ADVERTISEMENT

ಕಥೆ: ಮೈನಾ

ಮುನವ್ವರ್ ಜೋಗಿಬೆಟ್ಟು
Published 5 ಜೂನ್ 2021, 19:30 IST
Last Updated 5 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದು ಶಾಂತ ಸಂಜೆ, ಸದಾ ಜನಜಂಗುಳಿಯಿಂದ ಕೂಡಿರುವ ಮಂಗಳೂರು ಪಟ್ಟಣದಲ್ಲಿ ಪ್ರಶಾಂತತೆ ಹುಡುಕಿಕೊಂಡು ಆ ಬೈಕ್ ಚಲಿಸುತ್ತಿತ್ತು. ಅತ್ತಾವರ ದಾಟಿ ಬಂದ ಬೈಕ್ ಅಲ್ಲಲ್ಲಿ ನಿಂತು ಮತ್ತೆ ಹೊರಡುತ್ತಿತ್ತು. ರಸ್ತೆ ಬದಿಯ ತಣ್ಣನೆ ನೆರಳಿರುವ ಒಂದು ವಿಶಾಲ ಮರ ಕಂಡರೂ ನಿಧಾನವಾಗುತ್ತಾ, ಹತ್ತಿರದಲ್ಲಿರುವ ಯಾವುದಾದರೂ ಪಾನ್ ಬೀಡಾದ ಸಣ್ಣ ಗೂಡಂಗಡಿಗಳನ್ನು ಕಂಡರೆ ಸಾಕು, ಮತ್ತೆ ಬೈಕು ದುಮುದುಮಿಸುತ್ತಿತ್ತು. ಬೇಗನೆ ರಾತ್ರಿಯಾಗುತ್ತಿದ್ದರಿಂದಲೋ ಏನೋ, ದೂರದ ಹಿರಿದಾದ ಕಟ್ಟಡವೊಂದು ಆಗಸದ ಕೆಂಪು ಚೆಂಡನ್ನು ಅದಾಗಲೇ ಭಾಗಶಃ ನುಂಗಿ ಬಿಟ್ಟಿತ್ತು. ಕೊನೆಗೆ ಆ ಒಂಟಿ ಸವಾರನಿರುವ ಬೈಕ್ ನಿಂತಿದ್ದು, ಮಿಲಾಗ್ರೇಸ್ ಚರ್ಚು ಬಳಿ.

ಚರ್ಚಿನ ಗೇಟಿಗೆ ಅಂಟಿಕೊಂಡಂತಿದ್ದ ಒಂದು ಸಣ್ಣ ಕೈದೋಟ. ಇಡೀ ಮಂಗಳೂರು ಪಟ್ಟಣವೇ ಬ್ಯುಸಿಯಲ್ಲಿ ಹೊಯ್ದಾಡುತ್ತಿದ್ದರೂ, ಅದೊಂದು ಜಾಗ ಮಾತ್ರ ಮೌನ ಮುರಿಯದೆ ಗಮ್ಯವಾದಂತೆ ಕೂತು ಬಿಡುತ್ತಿತ್ತು. ಆ ಸ್ಫುರದ್ರೂಪಿ ಬೈಕ್ ಸವಾರ ತಿರುಗುವ ಗೇಟು ದಾಟಿ ಆ ಹಸಿರು ಉದ್ಯಾನದೊಳಗೆ ಹೊಕ್ಕ‌. ಆ ಸಣ್ಣ ಕೈದೋಟ ಆ ಪಟ್ಟಣದ ಅತ್ಯಂತ ಶಾಂತ ಪರಿಸರದಂತೆ ಭಾಸವಾಗಿರಬೇಕು ಅವನಿಗೆ. ಕಣ್ಣಲ್ಲಿದ್ದ ಕಪ್ಪು ಕನ್ನಡಕ ಸರಿಸಿ ಆತ ಸುತ್ತಲೂ ನೋಡುತ್ತಾ ನಿಂತ. ಆ ಹೂದೋಟ ತುಂಬಾ ವಯೋವೃದ್ಧರ ದಂಡು. ಹೆಚ್ಚಿನವರೂ ಇಳಿ ವಯಸ್ಸಿನಲ್ಲಿ ಹೆಂಡತಿ ತೀರಿಕೊಂಡು, ತಮ್ಮನ್ನು ಏಕಾಂತತೆಗೆ ದೂಡಿದ ವಿಧಿಯನ್ನು ಹಳಿಯುತ್ತಿದ್ದವರು. ಹತ್ತಿರದಲ್ಲಿದ್ದ ಕಲ್ಲು ಬೆಂಚಿನಲ್ಲಿ ಆತ ಕುಳಿತುಕೊಂಡ. ಇಳಿಬಿದ್ದ ಆ ನೀಳ ಕೂದಲನ್ನು ಒಮ್ಮೆ ಮುಖದಿಂದ ಸರಿಸಿದ‌. ತೆಳುವಾದ ಗಡ್ಡ, ತುದಿ ಚೂಪಾದ ನೀಳ ಮೂಗು. ಜೀನ್ಸು ಷರಾಯಿಗೆ ಅಂಟಿಕೊಂಡಂತಿದ್ದ ವುಡ್‌ಲ್ಯಾಂಡ್ ಶೂಗಳು. ಈ ಮಧ್ಯೆ ಅವನ ಕಲ್ಲು ಬೆಂಚಿನ ದಾರಿಯಲ್ಲಿ ಹಾದು ಹೋದ ಹೆಣ್ಣು ಜೀವವೊಂದು ಆತನೆಡೆಗೆ ದಿಟ್ಟಿ ಹಾಯಿಸಿದ್ದು ಕಡೆಗಣ್ಣಿನಿಂದಲೇ ಆತ ಗಮನಿಸಿದ. ಯಾವುದೋ ಕವಿತೆ ಹುಟ್ಟಿ ಮಾಯವಾಗುವ ಸನ್ನಾಹದಲ್ಲಿತ್ತು. ಮುಳುಗುವ ಸೂರ್ಯನೆಡೆಗೆ ಮುಖ ಮಾಡಿ ಆತ ನೆನಪಿನ ಪಾತಾಳಕ್ಕೆ ಬಿದ್ದ.

‘ಲೆಟ್ಸ್ ಬ್ರೇಕಪ್, ಸೈನ್ ಇಟ್ ರೋಶನ್?’ ಎಂದು ಟೇಬಲ್ ಕುಕ್ಕಿದ ಫ್ಲವಿಟಾಳ ಧ್ವನಿಯಲ್ಲಿ ಹಿಂದಿನ ಯಾವ ಕಕ್ಕುಲಾತಿಯೂ ಇರಲಿಲ್ಲ. ಹೀಗೆ ಹೇಳಿದ್ದು ಅವಳು ನಾಲ್ಕನೇ ಬಾರಿ. ಸದಾ ಆ ಜಗಳಗಂಟಿ ಬದುಕಿನಲ್ಲೂ ಅವಳನ್ನು ಸಹಿಸುತ್ತಾ, ಅವಳನ್ನು ಬಿಟ್ಟು ಕೊಡಲಾಗದೆ, ಆ ಪ್ರೀತಿಯ ದಿನಗಳನ್ನು ನೆನಪಿಸುತ್ತಾ ಜಗಳ ಮರೆತು ಬಿಡುತ್ತಿದ್ದವನಿಗೆ ಅವಳ ಮೂರನೇ ಬಾರಿಯ ಡಿವೋರ್ಸು ಕೋರಿಕೆಯನ್ನು ತಳ್ಳಿಯಾಗಿತ್ತು. ಒಂದು ಸಹಿಯಲ್ಲೇ ಪ್ರಾರಂಭಿಸಿದ್ದ ಸಂಬಂಧ, ಮುಗಿದು ಬಿಡುತ್ತಿದ್ದ ಆ ದಾಂಪತ್ಯ ಅವನಿಗೆ ಬಿಟ್ಟುಕೊಡಲು ಮನಸ್ಸು ಬಾರದು. ಎಂಜಿನಿಯರಿಂಗು ಜೊತೆಯಾಗಿ ಕಲಿತಿದ್ದ ಇಬ್ಬರೂ ಪ್ರೀತಿಸಿದ್ದು ಬರೋಬ್ಬರಿ ಏಳು ವರ್ಷ. ಪ್ರೇಮ ವಿವಾಹಕ್ಕೆ ಮನೆಯಲ್ಲಿ ಮಣೆ ಹಾಕದಿದ್ದಾಗ ಇಬ್ಬರೂ ರಿಜಿಸ್ಟ್ರು ಮಾಡಿಕೊಂಡು, ಅಲೋಶಿಯಸ್ ಚರ್ಚಿನಲ್ಲಿ ತೆರಳಿ ಮದುವೆ ಮುಗಿಸಿದ್ದರು. ಅನ್ಯೋನ್ಯತೆಯಿಂದಿದ್ದ ದಂಪತಿಗೆ ಕಂಟಕವಾಗಿದ್ದು ಅವಳ ಫಾರೀನ್ ಬದುಕಿನ ಕನಸು. ರೋಶನ್‌ಗೆ ತಾಯ್ನಾಡಲ್ಲೇ ಬದುಕು ಕಟ್ಟಿಕೊಳ್ಳುವುದೆಂದರೆ ಇಷ್ಟ. ಯಾವ ಕಷ್ಟಕ್ಕೂ ವಿದೇಶದಲ್ಲಿ ಹೋಗಿ ದುಡಿಯಕೂಡದೆಂದು ಹೇಳುವ ಆತನ ಒಳ ಮನಸ್ಸು. ಇದೇ ಕಾರಣಕ್ಕೆ ಕೆಲಸ ಮಾಡುವ ಕಂಪೆನಿಯಲ್ಲಿ ಜರ್ಮನಿಗೆ ವೀಸಾ ಬಂದಿದ್ದಾಗ ತಿರಸ್ಕರಿಸಿಬಿಟ್ಟಿದ್ದ. ಅದು ಗೊತ್ತಾದದ್ದೇ ಮನೆಯಲ್ಲಿ ಫ್ಲಿವಿಟಾಳ ರಣರಂಪ ಪ್ರಾರಂಭವಾಗಿತ್ತು‌. ಅನ್ಯೋನ್ಯತೆ ಮುರಿದು ಬಿತ್ತು. ಸಣ್ಣ ಪುಟ್ಟ ವಿಷಯಕ್ಕೂ ಚಕಾರವೆತ್ತತೊಡಗಿದ್ದಳು.

ADVERTISEMENT

ಅವಳು ಜಗಳವಾರಂಭಿಸಿದರೆ, ರೋಶನ್ ಸುಮ್ಮನಾಗಿಬಿಡುತ್ತಿದ್ದ. ‘ತಲೆ ಕೆಟ್ಟವರೊಂದಿಗೆ ಏನು ಜಗಳ’ ಎಂದು ಅವಳು ಮಾತು ಬಿಟ್ಟಿದ್ದಳು.

ಆ ದಿನ ಅವರಿಬ್ಬರ ಆನಿವರ್ಸರಿ‌. ಮಾತು ಬಿಟ್ಟು ಸುಮಾರು ದಿನವೂ ಆಗಿತ್ತು. ಬೇರೆಬೇರೆ ರೂಮಿನಲ್ಲಿ ಮಲಗುವುದು ರೂಢಿಯಾಗಿತ್ತು. ಆಫೀಸು ಬಿಟ್ಟು ಬೇಗ ಬಂದ ರೋಶನ್ ಮನೆ ತುಂಬಾ ಬಲೂನು ಕಟ್ಟುತ್ತಿದ್ದ. ‘ಬ್ಲಾಕ್ ಫಾರೆಸ್ಟ್’ ಕೇಕ್ ಆರ್ಡರ್ ಮಾಡಿದ್ದ. ಸಂಜೆಯ ಹೊತ್ತಿ ‘ಬೆಬ್ಬೆಬ್ಬೆ..’ ಎಂದು ಅರಚುತ್ತಿದ್ದ ಅಟೋ ನಿಂತ ಸದ್ದಾಯಿತು. ಅಟೊ ಶಬ್ದ ತಣ್ಣಗಾಗುತ್ತಿದ್ದಂತೆ ಮೆಟ್ಟಿಲಿನಲ್ಲಿ ಹೈ ಹೀಲ್ಡ್ ಚಪ್ಪಲಿಯ ‘ಟಕ್, ಟಕ್’ ಸದ್ದು ಹತ್ತಿರವಾಗತೊಡಗಿತು. ರೋಶನ್ ಹೇಗೆ ವಿಶ್ ಮಾಡುವುದೆಂದೇ ತಿಳಿಯದವನಂತೆ ಸುಮ್ಮನೆ ಮೂಲೆಯಲ್ಲಿ ನಿಂತ. ‘ಟಕ್, ಟಕ್’ ಎಂದು ಬಾಗಿಲು ಬಡಿದಂತೆ ಹೋಗಿ ತೆರೆದ. ಅವಳ ಮುಖದಲ್ಲಿ ಮಂದಹಾಸವಿತ್ತು. ‘ಫ್ಲವೀ ಹ್ಯಾಪಿ ಆನಿವರ್ಸರಿ’ ಅಂದ. ಅವಳೇನೇನೂ ಪ್ರತಿಕ್ರಿಯಿಸಲಿಲ್ಲ. ಹೆಗಲ ಬ್ಯಾಗನ್ನು ಸೋಫಾಕ್ಕೆಸೆದು ಬೇಸಿನ್ ಕಡೆ ನಡೆದಳು. ರೋಶನ್ ನಿರಾಸೆಯಿಂದ ಕುಸಿದ.

‘ರೋಶನ್, ನನಗೆ ನೆದರ್ಲೆಂಡ್ ವೀಸಾ ಬಂದಿದೆ, ಈ ತಿಂಗಳ ಕೊನೆಗೆ ಹೋಗ್ಬೇಕು. ಜೊತೆಗೆ ಬರ್ತೀಯಾ? ನಾನು ನೆದರ್ಲೆಂಡ್ ಹೋಗ್ತಿದ್ದೇನೆ. ನಾನು ಬೇಕಂದ್ರೆ ನಿನಗೆ ಬರಬಹುದು’ ಎಂದು ಅನಾಮತ್ತಾಗಿ ಹೇಳಿ ಮುಗಿಸಿದಳು. ಎಷ್ಟು ಸಿಟ್ಟು, ಪ್ರತಿಯಾಗಿ ಒಂದು ವಿಶ್ ಕೂಡಾ ಮಾಡಿಲ್ಲ. ಮೂರನೇ ಬಾರಿ ವಿಚ್ಛೇದನಕ್ಕೆ ಸಹಿ ಕೂಡಾ ಹಾಕಲು ಒತ್ತಾಯಿಸಿದ್ದಾಳೆ. ಪ್ರೀತಿ ಅಂದರೆ ಆಸೆಗಳನ್ನು ತ್ಯಾಗ ಮಾಡಬೇಕಂತಲೇ ಅಲ್ಲವೇ. ಅವಳ ಕನಸುಗಳಿಗೆ ನಾನೇಕೆ ಅಡ್ಡಿ ಎಂದು ರೋಶನನ ಸುಸುಪ್ತಿಯೊಂದು ಹಲುಬುತ್ತಿತ್ತು‌. ‘ಇಲ್ಲ‌ ನನಗೆ ಇಲ್ಲಿಂದ ಬಿಟ್ಟು ಬರುವುದು ಇಷ್ಟವಿಲ್ಲ’ ಕಡ್ಡಿ ಮುರಿದಂತೆ ನಿರ್ಧರಿತ ಧ್ವನಿಯೊಂದು ಆ ಮೌನ ಮನೆ ತುಂಬಾ ನೆಲೆಸಿತು. ಮತ್ತದೇ ಮೌನ. ಆ ರಾತ್ರಿ ಕಳೆದು ಬೆಳಗಾದರೆ ಹೀಗೊಂದು ಪತ್ರ ಹಿಡಿದು ಫ್ಲವಿಟಾ ಟೇಬಲಿನ ಎದರು ನಿಂತಿದ್ದಳು‌. ಅಲ್ಲೇ ಬಿದ್ದಿದ್ದ ಪೆನ್ನನ್ನು ಎತ್ತಿ ನಡುಗುವ ಕೈಗಳು ಖಾಲಿ ಗುರುತಿಟ್ಟ ಜಾಗದಲ್ಲೆಲ್ಲಾ ಹೊರಳಿತು. ರೋಶನ್ ಎದ್ದು ರೂಂ ಸೇರಿದ್ದ. ಸ್ವಲ್ಪ ಹೊತ್ತಿನಲ್ಲೇ ಸೂಟ್ ಕೇಸ್ ಎಳೆಯುವ ಸದ್ದು, ಕಪಾಟು ಬಾಗಿಲುಗಳ ಎಳೆದು ತೆರೆದು ಹಾಕುವ ಸದ್ದು ಕೇಳುತ್ತಲೇ ಇತ್ತು. ಒಂದರ್ಧಗಂಟೆಯ ಹೊತ್ತಿಗೆ ಎಲ್ಲವೂ ತಣ್ಣಗಾಗಿ ಮತ್ತೆ ಹೈ ಹೀಲ್ಡ್ ಚಪ್ಪಲಿ ‘ಟಕ್-ಟಕ್’ ಸದ್ದು ಮೆಟ್ಟಿಳಿದಂತೆ ದೂರವಾಗತೊಡಗಿತ್ತು.

***

‘ಎಲ್ಲಿ ಆರಂಭವಾಯಿತು, ಎಷ್ಟು ಬೇಗ ಮುಗಿಯಿತು’ ಎಂದು ಚಿಂತಿಸುವಷ್ಟರಲ್ಲೇ ಅವಳು ಹೊರಟು ಮೂರು ದಿನ ಕಳೆದಿತ್ತು. ಮನದೊಳಗೆ ದುಗುಡ ಮನೆಮಾಡುತ್ತ ಹೊರಟವನಿಗೆ ತಬ್ಬಿ ಸಂತೈಸಲು ಉಳಿದ್ದದ್ದು ಸದ್ಯ ಇದೇ ಕೈತೋಟ. ರೋಶನ್ ನಿಟ್ಟುಸಿರೆಳೆದ. ಆಕಾಶಕ್ಕೆ ಅದಾಗಲೇ ಸಂಜೆಯ ಹೋಳಿಯ ಬಣ್ಣವನ್ನು ಬಳಿಯಲಾಗಿತ್ತು. ಸುತ್ತಲೂ ಲೈಟು ಕಂಬಗಳು ಜೀವ ಬಂದಂತೆ ಬೆಳಕು ಚೆಲ್ಲತೊಡಗಿದವು. ಹತ್ತಿರದ ಆ ಒಂಟಿ ಗುಲ್ಮೋಹರಿನ ಮರವನ್ನು ರೋಶನ್ ನೋಡುತ್ತಾ‌ ನಿಂತ. ಕಾಲಬುಡದಲ್ಲಿ ಹೂ ಹರಡಿ ನಿಂತಿದ್ದ ಅದು ಇನ್ನಷ್ಟು ಸೆಳೆಯುವಂತಿತ್ತು. ಅಷ್ಟರಲ್ಲೇ ಅದರ ಬುಡದಲ್ಲಿ ಹೂವಿನ ಪಕಳೆಗಳೊಂದಿಗೆ ಕಂದು ಬಣ್ಣದ ಅದೇನೋ ಚಡಪಡಿಸುತ್ತಿರುವ ಕಂಡಿತು. ಕುತೂಹಲದಿಂದ ರೋಶನ್ ಅದರ ಬಳಿ ತೆರಳಿದ.

ಹಳದಿ ಕೊಕ್ಕಿನ ರೆಕ್ಕೆಯಲ್ಲಿ ಸ್ವಲ್ಪ ಬಿಳಿ ಬಳಿದಂತಿರುವ ಹಕ್ಕಿ‌ ‘ಮೈನಾ’. ಅವನಿಷ್ಟದ ಹಕ್ಕಿ. ಅದರ ಕಾಲಿಗೇನೋ ಗಾಯವಾಗಿ ನೆಲದಲ್ಲಿ ಬಿದ್ದಿದೆ. ಯಾರೋ ಹುಡುಗರು ಕಲ್ಲು ಹೊಡೆದು ಹಾಕುವಾಗ ಆದ ಗಾಯದಂತೆ ಢಾಳಾಗಿ ಗೋಚರಿಸುತ್ತಿತ್ತು. ಹತ್ತಿರದಲ್ಲೇ ಮಣ್ಣು ಹೂಜಿಯಿಂದ ಸ್ವಲ್ಪ ನೀರು ಸಿಂಪಡಿಸದಾಗ ಸಣ್ಣಗೆ ಚೇತರಿಸಿಕೊಂಡಂತೆ ಕುಳಿತುಕೊಂಡಿತು. ರೋಶನ್ ಬಾಗಿ ಹಕ್ಕಿಯನ್ನು ಹಿಡಿದುಕೊಂಡ. ಅದು ರೆಕ್ಕೆ ಬಿಚ್ಚಿ ಹಾರಲು ತ್ರಾಣವಿಲ್ಲದೆ ಅವನ ಕೈಗಳೊಳಗೆ ಬೆಚ್ಚಗೆ ಕುಳಿತುಕೊಂಡಿತು. ಮೆಲ್ಲಗೆ ಅದನ್ನು ಅಲ್ಲೇ ಬಿದ್ದಿದ್ದ ರಟ್ಟಿನ ಪೆಟ್ಟಿಗೆಯಲ್ಲಿ ಕೂಡಿ ಸೀದಾ ಮನೆಗೆ ಕರೆದುಕೊಂಡು ಬಂದ. ‘ಮೈನಾ’ ಹಕ್ಕಿ ಅಂದರೆ ರೋಶನ್‌ಗೆ ಬಹಳವೇ ಇಷ್ಟ. ಅವುಗಳ ಆಗು, ಹೋಗುಗಳ ಬಗ್ಗೆ ಓದಿ ತಿಳಿದುಕೊಂಡ ಬಳಿಕ ಅವುಗಳನ್ನು ಬಹುವಾಗಿಯೇ ಪ್ರೀತಿಸುತ್ತಿದ್ದ. ನೇತ್ರಾವತಿ ನದಿ ದಡದಲ್ಲಿ ಹೆಚ್ಚಿರುವ ಇವುಗಳನ್ನು ನೋಡಲಿಕ್ಕಾಗಿಯೇ ಹೊಳೆದಂಡೆ ಬಳಿಗೆ ಹೋಗುತ್ತಿದ್ದ. ಫ್ಲವಿಟಾಳನ್ನು ಕೆಲವೊಮ್ಮೆ ಪ್ರೀತಿಯಿಂದ ‘ಮೈನಾ’ ಅಂತಲೇ ಕರೆಯುತ್ತಿದ್ದ. ಮನೆಗೆ ತಂದವನಲ್ಲಿ ಬಾಲ್ಕನಿಯಲ್ಲಿರಿಸಿ ಸ್ವಲ್ಪ ನೀರು ಅಕ್ಕಿ ಕಾಳುಗಳು, ಅವುಗಳು ತಿನ್ನುವ ಕಾಡು ಹಣ್ಣುಗಳನ್ನು ತಂದಿಟ್ಟ. ಕಾಲಿಗೆ ಪೆಟ್ಟಾಗಿದ್ದ ಮೈನಾ ಮೆಲ್ಲಗೆ ಚೇತರಿಸಿಕೊಳ್ಳತೊಡಗಿತು. ಮೊದಲ‌ ದಿನ ಯಾವ ಹಣ್ಣು, ನೀರು ಮುಟ್ಟದಿದ್ದರೂ, ಎರಡನೇ ದಿನಕ್ಕೆ ಸ್ವಲ್ಪ ಚೇತರಿಸಿಕೊಂಡು ಮೆಲ್ಲಗೆ ನಡೆದಾಡತೊಡಗಿತು. ಸಂಪೂರ್ಣ ಸುಧಾರಿಸುವಾಗ ಒಂದು ವಾರ ಹಿಡಿಯಿತು. ಅಷ್ಟರಲ್ಲೇ ರೋಶನನ್ನೂ‌ ಪರಿಚಯ ಮಾಡಿಕೊಂಡು ಬಿಟ್ಟಿತ್ತು. ಮನೆಯ ಬಾಲ್ಕನಿ ತುಂಬಾ ಕುಂಟುತ್ತಾ ನಡೆದಾಡುತ್ತಿದ್ದ ಹಕ್ಕಿ ಸಣ್ಣಗೆ ಗಾಯ ಗುಣವಾಗುತ್ತಾ ಹಾರಾಡುತ್ತಿತ್ತು. ಕೈಯಲ್ಲಿ ಕಾಳುಗಳಿನ್ನಿರಿಸಿ ರೋಶನ್ ಕರೆದರೆ ಹಾರಿ ಬಂದು ಕೈಯಿಂದ ಹೆಕ್ಕಿ ತಿನ್ನತೊಡಗಿತು. ಫ್ಲವಿಟಾ ಹೋದ ಬಳಿಕ ಏಕತಾನತೆಗೆ ಸರಿದು ಹೋಗಿದ್ದವನಿಗೆ ಈ ಮೈನಾ ನೋವುಗಳನ್ನು ಮರೆಸಲು ಒಳ್ಳೆಯ ಸಂಗಾತಿಯಾಗತೊಡಗಿತು. ಕೆಲವೊಮ್ಮೆ ಸುಮ್ಮನೆ ಅದರ ಜೊತೆ ಮಾತನಾಡಿದಾಗಲೆಲ್ಲಾ ಪ್ರೀತಿ ಉಕ್ಕಿ ಬರುತ್ತಿತ್ತು. ಅವಳ ಜೊತೆ ಮನ ಬಿಚ್ಚಿ ಕ್ಷಮೆ ಕೇಳಿದಂತೆಯೂ ಆಗುತ್ತಿತ್ತು‌. ತಿಂಗಳು ಕಳೆಯಿತು‌. ರೋಶನ್ಗೆ ಅವಳ ನೆನಪುಗಳು ಮಾಸುತ್ತಿದ್ದಂತೆ, ಆ ಹಕ್ಕಿಗೂ ‘ಫ್ಲವಿಟಾ’ ಎಂದು ನಾಮಕರಣ ಮಾಡಿದ, ಪ್ರೀತಿಯಿಂದ ಅದರ ಕಾಲಿಗೆ ಅದೇ ಹೆಸರನ್ನು ಹಾಕಿದ ಉಂಗುರವೊಂದು ತೊಡಿಸಿದ. ಕ್ರಮೇಣ ಆ ಹೆಸರು ಕರೆದಂತೆಲ್ಲಾ ಅದು ಹಾರಿ ಬರುತ್ತಿತ್ತು‌. ಕಾಡು ಹಕ್ಕಿಯೊಂದು ತೋರುವ ಪ್ರೀತಿ ಅವಳಿಗಾದರೂ ಕೊಡಲಾಗಲಿಲ್ಲವಲ್ಲ ಎಂದೆನಿಸಿದರೆ ಖಿನ್ನನಾಗಿ ಬಿಡುತ್ತಿದ್ದ.

ಅದೊಂದು ಮಸ್ಸಂಜೆ. ಕೆಲಸ ಮುಗಿಸಿ ಬಂದವನಿಗೆ ಹಕ್ಕಿಯು ಕಾಣಲಿಲ್ಲ‌. ಅಲ್ಲೆಲ್ಲಾ ಹುಡುಕಿದ‌. ಎಲ್ಲೂ ಪತ್ತೆಯಿಲ್ಲ. ಹತ್ತಿರದ ಮನೆಗೆ ಬೆಕ್ಕೊಂದು ಬಂದ ಬಳಿಕ ‘ಫ್ಲವಿಟಾ’ ಸ್ವಲ್ಪ ಹೆದರುತ್ತಿತ್ತು. ಇಡೀ ಮನೆಯ ಸುತ್ತಮುತ್ತ ಹುಡುಕಿದರೂ ಸಿಗದ ಫ್ಲವಿಟಾಳ ನಾಲ್ಕೈದು ಪುಕ್ಕಗಳು ಬಾಲ್ಕನಿಯಲ್ಲಿ ಬಿದ್ದಿದ್ದವು. ಹಾಳಾದ ಬೆಕ್ಕಿನ ಹಸಿವಿಗೆ ನನ್ನ ಪ್ರೀತಿಯಾ ‘ಫ್ಲವಿಟಾ’ ಬಲಿಯಾಯಿತಲ್ಲ ಎಂದು ರೋಶನ್ ಕುಪಿತನಾದ. ‌ಅರೆಕ್ಷಣ ಹಾಗೇಯೇ ಕೋಪ ತಣ್ಣಗಾಗಿ, ಅವುಗಳಿಗೇನು ಗೊತ್ತು ನಮ್ಮ ಪ್ರೀತಿಯ ಹಕ್ಕಿ ಎಂದು, ಹಸಿವಾದರೆ ತಿಂದು ಮುಗಿಸುತ್ತದೆ, ಅದಕ್ಕೂ ನಮ್ಮದು ನಿಮ್ಮದೆಂಬ ಸಂಬಂಧಗಳೆಂಬ ಬಂಧನವಿದೆಯೇ ಎಂದನಿಸಿತವನಿಗೆ. ಸುಮ್ಮನೆ ಆರಾಮಕುರ್ಚಿಯ ಮೇಲೆ ಮೈಯ್ಯೊಡ್ಡಿ ಕುಳಿತುಕೊಂಡ. ಏನೋ ಕಳೆದುಕೊಂಡ ಭಾವ ಆವರಿಸುತ್ತಿತ್ತವನಿಗೆ. ಈಸಿ ಚಯರಿನಲ್ಲಿ ಕಣ್ಣು ಮುಚ್ಚಿದರೆ ವಿಕಾರ ರೂಪದ ಬೆಕ್ಕೊಂದು ಹಕ್ಕಿಯನ್ನು ಹಿಡಿದು ತಿನ್ನುವ ದೃಶ್ಯ. ಅಸಹಾಯಕತೆಯಿಂದ ಅಳುವ ಹಕ್ಕಿಯ ಕೂಗನ್ನು ಕೇಳಿಸಿಕೊಳ್ಳಲಾಗದಷ್ಟು ಬೇಸರ. ಜಗತ್ತು ನಾನು ನಂಬಿದವರನ್ನೇ ಏಕೆ ದೂರ ಮಾಡುತ್ತಿದೆ? ನನ್ನ ಹಣೆಬರಹವೇ ಹೀಗೆಯೇ? ಏನೋನೋ ಯೋಚನೆಗಳು ಸುಳಿದವು‌. ತಣ್ಣೀರಲ್ಲೇ ಸ್ನಾನ ಮಾಡಿದ. ಅಲ್ಲಲ್ಲಿ ಹುಡುಕಿದ. ಹಳೆಯ ಫೋಟೋಗಳನ್ನು ತಡಕಾಡಿದ. ಒಂದಿಷ್ಟು ಸಮಯ ಜೋರಾಗಿ ಅತ್ತ. ನಿದ್ದೆಯಿಲ್ಲದ ರಾತ್ರಿಗಳು, ದಿಂಬಿನ ಜೊತೆ ಗುದ್ದಾಡಿದ. ಬೆಳಗಾದರೆ ನೀರಸ ಸೂರ್ಯೋದಯ. ಕಾಡುವ ಸೂರ್ಯಾಸ್ತಮಾನಗಳು. ಆತ್ಮಹತ್ಯೆಗೆ ಪ್ರಯತ್ನಿಸೋಣವೇ? ಬೇಡ, ಬದುಕಲು ಅಷ್ಟೊಂದು ಹೇಡಿಯಾಗಬಾರದು. ಸುಮ್ಮನೆ ಓದಿದ ಪತ್ರಿಕೆಗಳನ್ನು ಮತ್ತೆ ಓದಿದ. ಡೈರಿಯಲ್ಲಿ ಬರೆದ ಹಳೆಯ ಕವಿತೆಗಳನ್ನು ಮತ್ತೆ ಓದಿದ. ಹೇಗೂ ಹತ್ತು ದಿನ ಕಳೆದ. ಆ ದಿನ ಮುಂಜಾನೆ ಎದ್ದವನೇ ಸೀದಾ ಟ್ರಾನ್ಸ್‌ಫೋರ್ಟ್‌ ಆಫೀಸಿಗೆ ತೆರಳಿದ. ನೆದರ್ಲೆಂಡ್ ವಿಸಿಟಿಂಗ್ ವೀಸಾವೊಂದಕ್ಕೆ ಅರ್ಜಿ ಹಾಕಿದ. ಮತ್ತೆ ಸಂಜೆವರೆಗೂ ಮನೆ, ಮತ್ತೆ ಕಡಲ ಬದಿ, ಮಧ್ಯರಾತ್ರಿಯವರೆಗೂ ಒಬ್ಬನೇ ಕುಳಿತು ತೆರೆಗಳನ್ನೆಣಿಸಿ ಮತ್ತೆ ಹಿಂತಿರುಗುತ್ತಿದ್ದ. ಒಂದು ತಿಂಗಳು ಹೇಗೆ ದೂಡಿದನೋ ಗೊತ್ತಿಲ್ಲ. ಅಷ್ಟರಲ್ಲೇ ಚಳಿಗಾಲ ಮುಗಿದು ಬೇಸಿಗೆ ಆರಂಭಗೊಳ್ಳುವುದರಲ್ಲಿತ್ತು. ದಿನವೂ ವಿಚಾರಿಸುತ್ತಿದ್ದ ವೀಸಾ ಬಂತು. ಒಂದು ವಾರದೊಳಗಾಗಿ ಟೀಕೆಟ್ ಮಾಡಿಕೊಂಡು, ಭಾವಶೂನ್ಯನಾಗಿ ಲೋಹದ ಹಕ್ಕಿಯೇರಿದ.

****

ನೆದರ್ಲೆಂಡಿನ ವಿಮಾನ ನಿಲ್ದಾಣ. ಹಾಯೆನಿಸುವ ಆಕಾಶ ಅಲ್ಲಲ್ಲಿ ತಲೆಯೆತ್ತಿ ನಿಂತ ಗಗನಚುಂಬಿ ಕಟ್ಟಡಗಳು. ಸುತ್ತಲೂ ಅವರವರೇ ನೆಟ್ಟು ಸಮೃದ್ಧವಾಗಿ ಬೆಳೆಸಿದ ಮರಗಳು. ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಬಿಳಿಯಾದ ಮನುಷ್ಯರು. ನಡುನಡುವೆ ಅಕ್ಷರಗಳನ್ನು ನುಂಗಿಕೊಂಡು ಮಾತನಾಡುವ ಅವರ ಇಂಗ್ಲಿಷ್. ಏರ್‌ಪೋರ್ಟ್‌ನಿಂದಿಳಿದು ಇಮಿಗ್ರೇಶನ್ ಮುಗಿಸಿದವನಿಗೆ ಟ್ಯಾಕ್ಸಿಗಳು ತಯ್ಯಾರಿದ್ದವು. ಹೆಚ್ಚಿನವರು ಹೊರದೇಶದ ಚಾಲಕರು, ಟ್ಯಾಕ್ಸಿ ಚಲಾಯಿಸಿ ಬದುಕು ಕಟ್ಟುವವರು. ರೋಶನ್ ಒಬ್ಬಾತ ಗಡ್ಡಧಾರಿಯನ್ನು ಕರೆದ, ಸೌಮ್ಯವಾಗಿ ಹತ್ತಿರ ಬಂದವನು, ಅವನ ಲಗೇಜ್‌ಗಳನ್ನೆಲ್ಲಾ ಎತ್ತಿ ಇರಿಸಿದ. ‘ಸರ್, ವೇರ್ ಕ್ಯಾನ್ ಡ್ರಾಪ್ ಯು?’ ಅಂದ. ಗೂಗಲಿನಲ್ಲಿ ಹುಡುಕಿದ ರೋಶನ್ ಸ್ವಲ್ಪ ದೂರವಿದ್ದ ‘ಇಂಡಿಗೋ ಹೋಟೇಲ್’ ಎಂದು ಹೇಳಿದ. ರೋಶನ್‌ಗೂ ಎಲ್ಲಿಗೆ ತೆರಳಬೇಕೆಂಬ ಗೊತ್ತು ಗುರಿಯೂ ಇರಲಿಲ್ಲ. ಟ್ಯಾಕ್ಸಿ ಹೊರಟಿತು. ಪಟ್ಟಣ ದಾಟಿ ಒಂದು ಸಣ್ಣ ತಿರುವು ಪಡೆದು ಟ್ಯಾಕ್ಸಿ ಆ ಕಡೆಗೆ ಹೊರಟಿತು. ಓಕ್ ಮರಗಳಿಂದ ತುಂಬಿದ್ದ ಆ ಹಸಿರು ಪರಿಸರ ಹೊಸ ಅನುಭೂತಿಯನ್ನೇ ನೀಡುತ್ತಿತ್ತು. ಟ್ಯಾಕ್ಸಿಯಲ್ಲಿರಿಸಿದ್ದ ಹಿಂದಿ ಹಾಡು, ಅವನ ಗಡ್ಡ, ಕಾರಿನ ಎದುರು ಬದಿಯಲ್ಲಿದ್ದ ಜಪಮಾಲೆ ಎಲ್ಲವನ್ನೂ ನೋಡುತ್ತಿದ್ದರೆ ಆತನೊಬ್ಬ ಪಾಕಿಸ್ತಾನಿಯಂತೆ ತೋರುತ್ತಿದ್ದ. ಸಂಯಮದಿಂದ ಗಾಡಿ ಚಲಾಯಿಸುತ್ತಿದ್ದ. ‘ಮಿಸ್ಟರ್, ಇಲ್ಲಿ ಹತ್ತಿರದಲ್ಲಿ ಯಾವುದಾದ್ರೂ ಪಾರ್ಕ್ ಸಿಗಬಹುದೇ?’ ಎಂದು ಕೇಳಿದ‌.

‘ಗೊತ್ತಿಲ್ಲ ಭಾಯ್ ಸಾಬ್! ಇಲ್ಲಿ ನನಗೆ ಅಷ್ಟು ಪರಿಚಯವಿಲ್ಲ. ನಾನು ಪಾಕಿಸ್ತಾನದವನು. ಇಲ್ಲಿ ಬಂದು ಬರೀ ಆರು ತಿಂಗಳಷ್ಟೇ ಆಗಿದೆ’ ಅಂದ. ಮುಂದೆ ರೋಶನ್‌ಗೆ ಮಾತನಾಡಬೇಕು ಅನಿಸಲಿಲ್ಲ. ‘ಫ್ಲವಿಟಾಳ ಮುಖವೊಮ್ಮೆ ದರ್ಶನವಾದರೆ ಸಾಕು’ ಮತ್ತೆ ಹಿಂತಿರುಗಿ ಭಾರತಕ್ಕೆ ಬರಬೇಕೆಂದು ಕಟಿಬದ್ಧನಾಗಿ ತೀರ್ಮಾನಿಸಿದ್ದ. ಅಗಲವಾದ ರಸ್ತೆ ಸುತ್ತಲೂ ಹಸಿರು ಸಾಮ್ರಾಜ್ಯ. ಕಪ್ಪು ರಸ್ತೆಯ ಮೇಲೆ ಗೀರೆಳೆದ ಬಿಳಿ ಝೀಬ್ರಾ ಕ್ರಾಸಿಂಗ್‌ಗಳು ಕಣ್ಣು ಕುಕ್ಕುತ್ತಿದ್ದವು. ವೇಗವಾಗಿ ಚಲಿಸುತ್ತಿರುವ ವಾಹನಗಳು. ಸಿಗ್ನಲ್‌ಗಳಲ್ಲಿ ಹಸಿರು ದೀಪಕ್ಕಾಗಿ ಕಾದು ಹೊರಡುವ ಶಿಸ್ತುಬದ್ಧ ಚಾಲಕರು. ನೆದರ್ಲೆಂಡ್ ಒಂದು ಕನಸಿನ ರಾಷ್ಟ್ರದಂತೆ ಅನಿಸತೊಡಗಿತು. ಡಿವೋರ್ಸ್ ಪಡೆದು ಹೊರಟ ‘ಫ್ಲವಿಟಾ’, ದಿಢೀರನೆ ಕಣ್ಮರೆಯಾದ ಮೈನಾ ಎಲ್ಲ ನೆನಪುಗಳು ಭಾರಗೊಳಿಸುತ್ತಿದ್ದವು. ಅಚಾನಕ್ಕಾಗಿ ರಸ್ತೆಯ ಬದಿಯಲ್ಲಿ ಸಣ್ಣ ಚರ್ಚು ದೂರದಿಂದಲೇ ಕಾಣತೊಡಗಿತು. ಒಂದಿಷ್ಟು ಜನರು ಅಲ್ಲೆಲ್ಲಾ ಓಡಾಡುತ್ತಿದ್ದರು ಚರ್ಚಿನ ಹತ್ತಿರ ಸಾಗಬೇಕಾದರೆ ರೋಶನ್ ಚಾಲಕನಲ್ಲಿ ನಿಲ್ಲಿಸಲು ಕೇಳಿಕೊಂಡ‌. ಅದೇನನಿಸಿತೋ ಅವನಿಗೆ ಚರ್ಚ್ ಬಳಿಯೇ ಇಳಿದುಬಿಟ್ಟ. ಚರ್ಚಿಗೆ ಹೋಗಬೇಕೆಂದು ಮನಸ್ಸು ಹೇಳಲಿಲ್ಲ. ಲಗೇಜು ಹೊತ್ತುಕೊಂಡು ಸೀದಾ ಚರ್ಚ್ ಬಳಿಯ ಸಿಮೆಟರಿ ಬಳಿ ತೆರಳಿದ.

ಅದೊಂದು ಪ್ರಶಾಂತ ಸಿಮೆಟೆರಿ. ಭವ್ಯ ಕಲ್ಲುಗಳಿಂದ ಕಟ್ಟಿದ ಸಾಕಷ್ಟು ಗೋರಿಗಳು. ಅನಾಥ ಹೂಗುಚ್ಫಗಳ ರಾಶಿ. ಪೀಟರ್, ಜೋಸೆಫ್, ಆಡಂ ಥರಾವರಿ ಹೆಸರುಗಳು. ಅಲ್ಲಲ್ಲಿ ಬೆಳೆದ ವಿಶಾಲ ಮರಗಳು ತಂಪೆರೆಯುವ ಗಾಳಿ.

ಅದಾಗಲೇ ಯಾರದೋ ಅಂತಿಮ ಸಂಸ್ಕಾರ ನಡೆಯುತ್ತಿತ್ತು. ಒಂದಷ್ಟು ಕುಟುಂಬಿಕಸ್ಥರು ನೆರೆದಿದ್ದರಿರಬೇಕು. ಪೋಪ್ ಒಬ್ಬ ಬೈಬಲ್ ಓದುತ್ತಾ ಹೊಸ ಗೋರಿಯ ಮೇಲೆ ನೀರು ಚಿಮುಕಿಸುತ್ತಿದ್ದ. ನೆರೆದಿದ್ದ ಅಷ್ಟೂ ಮಂದಿ ‘ಆಮೀನ್’ ಎಂದು ಉದ್ಗರಿಸುತ್ತಿದ್ದ. ಅಷ್ಟೂ ಘಟನೆಗಳು ಜರುಗುತ್ತಿದ್ದರೂ ಮೆಲ್ಲನೆ ಆ ದಪ್ಪನೆಯ ಮರದ ಕಾಂಡದ ಬಳಿ ಕುಳಿತುಕೊಂಡ. ಮೈ ಚೆಲ್ಲಿ ಕಳೆದುದೆಲ್ಲವೂ ಪಡೆಯ ಬೇಕೆನ್ನುವಷ್ಟರಲ್ಲಿ. ‘ಮ್ಯೂ’ ಎನ್ನುವ ಹಕ್ಕಿಯ ಕೂಗು. ಅರೇ, ಎಲ್ಲೋ ಕೇಳಿಸಿಕೊಂಡಿದ್ದೇನಲ್ಲಾ ಅನ್ನಿಸತೊಡಗಿತು. ಮರಗಳನ್ನೇ ನೋಡುತ್ತಿದ್ದಂತೆ ಆ ಕಂದು ಬಣ್ಣದ ಹಕ್ಕಿ ಹತ್ತಿರದಲ್ಲೇ ಮತ್ತೊಮ್ಮೆ ಗುಬ್ಬಳಿಸಿತು. ಅದು ಮೈನಾ ಹಕ್ಕಿಯೆಂದು ಯಾವ ಸಂಶಯವೂ ಉಳಿದಿರಲಿಲ್ಲ. ರೋಶನ್ ಅವಾಕ್ಕಾಗಿ ಎದ್ದು ನಿಂತ. ‘ಫ್ಲವಿಟಾ’ ಎಂದು ಕರೆದ. ಹಕ್ಕಿ ಮತ್ತೊಮ್ಮೆ ಗುಬ್ಬಳಿಸಿತು. ಪರಿಸರ ಪ್ರಜ್ಞೆ ಮೈ ಮರೆತು ಇನ್ನೊಮ್ಮೆ ಜೋರಾಗಿ ‘ಫ್ಲವಿಟಾ’ ಎಂದು ಕರೆದ.

ಯಾವುದೋ ಒಂದು ಶವಸಂಸ್ಕಾರ ಮುಗಿಸಿ ಹೊರ ಬರುತ್ತಿದ್ದ ಗುಂಪಿನ ಮಧ್ಯದಿಂದ ಉಣ್ಣೆಯ ಜರ್ಕಿನ್ಸು ತೊಟ್ಟಿದ್ದ ಹೆಣ್ಣು ಜೀವವೊಂದು ರೋಶನ್ ಕಡೆಗೆ ಮುಖ ತಿರುಗಿಸಿತು. ಮತ್ತೆ ನೇರ ನಡೆಯುತ್ತಾ ಆತ ನಿಂತಿದ್ದ ಮರದ ಬಳಿ ಸುಳಿಯಿತು. ಅಷ್ಟರಲ್ಲೇ ಹಕ್ಕಿ ಹಾರಿ ಬಂದು ಆತನ ಮುಂದೆ ಬಂತು. ಕಾಲಿಗೆ ಪ್ರಿತಿಯ ಉಂಗುರ ಹಾಗೆಯೇ ಉಳಿದಿತ್ತು. ಇನ್ನಷ್ಟು ಹಕ್ಕಿಯ ಹತ್ತಿರ ಬಂದ. ಹೌದು ಅವನದೇ ‘ಫ್ಲವಿಟಾ’. ಅವನು ಮತ್ತೊಮ್ಮೆ ‘ಫ್ಲವಿಟಾ’ ಎಂದು ಉದ್ಗರಿಸಿದ‌‌. ಹಕ್ಕಿಯೊಂದು ಖಂಡಾಂತರ ಹೊರಡುವುದರಲ್ಲಿ ಅವನ ಸಂಶಯವೂ ತಿಳಿಯಾದಂತಿತ್ತು. ‘ಪ್ರೀತಿ ಇಷ್ಟನ್ನೂ ನೆನಪಿಡುತ್ತದೆ ಅಂದ ಮೇಲೆ ಅವಳು ಸಿಗದಿರುತ್ತಾಳೆಯೇ, ಅಲ್ವೇನೋ?’ ಎಂದು ಮೈನಾವನ್ನೇ ಕೇಳಿದ‌. ಅದು ಅರ್ಥವಾದಂತೆ ‘ಮ್ಯೂ’ ಎಂದು ತಲೆಯಲ್ಲಾಡಿಸಿತು. ಹಕ್ಕಿನ್ನು ಬೊಗಸೆಯಲ್ಲೆತ್ತಿ ಹೊಸ ಗೋರಿಯ ಕಡೆ ತಿರುಗಿದ. ಆದಾಗಲೇ ಶಿಲುಬೆ ನಾಟಿದ ಗೋರಿಯ ಬದಿಯಲ್ಲಿ ‘ಸೈಮನ್ ಹಸ್ಪೆಂಡ್‌ ಆಫ್ ಫ್ಲವಿಟಾ’ ಎಂದು ಸಣ್ಣ ಬೋರ್ಡು ಹಾಕಲಾಗಿತ್ತು. ಅನತಿ ದೂರದಲ್ಲಿ ನಿಂತಿದ್ದ ಆ ಹೆಣ್ಣು ಜೀವ ಜರ್ಕಿನ್ಸೊಳಗೆ ಮಗುಮ್ಮಾಗಿ ಅಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.