ADVERTISEMENT

ಶಂಕರ ಸಿಹಿಮೊಗೆ ಅವರ ಕಥೆ ದೇವರ ಕಾಡು

ಶಂಕರ್ ಸಿಹಿಮೊಗೆ
Published 11 ಮಾರ್ಚ್ 2023, 23:00 IST
Last Updated 11 ಮಾರ್ಚ್ 2023, 23:00 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

‘ದೇವರ ಕಾಡಿನ ಜೀವ ಏದುಸಿರು ಬಿಡುತೈತೆ, ನರಮನುಷ್ಯರ ಜೀವಕ್ಕೆ ಮುಂದೆ ಕೇಡು ಕಾದೈತೆ’ ಬಾಯೊಳಗೆ ಪದ ಕಟ್ಟಿಕೊಂಡು, ಕಣ್ಣೊಳಗೆ ಶತಶತಮಾನದ ಕೋಪ ಹೊತ್ತುಕೊಂಡು ತಿಮ್ಮಜ್ಜ ಬರುತ್ತಿದ್ದಾನೆ. ಹೀಗಂತ ಪಟ್ಟದಹಳ್ಳಿಯ ಪಾಪಣ್ಣ ಶೆಟ್ಟಿ ಯಾಲಕ್ಕಿಗೌಡರಿಗೆ ಸುದ್ದಿ ಮುಟ್ಟಿಸಿದ. ‘ಗೌಡ್ರೇ….ಗೌಡ್ರೇ…ಯಾಲಕ್ಕಿಗೌಡ್ರೆ..’ ಹಳ್ಳಿಯೊಳಗೆ ಮತ್ತೆ ತಿಮ್ಮಜ್ಜನ ಪದ, ತಿಮ್ಮಜ್ಜನ ಪದ! ಯಾರಿಗೆ ಮತ್ತೆ ಏನು ಕೇಡುಕಾದೈತೋ? ಶಿವನೇ ಬಲ್ಲ! ಗೌಡ್ರೇ.. ಯಾಲಕ್ಕಿಗೌಡ್ರೆ.. ಎಲ್ಲಿದ್ದೀರ? ಬೇಗ ಬನ್ನಿ, ಹೊರಗೆ ಬನ್ನಿ. ಇದನ್ನು ಕೇಳಿಸಿಕೊಂಡ ಯಾಲಕ್ಕಿಗೌಡ, ಶೆಟ್ಟಿ ಯಾಕ್ಹಂಗೆ ಬಡ್ಕೊಂಡು ಸಾಯ್ತ ಇದಿಯೋ? ಏನಾಯ್ತೋ? ಎಂದು ಕೇಳಿದ. ‘ಗೌಡ್ರೇ ಮೊದಲು ಮನೆಯಿಂದ ಹೊರಗೆ ಬನ್ನಿ, ಆಮೇಲೆ ಹೇಳ್ತೀನಿ’, ‘ಬಂದೆ ತಡಿಯೋ ಮಾರಾಯ, ಸ್ನಾನ ಮಾಡ್ತ ಇದೀನಿ, ಎನ್ನುತ್ತಲೇ ಚೊಂಬಿನಿಂದ ಬಿಸಿನೀರನ್ನು ತಲೆಯ ಮೇಲೆ ಹೊಯ್ದುಕೊಂಡ. ಹೊರಗೆ ಕೂತುಕೊಂಡಿದ್ದ ಪಾಪಣ್ಣಶೆಟ್ಟಿಗೆ ಗೌಡ ಸ್ನಾನ ಮಾಡುತ್ತಿದ್ದ ನೀರಿನ ಸದ್ದು ಕೇಳುತ್ತಲೇ ಇತ್ತು! ಒಳಗೊಳಗೆ, ಈ ಗೌಡ ಸ್ನಾನ ಮುಗಿಸೋಕೆ ಎಷ್ಟು ಸಮಯ ತೆಗೆದುಕೊಳ್ತಾನೋ? ಏನೋ? ಎಂದು ಗೊಣಗುತ್ತಲೇ ಬೆವರುತ್ತಿದ್ದ.

ಇತ್ತ ಹೊರಗೆ ಯಾಲಕ್ಕಿ ಗೌಡನಿಗಾಗಿ ಕಾಯುತ್ತಾ ಕುಳಿತ್ತಿದ್ದ ಶೆಟ್ಟಿಗೆ ಯಾಲಕ್ಕಿ ಗೌಡನ ತಮ್ಮ ವೆಂಕಯ್ಯ ಗೌಡ ಎದುರಾಗುತ್ತಾನೆ. ಶೆಟ್ಟಿಯ ಮುಖ ನೋಡುತ್ತಲೇ ದುರುಗುಟ್ಟಿ ನೋಡುವ ವೆಂಕಯ್ಯ ಏನು ಮಾತನಾಡದೆ ಒಳಗೆ ಹೋಗುತ್ತಾನೆ. ಹೊರಗೆ ಪಾಪಣ್ಣ ಶೆಟ್ಟಿಯ ಕೈಕಾಲುಗಳು ನಡುಗುತ್ತಿವೆ. ಇನ್ನೂ ಯಾಲಕ್ಕಿಗೌಡ ಸ್ನಾನ ಮುಗಿಸಿ ಹೊರಗೆ ಬೇರೆ ಬಂದಿಲ್ಲ. ತಂದಿರುವ ಸುದ್ದಿಯನ್ನು ಹೇಳಿ ಮನಸ್ಸಿನ ಭಾರವನ್ನು ಇಳಿಸಿಕೊಂಡರೆ ಸಾಕು ಅನ್ನೋ ಆತುರದಲ್ಲಿ ಶೆಟ್ಟಿ ಇರುವಾಗಲೇ, ಒಳಗಡೆಯಿಂದ ತಲೆಕೊಡವುತ್ತ ಬರುವ ಯಾಲಕ್ಕಿಗೌಡ ‘ಪಾಪಣ್ಣ ಶೆಟ್ರೆ ಏನ್ಸಮಾಚಾರ? ಯಾಕಿಷ್ಟು ಗಾಬರಿಯಾಗಿದ್ದೀರ? ಏನಾಯ್ತು?’ ಎಂದು ಕೇಳುತ್ತಾನೆ. ಏದುಸಿರು ಬಿಟ್ಟ ಪಾಪಣ್ಣ ‘ತಿಮ್ಮಜ್ಜನ ಪದ ಹಳ್ಳಿಯೊಳಗೆ ಮತ್ತೆ ತಿಮ್ಮಜ್ಜನ ಪದ ಗೌಡ್ರೇ..’ ಎಂದು ನಡುಗುವ ದನಿಯಲ್ಲಿ ಹೇಳುತ್ತಾನೆ.

ಈ ವಿಷಯ ಕಿವಿಗೆ ಬೀಳುತ್ತಲೆ ಕುಸಿದು ಬೀಳೋ ಯಾಲಕ್ಕಿಗೌಡ, ಹಳೆಯ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡು ಕಣ್ಣೀರಾಕುತ್ತಾನೆ. ಕೊಂಚ ವಿಚಲಿತನಾದ ಯಾಲಕ್ಕಿಗೌಡ, ಈ ಬಾರಿ ತಿಮ್ಮಜ್ಜನ ಪದ ಏನಂತ ಹೇಳೈತಿ ಅಂತ ಕೇಳೋದು ಮಾತ್ರ ಮರೆಯಲಿಲ್ಲ! ಇತ್ತ ಹಳ್ಳಿಯೊಳಗೆ ತಿಮ್ಮಜ್ಜ ನುಡಿದ ಪದವನ್ನು ತಡವರಿಸುತ್ತಲೆ ಶೆಟ್ಟಿ ಯತವತ್ತಾಗಿ ಹೇಳುತ್ತಾನೆ.

ADVERTISEMENT

‘ಕೂಗೈತೆ ಕೂಗೈತೆ ಕಾಡುಬೆಕ್ಕು ಕೂಗೈತೆ

ಹಾರೈತೆ ಹಾರೈತೆ ಕಾಡುಪಕ್ಷಿ ಹಾರೈತೆ

ನರಮನುಷ್ಯರ ಅಕ್ಷಿಗೆ ಇನ್ನೂ ಕೇಡು ಕಾದೈತೆ’

ಇದನ್ನು ಕೇಳಿದ ಪಾಪಣ್ಣ, ಇದರ ಅರ್ಥ ಏನು? ನಾವು ಈ ಕೂಡಲೇ ಜೋಯಿಸರ ಮನೆಗೆ ಹೋಗಬೇಕು, ಮುಂದಾಗುವ ಅಪಾಯವನ್ನು ತಪ್ಪಿಸಬೇಕು. ನನ್ನ ತಮ್ಮ ಮಾಡಿದ ತಪ್ಪಿಗೆ ನಾವು ಅನುಭವಿಸಬೇಕಾಗಿದೆ ಎಂದು ಒಳಗೊಳಗೆ ಶಪಿಸಿಕೊಳ್ಳುತ್ತಾನೆ. ಇಬ್ಬರು ರಾಮಜೋಯಿಸರ ಮನೆಯ ಕಡೆಗೆ ಹೊರಡುತ್ತಾರೆ.

ಇತ್ತ ರಾಮಜೋಯಿಸರು, ತಮ್ಮ ಮನೆಯ ಜಗುಲಿಯ ಮೇಲೆ ಗಾಯತ್ರಿ ಮಂತ್ರ ಪಠಣ ಮಾಡುತ್ತ, ಶಾಂತರಾಗಿ ಕುಳಿತುಕೊಂಡಿದ್ದಾರೆ. ಗೋಧೂಳಿ ಸಮಯ, ಸೂರ್ಯನ ಕಿರಣಗಳು ಹೊನ್ನಕಿರಣಗಳಾಗಿ, ಮನೆದಾರಿ ಹಿಡಿದ ಹಸು ಒಂದರ ಕೊಂಬಿನ ಮೇಲೆ ಪ್ರತಿಫಲನಗೊಳ್ಳುತ್ತಿವೆ. ಹಳ್ಳಿಯ ರಾಸುಗಳೆಲ್ಲ ಗೂಡು ಸೇರಲು ಹೆಜ್ಜೆ ಹಾಕುತ್ತಿದ್ದಾವೆ. ತಿಮ್ಮಜ್ಜನ ಪದದ ಬಗ್ಗೆ ಪಟ್ಟದ ಹಳ್ಳಿಯೊಳಗೆ ಈಗಾಗಲೇ ಅಂತೆ ಕಂತೆಗಳು ಶುರುವಾಗಿವೆ. ಒಬ್ಬೊಬ್ಬರು ಒಂದೊಂದು ಕಥೆ, ದಂತಕಥೆಯನ್ನೇ ಕಟ್ಟುತ್ತಿದ್ದಾರೆ. ಶಿವನೇ ನಮ್ಮ ಹಳ್ಳಿಗೆ ಮತ್ತೆ ಏನು ಕೇಡು ಕಾದಿದೆಯೋ? ಕಾಪಾಡಪ್ಪ ಶಿವಪ್ಪ ಪಟ್ಟದಹಳ್ಳಿಯನ್ನು ಕಾಪಾಡಪ್ಪ ಎಂದು ಶಿವನಲ್ಲಿ ಜನ ಬೇಡಿಕೊಳ್ಳಲು ಆರಂಭಿಸಿದ್ದರು.

ರಾಮಜೋಯಿಸರ ಮನೆಬಾಗಿಲಿಗೆ ಬರುವ ಯಾಲಕ್ಕಿ ಗೌಡ ಮತ್ತು ಪಾಪಣ್ಣ ಶೆಟ್ಟಿ, ಅವರು ಗಾಯತ್ರಿ ಮಂತ್ರ ಪಠಣ ಮಾಡುತ್ತಿರುವುದನ್ನು ಕಂಡು, ಏನು ಮಾತನಾಡದೆ ಹಾಗೆ ನಿಶ್ಯಬ್ದವಾಗಿ, ಜೋಯಿಸರು ಕಣ್ಣುಬಿಡುವುದನ್ನೇ ಕಾಯುತ್ತಾ ನಿಂತುಕೊಳ್ಳುತ್ತಾರೆ. ಮಂತ್ರ ಜಪಮಾಡುತ್ತಿದ್ದ ಜೋಯಿಸರಿಗೆ ಯಾರೋ ಬಂದ ಅನುಭವವಾಗಿ, ಎರಡು ನಿಮಿಷಗಳ ನಂತರ ಕಣ್ಣುಬಿಟ್ಟು ನೋಡುತ್ತಾರೆ. ಅವರು ಕಣ್ಣುಬಿಡುವುದನ್ನೇ ಕಾಯುತ್ತಿದ್ದ ಇವರಿಬ್ಬರು ಅವರ ಜೊತೆ ಮಾತಿಗಿಳಿಯುತ್ತಾರೆ. ಯಾಲಕ್ಕಿ ಗೌಡ ಸಪ್ಪೆ ಮುಖದಿಂದ ‘ಜೋಯಿಸರೇ…ಜೋಯಿಸರೆ.. ನೀವೇ ಕಾಪಾಡಬೇಕು?’, ಜೋಯಿಸರು ‘ನಾನು ಕಾಪಾಡೋದು? ಏನು ಮಾತಾಡ್ತ ಇದೀರ? ಗೌಡರೇ.. ಸರಿಯಾಗಿ ಹೇಳಿ?’ ‘ನಾನು ಒಬ್ಬ ನರಮನುಷ್ಯ, ನಾನು ಯಾರನ್ನು ಕಾಪಾಡೋಕು ಆಗಲ್ಲ, ನಾಶಮಾಡೋಕು ಆಗಲ್ಲ’ ಎಲ್ಲವೂ ಪ್ರಕೃತಿ ಚಿತ್ತ ಎಂದು ಆಧ್ಯಾತ್ಮಿಕ ಭಾಷೆಯಲ್ಲಿ ಮಾತನಾಡುತ್ತಾರೆ. ಇವರ ಈ ಭಾಷೆ ಒಂದುಚೂರು ಅರ್ಥವಾಗದ ಅವರಿಬ್ಬರು, ಇಲ್ಲಿ ಈಗ ನೀವೇ ಕಾಪಾಡಬೇಕು ಎಂದು ರಾಮಜೋಯಿಸರಲ್ಲಿ ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ಇದ್ಯಾಕೋ ಸರಿಯಾಗುತ್ತಿಲ್ಲ ಎಂದುಕೊಂಡ ಜೋಯಿಸರು, ಮೊದಲು ವಿಷಯವನ್ನು ಹೇಳಿ, ಆಮೇಲೆ ಕಾಪಾಡುವುದು ಬಿಡುವುದು ಎಂದು ಹೇಳುತ್ತಾರೆ. ‘ಹಳ್ಳಿಯೊಳಗೆ ಮತ್ತೆ ತಿಮ್ಮಜ್ಜನ ಪದದ ಸೊಲ್ಲು’ ಜೋಯಿಸರೇ. ಏನಾದರು ಹೇಳಿ, ನೀವೇ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಗೌಡ, ಜೋಯಿಸರಿಗೆ ದುಂಬಾಲು ಬೀಳುತ್ತಾನೆ. ನೋಡು ಗೌಡ ಈ ಹಿಂದೆ ನಿನ್ನ ಇಬ್ಬರು ಮಕ್ಕಳ ಸಾವಾದಾಗ, ಸಾವಾಯ್ತು ಅನ್ನೋ ವಿಷಯ ಪಟ್ಟದಹಳ್ಳಿಯ ಮೂಲೇ ಮೂಲೇ ತಲುಪಿತ್ತು ಬಿಟ್ಟರೆ ನಿಜವಾದ ವಿಷಯ ಯಾರಿಗೂ ತಿಳಿಯಲಿಲ್ಲ! ಆಗ ಕೂಡ ಇದೇ ತಿಮ್ಮಜ್ಜ ಪದ ಹಾಡಿದ್ದ.

‘ನರಮನುಷ್ಯರೇ ಕೇಳಿ, ನರಮನುಷ್ಯರೇ ಕೇಳಿ

ಕಾಡು ಮುನಿದೈತೆ, ಹಾರುವ ಹಾವು ಕೆಂಗಣ್ಣು ಬೀರೈತೆ

ಜೋಡಿ ಮಕ್ಕಳ ಸಾವು, ಪಟ್ಟದಹಳ್ಳಿಯೊಳಗ ಕಣ್ಣೀರು ಕರಿತೈತಿ’

ಇದನ್ನು ಕೇಳುತ್ತಲೆ ಯಾಲಕ್ಕಿಗೌಡ ಮತ್ತೊಮ್ಮೆ ಬೆಚ್ಚಿದ! ಜೋಯಿಸರೇ, ಸತ್ಯ ಹೇಳಿಬಿಡ್ತೀನಿ. ಈ ಸಾವು ನೋವುಗಳಿಂದ ದೂರಮಾಡ್ತೀರ ತಾನೇ? ದೇವರ ಕಾಡಿನ ನಾಶದ ಹಿಂದೆ ಇರೋದು ನನ್ನ ತಮ್ಮ. ಏನ್ಹೇಳ್ತಾ ಇದೀಯಾ ಯಾಲಕ್ಕಿ ಗೌಡ, ಪ್ರಜ್ಞೆ ಇದೇಯ ನಿಂಗೆ? ದೇವರ ಕಾಡಿನ ನಾಶಕ್ಕೆ ನಿನ್ನ ತಮ್ಮ ವೆಂಕಯ್ಯ ಗೌಡ ಕಾರಣನೇ? ನನಗೆ ಏನು ಅರ್ಥವಾಗುತ್ತಿಲ್ಲ ಸರಿಯಾಗಿ ಬಿಡಿಸಿ ಹೇಳು? ಹೌದು ಜೋಯಿಸರೇ ನನ್ನ ತಮ್ಮ ವೆಂಕಯ್ಯ ಗೌಡನೇ ಕಾರಣ, ಅವನ ಅತಿಯಾದ ದುರಾಸೆಯಿಂದಾಗಿ ಅಲ್ಲಿನ ಮರಗಳು ಮತ್ತು ವಿಶೇಷ ಪ್ರಭೇದದ ಜೀವಿ ಹಾರುವ ಹಾವುಗಳು ನಾಶವಾದವು.

‘ಹಾರುವ ಹಾವು?

ಇದೇನಿದು ಹಾರುವ ಹಾವು?

ಹಾವುಗಳು ಹಾರುತ್ತವೆಯೇ?

ಹೊಸ ವಿಷಯ ಹೇಳ್ತಾ ಇದೀರಾ?

ಸರಿಯಾಗಿ ಹೇಳಿ? ಯಾಲಕ್ಕಿ ಗೌಡ್ರೇ!

ಸೀತಾ ನದಿಯ ನಡುಗಡ್ಡೆ ಪ್ರದೇಶವೇ ದೇವರ ಕಾಡು. ಕಲ್ಲಮ್ಮ ತಾಯಿಗಿಂತ ಇನ್ನೂ ದೇವರು ಉಂಟೇ ಎಂದಂತೆ ಕಲ್ಲಿನ ರೂಪದ ಕಾಡು ಮಾರಮ್ಮನನ್ನು ಊರವರು ಮೊಸರನ್ನ ಅರ್ಪಿಸಿ ಭಯ, ಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ದೇವರ ಹೆಸರಿನಲ್ಲಿ ಇಷ್ಟು ದಿನ ಕಾಡು ಹೇಗೋ ಉಳಿದುಕೊಂಡು ಬಂದಿತ್ತು. ಜೀವವೈವಿಧ್ಯತೆಯಿಂದ ಕೂಡಿದ್ದ ದೇವರ ಕಾಡು, ಕೆಂಜಿಗ, ಕೆಂದಳಿಲು, ಕರಡಿ, ಕಾಡು ಹಂದಿ, ಮುಳ್ಳಂದಿ, ಮುಂಗುಸಿ, ಹಾರುವ ಹಾವು, ಓತಿಗಳಿಂದಲೂ ಕಂಗೊಳಿಸುತ್ತಿತ್ತು. ಸುಕ್ಕು ಸುಕ್ಕಾದ ಜಡೆ, ಕೋರೆ ಹಲ್ಲು, ಕುಳ್ಳನೆಯ ಗೋಧಿ ಬಣ್ಣದ ದೇಹ, ಮೊಂಡಾದ ಮೂಗಿನ ಮಾಟಗಾರ ಮಂಪಣ್ಣ ಮತ್ತು ಅವನ ಶಿಷ್ಯ ಮಾಯಣ್ಣ, ಊರಿನವರಿಗೆ ಮಾಟ ಮಂತ್ರದ ಹೆಸರಲ್ಲಿ ಬೆದರಿಸಿ ಇಟ್ಟುಕೊಂಡಿದ್ದರು. ಇವರ ಸಹವಾಸಕ್ಕೆ ಬಿದ್ದ ನನ್ನ ತಮ್ಮ ದೇವರ ಕಾಡಿನಲ್ಲಿ ನಿಧಿ ಇದೆ ಎಂಬ ಮೂಢನಂಬಿಕೆಗೆ ಬಿದ್ದು, ರಾತ್ರಿ ಸಮಯದಲ್ಲಿ ಮರಗಳನ್ನು ಕಡಿದು ದೊಡ್ಡ ದೊಡ್ಡ ವಾಹನಗಳಲ್ಲಿ ಸಾಗಿಸಿದರು. ಕೂಗೂ ಮಾರಿಯ ಕತೆ ಕಟ್ಟಿ ತೇಗ, ಬೀಟೆ, ಶ್ರೀಗಂಧವನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಿದರು. ಭೂಮಿ ಅಗಿದರು, ಮಾಟ ಮಂತ್ರಗಳ ಮಾಡಲು ಹಾರುವ ಹಾವುಗಳ ಬಲಿ ಕೊಟ್ಟರು. ಅವರುಗಳು ಮಾಡಿರುವ ಪಾಪಕ್ಕೆ ಊರಿನವರು ಅನುಭವಿಸಬೇಕಾಗಿದೆ.

ಊರಿಗೆ ಊರೇ ರಾತ್ರಿ ಮಲಗಿದ್ದ ಸಮಯದಲ್ಲಿ ಇದೇ ವಾಹನಗಳ ಶಬ್ದ ಕೇಳ್ತಾ ಇದ್ದದ್ದು ಅಲ್ಲವೇ, ಮತ್ತೆ ಎಲ್ಲರೂ ಯಾವುದೋ ಕೂಗೂಮಾರಿ ಎಂದು ಸುದ್ದಿ ಹಬ್ಬಿಸಿದ್ದರಲ್ಲ. ಅದು ನಿನ್ನ ತಮ್ಮ ವೆಂಕಯ್ಯಗೌಡನ ಕಿತಾಪತಿಯೇ ಇರಬೇಕು.. ಅಲ್ವ?, ‘ಹೌದು, ಜೋಯಿಸರೇ.. ಅದು ಅವನ ಕಿತಾಪತಿಯೇ..’, ಅದು ಸರಿ ಈ ದೇವರ ಕಾಡಿನ ನಾಶಕ್ಕು ನಿಮ್ಮ ಮನೆಯ ಸಾವಿಗೂ ಇರುವ ಸಂಬಂಧವಾದರು ಏನು? ಸಾಮಾನ್ಯನಂತಿದ್ದ ತಿಮ್ಮಜ್ಜ ಪದ ನುಡಿಯೋಕೆ ಶುರುಮಾಡಿದ್ದಾದರು ಯಾಕೆ? ವೆಂಕಯ್ಯಗೌಡನ ದುರಾಸೆಯಿಂದಾಗಿ ದೇವರ ಕಾಡು ಅಳಿವಿನಂಚಿಗೆ ಬಂದು, ಹಾರುವ ಹಾವುಗಳ ಸಂತತಿ ಕ್ಷೀಣಿಸುತ್ತ ಬಂದಿದೆ. ಇವುಗಳ ಸಂತತಿ ನಾಶವಾಗುತ್ತಿರುವ ಕಾರಣಕ್ಕಾಗಿ ದೇವರ ಕಾಡಿನ ದೇವತೆ ‘ಕಾಡು ಮಾರವ್ವ’ ಮುನಿದು ತಿಮ್ಮಜ್ಜನ ರೂಪದಲ್ಲಿ ಪದವಾಡುತ್ತಿದ್ದಾಳೆ. ನರಮನುಷ್ಯರ ರಕ್ತದ ರುಚಿ ನೋಡಲು ಕಾಡುಪ್ರಾಣಿಗಳನ್ನು ಕಳುಹಿಸುತ್ತಿದ್ದಾಳೆ. ಅಂದು ಬಯಲಿನಲ್ಲಿ ಆಡುತ್ತಿದ್ದ ನನ್ನ ಮುದ್ದಾದ ಮಕ್ಕಳಿಗೆ ಕರಿನಾಗರ ಕಚ್ಚಿ, ಅವರು ಸಾವಿಗೀಡಾದರೆಂದು ಯಾಲಕ್ಕಿಗೌಡ ಮಮ್ಮುಲ ಮರುಗಿದನು.

ನಿನ್ನ ಮಕ್ಕಳ ಸಾವು ಕಾಕತಾಳೀಯವೋ! ಇಲ್ಲ ಇದೇ ಕಾರಣವೋ ನನಗೆ ಗೊತ್ತಿಲ್ಲ! ಆದರೆ ನನಗೀಗ ಒಂದು ವಿಷಯ ಅರ್ಥವಾಗುತ್ತಿದೆ, ನಿನ್ನ ತಮ್ಮ ವೆಂಕಯ್ಯ ಗೌಡನ ದುರಾಸೆಯ ಕಾರಣಕ್ಕಾಗಿ ದೇವರ ಕಾಡು ನಾಶವಾಯಿತು, ಪ್ರಕೃತಿ ತಾಯಿ ‘ಕಾಡು ಮಾರವ್ವ’ ಈಗ ಮುನಿದಿದ್ದಾಳೆ, ಅನುಭವಿಸಿ! ‘ಮಾಡಿದ್ದುಣ್ಣೋ ಮಹರಾಯ’ ಗಾದೆಮಾತು ಇದೆಯಲ್ಲ ಗೌಡ, ನೀನು ಕೇಳಿಲ್ಲವೇ? ‘ಪ್ರಕೃತಿ ಮುನಿದರೆ ನಾನಲ್ಲ, ಯಾವ ದೈವ ಬಂದರು ಸರಿ ಏನೂ ಮಾಡೋಕೆ ಸಾಧ್ಯವಿಲ್ಲ! ಅನುಭವಿಸಬೇಕಷ್ಟೇ..! ಅದೇ ಸರಿಯಾದ ಶಿಕ್ಷೆ’‌, ‘ಅಯ್ಯೋ! ಜೋಯಿಸರೇ.. ‌ಹೀಗೇ ಹೇಳಬೇಡಿ.. ಏನಾದರು ಪರಿಹಾರ ಹೇಳಿ?’ ಇವರ ಮಾತುಗಳನ್ನು ತುಟುಕ್ ಪಿಟುಕ್ ಎನ್ನದೆ ಕೇಳುತ್ತ ಕೂತಿದ್ದ, ಒಳಗೊಳಗೆ ಬೆವರುತ್ತಿದ್ದ ಪಾಪಣ್ಣ ಶೆಟ್ಟಿ ಥಟ್ಟನೆ ಮೈಮೇಲೆ ತಿಮ್ಮಜ್ಜ ಬಂದವನಂತೆ ಪದ ಹಾಡಲು ಶುರುಮಾಡಿದ.

‘ಹಾರುವ ಹಾವು ಮಾಯವಾದ ಕಾಲಕ್ಕೆ

ನಡುಗಡ್ಡೆ ಹಾಳಾಯ್ತು, ರಕ್ತದ ನೀರಿಂದ

ಪಟ್ಟದಹಳ್ಳಿ ಮುಳುಗೋಯ್ತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.