ADVERTISEMENT

ಕಥೆ: ಶಕುಂತಲೆ

ಫಾತಿಮಾ ರಲಿಯಾ
Published 21 ಮೇ 2022, 19:30 IST
Last Updated 21 ಮೇ 2022, 19:30 IST
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ   

‘ಅವನ‌ ಮಗು ತೀರ್ಕೊಂಡು ಬಿಡ್ತಂತೆ’ ಸುದ್ದಿ ಮೊದಲ ಬಾರಿ ಕೇಳಿದಾಗ ಸಣ್ಣದೊಂದು ಪಿನ್‌ನಿಂದ ಹೃದಯಕ್ಕೆ ಚುಚ್ಚಿದಂತಾಗಿತ್ತು. ಅಡುಗೆ ಮನೆಯ ಗೋಡೆಗೆ ಮುಖ ಮಾಡಿ ಹಾಲು ಕಾಯಿಸುತ್ತಿದ್ದ ನನಗೆ ಕಣ್ಣೊರೆಸಲೂ ಧೈರ್ಯ ಸಾಲದೆ ಕನ್ನಡಿಯ ಮುಂದೆ ನಿಂತಿದ್ದೆ. ಕನ್ನಡಿಯ ಹೊರಗೆ ನಾನು, ಒಳಗೆ ಅವನು ಬಿಕ್ಕಳಿಸುತ್ತಿರುವಂತೆ ಕಾಣಿಸಿತು. ಕ್ಷಣ ಹೊತ್ತಿನ‌ ಗೊಂದಲ. ಕನ್ನಡಿ ಯಾರನ್ನು ತೋರುತ್ತಿದೆ? ನನ್ನನ್ನೋ, ಅವನನ್ನೋ ಅಥವಾ ನನ್ನೊಳಗಿನ್ನೂ ಜೀವಂತವಾಗಿರುವ ಅವನನ್ನೋ?

ಕಳೆದ ವರ್ಷ ಇದೇ ಹೊತ್ತಿಗೆ ಅವನ‌ ಮದುವೆಯ ಚಂದದ ಇನ್ವಿಟೇಷನ್ ಕಾರ್ಡ್ ನನ್ನ ಇನ್‌ಬಾಕ್ಸ್ ಒಳಗೆ ಬಂದು ಬಿದ್ದಿತ್ತು, ಜೊತೆಗೊಂದು ಒಕ್ಕಣೆ ಕೂಡ, ‘ಮದುವೆಯಾಗುತ್ತಿದ್ದೇನೆ. ಹರಸು, ಹಾರೈಸು’ ಅಂತ. ಮೊದಲೊಂದು ನಗುವ ಇಮೋಜಿ ಕಳಿಸಿ ಸುಮ್ಮನಾಗಿದ್ದೆ. ಆದರೆ ಕಡಲು ಭೋರ್ಗರೆಯಲು ಎಷ್ಟು ಹೊತ್ತು? ಒಂದು ಬಿರುಗಾಳಿ, ಸುಮ್ಮನೆ ಎದ್ದ ದೊಡ್ಡ ಅಲೆ, ಅಥವಾ ಸದ್ದೇ ಇಲ್ಲದೆ ಒಳಗೆಲ್ಲೋ ಹುದುಗಿರುವ ಒಂದು ಒತ್ತಡ... ತೀರಕ್ಕೆ ಅಪ್ಪಳಿಸಲೊಂದು ಪುಟ್ಟ ನೆವ ಸಾಕು.

‘ಅವಳನ್ನು ಚೆಂದ ನೋಡಿಕೋ’ ಮೆಸೇಜು ರವಾನೆಯಾಯಿತು ಆ ಕಡೆಗೆ.

ADVERTISEMENT

‘ಹುಂ’

‘ಹೆಚ್ಚು ಸತಾಯಿಸಬೇಡ, ತಾಳಿಕೊಳ್ಳಲಾರಳು. ನೀನೆಂಬ ‘ಅಹಂ’ನ್ನು ಮೊದಲು ಕಳಚಿಕೋ’

‘ಅಂದರೆ, ನೀನು ಸಹಿಸಿಕೊಂಡಷ್ಟು ಅವಳು ನನ್ನ ಸಹಿಸಿಕೊಳ್ಳಲಾರಳು ಎಂದೇ? ಬಿಡು, ನೀನಿಲ್ಲದೇ ಹೋದ ಮೇಲೆ ಅಹಂ ತಾನಾಗಿಯೇ ಕಳಚಿಕೊಂಡು ಹೋಗಿದೆ’ ಮತ್ತೊಂದು ನಗುವ ಇಮೋಜಿ ಅವನಿಂದ. ವಿಷಾದದ ನಗುವೋ ಅಥವಾ ಖುಶಿಯ ನಗುವೋ ಇಮೋಜಿಯನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ತಲೆಕೊಡವಿ, ಮೊಬೈಲ್ ಮುಚ್ಚಿಟ್ಟೆ.

ತುಂಬಿಕೊಂಡಿದ್ದ ಅಷ್ಟು ದೊಡ್ಡ ನಿರ್ವಾತವನ್ನು ಬರಿದುಮಾಡಲು ತಗುಲಿದ ಸಮಯವೆಷ್ಟು? ಈಗ ಅಂದಾಜಿಗೆ ಸಿಗುವುದಿಲ್ಲ. ಆದರೆ ಬದುಕಿನ ಕ್ಯಾಮರಾದ ರೀಲು ಸುಮ್ಮನೆ ಹಿಂದಕ್ಕೆ ಸುತ್ತುತ್ತಿತ್ತು.

ಒಂದು ಹೊತ್ತಲ್ಲದ ಹೊತ್ತಲ್ಲಿ‌ ಅವನು ನನ್ನ ಬದುಕಿನೊಳಕ್ಕೆ ಬಂದಿದ್ದ. ಆಮೇಲಿನ‌ ಕೆಲವೇ ತಿಂಗಳುಗಳ ಸ್ನೇಹ, ಅಪಾರ ಸಲಿಗೆ ಮತ್ತು ಹೊತ್ತುಗೊತ್ತಿಲ್ಲದೆ, ಯಾವ ನಿರ್ದಿಷ್ಟ ಗುರಿಯೂ ಇಲ್ಲದೆ ಹುಟ್ಟಿಕೊಂಡ ಪ್ರೀತಿ... ಅವನು ದೇದೀಪ್ಯಮಾನ ಪ್ರಣತಿ, ನಾನು ಉರಿದುರಿದು ಬೂದಿಯಾಗಲೆಂದೇ ಅವನ ಸುತ್ತ ಸುತ್ತುವ ಪತಂಗ... ಈಗಷ್ಟೇ ಕರೆದಿಟ್ಟ ನೊರೆ ಹಾಲೂ ಒಡೆದುಹೋಗಬಹುದಾದಂಥ ಒಂದು ವಿಷಣ್ಣ ಸಂಜೆಯಲ್ಲಿ ಅವನು ನನ್ನ ಪ್ರೀತಿಗೆ ಸಾಕ್ಷಿ ಕೇಳಿದ್ದ. ನಾನವನ ಬದುಕಿನಿಂದ ತಣ್ಣಗೆ ಎದ್ದು ಬಂದಿದ್ದೆ ಅಥವಾ ಅವನೇ ಎದ್ದು ಬರುವಂತೆ ಪ್ರೇರೇಪಿಸಿದ್ದ.

ಆಮೇಲೆ ನಾನು‌ ಮುಖಾಮುಖಿಯಾದ ವಿಪ್ಲವವಾದರೂ ಎಂಥದ್ದು? ಹೆಜ್ಜೆ ಇಟ್ಟಲೆಲ್ಲಾ ಕಾಲಿಗೆ ತೊಡರುವ, ಕೈ ಚಾಚಿದಲ್ಲೆಲ್ಲಾ ಕೈ ಹಿಡಿದು ಜಗ್ಗುವ ಸಂಕಟ, ಒಮ್ಮೆಗೆ ಬದುಕು ನಿಂತೇಬಿಟ್ಟಿತೇನೋ ಎನ್ನುವ ಭಾವ. ಮತ್ತೊಬ್ಬ ಹುಡುಗನನ್ನು ಬದುಕಿನಂಗಳದೊಳಕ್ಕೆ ಬಿಟ್ಟುಕೊಡುವ ಮುನ್ನ ಅವನನ್ನು ಪೂರ್ತಿಯಾಗಿ ಮರೆಯಬೇಕು ಎಂದು ನಿರ್ಧರಿಸಿಕೊಂಡೆ. ಆದರೆ ಅದು ಅಷ್ಟು ಸುಲಭವಾ? ಅವನು ಬಳಸಿ ಬಿಸುಟಿದ ಟಿಷ್ಯೂ ಪೇಪರನ್ನೂ ಆಸ್ಥೆಯಿಂದ ಎತ್ತಿಟ್ಟುಕೊಳ್ಳುತ್ತಿದ್ದ, ಅವನ ಪಾದದ ಮೇಲೆ ಎಷ್ಟು ರೋಮಗಳಿವೆ ಎನ್ನುವುದನ್ನೂ ನಿಖರವಾಗಿ ಹೇಳುತ್ತಿದ್ದ, ಅವನ ನಿಶಬ್ದ ಚಲನೆಯನ್ನೂ ಸಶಕ್ತವಾಗಿ ಗುರುತಿಸುತ್ತಿದ್ದ, ಅವನಿಗೆ ಸಣ್ಣದಾಗಿ ಒಂದು ಮುಳ್ಳು ಚುಚ್ಚಿದರೂ ಕೈ ಗೀರಿ ಗಾಯ ಮಾಡಿಕೊಳ್ಳುತ್ತಿದ್ದ ನಾನು ಅವನೆಂಬ ಗುರುತನ್ನು ನನ್ನೊಳಗೆ ಇಲ್ಲವಾಗಿಸುವುದಾದರೂ ಹೇಗೆ? ಪೂರ್ತಿ ಮರೆಯುತ್ತೇನೆಂಬ ಹುಂಬತನದಲ್ಲಿ ಅವನನ್ನು ಮತ್ತಷ್ಟು ನೆನಪಿಸಿಕೊಳ್ಳುತ್ತಿದ್ದೆ.

ಹಾಗೆಂದು ಕಾಲವೇನು ಚಲಿಸುವುದನ್ನು ನಿಲ್ಲಿಸುವುದಿಲ್ಲವಲ್ಲಾ? ಮರೆಯುವ ಪ್ರಯತ್ನವೆಂದರೆ ಮಗದಷ್ಟು ನೆನೆಪಿಸಿಕೊಳ್ಳುವುದು ಎಂಬುದು ಅರ್ಥವಾದ ಕ್ಷಣ ಆ ಪ್ರಯತ್ನವನ್ನೇ ಕೈ ಬಿಟ್ಟೆ. ನಿಧಾನವಾಗಿ ಬದುಕು ಎಲ್ಲವನ್ನೂ ಮಾಯಿಸಿತು, ನಡುವೆ ನನ್ನ ಮದುವೆಯೂ ನಡೆದುಹೋಯಿತು.

ಗಂಡಸು ಪ್ರಪಂಚದ ಮೇಲೆ ನನಗೆ ನಂಬಿಕೆಯಿಲ್ಲ, ಮದುವೆಯಾಗಲಾರೆ ಎಂದು ಹಠ ಹಿಡಿದು ಕೂತಿದ್ದ ನನ್ನನ್ನು ಮದುವೆಗೆ ಒಪ್ಪಿಸಿದ್ದು ಅಮ್ಮನ ಅಸಹಾಯಕ ಮೌನ. ಮದುವೆ ಆಗಬೇಕು- ಆಗೋದಿಲ್ಲ ಎನ್ನುವ ಸಂಘರ್ಷದ ನಡುವೆ ಸುಮ್ಮನೆ ಸವೆಯುತ್ತಿದ್ದ, ನೂರು ಮಾತು ಕೇಳಿಸಿಕೊಂಡೂ ನನ್ನ ಪರ ನಿಲ್ಲುತ್ತಿದ್ದ ಅವಳ ಸಂಕಟ ನೋಡಲಾರದೆ ಮದುವೆಗೆ ಒಪ್ಪಿಕೊಂಡೆ; ಹೊಂದಾಣಿಕೆ ಮಾಡಿಕೊಳ್ಳಲಾಗದಿದ್ದರೆ ಬಿಟ್ಟು ಬರುತ್ತೇನೆ ಎನ್ನುವ ಷರತ್ತಿನೊಂದಿಗೆ. ಆದರೆ ಮದುವೆಯಾದ ಮೇಲೆ ಬದುಕು ಊಹಿಸಲಾರದ ತಿರುವು ತೆಗೆದುಕೊಂಡಿತ್ತು. ನನ್ನ ಅನ್‌ಮೆಚ್ಯೂರ್ಡ್ ಆಲೋಚನೆಗಳು, ಅತಿ ಭಾವುಕತೆ, ಉದ್ಧಟತನಗಳು ಎಲ್ಲವನ್ನೂ ಸಹಿಸಿಕೊಂಡು, ಕಾರಣವೇ ಇಲ್ಲದೆ ಬದುಕಿನೊಂದು ಎದ್ದು ಹೋಗುವಂತೆ ಮಾಡಿದವನಿಗಿಂತ ನೂರು ಕಾರಣಗಳಿದ್ದೂ ಗಟ್ಟಿಯಾಗಿ ಜೊತೆಗೆ ನಿಂತಿರುವ ಈ ಮನುಷ್ಯ ಒಳ್ಳೆಯವನು ಅನ್ನುವ ಭಾವನೆ ನೂರಾರು ಸಲ ಮೂಡುವಂತಾಗಿತ್ತು. ನಾನು ಜುಳು ಜುಳು ಹರಿವ ನದಿ, ಇವರು ಗಟ್ಟಿಯಾಗಿ ನಿಂತ ಬಂಡೆ... ಹಾಗಂತ ಮದುವೆಯಾದಮೇಲೆ ಅವನ ನೆನಪಾಗಲೇ ಇಲ್ಲ ಅಂತಲ್ಲ. ಆಗೊಮ್ಮೆ ಈಗೊಮ್ಮೆ ಸರಿದುಹೋಗುವ, ಎಂದೂ ಮಳೆ ಸುರಿಸದ ಮೋಡದಂತೆ ಅವನು ಕಾಡುತ್ತಿದ್ದರೂ ಅದೆಂದೂ ಬದುಕನ್ನು ಒಮ್ಮೆಲೆ ತಿರುವು ಮುರುವಾಗಿಸುವ ನೆನಪಂತೂ ಆಗಿರಲಿಲ್ಲ.

ನಾನೀಗ ಎಲ್ಲದರಿಂದ ಮುಕ್ತಳು ಅಂದುಕೊಳ್ಳುತ್ತಿರುವಾಗಲೇ ಅವನ ಮದುವೆಯ ಸುದ್ದಿ ಬಂದಿತ್ತು. ಮನಸ್ಸು ಮತ್ತೆ ನೆನಪುಗಳ ಬೆಂಗಾಡಿನಲ್ಲಿ ಅಲೆಯ ತೊಡಗಿತ್ತು. ಅವನು ಮದುವೆಯಾಗುತ್ತಿದ್ದಾನೆ ಅನ್ನುವುದು ಖುಶಿ ಕೊಡಬೇಕಿತ್ತು, ಕೊನೆ ಪಕ್ಷ ಸಮಾಧಾನವನ್ನಾದರೂ. ಆದರೆ ಅದು ನನ್ನಲ್ಲಿ ವಿಚಿತ್ರ ತಳಮಳವನ್ನು ಹುಟ್ಟುಹಾಕಿತ್ತು. ಹಾಗೆಂದೇ ನಮ್ಮಿಬ್ಬರ ಮ್ಯೂಚುವಲ್ ಫ್ರೆಂಡ್‌ಗೆ ಕರೆ ಮಾಡಿ ‘ಅವನಿಗೆ ಮದುವೆಯಂತೆ...’ ಎಂದಿದ್ದೆ. ‘ಸೊ ವಾಟ್?’ ಎಂದು ನಿಷ್ಕರುಣೆಯಿಂದ ಕೇಳಿದ ಅವನು‌ ಕರೆ ಕಟ್ ಮಾಡಿದ್ದ.

ಮದುವೆಯಂದು ಅವನೇ ಕರೆ ಮಾಡಿ ‘ಮದುವೆಯಾಗುತ್ತಿದ್ದೇನೆ, ಮಂಟಪದಲ್ಲಿ ನಿನ್ನ ಉಪಸ್ಥಿತಿ ಇದ್ದರೆ ಚೆನ್ನಾಗಿತ್ತು’ ಅಂದಿದ್ದ. ‘ಸಾರಿ, ಬರಲಾಗುವುದಿಲ್ಲ. ಹೊಟ್ಟೆಯೊಳಗಿರುವ ಮಗು ನನಗೀಗ ಎಲ್ಲಕ್ಕಿಂತ ಹೆಚ್ಚು ಇಂಪಾರ್ಟೆಂಟ್’ ಅಂದಿದ್ದೆ. ನನ್ನ ಧ್ವನಿಯಲ್ಲಿ ಅವತ್ತು ಕಾಠಿಣ್ಯತೆಯಿತ್ತಾ? ಗೊತ್ತಿಲ್ಲ. ಆದ್ರೆ ಅವತ್ತಿಡೀ ವಿವರಿಸಲಾಗದ ಒಂದು ವಿಚಿತ್ರ ಸಮಾಧಾನ ನನ್ನನ್ನಾವರಿಸಿತ್ತು.

ಕೆಲವು ದಿನಗಳು ಕಳೆದ ನಂತರ ಮತ್ತದೇ ಗೆಳೆಯನಿಗೆ ಕರೆ ಮಾಡಿ ‘ಅವನ ಮದುವೆಗೆ ಹೋಗಿದ್ಯಾ? ಹುಡುಗಿ ಅವನನ್ನು ಚಂದ ನೋಡಿಕೊಳ್ಳುವಂತಿದ್ದಾಳಾ?’ ಕೇಳಿದ್ದೆ.‌ ಪ್ರಶ್ನೆಯ ಆಳದಲ್ಲಿ ‘ಅವಳು ನನಗಿಂತ ಚೆನ್ನಾಗಿದ್ದಾಳಾ? ಅಥವಾ ನನಗಿಂತ ಬುದ್ಧಿವಂತೆ? ಅಥವಾ ನಾನು ಪ್ರೀತಿಸುತ್ತಿದ್ದುದಕ್ಕಿಂತ ಹೆಚ್ಚು ಅವನನ್ನು ಪ್ರೀತಿಸಿಯಾಳೆ?’ ಅನ್ನೋದನ್ನು ತಿಳಿದುಕೊಳ್ಳುವುದೇ ಉದ್ದೇಶವಾಗಿತ್ತು ಎಂಬುದು ಅವನಿಗೂ ತಿಳಿಯಿತೇನೋ, ಸುಮ್ಮನೆ ನಕ್ಕು ನಿನ್ನ ಬದುಕಿನೆಡೆ ಗಮನ ಕೊಡು ಅಂದಿದ್ದ. ನಾನೂ ನಸುನಕ್ಕು ಸುಮ್ಮನಾಗಿದ್ದೆ.

ಆಮೇಲೆ ಅವನೆಂದೂ ನನ್ನ ಕಾಡಿರಲೇ ಇಲ್ಲ. ಅಥವಾ ಮಗು ಹುಟ್ಟಿದ ಮೇಲೆ ಬಾಚಿ ತಬ್ಬಿಕೊಳ್ಳುವಷ್ಟು ಹತ್ತಿರದಲ್ಲಿ ಚಂದದ ಬದುಕೊಂದು ದಂಡಿಯಾಗಿ ಸಿಗಬೇಕಿದ್ದರೆ ಗತವಾದರೂ ಯಾಕೆ ನೆನಪಾಗಬೇಕು?‌ ಮೇಲಾಗಿ ನ್ಯಾಯದ ತಕ್ಕಡಿ ತೂಗಿಸುವಾಗೆಲ್ಲಾ ಬೇಕೆಂದೇ ಒಂದು ಕಡೆ ವಾಲಿಸುತ್ತಿದ್ದ ನಾನು ಈಗೀಗ ತಕ್ಕಡಿ ತೂಗುವ ಯಾವ ವ್ಯರ್ಥ ವಾದಕ್ಕೂ ಬೀಳುತ್ತಲೇ ಇರಲಿಲ್ಲ. ಎಲ್ಲ ಮಗಿದ ಮೇಲೂ ಉಳಿದು ಬಿಡುವ ಅಪಸವ್ಯಗಳೇ ಬದುಕಿನ‌ ಒಟ್ಟು ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು‌ ಅರ್ಥವಾದಮೇಲೆ ಬಹುಶಃ ಅಪಸವ್ಯಗಳನ್ನೂ ಪ್ರೀತಿಸಲು ಕಲಿತಿದ್ದೇನೆ. ಅಥವಾ ಹಾಗಂದುಕೊಂಡು ಬದುಕಿನ ದಿವ್ಯ ಘಳಿಗೆಗಳನ್ನು ಎದುರುಗೊಳ್ಳುತ್ತಿದ್ದೇನೆ.

ಹಾಗೆಂದು ನನ್ನನ್ನು ನಾನು ನಂಬಿಸಿಕೊಂಡಿರುವಾಗಲೇ ಅವನ ಮಗುವಿನ ಸಾವಿನ ಸುದ್ದಿ ಎದೆಯ ತಿಳಿಗೊಳದಲ್ಲಿ ಇನ್ನಿಲ್ಲದ ಪ್ರಕ್ಷುಬ್ಧತೆಯನ್ನು ಎಬ್ಬಿಸಿಬಿಟ್ಟಿತ್ತು. ಕೈಕಾಲೇ ಆಡದಂತಾಗುತ್ತಿತ್ತು, ಅವನೀಗ ಯಾವ ಮಾನಸಿಕ ಸ್ಥಿತಿಯಲ್ಲಿರಬಹುದು ಎಂದು ಊಹಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ತುಟಿಯ ತಿರುವಿನಲ್ಲಿ ಕಂಡೂ ಕಾಣದಂತೆ ಮಾತ್ರ ನಗುತ್ತಿದ್ದ ಅವನ ಪುಟ್ಟ ನಗುವನ್ನೂ ಬದುಕು ಕಿತ್ತುಕೊಂಡು ಬಿಟ್ಟಿತಾ? ಭಗವಂತಾ, ಅಳುವುದನ್ನೇ ದ್ವೇಷಿಸುತ್ತಿದ್ದಾ ಅವನ‌ ಮುಂದೆ ಈಗ ನೀನು ಅಳುವ ಆಯ್ಕೆಯನ್ನು ಮಾತ್ರ ಇಟ್ಟಿಯಾ? ಅತ್ತು ಹಗುರಾಗಬೇಕೆಂದೆನಿಸಿದರೂ ಯಾರ ಮುಂದೆ ಅವನು ಅಳಬಲ್ಲ? ಮತ್ತೆ ನಮ್ಮಿಬ್ಬರ ಗೆಳೆಯನಿಗೆ ಕರೆ ಮಾಡಿ ಕೇಳಬೇಕೆನಿಸಿತು. ಅವನು ‘ಅದೆಲ್ಲಾ ನಿನಗೇಕೆ’ ಎಂದು ಕೇಳಿದರೆ?... ಕೇಳಿದರೆ ಕೇಳಲಿ ಬಿಡು ಅಂದುಕೊಂಡು ಡಯಲ್ ಮಾಡಿದೆ. ಫೋನೆತ್ತಿದ.

‘ಅವನ ಮಗು ತೀರಿಕೊಂಡಿದಂತೆ’ ಧ್ವನಿಯನ್ನು ಆದಷ್ಟು ಸಹಜವಾಗಿರಿಸಲು ಪ್ರಯತ್ನಿಸುತ್ತಿದ್ದೆ.

‘ಹುಂ, ಮೊನ್ನೆಯೇ ಗೊತ್ತಿತ್ತು’

‘ಮತ್ತೆ ನನಗೇಕೆ ಹೇಳಲಿಲ್ಲ?’

‘ಹೇಳಿದ್ದರೆ ನೀನೇನು ಮಾಡುತ್ತಿದ್ದೆ?’

ಅವನ ಪ್ರಶ್ನೆಗೆ ಉತ್ತರವಿರಲಿಲ್ಲ. ಯಾಕೆಂದರೆ ನನ್ನ ಪ್ರಶ್ನೆಯೂ ಅದೇ ಆಗಿತ್ತು. ಸುಮ್ಮನೆ ಫೋನಿಟ್ಟೆ. ಮರುಕ್ಷಣವೇ ಅವನಿಂದ ಮೆಸೇಜ್ ಬಂತು ‘ಸುಮ್ಮನೆ ಮತ್ತೆ ಭಾವುಕಳಾಗಬೇಡ, ಕಳೆದುಹೋದದ್ದು ಯಾವುದೂ ಮತ್ತೆ ಸಿಗದು’ ಅಂತಿತ್ತು. ಓದಿ ತಲೆ ಕೊಡವಿದೆ.

ಸಂಜೆ ಆಫೀಸಿಂದ ಗಂಡ ಬಂದ ನಂತರ ‘ನನ್ನ ಕ್ಲಾಸ್‌ಮೇಟ್ ಒಬ್ಬನ ಮಗು ತೀರಿಕೊಂಡಿದೆ. ನಾನು ಹೋಗಬೇಕು’ ಅಂದೆ.

‘ಸರಿ, ನಾಳೆ ಬೆಳಗ್ಗೆ ಹೋಗೋಣ. ನಾನೇ ನಿನ್ನ ಡ್ರಾಪ್ ಮಾಡುತ್ತೇನೆ’

‘ಊಹೂಂ ಬೇಡ, ನಾನೊಬ್ಬಳೇ ಹೋಗುತ್ತೇನೆ’

‘ಸರಿ’ ಎಂದು ನನ್ನ ತಲೆ ಸವರಿದರು. ತುಸು ಹೊತ್ತು ಕಳೆದು ‘ಎರಡು ದಿನಗಳ ಮಟ್ಟಿಗೆ ಮಗುವನ್ನು ನೋಡಿಕೊಳ್ಳುತ್ತೀರಾ?’ ಅನುಮಾನದಿಂದಲೇ ಕೇಳಿದೆ. ‘ಯಾಕೆ ನೀನಲ್ಲಿರೋದು ಅಷ್ಟೊಂದು ಅವಶ್ಯಕವಾ?’

‘ಹುಂ, ಹೌದು’. ಮತ್ತೇ‌ನಾದರೂ ಕೇಳುತ್ತಾರಾ ಅಂದುಕೊಂಡೆ. ಕೇಳಿದರೆ ಎಲ್ಲಾ ಹೇಳಿಬಿಡಬೇಕು ಎಂದೇ ಸಿದ್ಧಳಾಗುತ್ತಿದ್ದೆ. ಆದರೆ ಅವರದು ಬುದ್ಧನ ಸ್ಥಿತಪ್ರಜ್ಞತೆ ಮತ್ತು ಅಂಗುಲಿಮಾಲನಿಗೆ ಬುದ್ಧನ ಮೇಲಿದ್ದಂತಹಾ ನಂಬಿಕೆ, ಏನನ್ನೂ ಕೇಳಲಿಲ್ಲ.

ಮರುದಿನ ಬೆಳಗ್ಗೆ ಹೊರಡಲುನುವಾದ ನನ್ನನ್ನು ಬಾಗಿಲಿನ ತನಕ ಬಂದು ಬೀಳ್ಕೊಟ್ಡು ‘ಹುಶಾರು’ ಅಂದರು. ನನ್ನ ಕಣ್ಣಕೊನೆಯಲ್ಲಿ ಹನಿಯೊಂದು ಸುಮ್ಮನೆ ಜಿನುಗಿದಂತಾಯಿತು. ಕಾರು ಗೇಟು ದಾಟುತ್ತಿದ್ದಂತೆ ಹಿಂದಿರುಗಿ ನೋಡಿದೆ, ಕೈ ಬೀಸುತ್ತಿದ್ದರು. ಏನನಿಸಿತೋ ಗೊತ್ತಿಲ್ಲ, ಡ್ರೈವರಿಗೆ ನಿಲ್ಲಿಸೆಂದು ಸನ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.