ADVERTISEMENT

ಕಥೆ | ಆಗಂತುಕ

ಕೆ.ಪಿ.ಸತ್ಯನಾರಾಯಣ
Published 29 ಆಗಸ್ಟ್ 2021, 1:37 IST
Last Updated 29 ಆಗಸ್ಟ್ 2021, 1:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸವಿತಾ ಕಚೇರಿ ಬಿಡುವಾಗಲೇ ತಡವಾಗಿಬಿಟ್ಟಿತ್ತು. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ‘ಈ ಎರಡು ಲೆಟರ್ಸ್ ಇವತ್ತೇ ಮೈಲ್ ಮಾಡಬೇಕು. ಡಿಕ್ಟೇಟ್ ಮಾಡಿಬಿಡ್ತೀನಿ. ಟೈಪ್ ಮಾಡಿ ಮೈಲ್ ಕಳಿಸಿಬಿಡಿ ಪ್ಲೀಸ್’ ಎಂದು ಮ್ಯಾನೇಜರ್ ಹೇಳಿದಾಗ ಇಲ್ಲವೆನ್ನುವ ಹಾಗಿರಲಿಲ್ಲ. ಈ ಮ್ಯಾನೇಜರ್‌ಗಳಿಗೆ ನಮ್ಮನ್ನು ಗೋಳು ಹುಯ್ಯುವುದೇ ಕೆಲಸವಾ? ಅದಕ್ಕೇ ಅವರಿಗೆ ಸಂಬಳ ಕೊಡೋದೇನೋ? ಬೇಕೂಂತ್ಲೇ ಈಗ ಹೇಳ್ತಿದಾನಲ್ಲಾ. ಮೊದಲೇ ಹೇಳಿದ್ರೆ ನಾನು ಪ್ಲಾನ್ ಮಾಡ್ಕೊಂಡು ಎಲ್ಲವನ್ನೂ ಇನ್ ಟೈಮ್ ಮುಗಿಸ್ತಾ ಇದ್ದೆ. ಸ್ಯಾಡಿಸ್ಟ್‌ಗಳು ಎಂದು ಮನಸ್ಸಿನಲ್ಲೇ ಬೈದುಕೊಂಡು ಆ ಕೆಲಸ ಮುಗಿಸುವ ಹೊತ್ತಿಗೆ ಆರೂವರೆ ಗಂಟೆಯಾಗಿಯೇ ಬಿಟ್ಟಿತ್ತು. ಸಿಟಿ ಬಸ್ ಹಿಡಿದು ತನ್ನ ಮಾಮೂಲಿ ಸ್ಟಾಪ್‌ನಲ್ಲಿ ಇಳಿದಾಗ ಕತ್ತಲೋ ಕತ್ತಲು. ಡಿಸೆಂಬರ್ ತಿಂಗಳಲ್ಲಿ ಬೇಗ ಕತ್ತಲಾಗಿ ಬಿಡುತ್ತೆ. ಜನಗಳಿಗೆ ಬೇಕಿರೋವಾಗ್ಲೇ ಪವರ್ ಕಟ್ ಮಾಡೋ ಕೆಟ್ ಬುದ್ಧಿ ಈ ಕೆಇಬಿಯವರಿಗೆ ಎಂದು ಬೈದುಕೊಳ್ಳುತ್ತಲೇ ಪತಿ ಸುಧೀರನಿಗೆ ಫೋನ್ ಮಾಡಿದಳು. ಅವರ ಮನೆ ಇದ್ದುದು ಹೊಸ ಬಡಾವಣೆ ಅರವಿಂದ ನಗರದಲ್ಲಿ. ಇನ್ನೂ ಪೂರ್ಣ ಅಭಿವೃದ್ಧಿಯಾಗದ ಏರಿಯಾ. ಅಲ್ಲೊಂದು ಇಲ್ಲೊಂದು ಮನೆಗಳು, ಸಾಕಷ್ಟು ಖಾಲಿ ನಿವೇಶನಗಳಿದ್ದವು. ಬಸ್ ಸ್ಟಾಪಿನಿಂದ ಹತ್ತು ನಿಮಿಷದ ದಾರಿ ಅವರ ಮನೆಗೆ. ಆದರೆ ಈಗ ಬೀದಿ ದೀಪಗಳೂ ಇಲ್ಲದ್ದರಿಂದ ಅವಳಿಗೆ ಒಬ್ಬಳೇ ಹೋಗಲು ಭಯವಾಗಿತ್ತು.

ಫೋನ್ ಎತ್ತಿದ ಸುಧೀರ್ ‘ಹಲೋ, ಬಂದ್ಯಾ ರಾಣಿ ಮನೆಗೆ?’ ಎಂದು ಕೇಳಿದ. ‘ಇಲ್ಲಾರೀ. ಬಸ್ ಸ್ಟಾಪಲ್ಲಿದೀನಿ. ಇಲ್ಲಿ ಕರೆಂಟ್ ಬೇರೆ ಇಲ್ಲ. ಗಾಡಿ ತಗಂಡು ಬೇಗ ಬಂದ್ಬಿಡಿ’ ಎಂದಳು. ‘ಅಯ್ಯೋ, ಚಿನ್ನಾ, ನಾನಿನ್ನೂ ಆಫೀಸ್‌ನಿಂದ ಹೊರಟೇ ಇಲ್ವಲ್ಲೇ. ಈಗ್ಲೇ ಹೊರಟ್ರೂ ಅಲ್ಲಿಗೆ ಬರೋದು ಅರ್ಧ ಗಂಟೆಯಾಗಿಬಿಡುತ್ತಲ್ಲ. ಇನ್ಯಾರಾದ್ರೂ ಇಳಿದ್ರಾ ಅಲ್ಲಿ? ಇಲ್ಲಾಂದ್ರೆ, ಅಲ್ಲಿ ಸ್ಟಾಪಲ್ಲಿ ಒಬ್ಳೇ ನಿಂತಿರೋಕಿಂತ ನೀನು ಮನೆಗೆ ಹೋಗಿಬಿಡೋದೇ ಒಳ್ಳೇದು. ಜೋಪಾನ ಕಣೇ’ ಎಂದ. ಸವಿತಾಳಿಗೆ ಏನೂ ಮಾಡಲು ತೋಚಲಿಲ್ಲ. ಆದರೆ ಸುಧೀರ್ ಹೇಳಿದ ಹಾಗೆ, ಇಲ್ಲಿ ಒಬ್ಬಳೇ ನಿಂತಿರುವುದಕ್ಕಿಂತ ನಡೆದು ಹೋಗುವುದೇ ಉತ್ತಮ ಎಂದುಕೊಳ್ಳುತ್ತಾ ‘ಹೂಂ ರೀ. ಹೋಗ್ತೀನಿ’ ಎಂದು ಫೋನ್ ಕಟ್ ಮಾಡಿ ಮನೆಯ ಕಡೆ ಹೆಜ್ಜೆ ಹಾಕತೊಡಗಿದಳು.

ಸ್ವಲ್ಪ ದೂರ ನಡೆದು ಮುಂದಿನ ತಿರುವಿನಲ್ಲಿ ಎಡಕ್ಕೆ ತಿರುಗಿದಳು. ನಾಲಕ್ಕು ಹೆಜ್ಜೆ ಹಾಕಿರಬಹುದಷ್ಟೇ. ಹಿಂದಿನಿಂದ ಧಪ್ ಧಪ್ ಎಂಬ ಸದ್ದು. ಸರಿಯಾಗಿ ಆಲಿಸಿದ ಮೇಲೆ ಅದು ಯಾರದ್ದೋ ಹೆಜ್ಜೆಯ ಸಪ್ಪಳ ಎಂದು ಗೊತ್ತಾಯಿತು. ಯಾರೋ ಫಾಲೋ ಮಾಡುತ್ತಿರುವ ಹಾಗೆ ಅನ್ನಿಸಿತವಳಿಗೆ. ಹಿಂದೆ ತಿರುಗಿ ನೋಡಿದರೆ ಕತ್ತಲಲ್ಲಿ ಏನೂ ಸ್ಪಷ್ಟವಾಗಿ ಕಾಣಲಿಲ್ಲ. ಒಂದು ಕಡೆ ಭಯ ಹೆಚ್ಚಾದರೂ, ನನ್ನ ಜತೆಗೆ ಇನ್ನೂ ಒಬ್ಬರು ಬರ್ತಾ ಇದ್ದಾರೆ ಎನ್ನುವ ಸಮಾಧಾನವೂ ಆಯಿತು ಸವಿತಾಳಿಗೆ.

ADVERTISEMENT

ಬೇಗ ಬೇಗ ಹೆಜ್ಜೆ ಹಾಕುತ್ತಾ, ಸ್ವಲ್ಪ ಮುಂದೆ ಹೋದಾಗ ಒಂದು ಮನೆಯ ಬಾಗಿಲು ತೆಗೆದಿದ್ದು, ಒಳಗಿನಿಂದ ಮೇಣದ ಬತ್ತಿಯ ಕ್ಷೀಣವಾದ ಬೆಳಕು ರಸ್ತೆಯ ಮೇಲೆ ಬೀಳುತ್ತಿತ್ತು. ಆ ಮನೆಯ ಹತ್ತಿರ ಬಂದಾಗ, ಸ್ವಲ್ಪ ಬೆಳಕಿದೆಯಲ್ಲಾ, ಈಗ ನೋಡಿದರೆ ಯಾರು ಹಿಂಬಾಲಿಸುತ್ತಿರುವುದು ಎಂದು ಗೊತ್ತಾಗುತ್ತದೆ ಎಂದು ಅಲ್ಲಿ ನಿಂತು ಹಿಂದೆ ತಿರುಗಿ ನೋಡಿದಳು. ಅವಳು ನಿಂತಾಗ ಹಿಂದಿನಿಂದ ಹೆಜ್ಜೆ ಸದ್ದೂ ನಿಂತಿತು. ಮಂಕು ಬೆಳಕಿನಲ್ಲಿ ಕಪ್ಪು ಆಕೃತಿಯೊಂದು ಇವಳ ಹಿಂದೆ ಸ್ವಲ್ಪ ದೂರದಲ್ಲಿ ನಿಂತಿದ್ದುದು ಅಸ್ಪಷ್ಟವಾಗಿ ಕಂಡಿತು. ಇವಳು ನಿಂತಿದ್ದನ್ನು ನೋಡಿ ಆ ಆಕೃತಿಯೂ ಸ್ವಲ್ಪ ದೂರದಲ್ಲಿ ನಿಂತಿತ್ತು.

ಸವಿತಾಳಿಗೆ ತೀರಾ ಭಯವಾಯಿತು. ಬೇರೆ ದಾರಿ ಕಾಣದೆ ಅವಳು ಗೇಟ್ ತೆರೆದು, ಆ ಮನೆಯ ಒಳಕ್ಕೆ ಓಡಿ, ತಾನು ಸುರಕ್ಷಿತ ಅನ್ನಿಸಿದಾಗ ಹಿಂತಿರುಗಿ ಒಮ್ಮೆ ನೋಡಿದಳು. ಮನೆಯ ಒಳಗಿದ್ದವರಿಗೆ ಯಾರೀಕೆ?? ಹೇಳ್ದೇ ಕೇಳ್ದೆ ಹೀಗೆ ಮನೆಯೊಳಕ್ಕೆ ನುಗ್ತಿದಾಳೆ ಎಂದು ಗೊಂದಲವಾಯಿತು. ಅವರೇನಾದರೂ ಕೇಳುವ ಮುನ್ನವೇ, ಸ್ವಲ್ಪ ಸುಧಾರಿಸಿಕೊಂಡ ಸವಿತಾ ‘ದಯವಿಟ್ಟು ಏನಂದ್ಕೋಬೇಡಿ. ನಾನು ಸವಿತಾ ಅಂತ. ಹದಿನಾರನೇ ಕ್ರಾಸಲ್ಲಿ ನಮ್ ಮನೆ. ಬಸ್ ಸ್ಟಾಪಿಂದ ಬರೋವಾಗ ಯಾರೋ ನನ್ನನ್ನ ಫಾಲೋ ಮಾಡ್ಕೊಂಡು ಬಂದ ಹಾಗಾಯ್ತು. ಕತ್ಲೇ ಬೇರೆ, ಏನೂ ಕಾಣ್ತಿರ್ಲಿಲ್ಲ. ನಿಮ್ ಮನೆ ಬೆಳಕ್ನಲ್ಲಿ ತಿರುಗಿ ನೋಡ್ದೆ. ವಿಚಿತ್ರ ಆಕೃತಿ. ಕಪ್ಪಗೆ ದಪ್ಪಗಿದೆ. ಯಾರೋ ಕಂಬಳಿ ಹೊದ್ಗೊಂಡು ದರೋಡೆ ಮಾಡಕ್ಕೆ ಬಂದ್ರಾ ಅಂತ ಭಯ ಆಯ್ತು. ನಿಮ್ಮ ಮನೆ ಬಾಗ್ಲು ತೆಗ್ದಿತ್ತಲ್ಲಾ, ಧೈರ್ಯ ಬಂತು. ಒಳಕ್ಕೆ ನುಗ್ಗಿಬಿಟ್ಟೆ. ತೊಂದರೆ ಕೊಟ್ಟಿದ್ದಕ್ಕೆ ರಿಯಲೀ ಸ್ಸಾರಿ’ ಎಂದು ಕ್ಷಮೆ ಬೇಡುವ ಸ್ವರದಲ್ಲಿ ನುಡಿದಳು.

ಮನೆಯಾತ ಏನೂ ಮಾಡಲು ತೋಚದೆ ಬಾಗಿಲು ಭದ್ರಪಡಿಸುತ್ತಾ ‘ಅಯ್ಯೋ ಪರ್ವಾಗಿಲ್ಲಾ ಮೇಡಂ. ಹೊಸಾ ಏರಿಯಾ ನೋಡಿ. ನಾವು ಹೀಗೆ ಒಬ್ರಿಗೊಬ್ರು ಆಗ್ಲೇಬೇಕು. ನೀವು ಒಳಗೆ ಬಂದಿದ್ದು ನೋಡಿ ಅವ್ನು ಓಡಿ ಹೋಗಿರ್ತಾನೆ. ಹತ್ತು ನಿಮಿಷ ಇರಿ. ನಾನೇ ನಿಮ್ಮನ್ನ ಮನೆಗೆ ಬಿಟ್ಟು ಬರ್ತೀನಿ’ ಎಂದನಾತ. ಮನೆಯಾಕೆಯೂ ‘ನಾನೂ ನಿಮ್ ಜತೆಗೆ ಬರ್ತೀನಿ. ಇವರ್ ಜತೆ ಒಬ್ರೇ ಹೋಗಕ್ಕೆ ನಿಮ್ಗೆ ಸಂಕೋಚ ಆಗ್ಬಹುದು’ ಎಂದಳು.

‘ಥ್ಯಾಂಕ್ಯೂ ಸೋ ಮಚ್. ಆದ್ರೆ ನಾನು ಗೇಟು ತೆಗ್ದು ಒಳಕ್ ಬಂದಾಗ, ಅದೂ ನನ್ನ ಹಿಂದೆಯೇ ಒಳಕ್ ಬಂದು ಎಡಗಡೆಗೆ ಹೋದ ಹಾಗಾಯ್ತು’ ಎಂದಳು ಇನ್ನೂ ಭಯದಿಂದ ನಡುಗುತ್ತಿದ್ದ ಸವಿತಾ.

‘ಅಯ್ಯೋ. ಹೌದಾ? ಆ ಕಡೆ ಇರೋ ಮೆಟ್ಟಿಲು ನಮ್ ಟೆರೇಸಿಗೆ ಹೋಗುತ್ತೆ. ಅಲ್ಲೇನಾದ್ರೂ ಹೋಗಿ ಅವುತ್ಕಂಡು ಕೂತ್ಗಂಡ್ನಾ? ತಡೀರಿ ಪೋಲೀಸ್‌ಗೆ ಫೋನ್ ಮಾಡಣ. ಸುಮ್ನೆ ನಾವ್ಯಾಕೆ ರಿಸ್ಕ್ ತಗಳದು’ ಎನ್ನುತ್ತಾ ಆತ ಪೋಲೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದ.

ಅಷ್ಟರಲ್ಲಿ ಸುಧೀರನ ಫೋನ್ ಬಂತು. ‘ಜೋಪಾನವಾಗಿ ಮನೆಗೆ ತಲುಪ್ದೆ ತಾನೇ? ನಾನೂ ಹೊರ್ಟಿದೀನಿ. ಇಪ್ಪತ್ ನಿಮಿಷದಲ್ಲಿ ಮನೆಗೆ ಬಂದ್ಬಿಡ್ತೀನಿ’ ಎಂದನಾತ. ‘ಅಯ್ಯೋ, ಇಲ್ಲಾರಿ. ನಾನೀಗ ಮೂರನೇ ಮೈನ್‌ನಲ್ಲಿ ಯಾರೋ ಒಬ್ರ ಮನೇಲಿದೀನಿ’ ಎನ್ನುತ್ತಾ ನಡೆದ ಘಟನೆಯನ್ನು ತಿಳಿಸಿದಳು ಸವಿತಾ. ‘ಹಾಗಾದ್ರೆ ನಾನು ಅಲ್ಲಿಗೇ ಬಂದ್ಬಿಡ್ತೀನಿ. ಅಲ್ಲಿಂದ ಒಟ್ಗೇ ಮನೆಗೆ ಹೋದ್ರಾಯ್ತು’ ಎಂದ ಸುಧೀರ್.

‘ಬೇಡಾ. ನೀವ್ ಇಲ್ಲಿಗೆ ಬರೋದು ಅಪಾಯ ಅನ್ಸುತ್ತೆ. ಈಗ ಸೀದಾ ಮನೆಗೆ ಹೋಗಿರಿ. ನಾನಿಲ್ಲಿ ಸೇಫ್ ಆಗಿದೀನಿ. ಎಲ್ಲಾ ಕ್ಲಿಯರ್ ಆದಾಗ ಹೇಳ್ತೀನಿ. ಬರೋರಂತೆ’ ಎಂದಳು ಸವಿತಾ.

‘ಕರೆಕ್ಟ್ ಮೇಡಂ. ಈಗ ಸದ್ಯಕ್ಕೆ ಯಾರೂ ಆಚೆ ಹೋಗೋದು ಒಳ್ಳೇದಲ್ಲ’ ಎಂದು ಮನೆಯಾತನೂ ಅನುಮೋದಿಸಿದ.

ಮನೆಯಾಕೆ ಕಾಫಿ ಮಾಡಿ ತಂದು ಸವಿತಾಳಿಗೆ ಕೊಟ್ಟಳು. ‘ನೀವ್ಯಾಕೆ ತೊಂದ್ರೆ ತಗೊಂಡ್ರಿ? ಇದೆಲ್ಲಾ ಬೇಕಿರ್ಲಿಲ್ಲ’ ಸವಿತಾ ಸಂಕೋಚದಿಂದ ಹೇಳಿದಳು. ‘ಪರ್ವಾಗಿಲ್ಲ. ತಗೊಳ್ಳಿ ಮೇಡಂ. ಮನೆಗೆ ಹೋಗಿದ್ರೆ ನೀವು ಮೊದ್ಲು ಕಾಫಿ ತಾನೇ ಕುಡೀತಿದ್ದಿದ್ದು? ನೋಡಿ, ನಿಮ್ಮಿಂದ ನಂಗೂ ಕಾಫಿ ಸಿಗ್ತು!’ ಮನೆಯಾತ ಪರಿಸ್ಥಿತಿಯನ್ನು ತಿಳಿಗೊಳಿಸಲು ತಮಾಷೆ ಮಾಡಿದ. ಸವಿತಾಳಿಗೆ ಕಾಫಿ ಬೇಕಾಗಿಯೇ ಇತ್ತು. ಮತ್ತೆ ಏನೂ ಹೇಳದೆ ಕಾಫಿಯ ಲೋಟಕ್ಕೆ ಕೈ ಹಾಕಿದಳು.

ಕೆಲವು ನಿಮಿಷಗಳು ಕಳೆದ ನಂತರ ಯಾವುದೋ ವಾಹನ ಬಂದು ನಿಂತ ಶಬ್ದ ಕೇಳಿಸಿತು. ‘ಓ ಬಂದ್ರೂಂತ ಕಾಣುತ್ತೆ’ ಎನ್ನುತ್ತಾ ಮನೆಯಾತ ಬಾಗಿಲನ್ನು ಸ್ವಲ್ಪವೇ ತೆರೆದು ಹೊರಗೆ ನೋಡಿದ. ಒಂದು ಜೀಪ್‌ನಲ್ಲಿ ಪೋಲೀಸರು ಬಂದಿದ್ದರು. ಮನೆಯಾತ ಹೊರಗೆ ಬಂದಾಗ ‘ನೀವೇನೇನ್ರೀ ಫೋನ್ ಮಾಡಿದ್ದು?’ ಇನ್ಸ್‌ಪೆಕ್ಟರ್ ಆತನನ್ನು ಪ್ರಶ್ನಿಸಿದರು. ‘ಹೌದು ಸಾರ್’ ಎನ್ನುತ್ತಾ ಆತ ನಡೆದಿದ್ದನ್ನೆಲ್ಲಾ ವಿವರಿಸಿದ.

ಇನ್ಸ್‌ಪೆಕ್ಟರ್ ಮತ್ತೆ ರಸ್ತೆಗೆ ಬಂದು ಆ ವೇಳೆಗೆ ಇಳಿದು ಸಾಲಾಗಿ ನಿಂತಿದ್ದ ಪೋಲೀಸರುನ್ನುದ್ದೇಶಿಸಿ ‘ಈ ಟೆರೇಸ್ ಮೇಲೆ ಹೋಗಿ ಕೂತಿರೋ ಹಾಗಿದೆ. ಏಕ್‌ದಂ ಟೆರೇಸ್ ಮೇಲಕ್ಕೆ ಹೋಗೋದು ರಿಸ್ಕಿ. ಮೇಲಿರೋದ್ರಿಂದ ನಮ್ ಮೇಲೆ ಅಟ್ಯಾಕ್ ಮಾಡಕ್ಕೆ ಅವಕಾಶ ಜಾಸ್ತಿ. ನಾಲ್ಕು ಜನ ಇಲ್ಲೇ ಇದ್ದು ಅಬ್ಸರ್ವ್ ಮಾಡ್ತಾ ಇರಿ. ಉಳಿದೋರು ನನ್ ಜತೆ ಬನ್ನಿ’ ಎನ್ನುತ್ತಾ ಪಕ್ಕದ ಮನೆಯ ಮೆಟ್ಟಿಲುಗಳನ್ನೇರಿ ಆ ಮನೆಯ ಟೆರೇಸಿಗೆ ಹೋದರು. ಈ ಮನೆಯ ಟೆರೇಸಿನತ್ತ ಟಾರ್ಚ್ ಬಿಟ್ಟು ನೋಡಿದಾಗ ನೀರಿನ ಟ್ಯಾಂಕ್ ಇಡುವ ಸ್ಟ್ಯಾಂಡ್‌ ಕೆಳಗೆ ವಿಚಿತ್ರ ಅಕೃತಿಯೊಂದು ಕೂತ ಹಾಗೆ ಕಂಡಿತು.

ಟಾರ್ಚ್ ಬೆಳಕು ಕಣ್ಣು ಕುಕ್ಕಿದಂತಾದಾಗ ಅಲ್ಲಿ ಮುದುಡಿ ಕುಳಿತಿದ್ದ ಆ ಆಕೃತಿ ಥಟ್ಟನೆ ಎದ್ದು ಓಡುತ್ತಾ ಆ ಪಕ್ಕದಲ್ಲಿದ್ದ ಇನ್ನೊಂದು ಮನೆಯ ಟೆರೇಸಿಗೆ ನೆಗೆದುಬಿಟ್ಟಿತು. ಕೆಳಗಿದ್ದ ಪೋಲೀಸರೂ ಓಡಿ ಪಕ್ಕದ ಮನೆಯ ಎದುರು ನಿಂತು ತಮ್ಮ ಗನ್ನುಗಳನ್ನು ಆ ಟೆರೇಸಿನತ್ತ ಗುರಿಯಿಟ್ಟು ನಿಂತರು. ಆ ಮನೆಯ ಪಕ್ಕದ ಸೈಟು ಖಾಲಿಯಿದ್ದುದರಿಂದ ಅದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯೋಚಿಸಿದ ಇನ್ಸ್‌ಪೆಕ್ಟರ್ ತಮ್ಮ ಸಂಗಾತಿಗಳೊಂದಿಗೆ ಬೇಗ ಇಳಿದು ಬಂದು, ಆ ಅಕೃತಿ ಮೊದಲು ಕುಳಿತಿದ್ದ ಟೆರೇಸಿಗೆ ತಲುಪಿ, ‘ಮತ್ತೇನಾರಾ ತಪ್ಪಿಸ್ಕಳಕ್ಕೆ ನೋಡಿದ್ರೆ ಈ ಸಲ ಗ್ಯಾರಂಟಿ ಶೂಟ್ ಮಾಡ್ಬಿಡ್ತೀನಿ. ನಿಂತ್ಕಾ ಅಲ್ಲೇ’ ಎಂದು ಜೋರಾಗಿ ಕೂಗಿ ಹೇಳಿದರು. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಇಲ್ಲಿಯವರೆಗೆ ತಾನು ಸುರಕ್ಷಿತ ಎಂದು ಭಾವಿಸಿದ್ದ ಆ ಆಕೃತಿಗೆ ಗಾಬರಿಯಾಯಿತೆಂದು ಕಾಣುತ್ತದೆ. ಟೆರೇಸಿನ ಅಂಚಿಗೆ ಬಂದು ನೀರಿನ ಪೈಪನ್ನು ಹಿಡಿದು ಜಾರುತ್ತಾ ಇಳಿದು, ಪಕ್ಕದ ಖಾಲಿ ಸೈಟಿಗೆ ಓಡಿ ಅಲ್ಲಿದ್ದ ಕುರುಚಲು ಪೊದೆಗಳ ನಡುವೆ ಸೇರಿಕೊಂಡಿತು. ಆ ಸೈಟಿನ ಸುತ್ತಾ ಮೂರು ಕಡೆಯೂ ಮನೆಗಳಿದ್ದುದರಿಂದ, ಜತೆಗೆ ಆ ಆಕೃತಿ ನೆಲದ ಮೇಲಿದ್ದುದರಿಂದ ಪೋಲೀಸರಿಗೆ ಅನುಕೂಲಕರ ಪರಿಸ್ಥಿತಿ ಉಂಟಾಯಿತು. ಆ ಸೈಟಿನ ಎರಡೂ ಕಡೆಯ ಮನೆಗಳ ಮೇಲೆ ಕೆಲವು ಪೋಲೀಸರು, ರಸ್ತೆಯಲ್ಲಿ ಕೆಲವರು ನಿಂತರು. ಸೈಟಿನ ಹಿಂದುಗಡೆ ಇದ್ದ ಎರಡು ಮಹಡಿಗಳ ಮನೆಯ ಕಾಂಪೌಂಡ್ ಮೇಲೆ ಗ್ರಿಲ್ ಅಳವಡಿಸಿದ್ದ ಕಾರಣ ಆ ಕಡೆ ತಪ್ಪಿಸಿಕೊಳ್ಳಲು ಅವಕಾಶವಿರಲಿಲ್ಲ. ‘ಸಿಕ್ದ ಕಳ್ಳ’ ಎನ್ನುತ್ತಾ, ಸಾವಕಾಶವಾಗಿ ಹೆಜ್ಜೆ ಇಡುತ್ತಾ, ಇನ್ಸ್‌ಪೆಕ್ಟರ್ ಆ ಸೈಟನ್ನು ಪ್ರವೇಶಿಸಲು ಹೊರಟರು.

ಅಷ್ಟರಲ್ಲಿ ವ್ಯಾನೊಂದು ಆ ರಸ್ತೆಯಲ್ಲಿ ಬಂದಿತು. ಅಲ್ಲಿದ್ದ ಪೋಲೀಸರನ್ನು ನೋಡಿ, ತಾವು ಸರಿಯಾದ ಸ್ಥಳಕ್ಕೆ ಬಂದಿದ್ದೇವೆಂದು ಭಾವಿಸಿದ ಅದರಲ್ಲಿದ್ದವರು ವ್ಯಾನನ್ನು ಅಲ್ಲಿಯೇ ನಿಲ್ಲಿಸಿದರು. ಅದರಿಂದ ಇಳಿದ ಕೆಲವರು, ತಾವೂ ಆ ಸೈಟಿನತ್ತ ಬಂದರು. ಅವರಲ್ಲೊಬ್ಬರು ಪಿಸುಮಾತಿನಲ್ಲಿ ಇನ್ಸ್‌ಪೆಕ್ಟರ್‌ಗೆ ತಾವು ಬಂದ ಕಾರಣವನ್ನು ತಿಳಿಸಿದರು. ‘ಗನ್ನುಗಳನ್ನ ಕೆಳಗಿಳಿಸ್ರಪ್ಪಾ. ಯಾರೂ ಫೈರ್ ಮಾಡ್ಬೇಡಿ. ಬಟ್ ವಾಚ್ ಮಾಡ್ತಾ ಇರಿ’ ಎಂದು ಹೇಳಿ ನಿಟ್ಟುಸಿರು ಬಿಟ್ಟರು ಇನ್ಸ್‌ಪೆಕ್ಟರ್. ಈಗ ಬಂದ ತಂಡದೊಡನೆ ಪೋಲಿಸರೂ ಸೇರಿ ಆ ಸೈಟಿನ ಎಲ್ಲೆಡೆ ಹುಡುಕಾಟ ನಡೆಸಿದರು. ದೊಡ್ದ ಪೊದೆಯೊಂದರ ಹಿಂದೆ ಅಡಗಿ ಕುಳಿತ ಆ ಆಕೃತಿ ಗೋಚರವಾದಾಗ, ಆ ತಂಡದವರೊಬ್ಬರು ಆ ಆಕೃತಿಯತ್ತ ಮತ್ತು ಬರಿಸುವ ಇಂಜೆಕ್ಷನ್ ಹಾರಿಸಿದರು. ಪ್ರಜ್ಞೆ ತಪ್ಪಿ ಬಿದ್ದ ಕೂಡಲೇ ತಮ್ಮ ವ್ಯಾನಿನಲ್ಲಿ ಹಾಕಿಕೊಂಡು ಹೊರಟು ಹೋದರು. ಗುಡ್ದ ಅಗೆದು ಇಲಿ ಹಿಡಿದ್ರು ಅನ್ನುವ ಮಾತಿನಂತೆ, ದರೋಡೆಕೋರನನ್ನು ಭೇಟೆಯಾಡಲು ಬಂದ ಪೋಲೀಸಿನವರು, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ತಮ್ಮ ಠಾಣೆಯತ್ತ ಹೊರಟರು.

ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಿದ್ದ ಸುಧೀರನಿಗೆ ವಿಷಯ ಏನೆಂದು ತಿಳಿಯಿತು. ಓಹ್, ಸವಿತಾಳನ್ನು ಫಾಲೋ ಮಾಡಿದ್ದು, ಅದೇ ಇರಬೇಕು ಎಂದು ಹೊಳೆಯಿತು. ಹಾಗಾಗಿ ಏನೂ ಅಪಾಯ ಇಲ್ಲ ಎಂದುಕೊಂಡು, ತನ್ನ ಬೈಕಿನಲ್ಲಿ ಮೂರನೇ ಮೈನ್‌ಗೆ ಕಡೆ ಹೊರಟ. ಅಲ್ಲೊಂದು ಮನೆಯ ಮುಂದೆ ಒಂದಷ್ಟು ಜನ ಇರುವುದನ್ನು ಕಂಡು ಅಲ್ಲಿಗೆ ಬಂದ. ಬೈಕ್ ಶಬ್ದ ಕೇಳಿದ ಸವಿತಾಳೂ ಆ ಮನೆಯೊಳಗಿಂದ ಹೊರಗೆ ಬಂದಳು.

ಪತ್ನಿಗೆ ಆಶ್ರಯವಿತ್ತ ಆ ಮನೆಯವರಿಗೆ ಕೃತಜ್ಞತೆ ತಿಳಿಸಿ ಮನೆಯತ್ತ ಸಾಗುವಾಗ ಸುಧೀರ್ ಸವಿತಾಳಿಗೆ ಹೇಳಿದ ‘ಆ ಗಂಡು ಗೊರಿಲ್ಲಾ ಸಂಗಾತಿಯಿಲ್ಲದೆ ಬಹಳ ದಿನಗಳಿಂದ ಝೂನಲ್ಲಿ ಒಂಟಿಯಾಗಿತ್ತಂತೆ ಪಾಪ. ನಿನ್ನನ್ನ ನೋಡಿ, ಒಳ್ಳೇ ಚಂದದ ಹುಡ್ಗಿ ಸಿಕ್ಕಿದ್ಲು ಅಂತ, ಫಾಲೋ ಮಾಡ್ಕೊಂಡು ಬಂದಿತ್ತು ಅನ್ಸುತ್ತೆ!’ ಎಂದು ತಮಾಷೆ ಮಾಡಿದ. ಸವಿತಾ ಹುಸಿಮುನಿಸಿನಿಂದ ಅವನ ಬೆನ್ನಿಗೊಂದು ಗುದ್ದು ಕೊಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.