬೇಕೆಂದು ಅವಳು ರಾಜಕಾರಣಿಗಳ ಸಂಪರ್ಕದಲ್ಲಿದ್ದಳು.

ಅವಳು ಯಾವುದಾದರೂ ಸಮಾರಂಭಕ್ಕೆ ಹೋಗುವುದಿದ್ದರೆ ದಿನೇಶನಿಗೆ ಮೊದಲೇ ತಿಳಿಸಿ ಇಂಥ ಸಮಯದಲ್ಲಿ ಸಿದ್ಧನಾಗಿರಬೇಕೆಂದು ಸೂಚಿಸುತ್ತಿದ್ದಳು.

ಇಂದು ಸರಿಯಾಗಿ ಒಂಭತ್ತರ ಸಮಯದಲ್ಲಿ ಸಿದ್ಧನಾಗಿರಬೇಕೆಂದು ನಿನ್ನೆ ಸಂಜೆ ಸುಮತಿ ಹೇಳಿದ್ದನ್ನು ನೆನಪಿಸಿಕೊಂಡ ದಿನೇಶ– ಅವಳು ಹೇಳಿದ ಸಮಯಕ್ಕೆ ರೆಡಿಯಾಗಿರಬೇಕು ಸ್ವಲ್ಪ ತಡ ಮಾಡಿದರೆ ಅವಳು ಬೇಸರ ಮಾಡಿಕೊಳ್ಳುತ್ತಾಳೆ ಎಂದುಕೊಂಡ.

ಸುಮತಿ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದಳು. ಆದರೆ ವಿಪರ್ಯಾಸ ಸಂಗತಿಯೆಂದರೆ ಅವಳಿಗೆ ಹೆಣ್ಣು ಮಕ್ಕಳಿರಲಿಲ್ಲ. ಒಬ್ಬನೇ ಮಗನಿದ್ದ ನವೀನ್ ಎಂದು. ಅವನ ವಯಸ್ಸು ಇಪ್ಪತ್ತೆರಡೋ–ಇಪ್ಪತ್ತನಾಲ್ಕೊ. ಗಿರೀಶನಾಗಲಿ ಅಥವಾ ಸುಮತಿಯಾಗಲಿ ತಮ್ಮ ಏಕ ಮಾತ್ರ ಪುತ್ರನನ್ನು ಸರಿಯಾದ ದಾರಿಗೆ ತರಲು ಸಾಧ್ಯವಾಗಿರಲಿಲ್ಲ. ಮಗನ ವಿಷಯದಲ್ಲಿ ಅವರಿಬ್ಬರೂ ಸೋತು ಹೋಗಿದ್ದರು. ಮಗನ ನಡವಳಿಕೆಯಿಂದ ಬೇಸತ್ತು ಅನೇಕ ಸಂದರ್ಭದಲ್ಲಿ ಗಿರೀಶ್ ತಮಗೊಬ್ಬಳು ಹೆಣ್ಣು ಮಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಹೇಳುತ್ತಿದ್ದುದು ದಿನೇಶನ ಗಮನಕ್ಕೆ ಬಂದಿತ್ತು.

ನವೀನ್ ಪಿಯುಸಿ ಫೇಲ್ ಆಗಿದ್ದ. ಪಾಸಾಗುವ ಯಾವ ಲಕ್ಷಣ ಸಹ ಇರಲಿಲ್ಲ. ಪುಂಡರ ಸಹವಾಸ ಮಾಡಿಕೊಂಡಿದ್ದ. ಅವನು ತನ್ನ ಕಾರಿನಲ್ಲಿ ತನ್ನ ಗೆಳೆಯರನ್ನು ಕೂರಿಸಿಕೊಂಡು ಅತಿ ವೇಗವಾಗಿ ಕಾರು ಓಡಿಸುತ್ತಿದ್ದ. ಇದು ಅವನ ಸಂತೋಷದ ಸಂಗತಿಯಾಗಿತ್ತು. ಹಗಲು ರಾತ್ರಿಯೆನ್ನದೆ ಬರೀ ಸುತ್ತಾಡುತ್ತಿದ್ದ. ಒರಟಾಗಿ ಕಾರನ್ನು ಓಡಿಸುತ್ತಾ ತಾನು ಹಿಂದೆ ಹಾಕಿದವರನ್ನು ಛೇಡಿಸುತ್ತಿದ್ದ.

ಸ್ವಲ್ಪ ದಿನಗಳ ಹಿಂದಷ್ಟೇ ನವೀನ್ ಮನೆಯ ಸಮೀಪವಿರುವ ಹೋಟೆಲ್‌ವೊಂದಕ್ಕೆ ಗೆಳೆಯರೊಂದಿಗೆ ರಾತ್ರಿ ಹನ್ನೆರಡರ ಸಮೀಪ ಹೋಗಿ ಅಲ್ಲಿ ಹೋಟೆಲ್ ಶುಚಿ ಮಾಡುತ್ತಿರುವ ಆಳುಗಳೊಂದಿಗೆ ಜಗಳ ಮಾಡಿದ್ದ.

ನವೀನ್ ಊಟ ಕೇಳಿದ, ಆಳುಗಳು ಎಲ್ಲಾ ಮುಗಿದಿದೆ ಬೆಳಿಗ್ಗೆ ಬನ್ನಿ ಎಂದು ಹೇಳಿದರು. ನಮಗೆ ಈಗಲೇ ಊಟಬೇಕೆಂದು ಎಲ್ಲರು ಹಠ ಹಿಡಿದರು. ಮಾತಿಗೆ ಮಾತು ಬೆಳೆಯಿತು, ನವೀನ್‌ನ ಗೆಳೆಯರು ಕಿಟಕಿ ಗಾಜುಗಳನ್ನು ಒಡೆದು, ಕುರ್ಚಿಗಳನ್ನು ಚಚ್ಚಿ, ಹೂ ಕುಂಡಗಳನ್ನು ಒಡೆದು ಹಾಕಿದರು. ತಾವು ಏನು ಮಾಡುತ್ತಿದ್ದೇವೆಂದು ಮರೆತು ಹೋದರು. ಹೋಟೆಲ್‌ನವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಟ್ಟರು. ಅರ್ಧ ರಾತ್ರಿಯಲ್ಲಿ ಪೊಲೀಸರು ನವೀನ್‌ನನ್ನು ಹುಡುಕಿಕೊಂಡು ಬಂದರು. ಕೂಡಲೇ ಸುಮತಿ ತನಗೆ ಪರಿಚಯವಿರುವ ಮಂದಿಗೆ ಫೋನ್ ಮಾಡಿದಳು. ಇತ್ತ ಗಿರೀಶ್ ಹೋಟೆಲ್‌ನವರನ್ನು ಭೇಟಿ ಮಾಡಿ ಅವರಿಗಾಗಿರುವ ನಷ್ಟವನ್ನು ತಾನು ಭರಿಸಿಕೊಡುವುದಾಗಿ ಭರವಸೆ ನೀಡಿ, ದೂರನ್ನು ಹಿಂದೆ ಪಡೆದುಕೊಳ್ಳುವಂತೆ ಮಾಡಿದ್ದ. ನವೀನ್ ಸ್ವಲ್ಪದರಲ್ಲಿ ಸೆರೆಮನೆಗೆ ಹೋಗುವುದರಿಂದ ಬಚಾವಾಗಿದ್ದ. ಇದೆಲ್ಲ ರಾತ್ರಿ ನಡೆದುದರಿಂದ ಯಾರಿಗೂ ಗೊತ್ತಾಗಿರಲಿಲ್ಲ.

ದಿನೇಶನ ಬಾಡಿಗೆ ಮನೆ ಗಿರೀಶ್‌ನ ಕ್ಲಿನಿಕ್‌ನಿಂದ ಸುಮಾರು ಹನ್ನೆರಡು ಕಿ.ಮೀ. ಅಂತರದಲ್ಲಿತ್ತು. ಸಂಜೆ ದಿನೇಶ ಮನೆಗೆ ಕಾರಲ್ಲಿ ಬಂದು ಮುಂಜಾನೆ ಹೋಗುತ್ತಿದ್ದ.

ಗಿರೀಶ್‌ನ ಬಳಿ ಕೆಲಸಕ್ಕೆ ಸೇರಿಕೊಂಡ ಬಳಿಕ, ಹೊಸತರಲ್ಲಿ ದಿನೇಶನಿಗೆ ಅವನ ಹೆಂಡತಿ ಮತ್ತು ಆರು ಮತ್ತು ಏಳರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳು ಇಷ್ಟೊಂದು ಮುಂಜಾನೆ ಯಾಕೆ ಹೋಗಬೇಕೆಂದು ವಿಚಾರಿಸುತ್ತಿದ್ದರು. ಗಿರೀಶ್‌ ದಂಪತಿಗೆ ಶಹರದ ಹೊರವಲಯದಲ್ಲಿ ಸ್ವಲ್ಪ ಸುತ್ತಾಡುವ ಅಭ್ಯಾಸವಿದೆ, ಅವರನ್ನು ಹೊರವಲಯಕ್ಕೆ ಕರೆದುಕೊಂಡು ಹೋಗುವುದೆಂದು ಸುಳ್ಳು ಹೇಳುತ್ತಿದ್ದ. ಅವನು ಹೇಳುತ್ತಿರುವುದೆಲ್ಲ ನಿಜವೆಂದು ಮನೆಯವರು ತಿಳಿದುಕೊಂಡು ಕೇಳುವುದನ್ನು ಬಿಟ್ಟು ಬಿಟ್ಟಿದ್ದರು. ಒಂದು ವೇಳೆ ನಿಜಯೇನೆಂದು ಮನೆಯವರಿಗೇನಾದರೂ ತಿಳಿಸುತ್ತಿದ್ದರೆ ಅವರು ಅವನನ್ನು ಗಿರೀಶ್‌ನ ಬಳಿ ಕೆಲಸ ಮಾಡುವುದು ಬೇಡವೆಂದು ಹಠ ಮಾಡಿಬಿಡುತ್ತಿದ್ದರೇನೋ?

ಬೆಳಕು ಹರಿಯುವುದಕ್ಕೆ ಮುನ್ನ ದಿನೇಶ, ಕ್ಲಿನಿಕ್‌ಗೆ ತಲುಪಿ ಅಲ್ಲಿ ಕಪ್ಪನೆಯ ಪ‍್ಲಾಸ್ಟಿಕ್‌ ಚೀಲದಲ್ಲಿರುವ ಭ್ರೂಣಗಳನ್ನು ಎತ್ತಿಕೊಂಡು ಹೋಗಿ ಶಹರದ ಹೊರವಲಯದಲ್ಲಿ ಯಾರು ಇಲ್ಲದ ಕಡೆ ಬೀಸಾಕಿ ಬರುತ್ತಿದ್ದ. ಪ್ರತಿ ದಿನವೂ ಬೇರೆ ಬೇರೆ ದಿಕ್ಕಿನಲ್ಲಿ ಹೋಗುತ್ತಿದ್ದ. ಅನೇಕ ಕಡೆ ಭ್ರೂಣದ ರುಚಿ ಕಂಡಿರುವ ನಾಯಿಗಳು ಅವನ ಬರುವಿಕೆಗಾಗಿ ಕಾದು ನಿಂತಿರುತ್ತಿದ್ದವು. ಅವನು ಭ್ರೂಣದ ಚೀಲವನ್ನು ಬೀಸಾಕಿ ಎಸೆದ ಕೂಡಲೇ ನಾಯಿಗಳು ಅವುಗಳನ್ನು ತಿನ್ನಲು ಪೈಪೋಟಿ ಮಾಡುತ್ತಿದ್ದವು. ನಾಯಿಗಳು ಭ್ರೂಣ ತಿನ್ನುವುದರಲ್ಲಿ ಮಗ್ನವಾಗಿದ್ದರೆ, ಕಾಗೆಗಳು ಅವುಗಳ ಮೇಲೆ ಕಾ....ಕಾ ಎಂದು ಕಿರುಚಿಕೊಂಡು ಹಾರಾಡುತ್ತಿದ್ದವು.

‌ಭ್ರೂಣಗಳನ್ನು ಎಸೆದು ಬರುವಾಗ ಬಹಳಷ್ಟು ಸಂದರ್ಭದಲ್ಲಿ ಭ್ರೂಣಗಳಿಗೆ ಜೀವ ಬಂದು ಅವುಗಳು ಹಿಂಬಾಲಿಸುತ್ತಿರುವಂತೆ ದಿನೇಶನಿಗೆ ಭ್ರಮೆಯಾಗುತ್ತಿತ್ತು.

ಈ ಭ್ರೂಣಗಳನ್ನು ಇನ್ನಷ್ಟು ಕಾಲ ಗರ್ಭದಲ್ಲೆ ಬಿಡುತ್ತಿದ್ದರೆ ಅವುಗಳು ಈ ಪ್ರಪಂಚಕ್ಕೆ ಬಂದು ಅಮ್ಮನ ಜೋಗುಳ ಕೇಳುತ್ತಿದ್ದವು. ಅವುಗಳ ಸುಂದರ ಮುಗ್ಧ ಮುಖಗಳು ಎಷ್ಟೊಂದು ಕಣ್ಣುಗಳ ಕಣ್ಮಣಿಯಾಗಿರುತ್ತಿದ್ದವೋ.

ಭ್ರೂಣಗಳನ್ನು ಎಸೆದು ಬಂದ ನಂತರ ಅವನು ಕಾರಿನ ಹಿಂದಿನ ಆಸನವನ್ನು ಚೆನ್ನಾಗಿ ತೊಳೆಯುತ್ತಿದ್ದ. ಆಮೇಲೆ ಮನೆಗೆ ಹೋಗಿ ತುಂಬ ಹೊತ್ತಿನವರೆಗೆ ಸ್ನಾನ ಮಾಡುತ್ತಿದ್ದ. ಆದರೂ ಅವನಿಗೆ ಸಮಾಧಾನವಾಗುತ್ತಿರಲಿಲ್ಲ.

ಗಿರೀಶ್‌ನ ಬಳಿ ಕೆಲಸಕ್ಕೆ ಸೇರಿಕೊಳ್ಳಲೇ ಬಾರದಿತ್ತು, ನಾಲ್ಕು ವರ್ಷದಿಂದ ನಾನು ಎಷ್ಟೊಂದು ಭ್ರೂಣಗಳನ್ನು ನಾಯಿಗಳಿಗೆ ತಿನ್ನಿಸಿದ್ದೇನೆ. ಗಿರೀಶ್‌ ಮಾಡುತ್ತಿರುವುದು ಅಪರಾಧ, ನಾನು ಇದರಲ್ಲಿ ಭಾಗಿಯಾಗಿದ್ದೇನೆ ಎಂದು ಒಮ್ಮೊಮ್ಮೆ ಯೋಚಿಸುತ್ತಿದ್ದ. ಇತರ ಕಡೆಗಳಿಗಿಂತ ಇಲ್ಲಿ ಜಾಸ್ತಿ ಸಂಬಳ ಬರುತ್ತೆ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತೆಯೆಂದು ಸಹ ಯೋಚಿಸುತ್ತಿದ್ದ.

ಗಿರೀಶ್‌ನಿಗೆ ವಯಸ್ಸಾಗಿದೆ ಅರವತ್ತರ ಸಮೀಪ, ನೋಡಲು ಸಭ್ಯ ವ್ಯಕ್ತಿಯಂತೆ ಕಾಣುತ್ತಾನೆ. ಶಹರದ ಹೊರವಲಯದಲ್ಲಿ ಕ್ಲಿನಿಕ್‌ ಇಟ್ಟಿಕೊಂಡಿದ್ದಾನೆ. ಕ್ಲಿನಿಕ್‌ ಹಿಂದೆಯೇ ಅದ್ಧೂರಿಯಾಗಿ ಮನೆ ಕಟ್ಟಿಸಿದ್ದಾನೆ, ಅವನು ರಹಸ್ಯವಾಗಿ ಸ್ಕ್ಯಾನಿಂಗ್ ಮಾಡಿ ಭ್ರೂಣದ ಲಿಂಗ ತಿಳಿಸುತ್ತಾನೆ. ಹೆಣ್ಣು ಭ್ರೂಣ ಬೇಡವೆಂದರೆ ಅದರ ಹತ್ಯೆ ಮಾಡುತ್ತಾನೆ. ಇದುವರೆಗೆ ಅವನು ಎಷ್ಟೊಂದು ಮಕ್ಕಳನ್ನು ಕೊಂದಿರಬಹುದು. ಅವರೆಲ್ಲ ಬದುಕಿಕೊಂಡಿದ್ದರೆ ಅವರು ಓದಿ ಯಾವ ಯಾವ ಹುದ್ದೆಯಲ್ಲಿರುತ್ತಿದ್ದರೇನೋ, ಅವರಿಂದ ಸಮಾಜಕ್ಕೆ ಎಷ್ಟೊಂದು ಸಹಾಯವಾಗುತ್ತಿತ್ತೇನೋ– ದಿನೇಶನಿಗೆ ಬರುವ ವಿಚಾರ.

ಈಗ ಯಾರಿಗೂ ಹೆಣ್ಣು ಮಕ್ಕಳು ಬೇಡ, ಗಂಡು ಮಕ್ಕಳೇ ಬೇಕು. ಗಂಡು ಮಕ್ಕಳು ಕೊನೆಯಲ್ಲಿ ತಂದೆತಾಯಿಯನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರಲ್ಲ.

ಗಿರೀಶ್‌ನಿಗೆ ಒಬ್ಬ ಹೆಣ್ಣು ಮಗಳಿಲ್ಲವೆಂಬ ಕೊರಗು. ಆದರೆ ತನ್ನ ಬಳಿ ಸ್ಕ್ಯಾನಿಂಗ್‌ಗೆ ಬರುವ ಮಂದಿಗೆ ಹೆಣ್ಣು ಮಗುವಿನ ಮಹತ್ವ ಹೇಳುವ ಧೈರ್ಯವಿಲ್ಲ. ದೇವರ ದಯೆಯಿಂದ ತಾನು ಗಿರೀಶ್‌ನ ಬಳಿ ತನ್ನ ಮದುವೆಯ ಹೊಸತರಲ್ಲಿ ಸೇರಿರಲಿಲ್ಲ. ಒಂದು ವೇಳೆ ಸೇರಿರುತ್ತಿದ್ದರೆ ಗಿರೀಶ್‌ನ ಸಹವಾಸದಿಂದ ಖಂಡಿತವಾಗಿ ತನ್ನ ಹೆಂಡತಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಯಾವುದೆಂದು ಸ್ಕ್ಯಾನಿಂಗ್ ಮಾಡಿಸುತ್ತಿದ್ದನೇನೋ. ಇದರಿಂದ ಚಿನ್ನದಂಥ ತನ್ನ ಹೆಣ್ಣು ಮಕ್ಕಳು ಹುಟ್ಟುತ್ತಿರಲಿಲ್ಲವೇನೋ. ಯಾವ ಜನ್ಮದ ಪುಣ್ಯವೋ ಏನೋ, ತಾನು ತನ್ನ ಮಕ್ಕಳ ಭ್ರೂಣವನ್ನು ನಾಯಿಗಳಿಗೆ ತಿನ್ನಿಸುವ ಸಂದರ್ಭ ಬಂದಿಲ್ಲ.

ಸುಮತಿಗೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ, ಅವಳಿಗೆ ಗಂಡ ಎಂಥ ಪಾಪದ ಕೆಲಸಕ್ಕೆ ಕೈಹಾಕಿದ್ದಾನೆಂದು ಗೊತ್ತಿಲ್ಲವೇನು?

ಎಷ್ಟೊಂದು ಉತ್ತರಿಸಲಾಗದ ಪ್ರಶ್ನೆಗಳು ದಿನೇಶನ ಮುಂದೆ.

ತನ್ನ ಹೆಣ್ಣು ಮಕ್ಕಳು ತನ್ನ ಬಗ್ಗೆ ಎಷ್ಟೊಂದು ಕಾಳಜಿ ಹೊಂದಿದ್ದಾರೆ. ಮನೆಗೆ ಹೋಗುವುದಕ್ಕೆ ಸ್ವಲ್ಪ ತಡವಾದರೆ ಅವನನ್ನೇ ಕಾಯುತ್ತ ಕೂತಿರುತ್ತವೆ.

ಕನಸಿನ ಗುಂಗಿನಲ್ಲಿ ಕಾರು ಚಲಾಯಿಸುತ್ತಿರುವಾಗ ಒಂದು ತಿರುವಿನಲ್ಲಿ ಎದುರಿಂದ ಬರುತ್ತಿರುವ ಟ್ರಕ್‌ಗೆ ಡಿಕ್ಕಿ ಹೊಡೆಯುವುದರಲ್ಲಿ ಕೂದಲೆಳೆಯಲ್ಲಿ ತಪ್ಪಿ ಹೋಯಿತು. ಟ್ರಕ್‌ನ ಚಾಲಕ ಕಿರುಚಿಕೊಂಡು ಬಾಯಿಗೆ ಬಂದಂತೆ ಬೈಯುತ್ತ ಹೋದ. ಅವನು ತನ್ನ ಜೀವನದಲ್ಲಿ ಇಂಥ ಬೈಗುಳನ್ನು ಕೇಳಿರಲಿಲ್ಲ.

ಇನ್ನಾದರೂ ಸ್ವಲ್ಪ ಎಚ್ಚರದಿಂದ ಡ್ರೈವ್ ಮಾಡಬೇಕೆಂದು ತೀರ್ಮಾನಿಸಿಕೊಂಡ, ವಿಳಂಬ ಮಾಡಿದ್ದಕ್ಕೆ ಗಿರೀಶ್‌ ಎಷ್ಟೊಂದು ಸಿಡುಕುತ್ತಾನೆಯೋ ಎಂದು ಅಂಜುತ್ತಲೇ ಕ್ಲಿನಿಕ್‌ ಮುಂದೆ ಕಾರು ನಿಲ್ಲಿಸಿದಾಗ, ಎಂದಿನಂತೆ ಗಿರೀಶ್ ಅವನಿಗಾಗಿ ಕಾದು ನಿಂತಿರಲಿಲ್ಲ. ಅವನು ಕಾರು ನಿಲ್ಲಿಸಿದ ಕೂಡಲೇ ಎಲ್ಲೋ ಇದ್ದ ಗೇಟ್ ಕೀಪರ್ ಓಡೋಡಿ ಅವನ ಬಳಿ ಬಂದು ಸ್ವಲ್ಪ ಹೊತ್ತು ಮುಂಚೆ ನವೀನ್‌ನ ಕಾರು ಅಪಘಾತವಾಗಿದೆ, ಅವನನ್ನು ಕಾವೇರಿ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ, ಎಲ್ಲರೂ ಅಲ್ಲೇ ಹೋಗಿದ್ದಾರೆಂದು ತಿಳಿಸಿದ.

ಮೊದಲು ತಾನು ತನ್ನ ಪಾಲಿನ ಕೆಲಸ ಮುಗಿಸಿ ಹಾಗೆಯೇ ಬರುವಾಗ ಆಸ್ಪತ್ರೆಗೆ ಭೇಟಿ ನೀಡಬೇಕೆಂದು ಯೋಚಿಸಿ ದಿನೇಶನ ಕ್ಲಿನಿಕ್‌ನೊಳಗೆ ಪ್ರವೇಶಿಸಿ ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಬಂದು ಕಾರಿನ ಹಿಂದಿನ ಸೀಟಿನಲ್ಲಿಟ್ಟುಕೊಂಡು ತೋಚಿದ ದಿಕ್ಕಿನಲ್ಲಿ ಹೊರಟು ನಿಂತ.

ಮುಖ್ಯ ರಸ್ತೆಗೆ ಬಂದು ಸ್ವಲ್ಪ ದೂರ ಹೋಗಿರಬೇಕು, ಅಷ್ಟರಲ್ಲೆ ಅನತಿ ದೂರದಲ್ಲಿ ಪೊಲೀಸರು ತಮಗೆ ಅನುಮಾನ ಬಂದ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿರುವುದು ಅವನ ಗಮನಕ್ಕೆ ಬಂದು ಅವನು ಮಂಕಾಗಿ ಹೋದ. ಈಗ ಹಿಂತಿರುಗಿ ಹೋಗುವಂತಿರಲಿಲ್ಲ. ಅವನ ಕಾರಿನ ಹಿಂದೆ ಸಾಲಾಗಿ ವಾಹನಗಳು ಬರುತ್ತಿರುವುದು ಕಂಡುಬಂತು. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಪೊಲೀಸರಿಗೆ ಎಲ್ಲರಗಿಂತ ತನ್ನ ಮೇಲೆ ಅನುಮಾನ ಬರುತ್ತದೆಂದು ಕಾರಿನ ವೇಗ ಸ್ವಲ್ಪ ಕಡಿಮೆ ಮಾಡಿದ. ಪೊಲೀಸರು ಕೈ ಸನ್ನೆಯಲ್ಲಿ ತನ್ನನ್ನು ನಿಲ್ಲಿಸಲು ಸೂಚಿಸಬಹುದೆಂದು ಎದೆ ಹೊಡೆದುಕೊಳ್ಳಲಾರಂಭಿಸಿತು. ಅವನ ಕಾಲು ಬ್ರೇಕ್ ಮೇಲೆಯೇ ಇತ್ತು.

ತಾನಂತೂ ಸಿಕ್ಕಿಕೊಳ್ಳುತ್ತೇನೆ, ಜತೆಗೆ ಗಿರೀಶ್‌ ಸಹ, ಉಸಿರು ಬಿಗಿಯಾಗಿ ಹಿಡಿದುಕೊಂಡು ಮುಂದೆ ಸಾಗಿದ– ಆದರೆ ಯಾವ ಜನ್ಮದ ಪುಣ್ಯವೋ ಏನೋ ಪೊಲೀಸರು ಅವನ ಕಾರು ನಿಲ್ಲಿಸಲಿಲ್ಲ. ಸಿಕ್ಕಿಕೊಳ್ಳುತ್ತಿದ್ದ ಸೆರೆಮನೆಯಲ್ಲಿ ಜೀವನ ಕಳೆಯಬೇಕಾಗಿತ್ತೇನೋ, ಇದರಿಂದ ತನ್ನ ಸಂಸಾರ ಬೀದಿ ಪಾಲಾಗುವುದರಲ್ಲಿ ಅನುಮಾನವಿರಲಿಲ್ಲ.

ಅದೃಷ್ಟ ಚೆನ್ನಾಗಿತ್ತೆಂದು ಯೋಚಿಸಿ ಕಾರಿನ ವೇಗ ಹೆಚ್ಚಿಸಿ ಹೊರವಲಯದ ಕಡೆ ಹೊರಟ.

ಆದಷ್ಟು ಬೇಗ ಇಲ್ಲಿ ಕೆಲಸ ಬಿಟ್ಟು ಬೇರೆ ಕಡೆ ಸೇರಿಕೊಳ್ಳಬೇಕು. ಇತ್ತೀಚೆಗೆ ಮನಸ್ಸು ಘಾಸಿಕೊಳ್ಳಲು ಪ್ರಾರಂಭವಾಗಿದೆ. ನೆಮ್ಮದಿಯಿಲ್ಲಯೆನಿಸತೊಡಗಿದೆ, ಮನೆ ಮಂದಿ ಮುಂದೆ ಎಲ್ಲವನ್ನು ಹೇಳಬೇಕೆಂದು ಆಲೋಚನೆ ಬರುತ್ತಿದೆ. ಇಷ್ಟೊಂದು ಕಾಲದ ಬಳಿಕ ಜ್ಞಾನೋದಯವಾಗಿದ್ದಕ್ಕೆ ಬೇಸರವಾಗಿದೆ– ದಿನೇಶ ಯೋಚಿಸ ತೊಡಗಿದ.

ಸ್ವಲ್ಪ ದೂರ ಸಾಗಿದ ಮೇಲೆ ಅಡ್ಡ ರಸ್ತೆಯಲ್ಲಿ ಒಂದಿಷ್ಟು ದೂರ ಹೋಗಿ ನಿರ್ಜನವಾದ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಭ್ರೂಣದ ಚೀಲವನ್ನು ಹೊರ ತೆಗೆದು ಎಸೆದು ಕಾರಿನ ಕಡೆ ಹೆಜ್ಜೆಯಿಡಿತ್ತಿರುವಾಗ ನವಜಾತ ಶಿಶುವಿನ ಅಳುವಿನ ಶಬ್ಧ ಕೇಳಿ ನಿಂತಲ್ಲೇ ನಿಂತುಕೊಂಡ. ತಾನು ಎಸೆದ ಭ್ರೂಣದ ಮಧ್ಯದಲ್ಲೇನಾದರೂ ನವಜಾತ ಶಿಶುವೇನಾದರೂ ಇತ್ತೆಂದು ಅನುಮಾನವಾಗಿ ಎಸೆದ ಭ್ರೂಣದ ಕಡೆ ನಡೆದ. ಅಲ್ಲಿ ಭ್ರೂಣ ಹೊರತು ಇನ್ನೇನು ಇರಲಿಲ್ಲ. ಆದರೆ ನವಜಾತ ಶಿಶುವಿನ ಆಳುವಿನ ಧ್ವನಿ ಕಿವಿಗೆ ಕೇಳಿಸುತ್ತಲೇ ಇತ್ತು.

ಅಲ್ಲೆ ನಿಂತು ಸುತ್ತ ಮುತ್ತ ಗಮನಿಸಿದಾಗ ಧ್ವನಿ ಪೊದೆಯೊಂದರ ಮರೆಯಿಂದ ಬರುತ್ತಿರುವುದೆಂದು ತಿಳಿದು ಪೊದೆಯ ಹಿಂದೆ ಹೋದಾಗ ಅಲ್ಲಿ ಒಂದು ಬಿಳಿ ಬಟ್ಟೆಯಲ್ಲಿ ನವಜಾತ ಶಿಶುವನ್ನು ಸುತ್ತಿ ಬೀಸಾಕಿ ಹೋಗಿದ್ದರು. ಬಹುಶಃ ಹೆಣ್ಣಿರಬಹುದೆಂದು ಅನುಮಾನಿಸುತ್ತಾ ಬಟ್ಟೆಯನ್ನು ಸ್ವಲ್ಪ ಸರಿದು ನೋಡಿದ ಅವನ ಊಹೆ ನಿಜವಾಗಿತ್ತು. ಅದು ಹೆಣ್ಣು ಕೂಸಾಗಿತ್ತು.

ಇಷ್ಟು ದಿನ ತಾನು ಮಾಡುತ್ತಿದ್ದ ಕೆಲಸವನ್ನು ಈಗ ಈ ಕೂಸಿನ ಪೋಷಕರು ಮಾಡಿದ್ದಾರೆ. ಅವರಲ್ಲಿ ಮತ್ತು ತನ್ನಲ್ಲಿ ಯಾವ ವ್ಯತ್ಯಾಸವೂ ಇಲ್ಲವೆನಿಸಿದಾಗ ಉಸಿರು ಕಟ್ಟಿದಂತಾಯಿತು.

ನವಜಾತ ಶಿಶುವಿನ ಪೋಷಕರನ್ನು ದ್ವೇಷಿಸುವ ಅಧಿಕಾರ ತನಗಿಲ್ಲ ಎಂಬ ಭಾವನೆ ಸಹ ಬಂತು. ಈ ಕೂಸಿನ ಪೋಷಕರ ಸಾಲಿನಲ್ಲಿ ತಾನು, ಗಿರೀಶ್ ಮತ್ತು ಇಂಥ ಕೆಲಸದಲ್ಲಿ ತೊಡಗಿಸಿಕೊಂಡವರೆಲ್ಲರೂ ನಿಲ್ಲುವುದು. ಸಮಾಜ, ತಮಗೆ ಯಾವ ಶಿಕ್ಷೆಯನ್ನು ಕೊಡಬಹುದು. ಸಮಾಜ ಶಿಕ್ಷೆ ಕೊಡುವ ಮಾತಿರಲಿ ನಮ್ಮ ಮನಸ್ಸುಗಳೆ ಇದಕ್ಕೆ ದಿನ ನಿತ್ಯ ಶಿಕ್ಷೆ ನೀಡುತ್ತಲೇಯಿದೆಯಲ್ಲ. ಆದರೆ ಅದರ ಅರಿವು ನಮಗಿಲ್ಲ. ತಾನು ಮಾಡಿದ ಇಷ್ಟು ದಿನದ ಪಾಪದಿಂದ ಮುಕ್ತಿ ಪಡೆಯಬೇಕಿದ್ದರೆ ಈ ಮಗುವನ್ನು ಮನೆಗೆ ಕೊಂಡೊಯ್ಯ ಬೇಕೆಂದೆನಿಸಿತು.

ಇನ್ನು ಒಂದೇ ಒಂದು ಕ್ಷಣ ಯೋಚಿಸುವ ಗೋಜಿಗೆ ಹೋಗದೆ ಹೆಣ್ಣು ಶಿಶುವನ್ನು ಬಟ್ಟೆ ಸಮೇತ ಎತ್ತಿಕೊಂಡು ಕಾರು ಹತ್ತಿ ತನ್ನ ಸೀಟಿನ ಪಕ್ಕ ತನ್ನ ಸ್ವೆಟರ್ ಹಾಸಿ ಅದರ ಮೇಲೆ ಮಗುವನ್ನು ಮಲಗಿಸಿ ಅತಿ ವೇಗದಿಂದ ಮನೆ ತಲುಪಿದ.

ಮನೆಯಲ್ಲಿ ಹೆಂಡತಿ ಮೊದಲೇ ಎರಡೆರಡು ಹೆಣ್ಣು ಮಕ್ಕಳಿರುವಾಗ ಇನ್ನೊಂದು ಯಾಕೆ ಎಂದು ಮುಖ ಸಿಂಡರಿಸಿಕೊಳ್ಳಬಹುದೆಂದು ಅನುಮಾನ ಮನಸ್ಸಿನಲ್ಲಿತ್ತು. ಆದರೆ ಹೆಂಡತಿ ಆ ರೀತಿ ಮಾಡಲಿಲ್ಲ. ಈ ಕೂಸು ರಸ್ತೆ ಬದಿಯಲ್ಲಿ ಸಿಕ್ಕಿತು ಎಂದಾಗ ಮಗುವನ್ನು ಕಂಡು ಹರ್ಷಗೊಂಡಳು. ಹೆಣ್ಣು ಮಕ್ಕಳು ಸಹ ಸಂತೋಷ ವ್ಯಕ್ತಪಡಿಸಿದರು. ಹೊಸದೊಂದು ಅತಿಥಿ ಮನೆಗೆ ಬಂದಿರುವುದರಿಂದ ಎಲ್ಲರೂ ಅದರ ನಿರೀಕ್ಷೆಯಲ್ಲಿದ್ದವರಂತೆ ಸಂಭ್ರಮಿಸಿದರು. ಇದೆಲ್ಲವನ್ನೂ ಕಂಡು ಅವನು ಒಂದೇ ಸಮನೆ ಕಣ್ಣೀರು ಹಾಕತೊಡಗಿದ.

ಅಷ್ಟರಲ್ಲೆ ಹೆಂಡತಿ ಮಗುವನ್ನು ಎದೆಗವಚಿಕೊಂಡು ಹಿರಿ ಮಗಳಿಗೆ ಹಾಲು ಕಾಯಿಸಲು ಸೂಚಿಸಿದಳು.

‌ದಿನೇಶ, ಈ ಸಂಭ್ರಮದ ವಾತಾವರಣವನ್ನು ನೋಡುತ್ತಿರುವಾಗಲೇ ಕ್ಲಿನಿಕ್‌ನಿಂದ ಗೇಟ್‌ ಕೀಪರ್ ಫೋನ್ ಮಾಡಿ ನವೀನ ಬದುಕಿ ಉಳಿಯಲಿಲ್ಲ ಎಂದು ಅತಿ ದುಃಖದಿಂದ ವಿವರಿಸಿದ.

ದಿನೇಶ ಮನೆಯಿಂದ ಹೊರಬಂದು ಕಾರು ಹತ್ತುವುದಕ್ಕೆ ಮುನ್ನ ಸ್ವಲ್ಪ ಹೊತ್ತು ಸುಮ್ಮನೆ ಆಕಾಶ ನೋಡಿದ– ಆ ಮೇಲೆ ಕಾರು ಹತ್ತುತ್ತಾ ಈ ಕಾರನ್ನು ಹತ್ತುತ್ತಿರುವುದು ತಾನು ಕೊನೆಯ ಬಾರಿಯೆಂದು ಯೋಚಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.