ADVERTISEMENT

ಮಹಿಳೆಯರ ಪಾಲಿಗೆ ಅಭಯದಾತೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 19:30 IST
Last Updated 30 ನವೆಂಬರ್ 2019, 19:30 IST
ಸುಗತಕುಮಾರಿ
ಸುಗತಕುಮಾರಿ   

ಕೇರಳದ ಖ್ಯಾತ ಕವಯತ್ರಿ, ಸಾಮಾಜಿಕ ಕಾರ್ಯಕರ್ತೆ ಸುಗತಕುಮಾರಿ. ಅವರು ಸಮಾಜದ ತಳಸಮುದಾಯಗಳ ಪರವಾಗಿ ಹೋರಾಟ ನಡೆಸುತ್ತಿರುವ ವ್ಯಕ್ತಿಯೂ ಹೌದು. ಸುಗತಕುಮಾರಿ ಅವರಿಗೆ ಪ್ರಕೃತಿ ಅಂದರೆ ಅಚ್ಚುಮೆಚ್ಚು. ಹಾಗಾಗಿಯೇ, ಅವರು ಹಲವಾರು ಪರಿಸರಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಪಾಲಕ್ಕಾಡ್‌ನ ಆದಿವಾಸಿಗಳ ಪ್ರದೇಶಗಳಲ್ಲಿ ಗಾಂಜಾ ಬೆಳೆಸುತ್ತಿರುವವರ ವಿರುದ್ಧ, ಸೈಲೆಂಟ್‌ ವ್ಯಾಲಿ ಪರವಾಗಿ ನಡೆದ ಪ್ರತಿಭಟನೆಯ ನೇತೃತ್ವವನ್ನೂ ಅವರು ವಹಿಸಿಕೊಂಡಿದ್ದರು. ಅವರು ಜನಿಸಿದ್ದು 1934ರಲ್ಲಿ, ತಿರುವನಂತಪುರ ಸಮೀಪದ ಆರನ್ಮೂಳದಲ್ಲಿ. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಸಮಾಜದ ದುರ್ಬಲ ವರ್ಗಗಳ ಸ್ಥಿತಿ ಕಂಡು ಮಮ್ಮಲ ಮರುಗಿದವರು. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸ್ಥಿತಿ ಕಂಡು ದುಃಖಪಟ್ಟವರು. ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಆಗಿದ್ದ ತಮ್ಮ ತಂದೆಯೇ ಸುಗತಕುಮಾರಿ ಅವರಿಗೆ ಬಹುದೊಡ್ಡ ಸ್ಫೂರ್ತಿ.

ಪರಿಸರ ರಕ್ಷಣೆಯ ವಿಚಾರದಲ್ಲಿ ಅವರದ್ದು ಅಪಾರ ಬದ್ಧತೆ. ಬರಹದ ಶಕ್ತಿಯಲ್ಲಿ ನಂಬಿಕೆ ಇರಿಸಿದ ಅವರು ಮುಖ ಮಾಡಿದ್ದು ಕವನ ರಚನೆಯೆಡೆಗೆ. ಅವರ ಕವಿತೆಯ ಸಾಲುಗಳಲ್ಲಿ ಕಾಣಿಸುವುದು ಸಮಾಜದ ಕುರಿತ ಕಳಕಳಿ ಹಾಗೂ ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸಬೇಕು ಎಂಬ ಆಶಯ.

ADVERTISEMENT

ಕಡುಬಡತನದ ಹಿನ್ನೆಲೆಯಿಂದ ಬಂದ ಮಹಿಳೆಯರಿಗಾಗಿ ಹಾಗೂ ಮಾನಸಿಕವಾಗಿ ಅಸ್ವಸ್ಥಗೊಂಡವರಿಗಾಗಿ ‘ಅಭಯ’ ಎನ್ನುವ ಆಶ್ರಯದಾಣ ಕಟ್ಟುವ ಮೂಲಕ ಸುಗತಕುಮಾರಿ ಅವರು ತಮ್ಮ ಸಮಾಜ ಸೇವಾ ಕಾರ್ಯ ಆರಂಭಿಸಿದರು. ನಂತರದ ದಿನಗಳಲ್ಲಿ ‘ಅಭಯ’ದಲ್ಲಿ ಅನಾಥ ಮಕ್ಕಳಿಗೆ ಕೂಡ ಆಶ್ರಯ ಕಲ್ಪಿಸಿದರು. ಅವರ ಕೆಲಸಗಳನ್ನು ಗುರುತಿಸಿದ ಕೇರಳ ಸರ್ಕಾರ, 2001ರಲ್ಲಿ ಅವರನ್ನು ಕೇರಳ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಸುಗತಕುಮಾರಿ ಅವರ ಬರಹಗಳು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನೂ ಪಡೆದುಕೊಂಡವು. ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿದ ಅವರಿಗೆ 2008ರಲ್ಲಿ ಕೇರಳ ಸರ್ಕಾರವು ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು. 2006ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆಯಿತು. 2012ರಲ್ಲಿ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಅವರನ್ನು ಅರಸಿ ಬಂದಿತು.

***

ಸುಭದ್ರಾ

ಶ್ರೀಕೃಷ್ಣ ಹಾಗೂ ಬಲರಾಮನ ಸಹೋದರಿ ಸುಭದ್ರೆ. ಇವಳಿಗೆ ಸೂಕ್ತ ವರ ದುರ್ಯೋಧನ ಎಂದು ಬಲರಾಮ ನಿಶ್ಚಯ ಮಾಡಿರುತ್ತಾನೆ. ಆದರೆ, ಯಾದವರ ಹಬ್ಬವೊಂದರ ಸಂದರ್ಭದಲ್ಲಿ ಯಾತ್ರೆಗೆ ಬಂದಿದ್ದ ಅರ್ಜುನ, ಸುಭದ್ರೆಯನ್ನು ಭೇಟಿಯಾಗುತ್ತಾನೆ. ಇಬ್ಬರಲ್ಲೂ ಪ್ರೀತಿ ಚಿಗುರುತ್ತದೆ.

ನಂತರದ ದಿನಗಳಲ್ಲಿ ಅರ್ಜುನನು ಅವಧೂತನಂತೆ ವೇಷ ಧರಿಸಿಕೊಂಡು ದ್ವಾರಕೆಗೆ ಭೇಟಿ ಕೊಡುತ್ತಾನೆ. ಅಲ್ಲಿ, ಶ್ರೀಕೃಷ್ಣನ ನೆರವು ಪಡೆದು ಸುಭದ್ರೆಯನ್ನು ಕರೆದೊಯ್ಯುತ್ತಾನೆ. ನಂತರದ ದಿನಗಳಲ್ಲಿ ಇಬ್ಬರೂ ಮದುವೆ ಆಗುತ್ತಾರೆ. ಇವರಿಬ್ಬರ ಪುತ್ರ ಅಭಿಮನ್ಯು.

***

ಪರಿಸರಸ್ನೇಹಿ ಕಸದ ತೊಟ್ಟಿ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಪ್ಲಾಸ್ಟಿಕ್ಕಿನ ತೊಟ್ಟಿಯ ಬದಲು, ಪರಿಸರ ಸ್ನೇಹಿ ಆಗಿರುವ ಬಿದಿರಿನ ಬುಟ್ಟಿಗಳನ್ನು ಬಳಕೆ ಮಾಡುವಂತೆ ಅಸ್ಸಾಂ ಸರ್ಕಾರವು ಅಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈ ಬುಟ್ಟಿಗಳಲ್ಲಿ ಕಸ ಸಂಗ್ರಹಿಸಲು ಹತ್ತಿಯ ಚೀಲಗಳನ್ನು ಬಳಕೆ ಮಾಡಲಾಗುತ್ತದೆ. ಪಾಲಿಥಿನ್ ಚೀಲಗಳ ಬಳಕೆ ಇವುಗಳಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.