ADVERTISEMENT

ಕಥೆ: ವಿಲೋಮ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ಕಲೆ: ಕೆ.ಆರ್‌. ಬಸವರಾಜಾಚಾರ್‌
ಕಲೆ: ಕೆ.ಆರ್‌. ಬಸವರಾಜಾಚಾರ್‌   

ಸುರಿಯುತ್ತಿರುವ ಮಂಜಿನೆದುರು ಮಸುಕಾಗಿದ್ದ ರಸ್ತೆಯಂಚಿನ ನಿಯಾನ್ ದೀಪದ ಬೆಳಕಲ್ಲಿ ಪರಿಚಿತರು ಅಪರಿಚಿತರಾಗಿ ಬಿಡುತ್ತಾರೆಯೆ ಎಂದು ಆತನಿಗೆ ಬೆರಗಾಗುವಂತೆ- ಆ ಮಂದ ಬೆಳಕಿನಲ್ಲಿ ದೂರದಲ್ಲಿ ಬರುತ್ತಿರುವ ಅವಳು- ತಿಳಿ ಹಳದಿ ಸೀರೆಯುಟ್ಟವಳು- ಪರಿಚಿತಳೆ?.. ಗೊಂದಲಕ್ಕೊಳಗಾದ ಆತ. ಛೆ ಯಾರೋ ಏನೋ, ಅವಳು ಇಲ್ಲಿ ಕಾಣುವುದಕ್ಕೆ ಹೇಗೆ ಸಾಧ್ಯ ಎಂದುಕೊಂಡರೆ ಅವಳು ತನ್ನ ಬಸ್ಸಿನ ಸಮೀಪವೇ ಬರುತ್ತಿದ್ದಾಳೆ.. ಹೌದು ಅವಳೇ.. ಅವಳೇ.

ಅವನಿಗೆ ಈ ಭೇಟಿ ತೀರಾ ಅಂದರೆ ತೀರಾ ಅನಿರೀಕ್ಷಿತವಾಗಿತ್ತು.

ಬಸ್ಸು ಹತ್ತು ಗಂಟೆಗೆ ಬೆಂಗಳೂರು ಬಿಟ್ಟಿದ್ದೆ ಮಂಪರು ಕವಿದಂತಾಗಿ ಏನೇನೋ ಬೇಡದ ಯೋಚನೆಗಳು ಧುಮ್ಮಿಕ್ಕಿ ಮನಸ್ಸನ್ನ ಕೆಡಿಸಲು ತೊಡಗಿದಾಗ ನಾಳೆ ಮತ್ತೆ ಮರಳಿ ಬರಬೇಕು, ನಿದ್ದೆಗೆಟ್ಟರೆ ಒಳ್ಳೆಯದಲ್ಲ ಎನ್ನುವ ಭಾವವೇ ತೀವ್ರವಾಗಿ ದೀರ್ಘ ಉಸಿರಾಟದ ಪ್ರಾಣಾಯಾಮ ಮಾಡುತ್ತ ನಿದ್ರೆಗೆ ಶರಣಾಗಿದ್ದ ಆತ. ಅರಿವಿಗೆ ಬಾರದಂತೆ ಆವರಿಸಿಕೊಂಡ ನಿದ್ದೆಯ ಹೊದಿಕೆ ತೆಗೆದದ್ದು- ‘ಹತ್ತು ನಿಮಿಷ ಟೈಮಿದೆ ನೋಡಿ, ಟೀ ಕಾಫಿ ಬೇಕಾದವರು ಇಳಿಯಿರಿ’ ಎನ್ನುವ ಕ್ಲೀನರನ ದೊಡ್ಡ ದನಿ. ಎಚ್ಚೆತ್ತು ಒಂದಾ ಮಾಡಿ ಬರಲೆಂದು ಇಳಿದಿದ್ದ. ಕೆಲಸ ಮುಗಿಸಿ ಬಂದು ಬಸ್ಸಿನ ಬಳಿ ನಿಂತಾಗ ಅವಳು ಕಂಡದ್ದು- ಲೇಡೀಸ್ ಟಾಯ್ಲೆಟ್ಟಿಗೆ ಹೋಗಿ ಬಂದವಳು ಮತ್ತೆ ತನ್ನದೇ ಬಸ್ಸು ಹತ್ತಲು ಬಂದಾಗ. ದಂಗಾಗಿ ಬಿಟ್ಟ.

ADVERTISEMENT

‘ಅರೆ, ನೀನು.. ಇಲ್ಲಿ?’ ಬೆರಗು ದನಿಯಾಯಿತು.

‘ಓ! ನೀವು ಇದೇ ಬಸ್ಸಲ್ಲಿ ಇದೀರಾ?’ ಸಹಜ ಪ್ರಶ್ನೆ.

‘ಮಗಳು? ಒಬ್ಬಳೇ ಮನೆಯಲ್ಲಿ?’

‘ಅವಳು ಫ್ರೆಂಡನ್ನ ಕರೆಸಿಕೊಂಡಿದಾಳೆ.’ ಆತ ತನ್ನ ನೋಟವನ್ನ ತಗ್ಗಿಸಲಿಲ್ಲ. ಅವಳೇ ವಿವರಣೆ ಕೊಡತೊಡಗಿದಳು: ‘ಯಾಕೋ ಊರಿಗೆ ಹೋಗಿಬರೋಣ ಅನ್ನಿಸ್ತು. ಹಾಗಾಗಿ ಟಿಕೆಟ್ ಸಿಗುತ್ತ ನೋಡ್ದೆ. ಈ ಬಸ್ಸಲ್ಲಿ ಲಾಸ್ಟ್ ಸಿಂಗಲ್ ಸೀಟು ಕಾಲಿಯಿತ್ತು, ಬುಕ್ ಮಾಡಿ ಬಂದುಬಿಟ್ಟೆ’ ಆತ ಮತ್ತೇನೋ ಹೇಳಬೇಕೆನ್ನುವಷ್ಟರಲ್ಲಿ ಡ್ರೈವರ್ ಹಾರನ್ ಹಾಕತೊಡಗಿದ. ಇಬ್ಬರ ನಡುವೆ ಉಳಿದ ಪ್ರಯಾಣಿಕರು ನುಗ್ಗತೊಡಗಿದಾಗ ಅವಳು ಕಣ್ಮರೆಯಾಗಿಬಿಟ್ಟಳು. ಆತನು ಕೊನೆಯವನಾಗಿ ಬಸ್ಸು ಹತ್ತಿ ತನ್ನ ಸೀಟಿನಲ್ಲಿ ಮಲಗಲು ತಯಾರಿ ಮಾಡಿಕೊಂಡ. ಲಾಸ್ಟ್‌ಸೀಟು ಅಂದಿದ್ದಳು, ಹೋಗಿ ಮಾತಾಡಿಸಲೆ ಎನ್ನಿಸಿತಾದರು, ಛೆ ಅದು ಸರಿಯಲ್ಲ, ಬೇರೆಯವರು ಏನಾದರು ಅಂದುಕೊಳ್ಳಬಹುದು ಅನ್ನಿಸಿ ಮಲಗಿದರೆ ಮತ್ತೆ ನಿದ್ದೆಯೆಲ್ಲಿ ಸುಳಿಯಬೇಕು?
*

ಮೊನ್ನೆ ಅಪ್ಪ ಫೋನ್ ಮಾಡಿದ್ದರು. ಅಮ್ಮ ಬಚ್ಚಲಲ್ಲಿ ಜಾರಿಬಿದ್ದು ಹಣೆಗೆ ಹೊಸಿಲು ಹೊಡೆದು ಗಾಯ ಆಗಿದೆ- ಸ್ಟಿಚ್ ಮಾಡಿಸಿಕೊಂಡು ಬಂದಿದ್ದೇನೆ- ತಿಂದದ್ದನ್ನೆಲ್ಲ ವಾಂತಿ ಮಾಡಿಕೊಳ್ಳುತ್ತಿದ್ದಾಳೆ– ನಾಳೆ ಹೋಗಿ ಸ್ಕ್ಯಾನ್ ಮಾಡಿಸುತ್ತೇನೆ- ಹೆದರುವ ಕಾರಣ ಇಲ್ಲ ಅಂತ ಡಾಕ್ಟರ್ ಹೇಳಿದ್ದಾರೆ ಅಂತ. ಅಪ್ಪ ಹಾಗೆ ಹೇಳಿದ್ದರು ಅವನಿಗೆ ಸಮಾಧಾನ ಆಗಲಿಲ್ಲ. ಹೇಗೂ ನಾಳೆ ಶನಿವಾರ ಒಂದು ದಿನದ ಮಟ್ಟಿಗೆ ಹೋಗಿ ಬಂದುಬಿಡುವ ಅಂತ ಹೊರಟಿದ್ದ. ಈಗೀಗ ಎಲ್ಲಾದರು ಹೋಗುವುದಿದ್ದರೆ ಹೆಂಡತಿಗೆ ಹೇಳಿ ಹೋಗುವ ಪರಿಪಾಠವನ್ನು ಆತ ಇಟ್ಟುಕೊಂಡಿರಲಿಲ್ಲ. ತಾನು ಏನೇ ಹೇಳಿದರು ಅದಕ್ಕೊಂದು ತಿದ್ದುಪಡಿ ಇದ್ದೇ ಇರುತ್ತೆ ಅವಳದ್ದು ಎನ್ನುವ ಬೇಸರ ಹುಟ್ಟಲಾರಂಬಿಸಿ ಬಹಳ ಕಾಲವಾಗಿತ್ತು. ಆದರು ಮನಸ್ಸು ತಡೆಯದೆ ‘ಅಮ್ಮನಿಗೆ ಆರಾಮಿಲ್ವಂತೆ ಇಂದು ರಾತ್ರಿ ಹೋಗಿ ನಾಳೆ ಬರುತ್ತೇನೆ’ ಅಂತ ಸಹೋದ್ಯೋಗಿಯೊಬ್ಬನಿಗೆ ಹೇಳುವಂತೆ ವಿಷಯ ತಿಳಿಸುವ ಅಷ್ಟೇ ಉದ್ದೇಶದಿಂದ ಹೇಳಿದ್ದ. ಆಫೀಸಲ್ಲಿ ಮೀಟಿಂಗ್ ಇದೆ, ಅಲ್ಲಿಂದಲೇ ಸೀದಾ ಹೋಗುತ್ತೇನೆ ಮನೆಗೆ ಬಂದು ಹೋಗುವುದಕ್ಕೆ ಲೇಟಾಗುತ್ತೆ ಅಂತಲೂ ಸೇರಿಸಿದ್ದ.

ಪ್ರಾಯಶಃ ರಸ್ತೆಯ ಡೈವರ್ಶನ್ ಸುರುವಾಗಿರಬೇಕು. ಈ ಎನ್‌ಎಚ್‌4 ರಿಪೇರಿ ಯಾವಾಗ ಪೂರ್ಣವಾಗುತ್ತದೆಯೊ ದೇವರೇ ಬಲ್ಲ. ಡೈವರ್ಶನ್ನು- ಡೈವರ್ಶನ್ನಿಗೆ ಹಂಪುಗಳು- ಬಸ್ಸನ್ನ ಎತ್ತಿ ಎತ್ತಿ ಒಗೆಯುತ್ತ ಚಕ್ಕಡಿಗಾಡಿನ ಪ್ರಯಾಣದ ನೆನಪು ತರುವಂತಿರುತ್ತದೆ. ನಿದ್ದೆ ಬರುವುದಿಲ್ಲ, ಹಳೆಯ ನೆನಪುಗಳು ಧುಮ್ಮಿಕ್ಕುತ್ತವೆ. ಅಮ್ಮ ಅಪ್ಪ ಈ ವಯಸ್ಸಲ್ಲು ಎಷ್ಟು ಅನ್ಯೋನ್ಯವಾಗಿದ್ದಾರೆ.. ಅಮ್ಮನ ತಲೆಯ ಪೆಟ್ಟು ಗುಣವಾಗಿದ್ದರೆ ಸಾಕಾಗಿತ್ತು. ಅವಳಿಗೇನಾದರು ಹೆಚ್ಚು ಕಡಿಮೆಯಾದರೆ ಕಡೆಗೆ ಅಪ್ಪಯ್ಯನೂ ಉಳಿಯಲಿಕ್ಕಿಲ್ಲ. ಬಹುಶಃ ಹಳೆಯ ಕಾಲದ ದಾಂಪತ್ಯದ ಅನುಬಂಧವೇ ಹಾಗೆಯೋ ಏನೋ. ಈಗಿನವರ ಬದುಕು ಹಾಗಿರುವುದೇ ಇಲ್ಲ.. ಪೇಟೆ ಸೇರಿದ ಬಳಿಕ ಹೆಂಡಂದಿರಿಗೆ ಅದೇನಾಗುತ್ತದೆಯೋ ಏನೋ. ಹೊಂದಾಣಿಕೆ ಸೊನ್ನೆ. ಆಸೆಪಟ್ಟು ಮದುವೆಯಾದದ್ದು ಹೌದು. ಮದುವೆಯಾದ ಹೊಸದರಲ್ಲಿ ತುಂಬಾನೇ ಹೊಂದಿಕೊಂಡದ್ದು ನಿಜ. ಆದರೆ ಹತ್ತೆಂಟು ವರ್ಷ ಆದ ಬಳಿಕ ನಿಮ್ಮನ್ನ ಸಹಿಸಿಕೊಳ್ಳೋದೆ ಕಷ್ಟ ಅನ್ನೋ ಹಂತಕ್ಕೆ ಬಂದಳು. ಆಗಾಗ್ಗೆ ಜಗಳ, ತಾನು ಏನೇ ಹೇಳಿದರು ಅದಕ್ಕೊಂದು ವಕ್ರ ಪ್ರತಿಕ್ರಿಯೆ. ಆಗಾಗ್ಗೆ ತನಗೆ ಬೇಜಾರಾಗಿ ದೂರ ಮಲಗಿದರೆ ಏನೂ ಆಗದವಳಂತೆ ಅದಕ್ಕು ಸೈ. ಕಡೆಗೆ ದೇಹದ ಬಯಕೆ ತಾಳಲಾರದೆ ಸಾರಿಕಣೆ ಅಂತ ಅವಳ ಮಗ್ಗುಲು ಸೇರಬೇಕಾಗಿತ್ತು. ಅದಕ್ಕು ತಣ್ಣನೆಯ ಪ್ರತಿಕ್ರಿಯೆ. ಹೊಸದರಲ್ಲಿ, ಯಾಕೇ ಪ್ರತಿ ಬಾರಿಯು ನಾನೇ ನಿನ್ನ ಮಜ ಮಾಡುವ ಅಂತ ಕರೀಬೇಕು, ಒಮ್ಮೊಮೆಯಾದರು ನೀನೇ ಮೈಮೇಲೆ ಬಿದ್ದು ಬರಬಾರದೆ ಅಂದರೆ ನಾನಾಗೇ ಬಂದರೆ ನೀವು ಬಲು ಬೇಗ ಖಾಲಿಯಾಗುತ್ತೀರಿ, ನಂಗೊತ್ತಿಲ್ಲವೆ ಅದಕ್ಕೆ ಅಂತ ಛೇಡಿಸುತ್ತಿದ್ದಳು. ತಾಯಾದ ಬಳಿಕ ಅಂತರ ಹೆಚ್ಚುತ್ತ ಹೋಯಿತು. ದಾಂಪತ್ಯ ಯಾಂತ್ರಿಕವಾಯಿತು. ಅದೇಕೋ ಹೆಣ್ಣಿಗೆ ಕಾಮತೃಪ್ತಿ ಒಂದು ಹಂತದ ಬಳಿಕ ಬಹಳ ಕ್ಷೀಣಿಸುತ್ತದೆಯೊ ಏನೊ. ಆದರೆ ಗಂಡಸಿಗೆ ಹಾಗಲ್ಲ. ಅರವತ್ತಾದರು, ಎಪ್ಪತ್ತಾದರು ಸರಿಯೆ. ದೇಹ ಪ್ರತಿಕ್ರಿಯಿಸದ ಹಂತದಲ್ಲು ಮನಸ್ಸು ಬಯಸುವುದುಂಟು. ಅಷ್ಟಕ್ಕು ತನಗಾದ ವಯಸ್ಸಾದರು ಎಷ್ಟು. ಬರಿದೆ ಐವತ್ತೆಂಟು ಅವಳಿಗೆ ಐವತ್ಮೂರು. ಗ್ರಹಚಾರಕ್ಕೆ ಬೇಗನೆ ಮೆನೋಪಾಸು ಮುಗಿಸಿಬಿಟ್ಟಳು. ಮನಸ್ಸು ಗರಿಗೆದರಿದಾಗ ಕರೆದರೆ ತಾನು ಹೆಂಡತಿ ಇದು ತನ್ನ ಕರ್ತವ್ಯ ಎನ್ನುವಷ್ಟರ ಮಟ್ಟಿಗೆ ಮಾತ್ರ ಕಾಲಗಲಿಸಿ ಮಲಗುವುದನ್ನ ಬಿಟ್ಟರೆ ಒಂದೇ ಒಂದು ಪ್ರತಿಸ್ಪಂದನವಿಲ್ಲ. ಕಾಮಶಾಸ್ತ್ರದಲ್ಲಿ ಅದ್ಯಾವುದೋ ಜಾತಿಯ ಸ್ತ್ರೀಯರು ಅನ್ನುತ್ತಾರಲ್ಲ..

ಮಂದಗಾಮಿಗಳು.. ಕಾಮದಲ್ಲಿ ನಿರಾಸಕ್ತಿ- ಅಂಥ ಹೆಣ್ಣೆ ಇವಳು ಅಂತ ವ್ಯಥಿಸಿದ್ದಿದೆ... ಕಡೆ ಕಡೆಗೆ ತೀರಾ ಬೇಸರವಾಗಿ, ಕೇವಲ ಒಟ್ಟಾಗಿ ಬದುಕುವ ದಾಂಪತ್ಯವಾಗಿಬಿಟ್ಟಿತು.. ಆದರೆ ಊರಿಗೆ ಬಂದರೆ ಕಾಣುತ್ತಿದ್ದುದು ಅಪ್ಪ ಅಮ್ಮನ ಕಿಲಾಡಿ ಕೀಟಲೆತನಗಳು- ಎಂಬತ್ತರ ಇಳಿವಯಸ್ಸಿನಲ್ಲು.. ಕಾಲದ ವ್ಯತ್ಯಾಸವೆ.. ಏನಾದರು ಹಾಳಾಗಿ ಹೋಗಲಿ ಇವಳ ವಿಚಾರವೆ ಬೇಡ ಅಂತ ಮಗ್ಗುಲು ಬದಲಿಸಿದ.

ಬಸ್ಸು ಹಾವೇರಿಯನ್ನು ದಾಟಿರಬಹುದು. ಬೆಳಗಿನ ಜಾವದ ತಂಪು ಸೂಸುವ ಹವೆ ಆಹ್ಲಾದಕರವೆ.. ಅವಳೂ ತನ್ನ ಬಗ್ಗೆ ಯೋಚಿಸುತ್ತ ಮಲಗಿರಬಹುದೆ.. ಅಥವಾ ಏನನ್ನು ಯೋಚಿಸದೆ ಗಡದ್ದಾಗಿ ನಿದ್ದೆ ಹೊಡೆಯುತ್ತಿರಬಹುದೆ.. ಈ ಹೆಂಗಸರು ಯಾವ ವಿಷಯವನ್ನ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ ಯಾವುದನ್ನಿಲ್ಲ ಎಂದು ಬ್ರಹ್ಮನು ಹೇಳಲಾರೆನೇನೊ. ತಾನೇ ಅನುಭವಿಸಿದ್ದಿಲ್ಲವೆ? ಒಂದು ಕ್ಷಣ ಸಹಜ ಮಾತು, ಮತ್ತೊಂದು ಕ್ಷಣಕ್ಕೆ.. ತಾನು ಏನೋ ತಮಾಷೆಗೆ ಹೇಳಿದರೆ ಅದರಲ್ಲು ವ್ಯಂಗ್ಯ ಕಂಡು ಕೆಂಡಾಮಂಡಲ..ಎಷ್ಟೋ ವರ್ಷದ ಹಿಂದೆ ತಾನು ಹೇಳಿರಬಹುದಾದ ಮಾತೊಂದನ್ನ ಉದ್ಧರಿಸಿ ಟಾಂಟ್ ಕೊಡುವುದು... ಮೊದಮೊದಲು ವಾದ ಮಾಡುವುದಿತ್ತು. ಕಡೆಗೆ ಅದನ್ನೆ ಗಂಟೆಗಟ್ಟಲೆ ವಾದಿಸುತ್ತ ಸಾಕೆಂದರು ರಬ್ಬರಿನಂತೆ ಜಗ್ಗುತ್ತ ಹೋಗುವುದನ್ನ ಕಂಡಾಗ ಸುಸ್ತಾಗಿ ಸುಮ್ಮನಾಗಿ ಬಿಡುತ್ತಿದ್ದ. ಅವಳು ಕೇಳಿದ್ದಷ್ಟಕ್ಕೆ ಹುಂ ಉಹುಂ. ಯಾಕೆ ಹೀಗೆ.. ಅನ್ಯೋನ್ಯತೆ ನಾಶವಾದದ್ದೆಲ್ಲಿ ಅಂತ ಅವಳು ಯೋಚಿಸಬಾರದೆ ಅಂತ ಬಹಳ ಸಾರಿ ಅಂದುಕೊಂಡಿದ್ದ. ಎಲ್ಲ ಮನಸ್ಸಿನ ಗೊದಮೊಟ್ಟೆಗಳೇ ಆಗಿ ಉಳಿಯುತ್ತ ಬಂದದ್ದು ಇಬ್ಬರೂ ಪ್ರತ್ಯೇಕ ಮಲಗಲು ಶುರುಮಾಡಿದ ಮೇಲೆ... ..ಥೋ ನಿಮ್ಮ ಬಾಯಿ ವಾಸನೇರಿ.. ನಿಮ್ಮ ಗೊರಕೇಲಿ ನನಗೆ ನಿದ್ದೇನೆ ಬರುತ್ತಿಲ್ಲ ಎನ್ನುವ ಒಂದೊಂದು ನೆಪ. ವಯಸ್ಸಾದ ಮೇಲೆ ಹಾಗೇರಿ ನಿದ್ದೆ ಕಡಿಮೆಯಾಗಿಬಿಡುತ್ತೆ- ಒಂದು ಸಣ್ಣ ಕಿರಿಕಿರಿಯಾದರು ನಿದ್ದೇನೆ ಬರೊಲ್ಲ ಅನ್ನುವ ಸಮರ್ಥನೆ ಬೇರೆ. ತಾನು ಕಿರಿಕಿರಿಯೆ? ಮನಸ್ಸಿಗೆ ನೋವಾಗುತ್ತಿತ್ತು- ಯಾರಲ್ಲಿ ಹೇಳಿಕೊಳ್ಳುವುದು? ಅಪ್ಪ ಅಮ್ಮ ಇವತ್ತಿಗು ಮಲಗುವುದು ಒಂದೇ ರೂಮಲ್ಲಿ... ಮೊದಲಿಗೆ ಸ್ಲೀಪರ್ ಬಸ್ಸಲ್ಲಿ ಡಬಲ್ ಸೀಟಲ್ಲಿ ಒಟ್ಟಾಗಿ ಹೋಗುವಾಗ ಕೈ ಸರಿಸುತ್ತ ರಂಜನೆಗೆ ತೊಡಗಿದರೆ ಛಿ, ಇದು ಬಸ್ ಕಣ್ರಿ ಸುಮ್ಮನೆ ಮಲಗಿ ಅಂತ ಹುಸಿಮನಸ್ಸು ತೋರುತ್ತಿದ್ದಳು. ಇಂಥ ಥಂಡಿ ವಾತಾವರಣದಲ್ಲಿ ಪಕ್ಕದಲ್ಲೊಂದು ಬೆಚ್ಚನೆಯ ಹೆಣ್ಣು ಜೀವ ಇದ್ದಿದ್ದರೆ ಅಂತ ಅವನಿಗನ್ನಿಸಿ ಮೈ ಬೆಚ್ಚಗಾಯಿತು.. ಅವಳು ಹಿಂದಿನ ಸೀಟಲ್ಲಿ ಮಲಗಿದ್ದಾಳೆ. ಆದರೆ ಇಬ್ಬರದು ಸಿಂಗಲ್ ಸೀಟು.. ಹೋದರೆ.. ಥೊ ಥೊ ಹುಚ್ಚಾಟವೆಲ್ಲ ಬೇಡ, ದೊಡ್ಡ ಗಲಾಟೆಯೆ ಆದರು ಅಚ್ಚರಿಯಲ್ಲ ಎಂದುಕೊಂಡು ತನ್ನಷ್ಟಕ್ಕೆ ಕಂಟ್ರೋಲ್ ಮಾಡಿಕೊಂಡ. ನೀನೂ ಬಂದುಬಿಡು ಅಮ್ಮನ್ನ ನೋಡಿಕೊಂಡು ಬಂದು ಬಿಡೋಣ ಅಂತ ಬಸ್ ಟಿಕೆಟ್ ಮಾಡಿಸುವಾಗ ಅವಳಲ್ಲಿ ಹೇಳಿದರೆ, ಒಂದು ದಿನಕ್ಕಾಗಿ ಅಷ್ಟು ದೂರ.. ಬರೊಲ್ಲ, ನೀವು ಹೋಗಿ ಅಂತ ಕಡ್ಡಿಮುರಿದಂತೆ ಹೇಳಿದ್ದಳು. ಒಮ್ಮೆ ಹೇಳಿದರೆ ಮುಗಿಯಿತು, ಗೆರೆ ಎಳೆದ ಹಾಗೆ. ಮನೆಯಲ್ಲಾಗದ್ದು ಬಸ್ಸಿನ ಡಬಲ್ ಸೀಟಲ್ಲಾದರು ಆಗುತ್ತೇನೊ ಅಂದುಕೊಂಡಿದ್ದಷ್ಟೆ..
*
ಶಿರಸಿ ತಲುಪುವಾಗ ಇಬ್ಬನಿಯನ್ನ ಸೀಳುತ್ತ ತಿಳಿಬೆಳಕು ನುಗ್ಗತೊಡಗಿತ್ತು. ಎಲ್ಲಿ ಸಾರ್ ಎಲ್ಲಿಗೆ ಎಂದು ಮುನ್ನುಗ್ಗಿ ಬರುತ್ತಿದ್ದ ಆಟೋವೊಂದನ್ನ ಹತ್ತಿಬಿಡಲೆ ಅಂದುಕೊಳ್ಳುವಷ್ಟರಲ್ಲಿ, ಛೇ ಛೇ ಕರ್ತವ್ಯ ಇರುತ್ತಲ್ಲ, ಒಬ್ಬಳೇ ಬಂದಿದ್ದಾಳೆ, ವಿಚಾರಿಸಿಕೊಂಡೇ ಹೋಗುವ ಅಂತ ಬದಿಗೆ ಸರಿದು ನಿಂತುಕೊಂಡ. ಅವಳೂ ಕೆಳಗಿಳಿದು ಬಂದಳು. ನಿದ್ದೆಯಿಲ್ಲದೆ ಅವಳ ಕಣ್ಣೂ ಕೆಂಪಡರಿದೆಯಾ ಅಂತ ಸೂಕ್ಷ್ಮವಾಗಿ ನೋಡಬೇಕೆಂದುಕೊಂಡ. ಅಷ್ಟರಲ್ಲಿ ಅವಳೇ ಕೈಮಾಡಿ ಆಟೋ ಕರೆದು ಹತ್ತಿ ಅಂದಳು. ಅವನಿಗೆ ಗೊತ್ತು- ತನ್ನ ಮನೆಯಿರುವುದು ಬಸ್ಸು ನಿಲ್ಲಿಸಿದಲ್ಲಿಂದ ಎರಡು ಕಿಲೋಮೀಟರ್ ದೂರವಾದರೆ ಅವಳ ಮನೆ ಏಳೆಂಟು ಕಿಲೋಮೀಟರ್ ದೂರದ ಹೊರವಲಯದ ಹಳ್ಳಿ, ಎರಡೂ ವಿರುದ್ಧ ದಿಕ್ಕಿನಲ್ಲಿ. ‘ನೀನು?’ ಪ್ರಶ್ನಿಸಿದ. ‘ನಾನೂ ನಿಮ್ಮೊಟ್ಟಿಗೆ ಬರುತ್ತೇನೆ, ನಿಮ್ಮಮ್ಮನ್ನ ನೋಡಿಕೊಂಡು....’ ಎನ್ನುತ್ತ ಆಟೋದವನಿಗೆ ಕೆಯಿಬಿ ಕಾಲೋನಿ ಅಂದಳು. ಏನೋ ಹೇಳಬೇಕೆಂದುಕೊಂಡರು ದನಿ ಗಂಟಲಿಂದ ಹೊರಬರಲಾಗದೆ ಸುಮ್ಮನೆ ಕುಳಿತ.

ಮನೆ ತಲುಪುವಾಗ ಅಮ್ಮ ಬಾಗಿಲಿಗೆ ರಂಗೋಲಿ ಇಕ್ಕುತ್ತಿದ್ದವಳು ನಗುಮೊಗದಿಂದ ಬನ್ನಿ ಬನ್ನಿ ಅಂತಂದಳು. ಅಮ್ಮನ ಹಣೆಯ ಮೇಲಿನ ಬ್ಯಾಂಡೇಜ್ ಪಟ್ಟಿಯೊಂದನ್ನ ಬಿಟ್ಟರೆ ಸಹಜವಾಗಿಯೇ ಇದ್ದದ್ದು ಅವನಿಗೆ ಸಮಾಧಾನ ತಂತು. ಅಷ್ಟರಲ್ಲಿ ದೇವರಿಗೆ ಹೂ ಕೊಯ್ಯಲೆಂದು ಹೂವಿನ ಬುಟ್ಟಿ ತಂದ ಅಪ್ಪಯ್ಯ, ಬಂದಿರಾ, ಚಲೋ ಆಯಿತು. ನೋಡಿ, ಬೇಗ ಕಾಫಿ ಕುಡಿದು ರೆಡಿಯಾಗಿ ಎಂದು ಇಬ್ಬರನ್ನು ಕುರಿತು ಹೇಳಿದವರು, ಅವಳ ಬಳಿ ಹೋಗಿ ಅವಳ ತಲೆ ಸವರಿ, ಬೇಸರ ಮಾಡಿಕೊಬೇಡಮ್ಮ, ಎಲ್ಲಾ ಒಂದಲ್ಲ ಒಂದಿನ ಹೋಗುವವರೆ ಅಲ್ಲವಾ ಅಂದ. ಅಮ್ಮನಿಗೆ ಸ್ಕ್ಯಾನಿಂಗ್ ಮಾಡಿಸಿದೆಯಾ ಡಾಕ್ಟರು ಏನೆಂದರು ಎಂದೆಲ್ಲ ಅಪ್ಪನಲ್ಲಿ ಕೇಳಬೇಕೆಂದುಕೊಂಡ ಅವನ ಮಾತು ಗಂಟಲಲ್ಲೆ ಉಳಿದು, ‘ಯಾಕೆ, ಎಲ್ಲಿಗೆ ಹೋಗುವುದು?’ ಎನ್ನುವ ಮಾತಷ್ಟೆ ಬಾಯಿಂದ ಹೊರಟಿತು. ‘ಅಯ್ಯ, ವಿಷಯಾನೆ ಗೊತ್ತಿಲ್ವ ನಿಂಗೆ?- ನಿನ್ನ ಅತ್ತೆ ನಿನ್ನೆ ಹಾರ್ಟ ಅಟ್ಯಾಕ್ ಆಗಿ ತೀರಿಕೊಂಡುಬಿಟ್ರು ಕಣೊ. ನಿನ್ ಮನೆಗೆ ಫೋನ್ ಮಾಡಿದ್ದೆ. ಸರಿ ಮಾವ, ಅವರು ಆಫೀಸ್‍ ಮೀಟಿಂಗ್‌ನಲ್ಲಿ ಇರ್ತಾರೆ, ಈಗ ಫೋನ್ ಎತ್ತೋದಿಲ್ಲ, ಆಮೇಲೆ ನಾನೇ ಫೋನ್ ಮಾಡ್ತೇನೆ, ಹೇಗೂ ಅವರು ಬರೋರಿದ್ರು, ನಾನೂ ಬರ್ತೇನೆ ಅಂದ್ಲು, ಇವಳು ನಿನಗೆ ಹೇಳ್ಲೇ ಇಲ್ಲವಾ?’ ಅಂದ ಅಪ್ಪ. ಅವಳೇ ಅವನತ್ತ ತಿರುಗಿ ಹೇಳಿದಳು- ‘ನೀವು ಟೆನ್ಶನ್ ಮಾಡ್ಕೋತೀರಿ ಅಂತ ಹೇಳ್ಲಿಲ್ಲರಿ..’
ಆತ ಆ ಕ್ಷಣಕ್ಕೆ ಕುಸಿದು ಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.