ADVERTISEMENT

ಕೆಂಡದ ನೆರಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:30 IST
Last Updated 1 ಫೆಬ್ರುವರಿ 2020, 19:30 IST
ಕಲೆ: ಜಿ.ಎಸ್‌. ನಾಗನಾಥ್‌
ಕಲೆ: ಜಿ.ಎಸ್‌. ನಾಗನಾಥ್‌   

ನಸುಕಿನ ಸೂರ್ಯಕಿರಣಗಳು ಮೂಡುವ ಹೊತ್ತಿಗೆ ಬ್ಯಾಗೊಂದನ್ನು ಹೆಗಲಿಗೇರಿಸಿ ಒಂದು ಯಂತ್ರದಂತೆ ಚಲಿಸಿ ಮನೆಯಿಂದ ಮರೆಯಾಗುವ ಅವನು, ದಿನದ ಖಯಾಲಿ ಮುಗಿಸಿ ಮೊದಲ ಶಿಫ್ಟ್‌ನಿಂದ ಬಿಡುಗಡೆಗೊಂಡು ಮರಳಿ ನಿರ್ಭಾವುಕನಂತೆ ಮನೆ ಸೇರಿಕೊಳ್ಳುವನು. ಅಷ್ಟಕ್ಕೂ ಭಾವನೆಗಳು ಬತ್ತಿ ಕೆಲ ವರುಷಗಳೇ ಆಗಿ ಹೋಗಿವೆ ಅವನೊಳಗೆ. ಸದಾ ಸಿಡುಕುವ ಎಳೆಯ ಪ್ರಾಯದ ಹೆಂಡತಿ ಅವನು ಮನೆಯಲ್ಲಿ ಇರುವಷ್ಟು ಹೊತ್ತು ಸಿಡುಕುತ್ತಾಳೆ. ಅವನು ಮರೆಯಾದೊಡನೆ ಹಗುರಾಗುತ್ತಾಳೆ. ಅವಳೊಳಗೆ ಅಸಂಖ್ಯಾತ ಭಾವನೆಗಳು ಜೀವಂತ.

ಹಸಿವಿಗೆ ಆಹಾರವಿಲ್ಲದ ಹೆಣ್ಣುನಾಗರದಂತೆ ಬುಸುಗುಡುವ ಆಕೆಯ ದೇಹದ ಹಸಿವನ್ನು ಇಂಗಿಸುವ ಮನದಾಸೆ ಏನೋ ಈ ಗಂಡಿಗಿದೆಯಾದರು ದೇಹ ಸಹಕರಿಸುತ್ತಿಲ್ಲ ಎನ್ನುವುದು ಅವನ ವ್ಯಥೆ. ಮೊದಲೆಲ್ಲ ಗುಳಿಗೆ ನುಂಗಿ ಅವಳನ್ನು ತಣಿಸಲು ಪ್ರಯತ್ನಿಸಿದನಾದರೂ ಕೆಲದಿನಗಳಲ್ಲಿ ಅದೂ ಕೈಕೊಡತೊಡಗಿತು. ಅವಳು ಹಸಿದ ಸರ್ಪದಂತೆ ಆವರಿಸುವಾಗಲೆಲ್ಲಾ ಇವನು ದಣಿದು ಅಂಗಾತ ಮಲಗುತ್ತಿದ್ದ. ಮೊದ ಮೊದಲು ಅವಳು ಸುಮ್ಮನಾದಳು ಧೈರ್ಯ ಹೇಳಿದಳು, ಸಮಾಧಾನಿಸಿದಳು, ಸಂತೈಸಿದಳು ದಿನಗಳುರುಳಿದಂತೆ ಅವಳ ದೇಹದ ಹಸಿವು ಅವಳನ್ನು ಸಿಡುಕುವಂತೆ, ಸಿಟ್ಟುಮಾಡಿಕೊಳ್ಳುವಂತೆ, ಅವನನ್ನು ತುಚ್ಛವಾಗಿ ನೋಡುವಂತೆ, ನಿಷ್ಠುರವಾಗಿ ಅವಮಾನಿಸುವಂತೆ ಪ್ರಚೋದಿಸುತ್ತಾ.. ಅವನ ದೈಹಿಕ ನ್ಯೂನತೆ ಮಾನಸಿಕ ನೆಮ್ಮದಿಯ ಬುಡವನ್ನು ಇಂಚಿಂಚಾಗಿ ಗೆದ್ದಲು ಹಿಡಿಸತೊಡಗಿತ್ತು. ಈಗ ಅವನಾಗೇ ಬೇರೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡನು, ಅವಳಿಗೆ ಮುಖಕೊಟ್ಟು ಮಾತನಾಡಲು ನಿಸ್ಸಹಾಯಕನಾದನು, ಒಂದು ನಡೆದಾಡುವ ಯಂತ್ರದಂತೆ ವರ್ತಿಸತೊಡಗಿದನು. ಮೊದಮೊದಲು ರಾತ್ರಿ ವೇಳೆ ಕತ್ತಲೊಳಗೆ ಸದ್ದುಮಾಡದೆ ಬಿಕ್ಕುತ್ತಿದ್ದನು. ಈಗ ಅಳುವುದನ್ನು ಮರೆತಂತೆ ಓಡಾಡಿಕೊಂಡಿದ್ದಾನೆ.

ಆತನೂ ತೀರ ಸಂಕೋಚದ ಮನುಷ್ಯ, ಒಬ್ಬನೇ ಒಬ್ಬ ಆತ್ಮೀಯನು ಇಲ್ಲದ ವಿಚಿತ್ರ ಜಂತು. ಈ ಆಧುನಿಕ ಯುಗದಲ್ಲಿ ಇಂತಹ ಸಮಸ್ಯೆಗಳಿಗೆ ಬೆರಳ ತುದಿಯಲ್ಲಿಯೇ ಪರಿಹಾರವಿದ್ದರು ಅವನ ಸ್ವಭಾವ ಅವನನ್ನು ಕೊಂಚಕೊಂಚವೇ ಕುಗ್ಗಿಸುತ್ತಾ ಹೋಯಿತು. ಸಣ್ಣವಯಸ್ಸಿನ ಹೆಂಡತಿ ಓದಿಕೊಂಡವಳು, ಇವನಿಗಿಂತ ಚುರುಕು ಬುದ್ಧಿ ಉಳ್ಳವಳು. ಎಷ್ಟೋ ಬಾರಿ ಇವನ ಸಹಾಯಕ್ಕೆ ನಿಲ್ಲುವ ಪ್ರಯತ್ನ ಮಾಡಿದಳಾದರು ಸೋತು ತಣ್ಣಗಾದಳು. ಅವಳು ತಣ್ಣಗಾದಳು. ದೇಹ? ಅದೊಂದು ಶಾಪದಂತೆ, ನರಕದಂತೆ ಅವಳನ್ನು ಇಂಚಿಂಚಾಗಿ ಕಾಡತೊಡಗಿತು. ಸ್ವಯಂ ಪ್ರಯತ್ನದಿಂದಲೂ ಅವಳ ವಾಂಛೆಯನ್ನು ತಣಿಸುವ ಪ್ರಯತ್ನ ಮಾಡಿಕೊಂಡಳಾದರು ಅದು ಅವಳಿಗೆ ಬೋರಾಗಿ ಹೋಯಿತು. ಆಧುನಿಕ ಉಪಕರಣಗಳ ಮೊರೆಹೋದಳಾದರು ಅದು ಅವಳ ದೇಹವನ್ನು ತಣಿಸಲು ವಿಫಲವಾಯಿತು. ಅತ್ತಳು.. ನೊಂದಳು.. ಪರಿಹಾರಕ್ಕಾಗಿ ಹಪಹಪಿಸಿದಳು.

ADVERTISEMENT

ಅವಳು ವಯಸ್ಸಿಗೆ ಬಂದಾಗಿನಿಂದ ಕೆಲ ಗೆಳೆಯರ ಸಹವಾಸದಿಂದಾಗಿ ಲೈಂಗಿಕಾಸಕ್ತಿ ಬೆಳೆಸಿಕೊಂಡ ಹುಡುಗಿ. ನೀಲಿಚಿತ್ರ ನೋಡುವುದು ಅವಳ ಹವ್ಯಾಸಗಳಲ್ಲೊಂದಾಗಿತ್ತು. ಹೈಸ್ಕೂಲಿನಅಂತ್ಯದ ದಿನಗಳಲ್ಲಿ ಅವಳ ಕೈಗೆ ಆಗಷ್ಟೇ ಆವಿಷ್ಕಾರಗೊಂಡಿದ್ದ ಆಧುನಿಕ ಮೊಬೈಲ್ ಫೋನ್‍ ದಕ್ಕಿತ್ತು, ಅವಳ ಚಟಕ್ಕೆ ಪೂರಕವೆಂಬಂತೆ ಅವಳಿಗಿಂತ ವಯಸ್ಸಿನಲ್ಲಿ ಒಂದೆರೆಡು ವರುಷ ದೊಡ್ಡಾಕೆ ಗೆಳತಿ ಇವಳಿಗೆ ಆ ಮೊಬೈಲ್‍ನ ಮೆಮೊರಿಕಾರ್ಡ್ ಭರ್ತಿಯಾಗುವಷ್ಟು ವಿಡಿಯೋಗಳನ್ನು ಒದಗಿಸುತ್ತಿದ್ದಳು. ಹೈಸ್ಕೂಲು ದಾಟಿ ಪಿಯುಸಿ ಮೆಟ್ಟಿಲೇರಿದ ಹುಡುಗಿಗೆ ಅತಿರೇಕದ ದೇಹ ವಾಂಛೆ ನರಳುವಂತೆ ಮಾಡಿತ್ತು. ಒಂದೆರೆಡು ಪ್ರಿಯಕರರನ್ನು ಮಾಡಿಕೊಂಡಳಾದರೂ ಅವಳ ಹಸಿವಿಗೆ ಅವರ‍್ಯಾರು ಪ್ರತಿಕ್ರಿಯಿಸುವಷ್ಟು ಪ್ರಬದ್ಧರಾಗಿರಲಿಲ್ಲಾ ಅವಳು ಕನ್ಯೆಯಾಗೇ ಉಳಿದಳು. ದ್ವಿತೀಯ ಪಿಯುಸಿ ಹೊತ್ತಿಗೆ ಮನೆಯಲ್ಲಿನ ಕಿತ್ತುತಿನ್ನುವ ಬಡತನ ಅವಳನ್ನು ಅವಳಿಗಿಂತ ಹತ್ತು ವರ್ಷ ಹಿರಿಯ, ಸರಕಾರಿ ಉದ್ಯೋಗಸ್ಥನಿಗೆ ಕಟ್ಟಿಕೊಡುವಂತೆ ಮಾಡಿತ್ತು. ಮೊದಲೆಲ್ಲ ಸರಿಯಾಗೇ ಇತ್ತು. ಇವಳಿಗೂ ವಯೋಸಹಜ ವಾಂಛೆಯಿತ್ತು, ಅವನು ಒಂದೆರೆಡು ವರ್ಷ ಅವಳನ್ನು ತೃಪ್ತಿಗೊಳಿಸಿ, ಅವರಿಬ್ಬರ ಸುಖಕರ ಜೀವನಕ್ಕೆ ಸಾಕ್ಷಿ ಎಂಬಂತೆ ಒಂದು ಗಂಡುಮಗುವನ್ನು ಕರುಣಿಸಿದ್ದ. ನಂತರದ ದಿನಗಳಲ್ಲಿ ಅವನ ದೇಹ ಅವನ ಕಲ್ಪನೆಗಳಿಗೆ ಕೊಂಚಕೊಂಚವೇ ತಣ್ಣೀರೆರೆಚತೊಡಗಿತ್ತು. ಇತ್ತ ಇವನ ದೇಹ ತಣ್ಣಗಾಗುತ್ತಾ ಬಂತಾದರು ಅವಳ ದೇಹದ ಕಾವು ಎಲ್ಲೇ ಮೀರಿತ್ತು. ವಿರುದ್ಧ ದಿಕ್ಕಿನ ಈ ಬಿರುಗಾಳಿ ಅವರ ಸಾಂಸಾರಿಕ ಜೀವನದಲ್ಲಿ ಸದ್ದಿಲ್ಲದಂತೆ ತನ್ನ ಅಧಿಪತ್ಯ ಸಾಧಿಸುತ್ತಾ ವಿವರಿಸಲಾಗದಂತೆ ಕಾಡತೊಡಗಿತು. ಅವನ ಪ್ರಯತ್ನವೆಲ್ಲಾ ಮಣ್ಣುಮುಕ್ಕಿ ಬೆತ್ತಲಾಗಿ ಮಕಾಡೆ ಮಲಗಿತ್ತು. ಅವಳು ಕ್ಷಣಕ್ಷಣವು ಅವನಿಗಾಗಿ ಹವಣಿಸುತ್ತಿದ್ದಳಾದರೂ, ಅವನು ನಾನಾ ನೆಪ ಒಡ್ಡಿ ಅಸಹಾಯಕನಂತೆ ದೂರ ಸರಿಯತೊಡಗಿದ. ಇವರಿಬ್ಬರ ಈ ಶೀತಲಸಮರದೊಂದಿಗೆ ಮಗುವು ಇದಾವುದರ ಪರಿವಿಲ್ಲದೆ ಬೆಳೆಯತೊಡಗಿತ್ತು.

ಕನಸುಕಾಣುವ ಹುಡುಗಿ ಅವಳು, ಅವಳಿಗೆ ಬಣ್ಣಬಣ್ಣದ ಚಿತ್ರವಿಚಿತ್ರ ಕನಸುಗಳು. ಅವಳ ಮನಸ್ಸು ಹಾರು ಹಕ್ಕಿಯಂತೆ ಚಂಚಲ. ಅವಳ ಕಲ್ಪನೆಗಳೇ ಚೆಂದ. ಅವಳ ಆಸೆಗಳು ಇನ್ನೂ ಅಂದ. ಅವಳು ಸದಾ ಕ್ರೀಯಾಶೀಲ ಗೃಹಿಣಿ. ಸಾಮಾಜಿಕ ಜಾಲತಾಣದಲ್ಲಿ ಚೆಂದ ಚೆಂದದ ಫೋಟೊ ಹಾಕಿ ಅದಕ್ಕೆ ಬರುವ ಲೈಕು ಕಮೆಂಟುಗಳಿಗೆ ಮನಸ್ಸೋ ಇಚ್ಛೆ ಕುಣಿಯುವ ಮನಸ್ಸು ಅವಳದ್ದು. ಅಸಂಖ್ಯಾತ ಗೆಳೆಯರು ಅವಳಿಗೆ ಅಲ್ಲಿ. ಅವಳೆಲ್ಲೂ ತಾನು ಗೃಹಿಣಿ ಎಂದು ತೋರಿಸಿಕೊಳ್ಳುವಂತಹ ಪಟವನ್ನು ಜಾಲತಾಣಗಳಲ್ಲಿ ಹಾಕಿದವಳಲ್ಲ. ಅಭೂತಪೂರ್ವ ಸುಂದರಿಯಲ್ಲದಿದ್ದರು ಆಕೆ ಚೆಂದದ ಹುಡುಗಿ. ಅವಳು ಚೆಂದಗೆ ಹಾಡುತ್ತಾಳೆ. ಹಾಗೆ ಅವಳು ಪ್ರಯತ್ನಿಸಿದ ಹಾಡಿನ ತುಣುಕೊಂದನ್ನು ಫೇಸ್‍ಬುಕ್ಕಿನಲ್ಲಿ ಸಿಕ್ಕಿಸುತ್ತಾಳೆ. ಅದಕ್ಕೆ ಬಂದ ಪ್ರತಿಕ್ರಿಯೆ ನೋಡಿ ಇನ್ನೂ ಪ್ರೇರಣೆಗೊಳ್ಳುತ್ತಾಳೆ. ಮತ್ತೆ ಮತ್ತೆ ಈ ರೀತಿ ಹಾಡುತ್ತಾ ಫೇಸ್‍ಬುಕ್‍ ಸಿಂಗರ್ ಆಗಿ ಅವಳಿಗರಿವಿಲ್ಲದೆ ಬದಲಾಗುತ್ತಾಳೆ. ಒಂದಿಷ್ಟು ಸಮಾನಮನಸ್ಕ ಗೆಳೆಯರು ಅವಳ ಗೆಳೆತನ ಸಂಪಾದಿಸುತ್ತಾರೆ. ಇವಳ ಈ ಹಾಡಿನ ಚಟದಿಂದ ನಿಜಕ್ಕೂ ಸಂತೃಪ್ತರಾದವನು, ನೆಮ್ಮದಿಯ ನಿಟ್ಟುಸಿರು ಬಿಟ್ಟವನು ಅವಳ ಗಂಡ. ಇವಳ ಆಸಕ್ತಿಯ ಹೊಡೆತಕ್ಕೆ ಅವಳ ಕಾದ ಕಬ್ಬಿಣದಂತಾದ ವಾಂಛೆ ಅವಳಿಂದ ಕೊಂಚಕೊಂಚವೇ ದೂರಾಗುತ್ತಾ ಇವನಿಗೆ ಬಿಡುಗಡೆ ದಕ್ಕಿಸಿಕೊಡುವಲ್ಲಿ ಸಹಾಯವೇ ಆಗಿತ್ತು. ಅವನ ಮುಖದಲ್ಲೂ ಕೊಂಚ ನೆಮ್ಮದಿ ಕಾಣಿಸತೊಡಗಿತ್ತು.

ಅವಳ ಹಾಡಿನ ತುಣುಕುಗಳಿಗೆ ಬಂದ ಕಮೆಂಟ್‍ಗಳನ್ನು ಗಂಡನಿಗೆ ಹಾಗೂ ಐದರ ಪ್ರಾಯದ ಮಗನಿಗೆ ತೋರಿಸುತ್ತಾ ಕುಣಿಯುತ್ತಾಳೆ. ಅಲ್ಲಿ ಖ್ಯಾತನಾಮರ ಗೆಳೆತನ ಸಂಪಾದಿಸಿದ ವಿಷಯವನ್ನು ಹೇಳಿಕೊಳ್ಳುತ್ತಾ ಜಂಭಕೊಚ್ಚಿಕೊಳ್ಳುತ್ತಾಳೆ. ಇವಳ ಸಂತೋಷ ಕಂಡು ಪುಟ್ಟ ಮಗನು, ಗಂಡನು ನೆಮ್ಮದಿಯಾದ ನಿಟ್ಟುಸಿರಾಗುತ್ತಾರೆ. ಅವಳು ಎಲ್ಲವನ್ನೂ ಇವರಿಬ್ಬರ ಬಳಿ ಹಂಚಿಕೊಳ್ಳುತ್ತಾಳೆ. ಅವಳ ಎಲ್ಲಾ ನೂತನ ಗೆಳೆಯರ ಕುರಿತು ಗಂಡನ ಬಳಿ ಹೇಳಿಕೊಳ್ಳುತ್ತಾಳೆ, ಅವಳಿಗೆ ಅದೊಂದು ತೆರೆನಾದ ಸಂತೋಷ.
ಅದ್ಯಾಕೋ ಏನೋ ದಿಢೀರನೆ ಈಗೀಗ ಇದ್ದಕ್ಕಿದ್ದ ಹಾಗೆ ಕೊಂಚ ಹೆಚ್ಚೇ ಮೊಬೈಲ್‍ನಲ್ಲಿ ಕಾಲಕಳೆಯುತ್ತಾಳೆ. ಒಬ್ಬಳೇ ಮೆಸೆಜ್ ಕುಟ್ಟುವುದರಲ್ಲಿ ತಲ್ಲೀನಳಾಗಿರುತ್ತಾಳೆ. ಅವಳ ಗಾಯನ ಚಟವು ಮುಂದುವರೆಯುತ್ತಿದೆಯಾದರೂ ಅವಳು ಈ ಹಿಂದಿನಂತೆ ಎಲ್ಲವನ್ನು ಗಂಡನಿಗೆ ಹೇಳಿಕೊಳ್ಳುತ್ತಿಲ್ಲ. ಮೊಬೈಲ್‍ಗೆ ಸೆಕ್ಯೂರಿಟಿ ಲಾಕ್ ಅಳವಡಿಸಿಕೊಂಡಿದ್ದಾಳೆ. ಮಲಗುವ ಮುನ್ನ ಲಾಕ್ ಆಗಿದೆಯೇ ಎಂದು ಖಚಿತಪಡಿಸಿಕೊಂಡು ಮಲಗುತ್ತಾಳೆ. ನಡುರಾತ್ರಿಯವರೆಗೂ ಅವಳ ಕಂಬಳಿ ಒಳಗಿಂದ ಮೊಬೈಲ್‍ನ ಬೆಳಕು ಮಂದವಾಗಿ ಕಾಣಿಸುತ್ತದೆ. ಗಂಡ ಮುಂಜಾನೆ ಕೆಲಸಕ್ಕೆ ಹೋಗಿ ಅನಿವಾರ್ಯವೆಂದು ಅವಳ ನಂಬರಿಗೆ ಕರೆ ಮಾಡಿದಾಗ ಎಂಗೇಜ್ ಟ್ಯೂನ್ ಕೇಳಿಸುತ್ತದೆ. ತಕ್ಷಣ ಆ ಕಡೆ ಅವಳು ಕಾಲ್ ಹೋಲ್ಡ್ ಮಾಡಿ ಗಂಡನ ಜೊತೆ ಅತಿವಿನಯದಿಂದ ಕರೆಯ ವಿವರವನ್ನು ವಿಚಾರಿಸುತ್ತಾಳೆ. ಈಗೆಲ್ಲ ಯಾಕೋ ಮಗನೊಂದಿಗೂ ಅವಳು ಸಮಯ ಕಳೆಯುತ್ತಿಲ್ಲ. ವಿನಕಾರಣ ಮಗನಿಗೆ ರೇಗುತ್ತಾಳೆ. ಅವಳಾಯ್ತು ಅವಳ ಮೊಬೈಲ್ ಆಯಿತು ಅಂತಿರುತ್ತಾಳೆ. ಕೆಲದಿನಗಳು ತುಂಬಾ ಸಂತೋಷದಿಂದ ಓಡಾಡಿಕೊಂಡಿರುತ್ತಾಳೆ. ಕೆಲದಿನಗಳು ತುಂಬಾ ನೋವಿನ ಮುಖದಲ್ಲಿ ಮೊಬೈಲ್‍ನಿಂದ ದೂರ ಉಳಿಯುತ್ತಾಳೆ. ಯಾವುದೋ ಹಾಡನ್ನು ಗುನುಗುತ್ತಾಳೆ, ಒಬ್ಬಳೇ ನಗುತ್ತಾಳೆ, ಕೆಲವೊಮ್ಮೆ ಮಗನಿಗೆ ಇನ್ನಿಲ್ಲದ ಪ್ರೀತಿ ತೋರಿಸುತ್ತಾಳೆ ಮತ್ತೂ ಕೆಲವೊಮ್ಮೆ ಮಗನಿಗೆ ವಿನಾಕಾರಣ ಹಿಡಿದು ಬಡಿಯುತ್ತಾಳೆ. ಗಂಡನು ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿಯೂ ಗಮನಿಸದ ಹಾಗೆ ಯಾವುದೋ ಅಧ್ಯಾತ್ಮ ಪುಸ್ತಕ ಹಿಡಿದು ಮೂಲೆಯಲ್ಲಿ ಕುಳಿತಿರುತ್ತಾನೆ. ಬಹುಷಃ ಅವನಿಗೆ ಎಲ್ಲವೂ ತಿಳಿಯುತ್ತಿರಬಹುದೇ ಎನ್ನುವ ಭಯದಲ್ಲಿ ಕೆಲದಿನಗಳು ತೀರ ನಾಟಕೀಯವಾಗಿ ಅವನೊಡನೆ ಪ್ರೀತಿ ತೋರಿಸುತ್ತಾಳೆ. ಗಂಡನು ಮನೆಯಿಂದ ಮರೆಯಾದ ಮರುಕ್ಷಣವೇ ಇವಳು ಅವನಿಗೆ ಕರೆ ಹಚ್ಚುತ್ತಾಳೆ. ಅವನು ಆ ಕಡೆಯಿಂದ ವಿಡಿಯೋ ಕಾಲ್ ಮಾಡುತ್ತಾನೆ, ಇವಳು ಮೊಬೈಲ್ ಅನ್ನು ಒಂದು ಕಡೆ ಒರಗಿಸಿಟ್ಟು ದಿನದ ಕೆಲಸವನ್ನು ಅವನೊಂದಿಗೆ ವಿಡಿಯೋಕಾಲ್‍ನಲ್ಲಿ ಮಾತನಾಡುತ್ತಾ, ದೊಡ್ಡದಾಗಿ ನಗುತ್ತಾ, ಕೆಲವೊಮ್ಮೆ ನೋವು ಹೇಳಿಕೊಂಡು ಅಳುತ್ತಾ, ಗಂಡನನ್ನೂ ಅವನ ವರ್ತನೆಯನ್ನು ದೂರುತ್ತಾ, ತನ್ನ ಅತಿಯಾದ ಕೆಲಸವನ್ನು ವಿವರಿಸುತ್ತಾ, ಕೆಲವೊಮ್ಮೆ ಕಾರಣವಿಲ್ಲದೆ ಬಿಕ್ಕುತ್ತಾ ನಿರತಳಾಗುತ್ತಾಳೆ. ವಿಡಿಯೋ ಕಾಲ್ ಮಾಡುವ ಆತನೇನು ಇವಳಿಗೆ ಅಪರಿಚಿತನಲ್ಲ. ತನ್ನ ಕಾಲೇಜು ದಿನದ ಮೊದಲ ಪ್ರಿಯಕರ ಅವನು, ತನ್ನದೇ ವಯೋಮಾನದ ಹುಡುಗ. ಅವನೂ ಮದುವೆ ಆಗಿದ್ದಾನೆ, ಈಗಷ್ಟೇ ಮೂರು ವರ್ಷದ ಹಿಂದೆ. ಒಂದು ಮಗುವು ಇದೇ, ಹೆಂಡತಿಯೂ ಇದ್ದಾಳೆ. ಸುಖ ಸಂಸಾರವೆನ್ನುವಂತಹ ಸುಖ ಅವನ ಸಂಸಾರದಲ್ಲಿಯೂ ಕಂಡಿಲ್ಲ. ಅವನು ಅವನ ಮಡದಿಯನ್ನು ಇಷ್ಟಪಟ್ಟು ಪ್ರೀತಿಸಿ ಮದುವೆ ಆಗಿದ್ದಾನೆ. ಮಡದಿ ಸ್ವಲ್ಪ ಅನೂಕೂಲಸ್ಥ ಮನೆತನದ ಹುಡುಗಿ. ಡಿಗ್ರಿ ಮುಗಿದ ತಕ್ಷಣ ಓಡಿಹೋಗಿ ಮದುವೆಯೂ ಆದರು. ಮುಂದೇನು ಅನ್ನುವ ಚಿಂತೆಯಲ್ಲಿದ್ದ ನವದಂಪತಿಗೆ ಮೊದಲು ಪ್ರತಿಭಟಿಸಿದ ಹುಡುಗಿಯ ಮನೆಯವರೇ ಕೊನೆಗೆ ಕೈಹಿಡಿದು ಇವರಿಗೊಂದು ದಾರಿಕಾಣಿಸುವ ನಿಟ್ಟಿನಲ್ಲಿ ಹುಡುಗಿಯ ಅಪ್ಪನ ಕಾಟನ್ ಎಕ್ಸ್‌ಪೋರ್ಟ್‌ಕಂಪನಿಯಲ್ಲಿ ಮ್ಯಾನೆಜರ್ ಮಾಡಿಕೊಂಡು, ಇರಲು ಸೂರನ್ನೂ ಕಲ್ಪಿಸುತ್ತಾರೆ. ಮೊದಮೊದಲು ಎಲ್ಲವೂ ಚೆನ್ನಾಗೆ ಇದ್ದವು. ಅವರ ಋಣದಲ್ಲಿ ಇರುವ ಈತನ ಮುಂದಿನ ಸಮಸ್ಯೆಗಳನ್ನು ನೀವೇ ಕಲ್ಪಿಸಿಕೊಳ್ಳಿ. ಹುಡುಗನ ಮನೆಯವರಂತೂ ಇವನಿಗೆ ಪೂರ್ಣ ತಿಲಾಂಜಲಿ ಹಾಡಿ ಅವರಪಾಡಿಗಿದ್ದರು. ಹೆಂಡತಿಗೆ ಇವನ ಮೇಲೆ ಅಗಾಧ ಪ್ರೀತಿ ಇತ್ತಾದರು ಇವನು ಪ್ರತಿಕ್ಷಣವು ಅವಳ ಗುಲಾಮನಂತೆ ಬದುಕುತ್ತಿದ್ದ. ಒಂದು ಮಗುವಾದ ನಂತರ ಆ ಪ್ರೀತಿಯೂ ಕೊಂಚ ಕೊಂಚವೇ ಕರಗಿ ನೀರಾಗುತ್ತಾ ಬಂತು. ಅವನೋ ಸಂದಿಗ್ಧ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದ. ಸಮಯ ಕಳೆಯಲು ಫೇಸ್‍ಬುಕ್ ಕಡೆ ಇಣುಕುತ್ತಿದ್ದ. ಹಾಗೆ ಇಣುಕಿದವನಿಗೆ ಕಾಣಸಿಕ್ಕವಳು ತನ್ನ ಹಳೆಯ ಪ್ರೇಯಸಿ ಡೈಸಿ. ಕಾವೇರಪ್ಪ ಎನ್ನುವ ನಾಮಧೇಯದ ಮತ್ತೊಂದು ಮುಖಪುಟದ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್‌ಅನ್ನು ಗಮನಿಸಿದ ಡೈಸಿಗೆ ಅವನ ಗುರುತು ಹಚ್ಚಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಅವರ ಗೆಳೆತನ ಪುನರಾರಂಭಗೊಂಡು ಮಾಗಿತು ಸಹ. ಹೀಗೆ ಅವರಿಬ್ಬರ ಗೆಳೆತನ, ನಂಬರ್ ರವಾನೆ, ಮೆಸೆಜೂ, ವಾಟ್ಸಪ್ಪೂ, ಕಾಲೂ, ವಿಡಿಯೋ ಕಾಲು ಹೀಗೆ ವಾಯುವೇಗದಲ್ಲಿ ಗೆಳೆತನ ಪ್ರಣಯಕ್ಕೆ ತಿರುಗಿತ್ತು. ಕೆಲವೇ ತಿಂಗಳುಗಳಲ್ಲಿ ಡೈಸಿ ಕಾವೇರಪ್ಪನಿಗೆ ಮನೆಗೆ ಆಹ್ವಾನವಿತ್ತಳು.

ಗಂಡ ಕೆಲಸಕ್ಕೆ ಹೋಗಿದ್ದ, ಮಗ ಪ್ಲೇಹೋಮ್‍ನಲ್ಲಿದ್ದ. ಕಾವೇರಪ್ಪ ತನ್ನ ಕಾರಿನಲ್ಲಿ ಅವಳ ಮನೆಯ ವರಾಂಡ ತಲುಪಿದ್ದ. ಹಿಂದಿನ ರಾತ್ರಿ ಅವನು ಅಕ್ಷರಶಃ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲಾ.. ಅವಳನ್ನು ವರುಷಗಳ ನಂತರ ಮೊದಲ ಬಾರಿ ನೋಡುವ ಕಾತುರ ಅವನ ಅಂಗಾಗಗಳಲ್ಲಿತ್ತಾದರು ಅವರ ದೇಹದಿಂದ ಕಾಮದ ಗಂಧ ಹೊರಟು ಅಲ್ಲೆಲ್ಲಾ ಆವರಿಸಿತ್ತು. ಕಾರಿಳಿದು ಮನೆಯ ಮುಂಬಾಗಿಲು ತಲುಪಿ ಕಾಲಿಂಗ್‍ಬೆಲ್ ಒತ್ತಿದ. ಅವನ ಕೈಗಳು ಆಯತಪ್ಪಿ ಕಂಪಿಸುತ್ತಿತ್ತು, ನಿಂತ ನೆಲವೇ ಅದರುತ್ತಿದೆ ಏನೋ ಎಂಬಂತೆ ಅವನ ಕಾಲುಗಳು ಅದರುತ್ತಿದ್ದವು. ಆ ಸಮಯದಲ್ಲಿ ಇನ್ನೂ ಸೂರ್ಯದೇವಾ ಅಲ್ಲಿ ತನ್ನ ಅಧಿಪತ್ಯ ಸಾಧಿಸಿರಲಿಲ್ಲ. ಆದರೂ ಅವನು ಧರಿಸಿದ್ದ ತುಂಬು ತೋಳಿನ ಅಪ್ಪಟ ರೇಷ್ಮೆ ಶರ್ಟು ಅವನ ಬೆನ್ನಿನಿಂದ ಹರಿಯುತ್ತಿದ್ದ ಬೆವರನ್ನು ಹೀರಿ ದೇಹಕ್ಕಂಟಿಕೊಂಡು ಬೆನ್ನಿಗೆ ಅವಡುಗಚ್ಚಿತ್ತು.. ಹಣೆಯಿಂದ ಜಾರಿದ ಬೆವರ ಹನಿಯೊಂದು ಅವನ ಮೂಗಿನ ಇಳಿಜಾರು ತಲುಪಿ ಸ್ತಬ್ಧವಾಗಿತ್ತು.. ಎದೆಬಡಿತ ಆಯತಪ್ಪಿ ಬಡಿದುಕೊಳ್ಳುತ್ತಿತ್ತು. ಕಾಮ, ಆತುರ, ಭಯ, ನಿರೀಕ್ಷೆ ಅವನನ್ನು ಕ್ಷಣಕ್ಷಣವು ಆವರಿಸಿ ತಲ್ಲಣಿಸುತ್ತಿತ್ತು.. ಒಂದು ಬಾರಿ, ಎರಡು ಬಾರಿ ಬೆಲ್ ಬಾರಿಸಿದಾ, ಹೀಗೆ ಸತತ ಹದಿನೈದು ನಿಮಿಷಗಳು ನಿರಂತರವಾಗಿ ಮನೆಯ ಒಳಾಂಗಣದಲ್ಲಿ ಕಾಲಿಂಗ್ ಬೆಲ್ ವಾದ್ಯವೇ ಮೊಳಗಿತ್ತು. ಅದೇಕೋ ದ್ವಾರಮಾತ್ರ ತೆರೆಯಲಿಲ್ಲ. ಅವನು ಅಸಹನೆಯಿಂದ ಕ್ಷಣಕಾಲ ಸ್ತಬ್ಧನಾದ, ನಿಂತ ಛೇ.. ಛೇ.. ಎಂದು ಒಂದರೆಡು ಬಾರಿ ತನಗೆ ನಾನೇ ಎಂಬಂತೆ ಗೊಣಗಿಕೊಂಡ. ಅದೇನೋ ಆಗಬಾರದ್ದು ಆಗಿಹೋದಂತೆ ನೇರನೇರ ಅಲ್ಲಿಂದ ಕಾರು ಹತ್ತಿ ವೇಗವಾಗಿ ಬಂದದಾರಿ ಹಿಡಿದ..

ಈಗ ಕಾಲಿಂಗ್ ಬೆಲ್ ತಣ್ಣಗಾಗಿ ಒಂದು ತೆರನಾದ ಕಾಷ್ಠಮೌನ ಅಲ್ಲೆಲ್ಲಾ ಆವರಿಸಿತ್ತೂ.. ಆ ಮೌನವನ್ನು ಕೆದಕುವಂತೆ ಒಳಗೆ ಮುಂಬಾಗಿಲಿಗೆ ಬೆನ್ನುಹಾಕಿ ಕುಳಿತಿದ್ದ ಡೈಸಿ ಬಿಕ್ಕುತ್ತಿದ್ದಳು. ಕೆಲಕಾಲ ರೋಧಿಸಿ ಅತ್ತಳು. ಮೊಬೈಲ್ ಕೈಗೆತ್ತಿಕೊಂಡು ‘ಸಾರಿ.. ನನ್ನನ್ನು ಕ್ಷಮಿಸು’ ಎನ್ನುವ ಮೆಸೆಜ್ ಟೈಪ್ ಮಾಡಿದಳು. ಅದನ್ನು ಅವಳೇ ಅಳಿಸಿ ಹಾಕಿದಳು. ಮೊಬೈಲ್ ಅನ್ನು ತೆಗೆದು ಬೀಸಿ ಗೋಡೆಗೆ ಎಸೆದಳು, ಒಡೆದು ಚೂರಾಯಿತು ಆ ಯಂತ್ರ. ಅವಳು ಬಿಕ್ಕುತ್ತಲೇ ಇದ್ದಳು.. ಅವಳ ನೋವೆಲ್ಲಾ ಕಣ್ಣೀರ ರೂಪದಲ್ಲಿ ನೆಲದ ಮೇಲೆ ತೊಟ್ಟಿಕ್ಕುತ್ತಿತ್ತು. ಆ ಕ್ಷಣದ ಕಣ್ಣೀರಿಗೆ, ಅವಳ ಅಸಹಜ ವರ್ತನೆಗೆ ಕಾರಣ ಸ್ವತಃ ಅವಳಿಗೆ ತಿಳಿಯದಾಗಿತ್ತು.. ಅಲ್ಲೇ ನಲೆಯೂರಿದ್ದ ತಣ್ಣನೆಯ ಮೌನವೂ ವಿನಕಾರಣ ಕಂಪಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.