ADVERTISEMENT

ಶುಭವಾಗಲಿ ಗೆಳತಿ… (ಕಥೆ)

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:30 IST
Last Updated 2 ಮೇ 2020, 19:30 IST
ಕಲೆ: ನಾಗಲಿಂಗ ಬಡಿಗೇರ್‌
ಕಲೆ: ನಾಗಲಿಂಗ ಬಡಿಗೇರ್‌   

ನೆನ್ನೆ ಮದುವೆಗೆ ಒಬ್ಬಳೇ ಹೊರಡಬೇಕು ಎಂಬ ತೀರ್ಮಾನ ಆದಾಗಿನಿಂದಲೂ ಏನೋ ಕಸಿವಿಸಿ ಕರುಳೊಳಗೆ ಮರಳಿಸಿ ಬಂದಂತಾಗುತ್ತಿತ್ತು. ಮೈಸೂರಿಗೆ ಹೋಗುವುದೇನೂ ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಮದುವೆ ಮನೆಯಲ್ಲಿ ಮದುಮಗನ ತಂದೆ ಹಾಗೂ ಅವರೊಂದಿಗೆ ಹೆಚ್ಚು ಬಾಂಧವ್ಯ ಬೆಸೆಯಲು ಕಾರಣವಾದ ನನ್ನ ಗೆಳೆಯನನ್ನು ಹೊರತುಪಡಿಸಿದರೆ ಮತ್ಯಾರು ಪರಿಚಯವಿರಲಿಲ್ಲ. ಇವರು ಬಂದಿದ್ದರೆ ಜೊತೆಯಾಗ್ತಿತ್ತು ಒಂಟಿತನ ಕಾಡ್ತಿರ್ಲಿಲ್ಲ.

ಆದರೆ ಇವರು ಬರದಿರುವುದಕ್ಕೆ ಸಕಾರಣ ಕೊಟ್ಟು ಜಯಮಾಲೆ ಹಾಕಿಕೊಂಡು ಬಿಟ್ಟಿದ್ದರು!. ಗತ್ಯಂತರವಿಲ್ಲದೆ ಇಂದು ಹಿಣಕಲ್ನಲ್ಲಿ ನಡೆಯುತ್ತಿದ್ದ ಆಪ್ತರಾದವರ ಆಪ್ತರ ಮದುವೆಗೆ ಹೊರಟುನಿಂತೆ. ಶಿರಸ್ತ್ರಾಣವಿರದ ಕಾರಣ ಮುಖ್ಯರಸ್ತೆ ದಾಟುವುದಿಲ್ಲ, ಅಕಸ್ಮಾತ್ ಪೊಲೀಸರಿಗೆ ಇದ್ದಕ್ಕಿದ್ದಂತೆ ಜ್ಞಾನೋದಯ ಆಗ್ಬಿಟ್ಟು ಹಿಡಿದ್ರೆ ಕಷ್ಟ ಅಂತ ‘ನಡುನೀರಿನಲ್ಲಿ ಕೈ ಬಿಟ್ಟಂತೆ' ತಿರುವಿನಲ್ಲಿ ಬಿಟ್ಟು ಬಿಟ್ಟ ಗಂಡಪ್ಪ!. ‘ನನ್ನ ಬಿಟ್ಟು ಹೋಗಲಿ ರೈಲು ಮಾಡ್ತೀನಿ’ ಅಂತ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಓಡುವ ಶೈಲಿಯಲ್ಲಿ ನಡೆಯಲುಧ್ಯುಕ್ತಳಾದೆ. ಅದೊಂಥರಾ ಮ್ಯಾರಥಾನ್!. ಆಗಲೇ ರಸ್ತೆಗೆ ಅಡ್ಡವಾಗಿ ನೋಡು ನೋಡುತ್ತಲೇ ರೈಲು ಗೇಟು ಹಾಕಿ ಬಿಟ್ಟಿತು.

ಎದೆಬಡಿತ ನಗಾರಿಯಂತೆ ಬಡಿದುಕೊಳ್ಳತೊಡಗಿತ್ತು. ವೇಗವಾಗಿ ನಡೆಯಲು ಅಲ್ಲಲ್ಲಾ…! ಓಡಲು ಸಹಕರಿಸದೆ ಕಾಲುಗಳು ಮುಷ್ಕರ ಮಾಡುತ್ತಿದ್ದವು. ಎರಡು ಸಲ ಎರಡಂತಸ್ಥಿನ ಚಪ್ಪಲಿ ಹೊರಳಿ ನೆಲಕ್ಕೆ ಅಪ್ಪಳಿಸುವುದು ತಪ್ಪಿಸಿಕೊಳ್ಳುತ್ತಲೇ ರೈಲು ಹಳಿ ದಾಟಿ ನಿಲ್ದಾಣದೊಳಗೆ ತೂರಿಕೊಂಡೆ. ಎದುರಿಗೆ ‘ಮೈಸೂರು ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡಿಕೊಂಡ ‘ತೂತುಕುಡಿ’ ಓ….ಎಂದರಚಾಡುತ್ತಾ ನಿಲ್ದಾಣದೊಳಗೆ ನುಗ್ಗುತ್ತಿತ್ತು!. ಅದು ಚುಕ್ ಬುಕ್ ಚುಕ್ ಬುಕ್… ಅಂತ ಬುಸುಗುಡುತ್ತಾ ಒಳಗೆ ಬರ್ತಾ ನಿಧಾನ ಆದ್ರೆ, ನಾನು ಎದುಸಿರು ಬಿಡುತ್ತಾ ಉಸ್ಸಾ… ಪುಸ್ಸಾಂತ ಕಾಲೆಳೆಯುತ್ತಾ ಪ್ಲಾಟ್‌ಫಾರ್ಮ್ ಮೇಲೆ ನಿಂತೆ. ಒಂದೈದು ನಿಮಿಷ ಬೇಗ ಬರೋದಕ್ಕೆ ಏನು ದಾಡಿ ನಿಮಗೆ ? ಅಂತ ಕಣ್ಣು ಕಿರಿದಾಗಿಸಿ ಕೆಂಗಣ್ಣು ಬಿಡ್ತಾ ದುರುಗುಟ್ಟಿಕೊಂಡು ನನ್ನ ನೋಡ್ತಾ ದಾಟಿದಂತೆ ಭಾಸವಾಗಿ ಎಣೆಗೆಂಪು ಮುಖ ಕರ್ರಗಾಯ್ತೇನೋ ! ಎಂದು ಅನಿಸಿತು.

ADVERTISEMENT

ಮುಂದಿನ ಬೋಗಿಯಲ್ಲಿ ಕೂತರೆ ಎಂಜಿನ್ನಿನ ಬೋರ್ಗರೆವ ಶಬ್ದ ತಲೆ ಸಿಡಿಸೀತು ಅಂತ ಹಿಂದಿನ ಬೋಗಿಗೆ ಹೋಗಲು ತವಕಿಸಿದೆ. ಅಲ್ಲಿ ಜನ ಪಿತಪಿತ ಅನ್ನುವಂತೆ ತುಂಬಿ ಹೋಗಿದ್ದು ದೂರದಿಂದಲೇ ಕಂಡು ಮುಂದಿನ ಬೋಗಿಯೆಡೆಗೆ ಚಲಿಸಲು ಕಾಲಿಗೆ ಬುದ್ಧಿ ಹೇಳಿದೆ !. ಈಗ ಶಬ್ದವೂ ಕೂಡ ಅಪ್ಯಾಯಮಾನವಾಗಿ ಹೋಯಿತು !. ಜಂಗಮವಾಣಿಯಲ್ಲಿ ಒಂದಷ್ಟು ಹೊತ್ತು ತಲೆ ತೂರಿಸಿ ಅಭಿಮಾನಿಗಳಲ್ಲಿ ಕೆಲವರಿಗೆ ವಂದಿಸಿ ಮತ್ತೆ ಕೆಲವರಿಗೆ ಶುಭಾಶಯ ತಿಳಿಸಿ, ಓಡುವ ಗಿಡ, ಮರಗಳು, ಮನೆಗಳು, ಹಳ್ಳ-ಕೊಳ್ಳಗಳನ್ನು ಕಣ್ತುಂಬಿಕೊಳ್ಳತೊಡಗಿದೆ. ಪಕ್ಕದಲ್ಲಿ ಕುಳಿತಿದ್ದ ಹಿರಿಯರು ಮತ್ತೆ ಮತ್ತೆ ಬಹು ಹತ್ತಿರದಿಂದ ನೋಡುತ್ತಿರುವರು ಎಂದನಿಸತೊಡಗಿತು! ಇದೇನು ಗ್ರಹಚಾರವಪ್ಪಾ!? ಅಂತ ಗಮನಿಸಿದಂತೆ ಕುಳಿತೆ ‘ಪುಕ್ಕ ಮುದುರಿಕೊಂಡ ಕೋಳಿಯಂತೆ'. ಅಷ್ಟರಲ್ಲಿ, ಪಾಂಡವಪುರ ಬಂದಿತ್ತು. ಎದುರಿಗಿನ ಆಸನದಲ್ಲಿ ಕುಳಿತವರು ಇಳಿದರು.

ತಕ್ಷಣ ಹಾರಿಬಿಟ್ಟೆ ಅಲ್ಲಿಗೆ ‘ಪಕ್ಷಾಂತರ ಮಾಡುವ ರಾಜಕಾರಣಿಯಂತೆ'!. ಬೆಳಗಿನ ಬಿಸಿಲಾದರೂ ಜೋರಾಗಿತ್ತು ಅದರ ಝಳ. ಮತ್ತೆ ಕಪ್ಪಾಗುವುದಕ್ಕೆ ಯಾವುದೇ ಅವಕಾಶ ಕೊಡದೆ ಕಿಟಕಿಯಿಂದ ದೂರ ಸರಿದು ಕುಳಿತೆ. ನನ್ನ ಎದುರಿಗಿನ ಆಸನವೂ ಖಾಲಿಯಾಗಿ ಅಲ್ಲಿಗೆ ಪಡ್ಡೆ ಹುಡುಗನೊಬ್ಬ ಬಂದು ಕುಳಿತ. ಒಂದಿಷ್ಟು ಏನೋ ತಿಂದು ನೀರು ಕುಡಿದು ಕಾಲು ಚಾಚಿ ಮಲಗಿಬಿಟ್ಟ. ನಾನು ಕಿಟಕಿಯಿಂದ ಹೊರಗೆ ದೃಷ್ಟಿ ಇಟ್ಟೆ. ಸ್ವಲ್ಪ ಸಮಯದ ನಂತರ ಕಾಲಿಗೆ ಏನೋ ತಾಗಿದಂತಾಗಿ ನೋಡಿದೆ ಎದುರಿಗಿನ ಹುಡುಗನ ಕಾಲು. ಎಲಾ….! ಇವನ…! ಅಂತ ಮುಖ ನೋಡಿದೆ. ಅವ ನಿದ್ರೆಯಲ್ಲಿ ಇದ್ದಾನೆ. ಉರಿದುಹೋಯ್ತು, ಮುಖ ಮೈದಾನ ಆಗೋ ಹಾಗೆ ಗುದ್ಬಿಡ್ಬೇಕು ಅನಿಸಿತು!?. ‘ಮಲಗಿದವರನ್ನು ಏಳಿಸಬಹುದು.

ಆದರೆ, ಮಲಗಿದ್ದವರಂತೆ ನಟಿಸುವವರನ್ನು ಏಳಿಸಲಾದೀತೇ'…!?. ಕೇಳಿ ಗಲಾಟೆ ಮಾಡಿದರೆ ನಿದ್ರೆ ಮಾಡ್ತಾ ಅಕಸ್ಮಾತ್ ಆಗಿ ತಾಗಿರಬಹುದು ಅಂತಾನೆ.… ತತ್…! ದರಿದ್ರ ಅಂತ ಸ್ವಲ್ಪ ದೂರಸರಿದು ಕುಳಿತುಬಿಟ್ಟೆ ಶಿವಾ…! ಅಂತ. ಎದುರಿನ ಹಿರಿಯರು ಮತ್ತೆ-ಮತ್ತೆ ನೋಡುತ್ತಿದ್ದರು!. ನೋಡಿಕೊಳ್ಳಿ ಅದೆಷ್ಟು ಸಲ ಬೇಕಿದ್ರೂ! ಅನ್ಕೊಂಡು ಕಣ್ಣು ಹೊರಗೆ ನೆಟ್ಟೆ. ಮನಸು ಕುದುರೆಯಂತೆ ಓಡುತ್ತಾ ಯಶಸ್ವಿನಿ ಚೌಲ್ಟ್ರಿ ತಲುಪಿ ಕಿಕ್ಕಿರಿದು ತುಂಬಿದ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಏಕಾಂಗಿಯಾಗಿ ಕಳೆಯಬೇಕಾದ ಕ್ಷಣಗಳನ್ನು ಕಲ್ಪಿಸಿಕೊಳ್ಳುತ್ತಿತ್ತು.

ಟ್ರೈನ್ ಇಳಿಯುವ ವೇಳೆ ಹತ್ತಿರ ಆದಂತೆ ‘ಬುದ್ಧನಿಗೆ ಜ್ಞಾನೋದಯವಾದಂತೆ' ಆಗೋಯ್ತು !. ಪಾಸ್ ಇದ್ದಿದ್ದರಿಂದ ಪರ್ಸ್‌ನಲ್ಲಿ ಹಣ ಎಷ್ಟಿದೇಂತ ನೋಡದೆ ಬಂದುಬಿಟ್ಟಿದೆ!. ಅಯ್ಯೋ…! ಕರ್ಮವೇ ಅಂತ ಪರ್ಸ್ ಒಳಗೆ ಕೈ ಹಾಕಿ ಇಲ್ಲದ ಹಣಕ್ಕೆ ಹುಡುಕಿದೆ, ‘ಇಲ್ಲದ ನಿಧಿಗೆ ಮನುಜ ನೆಲ ಬಗೆಯುವಂತೆ'. ಇದ್ದರೆ ತಾನೆ ಸಿಗುವುದು ಕೇವಲ 50 ರೂಪಾಯಿ ತತ್..! ನನ್ನ ಬುದ್ಧಿಗೆ ಇಷ್ಟು ಅಂತ ಶಪಿಸಿಕೊಂಡೆ !. ಆದರೆ ಈಗ ಮಾಡುವುದಾದರೂ ಏನು!?. ಸಿಟಿ ಬಸ್ಸಿಗೆ ಆಗುತ್ತೆ ಆದರೆ ಮದುಮಗನಿಗೆ ಏನೂ ಕೊಡುವುದು ಬೇಡವೇ ? ಅವರು ಅಷ್ಟು ಪ್ರೀತಿ ಅಭಿಮಾನದಿಂದ ಮದುವೆಗೆ ಕರೆದಿದ್ದಾರೆ ಏನೂ ಕೊಡದೆ ಹಾಗೆ ಬರುವುದು ಅಂದ್ರೆ ಯಾಕೋ ಇಷ್ಟ ಆಗ್ಲಿಲ್ಲ. ಇದೊಳ್ಳೆ ಕಥೆ! ಆಯ್ತಲ್ಲ ಅಂತ ಪೇಚಾಡೋಕೆ ತೊಡಗಿದೆ.

ಮತ್ತೊಮ್ಮೆ ಮಿಂಚು ಹೊಳೆದಂತೆ ಪಾಸ್ ಇದ್ದ ಪಾಕೆಟ್ ಕಡೆ ದೃಷ್ಟಿ ಹರಿಸಿದೆ ‘ಬಂಪರ್ ಲಾಟರಿ ಹೊಡೆದಂತೆ' ಆಯ್ತು…! ಎಟಿಎಂ ಕಾರ್ಡ್…!?. ಕೈಹಿಡಿದು ಬಿಟ್ಟಿದ್ದ ಕಾಣದ ದೇವರನ್ನು ಮನ ತಕ್ಷಣ ನೆನೆದು ಬಿಟ್ಟಿತ್ತು ಥ್ಯಾಂಕ್ ಗಾಡ್…! ಅಂತ!. ಟ್ರೈನ್ ಓಡುತ್ತಲೇ ಇತ್ತು ಮನ ಮಾತ್ರ ಒಂದೇ ಜಿಗಿತಕ್ಕೆ ಹೊರಗೆ ನೆಗೆದು ರೈಲು ನಿಲ್ದಾಣದಲ್ಲಿ ಅದುವರೆಗೆ ನಾ ನೋಡಿರದ ಎಟಿಎಂ ಬೂತ್‌ಗಳನ್ನು ಹುಡುಕತೊಡಗಿತ್ತು.

ಇಳಿದು ದಡಬಡನೆ ಓಡಿ ಎಸ್‌ಬಿಐ ಎಟಿಎಂ ತೂರಿಕೊಂಡು ಎರಡ್ಮೂರು ಸಲ ಪ್ರಯತ್ನ ಮಾಡಿದ ಮೇಲೆ ಗೋಳುಗರೆಯುತ್ತಾ ಹೇಳಿತು ‘ಕ್ಷಮೆ ಇರಲಿ ನಿಮ್ಮ ಹಣ ಭದ್ರವಾಗಿದೆ! ಹೊರಗೆ ಎಳೆಯಲು ನನ್ನ ಬಳಿ ಹಣವಿಲ್ಲ…!?’ ಅಂತ. ಥತ್…!? ರಾಷ್ಟ್ರೀಯ ಬ್ಯಾಂಕ್ ಇಲ್ಲದಿದ್ದರೆ ಲೋಕಲ್ ಬ್ಯಾಂಕ್‌ಗಳಿವೆ, ಇವೂ ಇಲ್ಲದಿದ್ದರೆ ಅಂತರರಾಷ್ಟ್ರೀಯ ಇವೆ ಅಂತ ಜಂಬದಿಂದ ಪೋಸ್ ಕೊಟ್ಟು, ಮೂತಿ ತಿರುಗಿಸಿ ಸರಕ್ಕನೇ ತಿರುಗಿ ದಡಕ್ಕನೆ ಬಾಗಿಲು ತೆರೆದು ತಂಪಾದ ಕೋಣೆಯಿಂದ ಬಿಸಿಲಿನ ಬುಗ್ಗೆಗೆ ಬಂದೆ ‘ಮುನಿದ ಮರಿಯಂತೆ’. ಒಮ್ಮೆಲೇ ಉಬ್ಬೆಗೆ ಹಾಕಿದಂತಾಗಿ ನನ್ನ ಆವೇಶವೆಲ್ಲಾ ‘ದೇವರು ಮೈಮೇಲೆ ಬಂದು ಒಂದೇ ಸಲಕ್ಕೆ ಜರ್ರನೆ ಇಳಿದು ಹೋದಂತೆ’ ಆಯ್ತು. ಯಾಕೆಂದರೆ ಅಲ್ಲೆಲ್ಲೂ ಎಟಿಎಂಗಳು ಇರಲಿಲ್ಲ.

ಹೋ ಚೆನ್ನಾಗ್ ಆಯ್ತು!. ಮತ್ತೆ ವಾಚಾಮಗೋಚರ ನನ್ನ ನಾ ಹಳಿದುಕೊಳ್ಳಲಾರಂಭಿಸಿದೆ. ‘ಹೊರಡುವ ಹಿಂದಿನ ದಿನವೇ ಸಿದ್ಧತೆ ಮಾಡ್ಕೋಬೇಕು. ಅಂತ ಎಷ್ಟು ಸಲ ಅಂದ್ಕೊಂಡ್ರೂ ಆಗಲ್ಲ ಬರೀ ಇದೇ ಆಗೋಯ್ತು…! ‘ತುಟಿಮೇಲೆ ಸೊಡ್ಲು ಹೊತ್ತಿಸಿದ ಹಾಗೆ’. ಉರಿಬಿಸಿಲಲ್ಲಿ ಅಲೆದು ಕಾಗೆ ಮೂತಿ ಥರಾ ಮಾಡ್ಕೋಬೇಕು ಈಗ… ! ಅಂತ ರೈಲ್ವೆ ಸಹಕಾರಿ ಬ್ಯಾಂಕ್ ಕಡೆಗೆ ಬಿರುಸಿನ ಹೆಜ್ಜೆ ಹಾಕತೊಡಗಿದೆ. ನೆಡೆಯುವಾಗ ನನಗೆ ನಾನೇ ಸಮಾಧಾನ ಮಾಡಿಕೊಳ್ತಿದ್ದೆ ಮುಂದೆ ಯಾವತ್ತೂ ಹೀಗಾಗಬಾರದು ಅಂತ. ಆದ್ರೂ ಒಳಮನಸ್ಸಿಗೆ ಚೆನ್ನಾಗಿ ಗೊತ್ತು ಇದು ‘ಸ್ಮಶಾನ ವೈರಾಗ್ಯ'! ಅಂತ ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ವಾ…!?

ಹಿಣಕಲ್ ಬಸ್ಸು ಹಿಡಿದು ಯಶಸ್ವಿನಿ ಚೌಲ್ಟ್ರಿ ಹತ್ತಿರ ಇಳಿದು ಪ್ರೆಸೆಂಟೇಶನ್ ಕವರ್‌ಗಾಗಿ ಅಲೆದು ಮತ್ತೊಮ್ಮೆ ನನ್ನನ್ನು ನಾನೇ ಬೈದುಕೊಂಡು ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ಗೆ ಹೋದೆ. ಈಗ ನಿಜವಾದ ಪೀಕಲಾಟ ಶುರುವಾಯ್ತು ನೋಡಿ!. ಒಂದು ಮುಖವು ಪರಿಚಯವಿಲ್ಲ!. ನೂರಾರು ಜನರ ಮಧ್ಯೆ ಒಂಟಿ!? ವಿಚಿತ್ರ! ಆದರೇನು ಮಾಡುವುದು ‘ಸಮುದ್ರದ ನೀರಿನ ಮೇಲೆ ಕುಡಿಯುವ ನೀರಿಗೆ ಹಂಪರಿಯುವ’ ಸ್ಥಿತಿ ನನ್ನದಾಗಿತ್ತು. ಒಂದೆರಡು ನಿಮಿಷ ಕಳೆಯುವುದು ಕೂಡ ಕಷ್ಟವೆನಿಸತೊಡಗಿತು. ನಿಮಿಷ ಯುಗವಾಗತೊಡಗಿತು. ಯಾರನ್ನಾದರೂ ಕೇಳೋಣ ಅಂತ ಮುಂದೆ ಹೆಜ್ಜೆ ಇಟ್ಟೆ.

ಆಹ್ವಾನ ಕೊಟ್ಟ ಹುಡುಗನ ಅಪ್ಪನ ಹೆಸರು ನೆನಪಾಗಲಿಲ್ಲ!. ಗೆಳೆಯನಿಗೆ ಫೋನಾಯಿಸಿದೆ ‘ಚಾಲ್ತಿಯಲ್ಲಿ ಇಲ್ಲ ಸುಮ್ಮನಿರಮ್ಮ'! ಅಂತ ಬೈದು, ಒಳ್ಳೆ ‘ದುರ್ಭಿಕ್ಷ ಕಾಲದಲ್ಲಿ ಬೇಡೋಕೆ ಹೋದರೆ ಉತ್ತರಕ್ಕೆ ಇರುವ ದೇವರು ದಕ್ಷಿಣಕ್ಕೆ ಮುಖ ಮಾಡಿತಂತೆ'! ಅಂದ್ಹಾಗೆ ಆಯ್ತು ನನ್ ಕಥೆ!. ಆಯ್ತು ಸರಿ ಇನ್ನೇನು ಮಾಡೋದು ಅಂತ ಪಕ್ಕದ ಬಾಗಿಲಿನಿಂದ ಹೊರಗೆ ದೌಡಾಯಿಸಿದೆ. ಹೊರಗೆ ಹೋಗುವಾಗ ಮನೆಯವರು ಅಣಕಿಸಿದಂತಾಯ್ತು ‘ಇನ್ವಿಟೇಶನ್ ತಗೊಂಡು ಹೋಗು ಅಂದ್ರೆ ಹಂಗೇ ಹೋಗ್ತೀಯಾ!?’ ಅಂತ. ಮನದಲ್ಲೇ ಗುರ್ ಅಂದುಕೊಂಡು ಬೋರ್ಡ್ ಓದಿದೆ, ಒಳಬಂದು ಮದುಮಗನ ತಂದೆಯ ಹೆಸರೇಳಿ ಅವರೆಲ್ಲಿ? ಎಂದೆ. ಜೊತೆಗೆ ಕರುಣಾಜನಕ ಕಥೆ ಬೇರೆ ಹೇಳಿದೆ !. ಅವರು ಬಿಟ್ಟರೆ ಮತ್ಯಾರು ಗೊತ್ತಿಲ್ಲ! ಅಂತ ಅದಕ್ಕವರು ‘ಅಯ್ಯೋ…ಬನ್ನಿ ಮೇಡಂ ನಾವು ಕೂಡ ಮನುಷ್ಯರೇ ಈಗ ಪರಿಚಯ ಮಾಡಿಕೊಳ್ಳೋಣ ಅದಕ್ಕೇನಂತೆ ಬರ್ರಿ ಬರ್ರಿ' ಅಂತ ಬಹು ಕಾಳಜಿಯಿಂದ ಹುಡುಗನ ತಂದೆ ಬಳಿ ಕರೆದೊಯ್ದರು.

ಉಫ್ …! ಸದ್ಯ ಅವರು ಸಿಕ್ಕಿದ್ರು. ವಿಚಿತ್ರ ಅಂದ್ರೆ ನಾನು ಅವರ ಮುಂದೆಯೇ ನಿಂತಿದ್ದೆ. ಆದರೆ, ಗಾಬರಿಯಿಂದಾಗಿ ನಾನು ಗಮನಿಸಿಲ್ಲ! ಅವರೂ ಕೂಡ ಗಮನಿಸಿಲ್ಲ!?. ಅವರೆದುರೂ ಕೂಡ ಅದೇ ರೈಲು ಬಿಟ್ಟೆ!. ‘ಹೌದಾ ಮೇಡಂ ಅಯ್ಯೋ…! ನಿಮಗೆ ತೊಂದರೆ ಆಯಿತು. ಮುಂಬಾಗಿಲಿನಿಂದ ಈಗ ಬಂದು ಕುಳಿತೆ ನಿಂತು ನಿಂತು ಸಾಕಾಗಿತ್ತು!… ಅಂತ ಹೇಳ್ತಾ ಉಸ್ಸಂತಾ ಎದ್ದು ನಿಂತರು. ‘ಇರಲಿ ಬಿಡಿ ನಿಮ್ಮ ಗೆಳೆಯನಿಗೆ ಕೆಲಸ ಹಚ್ಚಿ ಬಿಟ್ಟಿದ್ದೇನೆ, ಬರ್ತಾನೆ ನೀವು ಇಲ್ಲಿ ಆರಾಮಾಗಿ ಕೂರಿ' ಅಂತ ಹೇಳ್ತಾ, ‘ನೀವು ಬಂದಿದ್ದು ತುಂಬಾ ಖುಷಿ ಆಯ್ತು' ಅಂತಾನೂ ಕೈ ಹಿಡಿದ್ರು. ನನ್ನ ಕೈ ಅವರ ಮುಂಬೆರಳುಗಳಲ್ಲೇ ಮುಚ್ಹೋಯ್ತು!. ಆತ ಆಜಾನುಬಾಹು ನಾನು ವಾಮನ ಸ್ವರೂಪ. ಮುಜುಗರ ಆಯ್ತು ಯಾಕೇಂದ್ರೆ ನಾ ಕೈ ಮುಂದೆ ಚಾಚಿರಲಿಲ್ಲ ಅವರೇ ಹಿಡ್ಕೊಂಡಿದ್ರು.

ನಂತರ ಕೈ ಮುಂದು ಮಾಡಿ ಒಂದು ಸೋಫಾ ತೋರಿಸಿ, ‘ಆರಾಮಾಗಿ ಕೂತಿರಿ' ಅಂತ ಕೂಡ ಹೇಳಿದರು. ಅದರ ಒಂದು ಮೂಲೆಗೆ ಕೂತೆ ಅಷ್ಟೇ ಅದೇ ಒಳಕ್ಕೆ ಎಳ್ಕೊಂಡು ಬಿಡ್ತು! ಕಾಲು ನೆಲದ ಮೇಲೆ ಇರಲೇ ಇಲ್ಲ ನೇತಾಡುತ್ತಿತ್ತು..! ಒಳ್ಳೆ ಬೇತಾಳಗಳಂತೆ!. ಅಯ್ಯೋ…! ಶಿವನೇ..! ನಾನು ಇಷ್ಟೊಂದು ಎತ್ತರಕ್ಕೆ ಇದೀನಾ!? ಸೋಫಾ ಸೆಟ್ ಮೇಲೆ ಹಿಂದಕ್ಕೆ ಕೂತ್ರೆ ನೆಲಕ್ಕೆ ಕಾಲು ಸಿಗದಷ್ಟು…!? ಒಳ್ಳೆ..! ‘ಇಂಡಿಯನ್ ಸ್ಟ್ಯಾಂಡರ್ಡ್‌ ಹೈಟೇ'! ಅಂತ ‘ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟಿಗೆ’ ಕಾರಣರಾದವರಿಗೆ ಹಿಡಿಶಾಪ ಹಾಕಿದೆ!?. ಒಂದೆರಡು ನಿಮಿಷ ಆಗಿರಬಹುದು, ಒಂದಿಬ್ಬರು ನಾ ಕುಳಿತ ಸೋಫಾದ ಆ ತುದಿಗೆ ಕುಳಿತ ವ್ಯಕ್ತಿಯೊಂದಿಗೆ ಹರಟೆಗೆ ನಿಂತರು.

ಅವರಿಗೆ ಅದೇ ಸೋಫಾದಲ್ಲಿ ಕೂರಬೇಕೆನಿಸಿದೆ, ಆದರೆ ಹೇಳಲಾಗುತ್ತಿಲ್ಲ..! ಮೂರು ಜನ ಕೂರಬೇಕೆಂದರೂ ತುಸು ಒತ್ತಿಕೊಂಡೆ ಕೂರಬೇಕು, ಅಂತದ್ದರಲ್ಲಿ ಅವರು ಸೇರಿದರೆ ನಾಲ್ಕು ಜನ!. ಒಂದೆರಡು ನಿಮಿಷ ಸುಮ್ಮನಿದ್ದೆ ಗಮನಿಸದಂತೆ!. ಕುಳಿತಿದ್ದವರು ಏನೋ ಬಹು ದೊಡ್ಡ ಹೊಂದಾಣಿಕೆ ಮಾಡಿಕೊಳ್ಳುವವರಿಗೆ…! ಬನ್ನಿ ಹೇಗೋ ಅಡ್ಜಸ್ಟ್ ಮಾಡಿಕೊಳ್ಳೋಣ ಅಂದ್ರು!. ನಾ ಹಾವು ಮೆಟ್ಟಿದದವಳಂತೆ ಚಂಗನೆ ಎದ್ದು ನಿಂತೆ…! ಅವರು ದೇಶಾವರಿ ನಗೆ ಬೀರುತ್ತಾ! ಅಯ್ಯೋ…! ಪರವಾಗಿಲ್ಲ ಕೂತ್ಕೊಳ್ಳಿ! ಹೇಗೋ ಕುಳಿತರೆ ಆಯಿತು ಅಂದ್ರು!. ಎಲಾ…! ಇವರಾ! ‘ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ …!?’ ಬೇಡಪ್ಪಾ ಬೇಡಾಂತ..! ಸುತ್ತಲೂ ನೋಡಿದೆ. ಅಷ್ಟರಲ್ಲಿ ಅವರೇ ಹಿಂದಿನ ಸೀಟು ತೋರಿಸಿದರು.

ಹೋಗಿ ಅದರಲ್ಲಿ ಸೆಟಲ್ ಆದೆ. ವೇದಿಕೆಯಲ್ಲಿ ಧಾರೆಗೆ ಸಿದ್ಧತೆ ನಡೆಯುತ್ತಿತ್ತು. ಅಲ್ಲಿ ತರಾತುರಿಯಲ್ಲಿ ಓಡಾಡುತ್ತಿದ್ದ ನನ್ನ ಗೆಳೆಯ ಕಂಡ ಸಮಾಧಾನ ಆಯ್ತು. ಆಗಲೇ ಅಲ್ಲಿ ನನ್ನ ಗೆಳತಿ ಕಂಡು ನನ್ನ ಖುಷಿಗೆ ಪಾರವೇ ಇಲ್ಲ. ‘ಮರಳುಗಾಡಿನಲ್ಲಿ ಓಯಸಿಸ್' ದೊರೆತಂತಾಯಿತು. ಲಗುಬಗೆಯಿಂದ ವೇದಿಕೆಗೆ ನಡೆದುಬಿಟ್ಟೆ. ಅವಳು ಕಂಡದ್ದೇ ಕಂಡದ್ದು ಮತ್ತೊಂದು ಜಗತ್ತು ಅನಾವರಣಗೊಂಡು ಬಿಟ್ಟಿತ್ತು!.

ವೇದಿಕೆಯೆಡೆಗೆ ನಡೆಯುವಾಗ ಮನ ಗೆಳತಿಯ ಗತಕಾಲದಲ್ಲಿ ಸಂಚರಿಸುತ್ತಿತ್ತು. ಓದುವಾಗಲೇ ಮದುವೆ, ಬಸಿರು, ಬಾಣಂತನ, ಪರೀಕ್ಷೆಗಳು, ಅವಳಿ ಮಕ್ಕಳ ನಿರ್ವಹಣೆ, ಹೊರಜಗತ್ತಿಗೆ ಬಹುತೇಕ ತಿಕ್ಕಲ್ ಎಂದು ಪರಿಚಿತವಾದ ಗಂಡ!, ಹಠ ಬಿಡದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದುದ್ದು, ಒಮ್ಮೊಮ್ಮೆ ಎದುರಿಗೆ ಸಿಕ್ಕಾಗ ನೋವು ನುಂಗುತ್ತಾ ಈ ಪರೀಕ್ಷೆ ಕೂಡ ಕೈತಪ್ಪಿತು ಎಂದು ಹೇಳುತ್ತಾ ಹಣೆಬರಹ ಹಳಿದುಕೊಳ್ಳುತ್ತಿದ್ದುದು, ಕೆಪಿಸಿ ಸಂದರ್ಶನದಲ್ಲಿ ಹಣ ಕೊಡದೆ ಕೆಲಸ ಆಗದಿದ್ದದ್ದು. ನಂತರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಆದದ್ದು ಹಾಗೂ ಗಂಡನನ್ನು ಮಂಡ್ಯದಲ್ಲಿ ಬಿಟ್ಟು ಮಕ್ಕಳೊಂದಿಗೆ ಬದುಕಿಗೆ ಮುಖ ಮಾಡಿದ್ದು. ಆಗಾಗ್ಗೆ ಬೇಕೋ ಬೇಡವೋ ಎಂಬಂತೆ ಗಂಡನ ಒಡನಾಟ ಇಟ್ಟುಕೊಂಡಿದ್ದು. ನಂತರ ಗಂಡನನ್ನು ಕೂಡ ಕಳೆದುಕೊಂಡಿದ್ದು. ತರುವಾಯ ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ ಹೋರಾಟದ ಕಥನ ಎಲ್ಲವೂ ಬಿಡಿಬಿಡಿಯಾಗಿ ಕಣ್ಣ ಮುಂದೆ ಅನಾಯಾಸವಾಗಿ ಸರಿದು ಹೋಯಿತು.

ಗೆಳತಿ ಬಳಿ ಸರಿದು ಹಗುರವಾಗಿ ಬಹು ಪ್ರೀತಿಯಿಂದ ಭುಜ ಸ್ಪರ್ಶಿಸಿದೆ. ಹಿಂದೆ ತಿರುಗಿದಳು. ಒಂದರೆಕ್ಷಣ ಅಚ್ಚರಿಯಿಂದ ನಿಂತುಬಿಟ್ಟಳು! ನಂತರ ನಿಧಿ ಸಿಕ್ಕಿದವಳಂತೆ ಇದ್ದಕ್ಕಿದ್ದಂತೆ ಬಾಚಿ ಅಪ್ಪಿ ಬಿಟ್ಟಳು!. ಅವಳು ಮೊದಲಿನಿಂದಲೂ ಹೀಗೆ ಮೂರನೆಯವರಿಗೆ ಎಕ್ಸ್‌ಪ್ರೆಸ್ಸೀವ್ ಅನಿಸುವಂತಹ ವರ್ತನೆ. ಅವಳ ನಿಷ್ಕಲ್ಮಶ ಪ್ರೀತಿಯುಂಡ ನಮಗೆ ಹಾಗೆ ಅನಿಸುತ್ತಿರಲಿಲ್ಲ!. ಆದರೂ ಮುಜುಗರವಾಗಿ ಹೋಯ್ತು! ಒಂದು ಸೀನ್ ಕ್ರಿಯೇಟ್ ಆಗೋಯ್ತಲ್ಲಾ ಜನಜಂಗುಳಿಯ ಮುಂದೆ! ಅಂತ ಅಂದುಕೊಳ್ಳುತ್ತಿದ್ದೆ ಅಷ್ಟರಲ್ಲಿಯೇ, ಮುದ್ದಿನ ಗುದ್ದನ್ನೂ ಕೊಟ್ಟುಬಿಟ್ಟಳು!? ಸಣ್ಣದಾಗಿ ನರಳಿದೆ ಮೊದಲೇ ಭುಜ ನೋವಿತ್ತು!?. ಆಮೇಲೆ ಪ್ರಶ್ನೆಗಳ ಸುರಿಮಳೆ ಹಾಗೂ ಮಾತಿನ ಭರಾಟೆಯಲ್ಲಿ ಮುಳುಗಿ ಹೋದಳು.

ನನ್ನದೇನಿದ್ದರೂ ಹಾ….ಊ… ಹೌದು, ಇಲ್ಲ, ಚೆನ್ನಾಗಿದ್ದಾರೆ, ಹೌದಾ…! ಹೀಗೆ.. ಹಾಗೆ… ಯಾಕೆಂದರೆ ನನ್ನ ಮಾತಿಗೆ ಅವಕಾಶವೇ ಇರಲಿಲ್ಲ…! ಕಣ್ಣರಳಿಸಿ ನೋಡುತ್ತಿದ್ದೆ…! ಸಾಕಷ್ಟು ಅನುಕೂಲವಾಗಿರುವಳು ಗೆಳತಿ ಎಂಬುದಕ್ಕೆ ಖುಷಿಯಾಯಿತು. ಆದರೆ ಇಷ್ಟು ವಯಸ್ಸಾದರೂ ಅದೇ ರೀತಿಯ ಮಾತು ನಡವಳಿಕೆ ಅಚ್ಚರಿಯಾಯಿತು! ಸುಮ್ಮನೆ ನಕ್ಕೆ!. ಅವಳಿಗೆ ಅದೇನ್ ಅರ್ಥವಾಯಿತೋ ಏನೋ! ಅಯ್ಯೋ…! ನಾನೊಬ್ಬಳೇ ಮಾತಾಡ್ತೀನಿ! ಯಾಕೆ ಏನಾದರೂ ಬೇಜಾರಾ!? ಅಂದ್ಲು ಯಾಕೆ ಮಂಕಾಗಿದ್ದೀಯಾ? ಏನಾಯ್ತು! ಅಥವಾ ನಾನೇನಾದ್ರು ಬೇಜಾರು ಮಾಡ್ತದ್ದೀನಾ!?. ಅರಿವಿಲ್ಲದೆ ಸತ್ಯ ಹೇಳಿದಳು…! ತೋರಿಸಿಕೊಳ್ಳದೇ ಹಗುರವಾಗಿ ನಗುತ್ತಾ ಹಾಗೇನಿಲ್ಲ! ಖುಷಿಯಿಂದ ನಿನ್ನ ಮಾತು ಕೇಳ್ತಿದೀನಿ ಅಂದೆ!. ಒಂಥರಾ ‘ನೂರು ಕ್ಯಾಂಡಲ್ ಬಲ್ಬ್ ಮುಂದೆ ಜೀರೋ ಕ್ಯಾಂಡಲ್ ಬಲ್ಪ್’ ಥರಾ ಆಗೋಗಿದ್ದೆ!.

ಯಾವಾಗಲೂ ಜಗಮಗಿಸುವ ನಾನು ಸೋತು ಸುಣ್ಣವಾಗಿದ್ದೆ…!. ತಕ್ಷಣ, ‘ಅಯ್ಯೋ… ಮರೆತೆ’ ಅಂತ ಪಕ್ಕಕ್ಕೆ ತಿರುಗಿ ‘ನನ್ನ ಮಗ ಕಣೆ’ ಅಂತ ಪಕ್ಕದಲ್ಲಿದ್ದ ಸುಂದರ ತರುಣನನ್ನು ಪರಿಚಯಿಸಿದಳು. ಇವಳ ಎಲ್ಲಾ ಭಾವಾಭಿನಯದ ಮಾತುಗಳಿಗೆ ಹುಡುಗ ನಗುತ್ತಾ ‘ಗೊತ್ತಾಯ್ತು ಬಿಡಿ’ ಅಂತ ಚುಟುಕಾಗಿ ಅಂದು ಕೈಮುಗಿದ…!. ಇವಳಿಗೆ ವ್ಯತಿರಿಕ್ತವಾದ ನಡವಳಿಕೆ! ಅನಿಸಿತು. ನಂತರ ಧಾರೆ ಎರೆಯಲು ಹೋರಾಟ ಮಾಡಿ ಹಾಲ್ಯೂದು… ಹೌದು ಧಾರೆಯಾಗಿರಲಿಲ್ಲ ಅದು…! ಅಲ್ಲಿಂದ ಹೊರಬರುವಷ್ಟರಲ್ಲಿ ಹಣ್ಣುಗಾಯಿ ನೀರುಗಾಯಿ ಆಗಿಬಿಟ್ಟಿದ್ದೆ.! ನಾ ಬೆವತು ಮುದ್ದೆಯಾಗಿದ್ದೆ! ಆದರೆ, ಅವಳು ಹಾಗೆಯೇ ಇದ್ದಳು! ಒಂದಿನಿತು ಮಾಸದಂತೆ ಆಗತಾನೇ ‘ಅರಳಿದ ಹೂನಂತೆ’. ಖುಷಿಯಾದರೂ ಒಳಗೊಳಗೆ ಉರಿಯುತ್ತಿದ್ದೆ ದೇಹ ಪ್ರಕೃತಿಯ ವೈಪರೀತ್ಯಕ್ಕೆ!?

ಮದುವೆಯ ಸಂಭ್ರಮದಲ್ಲಿ ಬೇಸರದ ಹಾಗೂ ದುಃಖದ ಕರಿನೆರಳು ಆವರಿಸಿದ್ದು ಅವಳ ಮಾತಿನಿಂದ ಹೊರಬಿತ್ತು!. ‘ಆದರೂ ಅಕ್ಕ ಮಗನ ಮದುವೆಗೆ ಬರದಷ್ಟು ಕಲ್ಲಾಗಬಾರದಿತ್ತು’ ಎನ್ನುತಾ ಬೇರೆಯವರ ವೈಯಕ್ತಿಕ ಬದುಕಿನ ವಾಸ್ತವತೆಯನ್ನು ಅರಿವಿಲ್ಲದೆ ತೆರೆದಿಟ್ಟು ಬಿಟ್ಟಿದ್ದಳು! ನನಗೆ ಅಚ್ಚರಿ ಅರೇ…! ಖುಷಿಯಾಗಿರುವ ಹೊತ್ತಿನಲ್ಲೂ ದೊಡ್ಡದೊಂದು ದುರಂತವಿದೆಯಲ್ಲಂತಾ ಮನಸ್ಸು ಮುದುಡಿತು. ಹುಡುಗನ ತಂದೆಯ ಭಾಷಣದ ವೈಖರಿ, ಯುವಕ ಹಾಗೂ ಯುವತಿಯರನ್ನು ಪ್ರೋತ್ಸಾಹಿಸುವ ರೀತಿ ಹಾಗೂ ಗೆಳೆತನದ ಪ್ರೀತಿ ಮಾತ್ರ ಕಂಡಿದ್ದ ನನಗೆ ಅವರ ಜೀವನದ ಮತ್ತೊಂದು ಮಗ್ಗುಲನ್ನು ಮಾತಿನ ಭರದಲ್ಲಿ ಪರಿಚಯಿಸಿಬಿಟ್ಟಿದ್ದಳು ಗೆಳತಿ!. ಓ.. ಹೌದಾ…! ಇರಲಿ ಬಿಡು ! ಹೊರಗಿನವರು ನಾವು! ಹೀಗೆ ಅನಿಸುವುದು ಸಹಜ! ಎಂದು ವಿಷಯ ತೇಲಿಸಲು ನೋಡಿದೆ. ಆದರವಳು ‘ಇಲ್ಲ, ನಾನು ಹತ್ತಿರದಿಂದ ಬಲ್ಲೆ!’ ಎಂದಳು.

ಒಬ್ಬ ಸಾಮಾನ್ಯ ಹೆಣ್ಣಿನಂತೆ ಮಾತಾಡುತ್ತಿರುವಳಲ್ಲ ಎನಿಸಿ ಹೆಚ್ಚು ಕೆದಕದೆ ಮಾತು ಬೇರೆಡೆಗೆ ತಿರುಗಿಸಿದೆ. ನನ್ನ ಹತ್ತಿರದ ಸಂಬಂಧಿಕರ ಮದುವೆಯಲ್ಲಿ ಸಕಾರಣದಿಂದ ಮದುವೆಗೆ ಇಷ್ಟವಿಲ್ಲದಿದ್ದರೂ ಒತ್ತಡದಿಂದಾಗಿ ಹೋಗಿ ಮನಃಪೂರ್ವಕವಾಗಿ ಪಾಲ್ಗೊಳ್ಳದೆ ಹೊರಬಂದಿದ್ದೆ. ಆದರೆ ಈಗ ಅವರು ಹಾಗೂ ನಾವು ಮಾತಾಡೋದು ತಪ್ಪಲಿಲ್ಲ… ಮನೆಗೆ ಹೋಗೋದು ತಪ್ಪಲಿಲ್ಲ… ಅಂತ ಹೇಳ್ತಾ ‘ಕೋಪದ ತಾಪ’ ಇಳಿಯುವ ತನಕ ನಮ್ಮ ದುಡುಕಿನ ಕಹಿ ಅರ್ಥ ಆಗಲ್ಲ, ಹುಚ್ಚುತನ ನಮ್ಮದು ಅಂತೆಲ್ಲ ತತ್ವಜ್ಞಾನ ಪ್ರದರ್ಶಿಸಿದೆವು. ಮನಸ್ಸು ಬೇಗುದಿಗೆ ಬಿದ್ದಿತ್ತು! ಮದುವೆಗೆ ಬರದಷ್ಟು ಕಲ್ಲಾಗುವ ತಾಯಿಯು ಅನುಭವಿಸಿರಬಹುದಾದ, ನಮಗೆ ಗೊತ್ತಿರದ ವಾಸ್ತವದ ಜಗತ್ತಿನ ಕಠೋರತೆ ಬಗ್ಗೆ ನೆನೆದು ತಳಮಳಗೊಳ್ಳುತ್ತಿತ್ತು!. ಆದರೂ ಅವಳಿಂದ ವಿಷಯ ಹೊರತೆಗೆಯಲು ಇಚ್ಚಿಸಲಿಲ್ಲ. ಆಪ್ತಸಮಾಲೋಚಕಳಾದ ನನಗೆ ಒಂದು ಕಡೆಯಿಂದ ಮಾಹಿತಿ ಬೇಡವಾಗಿತ್ತು. ಅದರಲ್ಲೂ ಮೂರನೆಯ ವ್ಯಕ್ತಿಯಿಂದ! ಬೇರೊಬ್ಬರ ವೈಯಕ್ತಿಕ ಮಾಹಿತಿ ಅನಗತ್ಯವೆನಿಸಿ ಮಾತು ಮರೆಸಿ ಊಟದ ಕಡೆ ಗಮನಹರಿಸಿದೆ…!

ಮದುವೆ ಮನೆಯಲ್ಲಿ ಮದುಮಗನ ತಂದೆಯನ್ನು ಪುನಃ ಭೇಟಿ ಮಾಡಿ ಮಾತನಾಡಿಸಿ ಬಿಲ್ಲುಬಾಣಗಳನ್ನೆತ್ತಿ ಅವರಿಗೆ ಶುಭ ಹಾರೈಸಿ ಹೊರಗೆ ಬಂದರೆ ಹೊರಜಗತ್ತಿನ ಕಾವು ಜೋರಾಗಿತ್ತು!. ಆದರೆ ಮನದೊಳಗಿನ ಕಾವು ಅದಕ್ಕಿಂತ ಹೆಚ್ಚಿತ್ತು…! ತೋರಿಕೆಗೆ ನಗುವಿತ್ತಷ್ಟೇ…! ಹೊರಗೆ ಬರುತ್ತಿದ್ದಂತೆ ಗೆಳತಿ ಓ…ಎಷ್ಟೊಂದು ಚೆನ್ನಾಗಿದೆ! ಒಂದಿಷ್ಟು ಫೋಟೋಸ್… ತಗೊಳೋಣಾ ಅಂತ ನನ್ನೆಡೆಗೆ ತಿರುಗಿ ಕೇಳಿದಳು. ಓ…! ಈ ಕಾಯಿಲೆ ಇವಳಿಗೂ ಇದೆ ಅಂತ ನಕ್ಕು! ಆಯ್ತು ಅಂದೆ. ಹಾಗೊಂದು, ಹೀಗೊಂದು, ಅಲ್ಲೊಂದು, ಇಲ್ಲೊಂದು, ಅದು ಹೀಗಾಯ್ತು, ಇದು ಹಾಗಾಯ್ತು, ಇಲ್ಲಿ ನಿಲ್ಲಬೇಕಿತ್ತು… ಹೀಗೆ ಹುಚ್ಚುತನ ನಡೀತಾ ಇತ್ತು ಎಲ್ಲವನ್ನೂ ಕುತೂಹಲದಿಂದ ನೋಡ್ತಿದ್ದೆ! ಅವಳ ಜೀವನೋತ್ಸಾಹ, ಮಗುವಿನಂತಹ ನಡವಳಿಕೆ ಕಂಡು ಖುಷಿಯಾಯಿತು. ಆದರೆ, ಮಗನ ಯುವ ಮನದ ಚಡಪಡಿಕೆ ಅವಳ ಜೀವನದ ಮತ್ತೊಂದು ಮಗ್ಗುಲಿನ ನೆರಳನ್ನು ಆಗಾಗ್ಗೆ ತೆರೆದಿಡುತ್ತಾ ಇತ್ತು…! ಹಾಗೆ ಗಮನಿಸಿದಂತೆಲ್ಲ ನನ್ನ ಕಳವಳವೂ ಹೆಚ್ಚುತ್ತಿತ್ತು. ಆದರೆ, ಏನು ಮಾಡುವಂತಿರಲಿಲ್ಲ. ಯಾರಿಗೆ ಹೇಳುವುದು? ಏನೆಂದು ಹೇಳುವುದು? ತುಟಿಗಳು ಬಿಗಿದುಕೊಂಡವು ಹೊಲೆದುಕೊಂಡಂತೆ.

ಎಲ್ಲಿಗೆ ಬಿಡಬೇಕು ನಿನ್ನ ಅಂದ್ಲು? ಕೇಳಿದ್ರೆ ಮಾತ್ರ ಅವರೊಡನೆ ಹೋದರಾಯಿತು ಅಂತ ತೀರ್ಮಾನಿಸಿದ್ದ ನನಗೆ ಗೆಳತಿಯ ಸಮಯಪ್ರಜ್ಞೆ ಮೆಚ್ಚುಗೆಯಾಯಿತು. ಆದರೂ ‘ಪರವಾಗಿಲ್ಲ, ನಾ ಬಸ್ಸಿನಲ್ಲಿ ಹೋಗ್ತೀನಿ' ಅಂದೆ. ಅವಳು ಬಹು ಪ್ರೀತಿಯಿಂದ ‘ಏ… ಬಾ ಮಂಡ್ಯ ಮೂಲಕ ತಾನೇ ರಾಜಧಾನಿಗೆ ಹೋಗೋದು, ಮಂಡ್ಯಕ್ಕೆ ಬಿಡ್ತೀನಿ ಅಂದ್ಲು! ಉಫ್…! ಉರಿಬಿಸಿಲು, ಬಸ್ಸಿನ ತೂಗಾಟ ತಪ್ತು ಅನ್ಕೊಂಡೆ!. ತೋರಿಕೆಗೆ ‘ಇಲ್ಲಮ್ಮ ನೀನು ದೇವಸ್ಥಾನಕ್ಕೆ ಹೋಗಬೇಕು ಅಂದೆ. ಹೊರಡಿ, ನಾನು ಹೋಗ್ತೀನಿ ತೊಂದರೆ ಇಲ್ಲ’ ಎಂದೆ. ‘ಇರ್ಲಿ ಬಾ ಮಾರಾಯ್ತಿ ಒಂದ್ಹತ್ತು ನಿಮಿಷ ಅಲ್ವಾ…! ಅಂತ ಸೊಂಟ ಹಿಡಿದು ಕಾರಿನೊಳಗೆ ಎಳೆದುಕೊಂಡಳು…! ಅದೇ ರೀತಿ ಇದ್ದಾಳೆ! ಅಹಂಕಾರ ಬಂದಿಲ್ಲ ಅನಿಸಿತು. ದಾರಿಯುದ್ದಕ್ಕೂ ಅವಳ ಯಶೋಗಾಥೆ, ಎದುರಿಸಿದ ಸಂಘರ್ಷಗಳ ವಿವರಣೆ… ಸಾಗಿತ್ತು

ಅವ್ಯಾಹತವಾಗಿ ಅದೂ ಭಾವಾಭಿನಯದೊಂದಿಗೆ…! ನಾನು ಮೂಕೀ ಚಿತ್ರದ ನಾಯಕಿಯಾಗಿ ಹೋದೆ! ಆ… ಅಂತ ಬಾಯ್ಬಿಟ್ಕೊಂಡು ಅವಳು ಹೇಳೋದನ್ನ ಮನಸ್ಸಿಟ್ಟು ಕೇಳ್ತಿದ್ದೆ. ಹಾಗೆಯೇ ಆಸಕ್ತಿಯಿಂದಲೇ ಅವಳ ಭಾವಾಭಿನಯ ಕೂಡ ಕಣ್ಣರಳಿಸಿ ನೋಡ್ತಿದ್ದೆ! ಆಗಾಗ್ಗೆ ಅವಳ ಮಗನ ಚುರುಕು ಮಾತುಗಳಿಗೂ ಮೂಕ ಸಾಕ್ಷಿಯಾಗಿದ್ದೆ!?. ಇವಳು ದೇವಸ್ಥಾನಕ್ಕೆ ಹೋಗಬೇಕು ಅಂತ, ಅವ ಟ್ರಾಫಿಕ್ ಜಾಸ್ತಿ ಆದ್ರೆ ಬೆಂಗಳೂರು ತಲುಪೋದು ತಡವಾಗುತ್ತದೆ! ಸುಮ್ಮನಿರು ನಿಂಗೆ ಏನೂ ಗೊತ್ತಾಗಲ್ಲ’ ಅಂತ ಕೊಂಚ ಏರುದನಿಯಲ್ಲಿ ಹೇಳುತ್ತಿದ್ದ. ಇವಳು ‘ನಿಂಗೆ ಹೋಗಬೇಕು ಅನ್ಸಿದ್ರೆ ತಡ ಆಗುತ್ತೆ ಅನ್ತಿದ್ದಾ..’ ಹೀಗೆ ಮಾತಿನ ಚಕಮುಕಿ! ಅಲ್ಲಿ ಎರಡು ಹಠಮಾರಿ ಮಕ್ಕಳಿದ್ದವು…! ಇಬ್ಬರಿಗೂ ನನ್ನ ಇರುವಿಕೆಯು ಮರೆತು ಹೋಗಿತ್ತೇನೋ ಅನಿಸಿ ಕಸಿವಿಸಿ ಆಯ್ತು! ಹಾಗೆಯೇ ಮನಸ್ಸು ಮುದುಡಿ ಭವಿಷ್ಯದ ಕೆಡುಕನ್ನು ಊಹಿಸಿ ಕಳವಳಗೊಳ್ಳುತ್ತಿತ್ತು.

ಯೌವ್ವನದ ಕಾವೆಂದರೇನೆಂದು ತಿಳಿಯುವಷ್ಟರಲ್ಲಾಗಲೇ ಸಂಸಾರದ ನೊಗ ಹೊತ್ತು, ದೊಡ್ಡವರಾದ ಗಂಡಸಿನೊಂದಿಗೆ ಮನೆಯವರು ಮಾಡಿದ ಮದುವೆಯಿಂದಾಗಿ ಬೆಸೆದುಕೊಂಡು. ಮನ ಅರಳಿತೋ ಬಿಟ್ಟಿತೋ ದೇಹವಂತೂ ಅರಳಿತ್ತು ಅವಳಿ ಮಕ್ಕಳನ್ನು ಧರಿಸಿ. ನಾವೆಲ್ಲ ಕಾಲೇಜು ಜೀವನದ ಸೊಗಸನ್ನು ಸವಿಯುವಾಗ, ನಕ್ಕು ನಲಿಯುವಾಗ. ತುಂಬಿದ ಹೊಟ್ಟೆಯೊಂದಿಗೆ ಭಾರವಾದ ಮನಸ್ಸಿನೊಂದಿಗೆ, ಬಾರದ ನಗೆಯೊಂದಿಗೆ ಶಿಕ್ಷಣ ಪೂರೈಸಿ. ‘ಹೊತ್ತೇರಿದಂತೆ ಕಾವೂ ಕೂಡ ಏರುತ್ತೆ’ ಎನ್ನುವಂತೆ ದಿನದಿಂದ ದಿನಕ್ಕೆ ಮರೀಚಿಕೆಯಾಗುತ್ತಿದ್ದ ಸುಖದೊಂದಿಗೆ ಘರ್ಷಿಸುತ್ತಾ, ಕಷ್ಟಗಳ ಮೆಟ್ಟಿ, ನೋವುಗಳನ್ನು ಮಕ್ಕಳ ಪಾಲನೆಯಲ್ಲಿ ಮರೆಯುತ್ತಾ, ಹಂತಹಂತವಾಗಿ ನಿಧಾನವಾಗಿ ಯಶಸ್ಸಿನ ಮೆಟ್ಟಿಲು ಹತ್ತಿದ ಇವಳ ಸುಖದ ಪಾಲನ್ನು ಈಗ ಮುಕ್ಕುವಂತೆ ಉಣ್ಣುತ್ತಿರುವ ಮಗ ಹೇಳಿದ ಮಾತಿನಿಂದ ನಾನು ಬಹುವಾಗಿ ಬಳಲಿದೆ. ಮನಸ್ಸು ಕದಡಿ ಹೋಯ್ತು. ‘ತಿಳಿನೀರ ಕೊಳ ರಾಡಿ ಆದಂತೆ’. ಕೊನೆಗೆ ತಡೆಯಲಾಗದೆ ಮಧ್ಯಪ್ರವೇಶಿಸಿ ತೀರ್ಮಾನ ಕೊಟ್ಟುಬಿಟ್ಟೆ…!

ಸುಮ್ಮನಿರಮ್ಮ ಈಗ ದೇವಸ್ಥಾನದ ಬಾಗಿಲು ಹಾಕಿರುತ್ತೆ, ಅಲ್ಲಿ ಹೋಗಿ ಮುಚ್ಚಿದ ಗುಡಿಯ ಮುಂದೆ ನಿಂತು ಕೈ ಮುಗಿಯುವ ಬದಲು ಇಲ್ಲಿಂದಲೇ ಆ ಕೆಲಸ ಮಾಡು! ಸ್ವಲ್ಪ ಪ್ರಾಕ್ಟಿಕಲ್ ಆಗಿರು! ಅಂದೆ. ಮೂರ್ತಿ ಪೂಜೆ ಬೆಂಬಲಿಸಿದ ನನ್ನಿಂದ ಇದಕ್ಕಿಂತ ಹೆಚ್ಚು ಒಳ್ಳೆಯ ಮಾತು ಸಾಧ್ಯವಿರಲಿಲ್ಲ! ಒಂದರೆಕ್ಷಣ ಸುಮ್ಮನಾಗಿಬಿಟ್ಟಳು ನಿರಾಸೆ ಕಾಡುತ್ತಿತ್ತು. ಅವಳೊಳಗಿನ ಕುದಿತ ಗ್ರಹಿಸದಷ್ಟು ಅಸೂಕ್ಷ್ಮಳಲ್ಲ ನಾನು. ಜೊತೆಗೆ ಒಂದಿಷ್ಟು ಮನೋವಿಜ್ಞಾನ ಬಲ್ಲ ನನಗೆ ಮನವರಿಕೆಯಾಗುತ್ತಿತ್ತು ಅವಳ ಅಂತರಂಗದ ಯುದ್ಧ. ಹೃದಯದಾಳದಲ್ಲಿ ಈಟಿಯಿಂದ ತಿವಿದಂತೆ ಪ್ರಶ್ನೆ ಪುಟಿದೆದ್ದು ಕೆಣಕಿತು. ಯಾಕೆ ಈ ಯುವ ಮನಸ್ಸುಗಳಿಗೆ ಇಷ್ಟೊಂದು ಅಸಹನೆ? ಹಾಗೆಯೇ, ಇವಳು ಕೂಡ ಕಾಲಕ್ಕೆ ಹಾಗೂ ಅವಶ್ಯಕತೆಗೆ ತಕ್ಕಂತೆ ಮಾರ್ಪಾಟು ಆಗಬೇಕು ಅನಿಸಿತು…!

ತಕ್ಷಣಾ ನನ್ನ ಮನಸ್ಸು ಜಾಗೃತವಾಯಿತು. ವಿಷಯ ಪಲ್ಲಟದ ಅಗತ್ಯ ಅರಿತು ಡ್ರೈವಿಂಗ್ ಬಗೆಗೆ ಮಾತು ಹೊರಳಿಸಿದೆ. ಬೇಸರ ಮರೆತವಳಂತೆ ಮಾತಿಗೆ ಮೊದಲು ಮಾಡಿದಳು. ‘ಅಳುವ ಮಗು ಸಿಹಿ ಕಂಡ ಕ್ಷಣ ದುಗುಡ ಮರೆತು ಸಿಹಿ ಮೆಲ್ಲುವಂತೆ’. ಪರಿಸ್ಥಿತಿ ತಿಳಿಯಾಗಿ ಹಾಯೆನಿಸಿತು. ಅವಳು ದ್ವಿಚಕ್ರವಾಹನವನ್ನು ಬೆಂಗಳೂರಿನಲ್ಲಿ ಚಾಲನೆ ಮಾಡಲು ಕಲಿತದ್ದು, ಈಗ ಆರಾಮವಾಗಿ ನಡೆಸುತ್ತಿರುವುದನ್ನು ಸವಿಸ್ತಾರವಾಗಿ ಅಭಿನಯದೊಂದಿಗೆ ತೋರಿಸಿದಳು..! ನನ್ನ ಸ್ಥಿತಿಗೆ ಭಿನ್ನವಾಗಿರಲಿಲ್ಲ…! ಆರು ತಿಂಗಳು ಭಯಕ್ಕೆ ಸುಮ್ಮನಿದ್ದು ಗಂಡಪ್ಪ ವಾಹನ ಮಾರಿ ಬಿಡ್ತೀನಿ ಅಂತ ಬೆದರಿಕೆ ಮುಂದಿಟ್ಟಾಗ ವಾಹನವನ್ನು ತಳ್ಳಾಡಿ, ಎಳೆದಾಡಿ, ತೆವಳುತ್ತಾ ರಸ್ತೆಯಲ್ಲಿ ಅಣ್ಣಾ ನೀನು ಹೋಗು!, ನೀನು ಕೂಡ ಹೋಗು ತಮ್ಮಾ…! ಅಕ್ಕ ನೀನು ಹೋಗಿಬಿಡು ಅಂತ ಚಕ್ರ ಉರುಳಿಸೋಕೆ ಕಾಯ್ತಾ… ಕಾಯ್ತಾ… ಅಂತೂ ಇಂತೂ ಕಲಿತು ಈಗ ತಕ್ಕಮಟ್ಟಿಗೆ ಗಾಡಿ ಚಲಾಯಿಸುವ ನನಗೆ ಅವಳು ಬೆಂಗಳೂರಿನಂತಾ ಮಹಾ ಮಾಯಾನಗರಿಯಲ್ಲಿ ಗಾಡಿ ಲೀಲಾಜಾಲವಾಗಿ ಓಡಿಸುವ ಅವಳ ನೈಪುಣ್ಯತೆ ಬಹು ದೊಡ್ಡ ಸಾಧನೆ ಎನಿಸಿತು. ಮುಕ್ತವಾದ ಮನಸ್ಸಿನಿಂದ ಶ್ಲಾಘಿಸಿದೆ. ಹಾಗೆಯೇ ಮತ್ತೊಂದು ಸಲಹೆಯೂ ಅನಾಯಾಸವಾಗಿ ತೂರಿಬಂತು.

‘ನೋಡು ನೀನೇ ಕಾರು ಓಡ್ಸೋದು ಕಲ್ತುಬಿಡು. ಈಗ ಕಲಿತರೆ ಕಲಿತಂತೆ! ಹೀಗೆ ಅಮ್ಮಯ್ಯ ದಮ್ಮಯ್ಯ, ಅಲ್ಲಿಗೆ ಕರ್ಕೊಂಡುಹೋಗು, ಇಲ್ಲಿಗೆ ಕರ್ಕೊಂಡುಹೋಗು ಅಂತ ಕೇಳುವುದು, ಗೊಣಗುವುದು ಎಲ್ಲಾ ತಪ್ಪುತ್ತೆ’ ಅಂತ ಪುಕ್ಕಟೆ ಸಲಹೆ ಕೊಟ್ಟುಬಿಟ್ಟೆ! ನಾನೇನೋ ಮಹಾ ನಿಪುಣತೆ ಅನ್ನುವಂತೆ!?. ಕಾರು ಚಾಲಾಯಿಸೋದು ಕಲ್ತರೂ ಹೆದರಿ ರಸ್ತೆಗಿಳಿಯದ್ದನ್ನು ಮರೆಮಾಚಿ…! ‘ಆ ಉತ್ತರನ ಪೌರುಷಕ್ಕಿಂತೇನು ಕಡಿಮೆ ಇರಲಿಲ್ಲ ನನ್ನ ವರ್ತನೆ…! ಈ ಸಂಗತಿ ನೆನಪಾಗಿ ನಾಲಿಗೆ ಕಚ್ಚಿ ಕೊಂಡೆ…! ಸಲಹಿಸಲು ನಾ ಕೂಡ ಬಹು ಮುಂದೆ ಅಂತ…!. ಅಷ್ಟರಲ್ಲೇ, ಅವಳ ಮಗ ‘ಸುಮ್ಮನಿರಿ ಆಂಟಿ ನೀವೀಗ ಚೆನ್ನಾಗಿ ಹೇಳಿದ್ರಿ ಇವರ ಟೆಂಪ್ರ್ಮೆಂಟಿಗೆ… ಅಷ್ಟೇ ಆಮೇಲೆ…! ಅಂದ. ಸಣ್ಣದೊಂದು ಸಂಘರ್ಷ… ಆರಂಭ ಆಗೋಯ್ತು…! ನಂಗೆ ಏನೂ ಹೇಳಲು ತೋಚದೆ…! ಪುಟ್ಟ, ಕೋರ್ಟ್ ಸ್ಟಾಪ್‌ಗೆ ಬರೋಕೆ ಹೇಳ್ಲಾ? ಅಥವಾ ಕಲ್ಲಳ್ಳಿ ಸ್ಟಾಪಿಗೆ ಬರೋಕೆ ಹೇಳ್ಲಾ? ಅಂದೆ. ಓ…! ನೀನು ಇಲ್ಲೇ ಇಳೀತೀಯಾ …!? ಅಂದ್ಲು ಬೇಸರದಲ್ಲಿ. ಗೆಳತಿಯಿಂದ ಬಿಳ್ಕೊಡುವ ಸಮಯ ಬಂದಾಗಿತ್ತು. ಹಾಗೆಯೇ ಮನಸ್ಸು ಕೂಡ ತರ್ಕ ವಿತರ್ಕ ಮಾಡುತ್ತಾ ಏನೇನೋ ಲೆಕ್ಕಾಚಾರದ ಗುಂಗಿನಲ್ಲಿ ಕಳೆದು ಹೋಗಿತ್ತು.

ಕಲ್ಲಹಳ್ಳಿಯಲ್ಲಿ ಇಳಿಯುವೆ ಎಂದು ಮನೆಯವರಿಗೆ ತಿಳಿಸಿದೆ. ಧರ್ಮಶ್ರೀ ಥಿಯೇಟರ್‌ ಮುಂದೆ ಕಾರು ನಿಂತಿತು. ಅದು ಈಗಾಗಲೇ ಮದುವೆ ಮಂದಿರವಾಗಿದೆ, ಆದರೂ ನಮಗಿನ್ನೂ ಅದು ಹಾಗೆ ಗುರುತು! ಒಂದೈದು ನಿಮಿಷ ಅಲ್ಲೇ ಕಾಯ್ತಾ ಇದ್ವಿ. ಸಮಯ ಮುಗಿಯುವ ಮೊದಲೇ ಎಲ್ಲವನ್ನೂ ಮಾತನಾಡಿ ಬಿಡುವ ಬಯಕೆ ಅವಳದು…! ದಣಿವರಿಯದ ಮಾತುಕತೆ…!? ಅಷ್ಟರಲ್ಲಿ ಮನೆಯವರು ಬಂದರು. ನಾನು ಇಳಿದೆ. ಇವಳು ಒಳಗಿನಿಂದಲೇ ‘ಸಾರ್ ನಮಸ್ತೆ’ ಎಂದಳು. ಅವಳ ಮಗ ‘ಅಮ್ಮ ಲರ್ನ್ ಸಮ್ ಮ್ಯಾನರ್ಸ್, ಇಳಿದು ಮಾತನಾಡಿಸು’ ಅಂದ.

ಸರಿ ತಪ್ಪುಗಳ ಮಧ್ಯೆ ನರಳಿದೆ!?. ಅವನು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಯಾಕೆ ಹೀಗೆ ಆಡ್ತಾನೆ ಅಂದ್ರೆ ಇದು ನಿತ್ಯದ ಜಂಜಡ ಅವನಿಗೆ..! ಆದರೆ ಅವಳ ಸ್ವಭಾವವೇ ಹಾಗೆ. ಮುದ್ದು ಮಗುವಿನಂತೆ! ಕಲ್ಮಶವಿಲ್ಲ ಅನಿಸಿದ್ದು ನೇರ ಹೇಳಿಬಿಡುವ ಸ್ವಭಾವದವಳು. ತಾನು ಇದ್ದಂತೆಯೇ ಜಗದೆದುರು ತೆರೆದುಕೊಳ್ಳುವ ಬಣ್ಣಕಟ್ಟದ ಸಾದಾ ನಡವಳಿಕೆ ಇರುವವಳು. ಆದರೆ ಆ ಕ್ಷಣದಲ್ಲಿ ಅವಳು ಕೂಡ ಸರಿ ಅನಿಸಿತು. ಮನದ ತಿಳಿನೀರು ಕದಡಿ ಹೋಯ್ತು…! ನಿಡಿದಾದ ನಿಟ್ಟುಸಿರು ಬಿಡುತ್ತಾ ಅವನ ಮಾತು ಗಮನಿಸಿದವಳಂತೆ ಮನೆಯವರನ್ನು ಅವನಿಗೆ ಪರಿಚಯಿಸಿದೆ. ಅವಳು ‘ಸಾರ್ ಕಾರ್‌ನಲ್ಲಿ ಎಲ್ಲಾ ತುಂಬಿದೆ, ಇಳಿಯೋಕೆ ಆಗ್ತಿಲ್ಲ ಅದಕ್ಕೆ ಇಲ್ಲಿಂದಲೇ ಕೂಗಿದೆ’ ಅಂತ ಸಮರ್ಥನೆ ಕೊಟ್ಟಳು. ನಾ ಬರಿದೇ ನಕ್ಕೆ.

ಜೀವವಿರಲಿಲ್ಲ ನನ್ನಲ್ಲಿ. ಅವಳ ಭವಿಷ್ಯ ಕುರಿತು ಮನವಾಗಲೇ ವಿಪರೀತವಾಗಿ ಚಿಂತಿಸುತ್ತಿತ್ತು. ಪರಿಚಿತರೊಬ್ಬರ ತಂದೆಯವರ ವಿಪರೀತ ಮಾತುಕತೆ, ನಡವಳಿಕೆ ಮಕ್ಕಳಿಗೆ ಸಹ್ಯವಾಗದೇ ಆಶ್ರಮ ಸೇರಿರುವುದು ನೆನಪಾಗಿ ಮನ ವಿಲವಿಲನೆ ಒದ್ದಾಡಿತು. ಆದರೂ ಸಾವರಿಸಿಕೊಂಡು ಹನಿದುಂಬಿದ ಕಣ್ಣಿನೊಂದಿಗೆ ಎದುರಿರುವ ದೃಶ್ಯ ಮಸುಕಾಗುತ್ತಿರುವುದರ ಅರಿವಾಗಿ ಇಬ್ಬರಿಗೂ ಶುಭ ಹಾರೈಸಿ ಮನೆಯವರೊಂದಿಗೆ ಮನೆಕಡೆ ಪಯಣ ಬೆಳೆಸಿದೆ. ಕಾಣದ ದೇವರಿಗೆ ಮನದಲ್ಲೇ ಕೈ ಮುಗಿದು ಬೇಡಿದೆ ‘ನನ್ನ ಗೆಳತಿಗೆ ಒಳಿತು ಮಾಡು' ಮತ್ತೊಮ್ಮೆ ಮುಂದೆ ಮುಂದೆ ಹೋಗುತ್ತಿರುವ ಗೆಳತಿಗೆ ಹೇಳಿದೆ ಶುಭವಾಗಲಿ ಗೆಳತಿ…..
ಸುವ್ವಿ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.