ADVERTISEMENT

ಭಿಕ್ಷೆಯಲ್ಲ, ದಂಡ ವಸೂಲಿ

ಅರುಣ್ ಜೋಳದ ಕೂಡ್ಲಿಗಿ
Published 21 ಡಿಸೆಂಬರ್ 2019, 19:30 IST
Last Updated 21 ಡಿಸೆಂಬರ್ 2019, 19:30 IST
ಕಲೆ: ಭಾವು ಪತ್ತಾರ್
ಕಲೆ: ಭಾವು ಪತ್ತಾರ್   

ಈಚೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಯುವತಿ ಚಪ್ಪಾಳೆ ತಟ್ಟಿ ಕೈಯೊಡ್ಡಿದಳು. ಹತ್ತು ರೂಪಾಯಿ ಕೈಗಿಟ್ಟು ನಿನ್ನ ಗುರು ಯಾರು, ಯಾವ ಮನೆ, ಎಲ್ಲಿ ವಾಸ ಎಂದು ವಿಚಾರಿಸಿದೆ. ತಕ್ಷಣ ಅವಳಿಗೆ ಈ ಮಾತುಗಳು ಅಚ್ಚರಿ ಮೂಡಿಸಿ ತನ್ನ ಪರಿಚಯ ಮಾಡಿಕೊಂಡಳು. ಬೋಗಿಯ ಜನರೆಲ್ಲಾ ನನ್ನನ್ನು ವಿಚಿತ್ರವಾಗಿ ನೋಡಿದರು. ನನ್ನ ಪಕ್ಕ ಕೂತ ವ್ಯಕ್ತಿ ಅವಳನ್ನು ಕೆಕ್ಕರಿಸಿಕೊಂಡು ನೋಡಿದ. ಅವಳೋ ಇದೆಲ್ಲಾ ಮಾಮೂಲು ಎನ್ನುವಂತೆ, ‘ಹೇಯ್ ಮಾಮ ದುಡ್ ಕೊಡದೆ ಇದ್ರೂ ಪರವಾಗಿಲ್ಲ ಮುಖ ಯಾಕೆ ಗಡಗಿ ಮಾಡ್ಕಂಡಿದಿಯಾ? ಚೂರು ನಗು’ ಎಂದು ಗಲ್ಲ ಹಿಂಡಿ, ನನಗೆ ಬರುವುದಾಗಿ ಹೇಳಿ ವನಪು ವಯ್ಯಾರ ಮಾಡುತ್ತಾ ಮುಂದೆ ಹೋದಳು. ಅವಳು ಹಾಕಿದ್ದ ಪರ್‌ಫ್ಯೂಮ್‌ ವಾಸನೆ ಬೋಗಿಯ ತುಂಬಾ ಘಂ ಎನ್ನುವಂತಿತ್ತು.

ನನ್ನ ಪಕ್ಕ ಕುಳಿತಾತ ಸಿಟ್ಟಿನಿಂದ ಕುದಿಯುತ್ತಲೇ ‘ನಿಮ್ಮಂತವರಿಂದಲೇ ಈ ಸೋಮಾರಿಗಳು ಹೆಚ್ಚಾಗುವುದು. ದುಡಿದು ತಿನ್ನೋಕೇನು ದಾಡಿ? ಎಂದ. ತಕ್ಷಣ ‘ಸರ್ ನೀವು ಅವಳಿಗೆ ಒಂದು ಕೆಲಸ ಕೊಡಿಸುವುದಾದರೆ ನಾನು ಈಗಲೇ ಕರಿತೀನಿ’ ಎಂದೆ. ಆತ ನನ್ನನ್ನು ಸಿಟ್ಟಿನಿಂದ ‘ನಾನ್ಯಾಕೆ ಕೊಡಿಸಲಿ, ಅವರೇ ಕೆಲಸ ಹುಡುಕ್ಕೋ ಬೇಕು’ ಎಂದ. ಆಗ ‘ಅಲ್ಲಾ ಸ್ವಾಮಿ, ನಿನ್ನ ಹಾಗೆ ಎಲ್ಲರೂ ಅವರನ್ನು ಹೀಯಾಳಿಸುತ್ತಾ ಕೆಟ್ಟದಾಗಿ ನೋಡಿದರೆ ಕೆಲಸ ಕೊಡೋರು ಯಾರು? ಅವರಿಗೆ ಕೆಲಸ ಮಾಡುವ ಸಾಮರ್ಥ್ಯವಿದೆ. ಆದರೆ ಯಾರೂ ಕೆಲಸ ಕೊಡಲ್ಲ. ಹಾಗಾಗಿ ಅನಿವಾರ್ಯ ಭಿಕ್ಷೆಗೆ ಇಳಿಯುತ್ತಾರೆ. ಅಸಲಿಗೆ ನಾನು ಅವಳಿಗೆ ಕೊಟ್ಟದ್ದು ಭಿಕ್ಷೆಯಲ್ಲ, ಸಮಾಜದ ಒಬ್ಬ ಸದಸ್ಯನಾಗಿ ಸಮಾಜದ ತಪ್ಪಿಗೆ ದಂಡ ಕಟ್ಟಿದ್ದೇನಷ್ಟೆ. ಅವಳೂ ಬೇಡಿದ್ದು ಭಿಕ್ಷೆಯಲ್ಲ, ದಂಡ ವಸೂಲಿ’ ಎಂದೆ. ಆತನಿಗೆ ಇದು ವಿಚಿತ್ರವೆನ್ನಿಸಿತು.

ಹೌದು, ಲಿಂಗಾಂತರಿ ಸಮುದಾಯವನ್ನು ಸಮಾಜ ನವ ಅಸ್ಪೃಶ್ಯರ ನ್ನಾಗಿಸಿದೆ. ಈ ಕಾರಣಕ್ಕೆ ಅವರದೇ ಗುಂಪುಗಳಲ್ಲಿ ಪ್ರತ್ಯೇಕವಾಗಿರುತ್ತಾರೆ. ಹೊಟ್ಟೆಪಾಡಿಗೆ ಅನಿವಾರ್ಯ ಸೆಕ್ಸ್ ವರ್ಕ್ ಮತ್ತು ಭಿಕ್ಷೆಗೆ ಇಳಿಯುತ್ತಾರೆ. ಆದರೆ ಇವರು ಭಿಕ್ಷೆಯನ್ನು ದೈನ್ಯತೆಯಿಂದಾಗಲಿ, ಅಸಹಾಯಕತೆಯಿಂದಾಗಲಿ ಕೇಳುವುದಿಲ್ಲ. ಹಕ್ಕೆಂಬಂತೆ ಚಲಾಯಿಸುತ್ತಾರೆ. ಬಹುಶಃ ಭಿಕ್ಷೆಯನ್ನು ಹಕ್ಕೆಂಬಂತೆ ನಿರ್ಭಿಡೆಯಿಂದ ಕೇಳುವ ದೇಹಭಾಷೆ ಪರಿಚಯಿಸಿದವರು ಲಿಂಗಾಂತರಿಗಳು. ಹಾಗೆ ಕೇಳುವಾಗ ಈ ಸಮಾಜ ನಮ್ಮನ್ನು ಈ ಸ್ಥಿತಿಗೆ ತಂದಿದೆ, ಸಮಾಜವೇ ಇದನ್ನು ಸರಿಪಡಿಸಬೇಕು, ಅದಕ್ಕಾಗಿ ದಂಡಕಟ್ಟಬೇಕು ಎನ್ನುವ ಭಾವವಿರುತ್ತದೆ.

ADVERTISEMENT

ಚಿಂದಿ ಬಟ್ಟೆ ತೊಟ್ಟು ಕಸದ ತೊಟ್ಟಿಯಿಂದ ಬಂದವರಂತೆ, ಕರುಣೆ ಉಕ್ಕುವಂತೆ ಬೇಡಿದಾಗ, ತಾನೊಬ್ಬ ಉದ್ಧಾರಕ/ಕಿ ಎನ್ನುವ ಮೇಲರಿಮೆಯಲ್ಲಿ ಚಿಲ್ಲರೆ ಕೊಟ್ಟು ಜನ ಧನ್ಯತೆ ಅನುಭವಿಸುತ್ತಾರೆ. ಹಾಗಾಗಿಯೇ ಲಿಂಗಾಂತರಿಗಳ ದೈನ್ಯತೆಯಿಲ್ಲದ ಭಿಕ್ಷೆ ಕೆರಳಿಸುತ್ತದೆ. ನೀಟಾಗಿ ಮೇಕಪ್ ಮಾಡಿಕೊಂಡು, ಚಂದದ ಡ್ರೆಸ್ಸಲ್ಲಿ ಅತ್ತರ್ ವಾಸನೆ ಬೀರುವ ಇವರನ್ನು ನೋಡಿ, ಭಿಕ್ಷೆ ಕೊಡುವವರ ಅಹಂ ವಿಕಾರರೂಪ ತಾಳುತ್ತದೆ. ಈ ಕಾರಣಕ್ಕೆ ಲಿಂಗಾಂತರಿಗಳ ಜತೆ ಜಗಳ ಸಾಮಾನ್ಯವಾಗಿದೆ. ಬಾಲ್ಯದಲ್ಲಿ ಹಾರ್ಮೋನ್ಸ್ ಬದಲಾವಣೆಯ ಅನುಭವ ಆದಂದಿನಿಂದ ತಂದೆ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರೂ ಕೊಟ್ಟ ಹಿಂಸೆ ಮಡುಗಟ್ಟಿರುವ ಕಾರಣ ಗಂಡಸರು ಚುಡಾಯಿಸಿದರೆ ದಿಢೀರ್ ಕೆರಳುತ್ತಾರೆ. ಇದೊಂದು ಮನೋ ವಿಶ್ಲೇಷಣಾತ್ಮಕ ಸಂಗತಿ. ಇದೀಗ ಲಿಂಗಾಂತರಿಗಳು ಒಂದು ಎಚ್ಚೆತ್ತ ಸಮುದಾಯವಾಗಿ ಹೋರಾಟ, ಚಳವಳಿಯ ಮೂಲಕ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಿದ್ದಾರೆ. ಒಂದೊಂದೆ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಗಳನ್ನಿಡುತ್ತಿದ್ದಾರೆ. ಇದೊಂದು ನಿಧಾನದ ಆಗುವಿಕೆ. ಅಲ್ಲಿಯತನಕ ಅವರಿಗೆ ನಾವು ದಂಡ ಕಟ್ಟುತ್ತಿರಬೇಕು.

ಬಹುಶಃ ವ್ಯವಸ್ಥೆಯಲ್ಲಿ ನಿರ್ಗತಿಕರಾಗಿ ಭಿಕ್ಷೆ ಬೇಡುವವರು ಲಿಂಗಾಂತರಿಗಳಂತೆ ಸಮಾಜದ ತಪ್ಪಿಗೆ ದಂಡ ವಸೂಲಿ ಮಾಡುವಂತಾಗಬೇಕು. ಸರ್ಕಾರದ ನೀತಿ– ನಿರೂಪಣೆ, ಖಾಸಗಿ ಒಡೆತನದ ಬೆಂಬಲ, ಅಸಮಾನ ಆಡಳಿತ ನೀತಿ, ಜಾಗತೀಕರಣ ಇಂತಹವುಗಳಿಂದ ಜನರು ನಿರ್ಗತಿಕರಾಗುತ್ತಾರೆ. ಹೀಗೆ ಪ್ರಭುತ್ವ ಮತ್ತು ವ್ಯವಸ್ಥೆಯ ಕಾರಣಕ್ಕೆ ಕಟ್ಟಕಡೆಯ ಆಯ್ಕೆಯೂ ಇಲ್ಲದಾದಾಗ ನಿರ್ಗತಿಕರಾದವರು ಭಿಕ್ಷುಕರಾಗುತ್ತಾರೆ. ಈ ಮಾರುಕಟ್ಟೆಯ ಜಗತ್ತಿನಲ್ಲಿ ದುಡಿಯುವ ಸಾಮರ್ಥ್ಯ‌ವುಳ್ಳವರು ಉತ್ಪಾದಕ ಶಕ್ತಿಯಾಗಿ, ದುಡಿಯುವ ತ್ರಾಣವಿಲ್ಲದವರು ಅನುತ್ಪಾದಕರಾಗುತ್ತಾರೆ. ಈ ಮಾರುಕಟ್ಟೆಯ ಮನಸ್ಥಿತಿ ಜನರಿಗೂ ಬಂದಿದೆ. ಹಾಗಾಗಿಯೇ ಸ್ವತಃ ವಯಸ್ಸಾದ ತಂದೆ ತಾಯಿಗಳನ್ನು ಹೊರದಬ್ಬುತ್ತಾರೆ. ಹಾಗಾಗಿ ದುಡಿಯಲಾರದ ಅಂಗವೈಕಲ್ಯ, ಅನಾರೋಗ್ಯ, ಮಾನಸಿಕ ಅಸ್ವಸ್ಥರನ್ನು ಅನುತ್ಪಾದಕ ಎಂದು ಸಮಾಜ ಭಾವಿಸುತ್ತಿದೆ. ಇದೇ ಸರ್ಕಾರ ಮತ್ತು ವ್ಯವಸ್ಥೆ ಕೆಲವರಿಗೆ ದುಡಿಮೆ ಮೀರಿ ಹತ್ತಾರುಪಟ್ಟು ಸಂಬಳ, ಸಾರಿಗೆ, ವಸತಿ ಒದಗಿಸುತ್ತದೆ. ಇವರುಗಳೆಲ್ಲಾ ಹಣವನ್ನು ಐಷಾರಾಮಿ ಜೀವನಕ್ಕೆ ವಿನಿಯೋಗಿಸುತ್ತಾರೆ. ಹೀಗೆ ಸರ್ಕಾರ ಅಥವಾ ವ್ಯವಸ್ಥೆಯ ಕಾರಣಕ್ಕಾಗಿ ಸಿಗುವ ಹೆಚ್ಚುವರಿ ಆದಾಯದ ಸಣ್ಣ ಭಾಗ ಅದೇ ವ್ಯವಸ್ಥೆಯ ತಪ್ಪಿನ ಕಾರಣಕ್ಕೆ ನಿರ್ಗತಿಕರಾದವರಿಗೆ ಹಂಚಿಕೆಯಾಗಬೇಕು. ವ್ಯವಸ್ಥೆಯ ತಪ್ಪಿನಿಂದಾದ ನ್ಯೂನ್ಯತೆಯನ್ನು ಅದೇ ವ್ಯವಸ್ಥೆಯ ಮತ್ತೊಂದು ಫಲದಿಂದ ಸ್ವಲ್ಪಮಟ್ಟಿಗೆ ಸರಿದೂಗಿಸಬೇಕಿದೆ. ಆಗ ಅಸಹಾಯಕರಿಗೆ ಮಾಡುವ ಸಹಾಯ ‘ದಂಡ ಕಟ್ಟುವ’ ಹೊಣೆಗಾರಿಕೆಯಾಗಿ ಬದಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.