ADVERTISEMENT

ಕಥೆ | ಸುಬ್ಬಮ್ಮಜ್ಜಿಯ ಸ್ವಗತ

ಶ್ರೀಧರ ಭಟ್ಟ ಐನಕೈ
Published 25 ಜುಲೈ 2020, 19:45 IST
Last Updated 25 ಜುಲೈ 2020, 19:45 IST
ಕಲೆ: ಮದನ್‌ ಸಿ.ಪಿ.
ಕಲೆ: ಮದನ್‌ ಸಿ.ಪಿ.   

ಬಿಸಿಲ ಕೋಲುಗಳು ಬಚ್ಚಲು ಧೂಮದೊಂದಿಗೆ ಬೆರೆತು ವಿಚಿತ್ರ ಪರಿಮಳದಿಂದ ಕೂಡಿ ಆಹ್ಲಾದಕರವಾಗಿತ್ತು. ಯಾವ ಕಟ್ಟಿಗೆ ಹಾಕಿದ್ದರೆಂದು ಮನಸ್ಸಲ್ಲೇ ಲೆಕ್ಕ ಹಾಕ ತೊಡಗಿದೆ. ಬಿರುಗಾಳಿಗೆ ಬಿದ್ದ ಅಡಿಕೆ ಮರಗಳು ಚಳಿ ಓಡಿಸಲು ಬಿಸಿಲ ಕೋಲಿಗೆ ಮೈ ಒಡ್ಡಿ ಮಲಗಿದ್ದವು.

ಬಿಸಿ ಕಾಫಿಯ ಘಮಲುವಿನೊಂದಿಗೆ ಬೆರೆತ ರುಚಿ ರುಚಿ ಪತ್ರೊಡೆಯ ಪಸರಿಸಿದ ಪರಿಮಳ ನಾಸಿಕಾಗ್ರದ ಮೂಲಕ ರವಾನೆಗೊಂಡು ಜಠರಾಗ್ನಿಯನು ಸಚೇತನಗೊಳಿಸಿತ್ತು. ಮನೆಯ ಚೌಕಿಯ ಮುಖ್ಯ ದ್ವಾರಕ್ಕೆ ತಲೆಯಬಾಗಿ ಅಡುಗೆ ಮನೆಗೆ ಹೋಗಿ ಕಾಫೀ ಹೀರಿ ಪತ್ರೊಡೆ ಮೆಲ್ಲುತ್ತಾ ಅಮ್ಮನೊಂದಿಗೆ ಹರಟುತ್ತಾ ಕುಳಿತೆ.

ಊರ, ಹೊರ ಊರ ಸಮಾಚಾರವನ್ನು ಕೇಳುತ್ತಾ ಸುಬ್ಬಮ್ಮಜ್ಜಿಯ ವಿಚಾರ ಬಂತು. "ಊಟಾದ್ಮೇಲೆ ಸುಬ್ಬಮ್ಮಜ್ಜಿ ಮನಿಗ್ ಹೋಗ್ ಬಾರೋ ಮಗಾ" ಅಮ್ಮ ಎಂದೊಡನೆ ಅವರ ನೆನಪುಗಳ ಸುರುಳಿ ಒಂದೊಂದಾಗಿ ಬಿಚ್ಚ ತೊಡಗಿತು.

ADVERTISEMENT

ತಂದೆ ಇಲ್ಲದ ನಮ್ಮನ್ನು ತಂದೆಯಂತೆ ಸಲಹಿದವರು ಅವರೇ. ಚಿಕ್ಕ ವಯಸ್ಸಿಗೆ ನನ್ನ ತಂದೆ ತೀರಿಕೊಂಡಾಗ ಅವರ ಅಪರಕರ್ಮವನ್ನು ಮುಂದೆ ನಿಂತು ಮಾಡಿಸಿದವರು. ನನಗೊಮ್ಮೆ ವಿಪರೀತ ಜ್ವರ ಬಂದಾಗ 10 ಮೈಲಿ ಆಚೆಗಿನ ಕುಮಟಾ ಆಸ್ಪತ್ರೆಗೆ ತನ್ನ ಸೈಕಲ್ಲಿನಲ್ಲಿ ಕರೆದೊಯ್ಯಿದಿದ್ದು ಈ ಸುಬ್ಬಮ್ಮಜ್ಜಿಯೇ. ಡಿಗ್ರಿ ಆಗಿ ಬಿ.ಇಡಿ ಸೇರುವಾಗ ಬಿಡಿಗಾಸೂ ಅಮ್ಮನ ಬಳಿ ಇರಲಿಲ್ಲ. ಆ ವರ್ಷ ಅಡಿಕೆಗೆ ವಿಪರೀತ ಕೊಳೆ. ತನ್ನ ತೋಟದ ಅಡಿಕೆ ಮಾರಿ ನನ್ನ ವಿದ್ಯಾಭ್ಯಾಸಕ್ಕೆ ಹಣ ಕೂಡಿಸಿಕೊಟ್ಟಿತ್ತು. ಪ್ರತಿ ಬಾರಿ ಊರಿಗೆ ಬಂದಾಗಲೂ ಸುಬ್ಬಮ್ಮಜ್ಜಿಯನ್ನು ಮಾತನಾಡಿಸದೇ ಹೋದದ್ದೇ ಇಲ್ಲ.

ತನ್ನ ನಾಲ್ಕು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೇ ನೌಕರಿ ಸಿಗು ಹಂಗೆ ಮಾಡಿತ್ತು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿದ್ದ ಸುಬ್ಬಮ್ಮಜ್ಜಿಯ ಬದುಕು ಈಗ ವಿಚಿತ್ರ ಸಂಕಟಕ್ಕಿಟ್ಟುಕೊಂಡಿತ್ತು. ಗಾಳಿಗೆ ಸಿಕ್ಕ ಗಾಳಿಪಟದಂತೆ. ಕಲಿತು ಬಿಡಾರ ಬಿಟ್ಟ ಮಕ್ಕಳೆಲ್ಲಾ ಈ ಕೊಂಪೆಗೆ ಬರಲು ನಿರಾಕರಿಸಿದರು. ಗಾಳಿಗೆ ತೂರಿದ ಗಾಳಿಪಟದಂತಾದ ಸುಬ್ಬಮ್ಮಜ್ಜಿಯ ಬದುಕು. ಅಷ್ಟೊ ಇಷ್ಟೋ ಒಬ್ಬೊಬ್ಬರ ಮನೆಯಲ್ಲಿದ್ದು ಸಾಕಾಗಿ ತಾನೆಲ್ಲೂ ಬರೋಲ್ಲ ಎಂದು ಪುನಃ ಊರ ಸೇರಿದವಳು ಮತ್ತೆ ಯಾರ ಮನೆಗೂ ಕಾಲಿಡಲಿಲ್ಲ. ನಾನು ಹೋದರೆ ತಾಯಿಯಂತೆ ಪ್ರೀತಿಯ ಮಳೆ ಕರೆಯುತ್ತಿದ್ದಳು.

ಸುಬ್ಬಮ್ಮಜ್ಜಿಯ ನೇರ ನಿಷ್ಠುರ ಮಾತಿನಿಂದಾಗಿ ಅಜ್ಜಿಗೆ ಉಪಚಾರ ಹೇಳುವವರು ಯಾರೂ ಇರಲಿಲ್ಲ. ಆಯಿಯೂ ಈಗೇಕೋ ಬಹಳವೇ ಅಜ್ಜಿ ಮನೆಗೆ ಹೋಗಿ ಬಾ ಎಂದು ಒತ್ತಾಸೆ ಪಡಿಸುವುದನು ನೋಡಿದರೆ ಏನೋ ಒಂಥರಾ ಕಸಿವಿಸಿ.

ಊಟಕ್ಕೆಬ್ಬಿಸಿದಾಗ ಮನೆ ತುಂಬಾ ದೀವಲಸಿನ ಬೋಂಡದ ಘಮ. ನೆತ್ತಿ ಸುಡೋ ಸೂರ್ಯನೂ ನಡುಮನೆಯ ಹೊಕ್ಕು ತಣ್ಣಗಾಗಿದ್ದ. ನಿನ್ನೆ ಬಸ್ ಹತ್ತುವಾಗಲಿನಿಂದ ಖಾಲಿ ಇದ್ದ ಹೊಟ್ಟೆ ಇಂದು ಆಯಿ ಅಡುಗೆಗೆ ಬಕಾಸುರನಂತೆ ಬಾಯಿ ಕಳೆದಿತ್ತು. ಸ್ವಯಂ ಪಾಕದಿಂದ ನಲುಗಿದವನಿಗೆ ಓಯಸಿಸ್ ಸಿಕ್ಕಂತಾಯಿತು. ಚಕ್ಕಳ ಮಕ್ಕಳವಿಕ್ಕಿ ದೇಸಿ ಅಡುಗೆಯನುಂಡೆ. ಅದು ಇದು ದೇಶಾವರಿ ಮಾತು ಎರಡು ತುತ್ತು ಹೆಚ್ಚೇ ಸೇರುವಂತೆ ಮಾಡಿತ್ತು. ಉಂಡ ಹೊಟ್ಟೆ ವಿರಾಮ ಬಯಸಿತ್ತು. ಕಣ್ಣು ಮುಚ್ಚಿದೆ. ಎದ್ದವನಿಗೆ ಆಯಿಯ ಕಾಫಿ ಕಾದು ಕುಳಿತಿತ್ತು. ಕಾಫಿ ಕುಡಿಯುತ್ತಾ ಆಯಿ ಮತ್ತೊಮ್ಮೆ ನೆನಪಿಸಿದಳು.

ತೆರೆ ತೆರೆಯಾಗಿ ಹರಿವ ತೊರೆಯೊಂದ ದಾಟಿ ಇಳಿ ಸಂಜೆ ಹೊತ್ತಿಗೆ ಸುಬ್ಬಮ್ಮಜ್ಜಿಯ ಮನೆ ಎದುರಿಗಿದ್ದೆ. ಎಲೆಯಡಿಕೆ ಕುಟ್ಟುತ್ತಿದ್ದ ಅಜ್ಜಿಗೆ ಒಮ್ಮೆದೊಮ್ಮೆಲೆ ಜೀವರಸವೆಲ್ಲಾ ಮುಖಕ್ಕೆ ಹರಿದು ಮುಖ ಕೆಂಪಾಯಿತು. "ಬಾರಾ ತಮಾ, ಎಷ್ಟು ದಿನಾಗೋತು ನಿನ್ ನೋಡ್ದೆ?" ಎಂದಿತು ಖುಷಿಯಿಂದ. ಹೇಗಿದ್ದಿ ಮರಾಯ ಎಂದು ನನ್ನ ಅಪ್ಪಿಕೊಂಡಿತು. ನನ್ನ ನೆಟಿಗೆ ತೆಗೆದು ಜಗುಲಿಗೆ ಒಯ್ದು ಕೂರಿಸಿ, ನಟಿಗೆ ತೆಗೆಯಿತು.

"ಅಜ್ಜಿ ಆನು ಗುರ್ತು ಸಿಗಲ್ಯನೆ ಯನ್ನಾ?" ಎಂದೆ.
"ಸುಮ್ಮಂಗಿರೋ ತಮಾ, ಯಂಗಿನ್ನು ಕಣ್ ಸಮಾ ಕಾಣ್ತು ಅಕಾ..ಚಸ್ಮಾ ಇಲ್ದೇ ಪೇಪರ್ನೂ ಓದ್ತೆ ಗೊತಿದ್ದಾ"
"ನೀ ಗನಾಗ್ ಊಟಾನೂ ಮಾಡ್ದೇ ಸೋತ್ಹೋಯ್ದೆ ಮರಾಯಾ?"
"ಬಾ ಉಣ್ಣಕ್ಕೂ" ಎಂದು ಅಡುಗೆ ಮನೆಗೆ ಹೋಗುವ ತಯಾರಿಯಲಿದ್ದಳು.
"ಈಗಷ್ಟೇ ಯಂದ್ ಉಟಾತೇ. ನಿಂದಾತನೆ ಅಜ್ಜೀ." ಎಂದೆ.
"ಯಾಕಾ ತಮಾ ಸುಳ್ಹೇಳ್ತೆ."
"ಸುಮ್ಮಂಗಿರೋ ತಮಾ ಮುಖ ಎಷ್ಟ್ ಬಾಡೋಜು ನೋಡು. ಉಣ್ಣಲ್ ಬಾ." ಎನ್ನುತ್ತಾ ಏಳಲು ಹೊರಟಿತು ಅಜ್ಜಿ.

ಬ್ಬಮ್ಮಜ್ಜಿಯನ್ನು ಸುಧಾರಿಸಿ ಕೂರಿಸಲು ಸ್ವಲ್ಪ ಹೆಚ್ಚೇ ಹೊತ್ತು ಬೇಕಾಯಿತು. ಹೊಯ್ಯುವ ಮಳೆಯಂತೆ ಒಂದೇ ಸಮನೇ ತನ್ನ ಹಳೇ ಕಡತ ಬಿಡಿಸಿಕೊಂಡು ಕುಳಿತಿತು ಅಜ್ಜಿ.

ತನ್ನ ಮಗನಾದ ಸೀತಾರಾಮನನ್ನು ಬೆಳೆಸಲು ಪಟ್ಟ ಕಷ್ಟಗಳನ್ನು ಒಂದೊಂದಾಗಿ ಹೇಳತೊಡಗಿತು. ಆತ ಎಂಟು ತಿಂಗಳಿಗೆ ಹುಟ್ಟಿದವ, ಶಾಲೆಗೇ ಹೋಗುತ್ತಿರಲಿಲ್ಲ ಕೊನೆಗೂ ಆತನನ್ನು ಓದಿಗೆ ಹಚ್ಚಿಸಿ ಇಂಜಿನಿಯರಾಗಿ ರೂಪಿಸಲು ಪಟ್ಟ ಕಷ್ಟಗಳನು ಹೇಳತೊಡಗಿತು. ಅಮೇರಿಕಾದಲ್ಲಿ ಎಂ. ಎಸ್. ಮಾಡಲು ಆತನಿಗಾಗಿ ತಾನು ಪಟ್ಟ ಪಾಡಿನ ಗಂಟನ್ನು ಬಿಚ್ಚತೊಡಗಿತು.

" ಅಲ್ದಾ ತಮಾ, ಕಳ್ದ್ ವರ್ಷ ಅಪ್ಪಯನ್ ಶ್ರಾದ್ಧಕ್ಕೆ ನೀ ಎಂತಕಾ ಬರ್ಲೆ?" ಎಂದು ಗದರಿತು.
" ಯಂಗೆ ಎಸ್ಟ್ ಬೇಜಾರಾತು ಗೊತಿದಾ ಮಗಾ?" ಎಂದಿತು.
ಮುಸ್ಸಂಜೆ ದಾಟಿ ಇರುಳು ಇಣುಕಿದ್ದು ಗೊತ್ತಾಗಲೇ ಇಲ್ಲ.

ನನ್ನ ಕೈ ಹಿಡಿದು ನಡು ಮನೆಗೆ ಕರೆದೊಯಿದಿತು. ಕವಚಿಕೊಂಡ ಕತ್ತಲ ಸಾಮ್ರಾಜ್ಯವು ಅಜ್ಜಿಯ ಬದುಕಿನ ರೂಪಕದಂತಿತ್ತು. ಬೆಳಕು ಯಾವಾಗಲೋ ಬೇಲಿ ಕಿತ್ತಿತ್ತು. ಮನೆಯೊಳಗೆ ಹಳ್ಳಿ ಅಡುಗೆ ಸುವಾಸನೆ. ಸೀಮೆಎಣ್ಣೆ ಬುಡ್ಡಿಯೊಂದನ್ನು ಹಚ್ಚಿಕೊಂಡು ಬಂದ ಅಜ್ಜಿ ಕೈಯಲ್ಲಿ ಎಳೆ ಬಾಳೆ ಎಲೆ ಇತ್ತು.

ಒಲೆ ಎದುರಿಂದ ಬಿಸಿ ಬಿಸಿ ದೇಸಿ ಅನ್ನಕ್ಕೆ ಘಮ್ ಎನ್ನುವ ತಿಳಿ ಸಾರು, ಮಿಳ್ಳೆ ತುಪ್ಪ, ನಂಜಿಕೊಳ್ಳಲು ಬಾಳೆ ಕುಂಡಿಗೆಯ ಪಲ್ಯ ಬಡಿಸಿ ಉಣ್ಣು ಎಂದಿತು. ಮರು ಮಾತನಾಡದೇ ಉಣ್ಣುತ್ತಾ ಅಜ್ಜಿಯ ಮುಖ ನೋಡಿದೆ. ಎಂತಹ ಸಂತೃಪ್ತಿ! ಬುಡ್ಡಿ ಬೆಳಕಿನಲಿ ಬೆಳಗುತ್ತಿತ್ತು ಮುಖ.

ಊಟದ ಸಮಯದಲ್ಲೂ ಸೀತಾರಾಮನ ಪುರಾಣವನ್ನೇ ಹೇಳತೊಡಗಿತು. ಇಲ್ಲಿಯವರೆಗೂ ನಾನು ಮನೆಗೆ ಹೋಗುವ ಆಲೋಚನೆಯಲ್ಲಿದ್ದೆ. ಆದರೆ ಅಜ್ಜಿಗೆ ಬೇಸರಿಕೊಳ್ಳಬಹುದೆಂದು ಹೇಳದೆ ಸುಮ್ಮನಿದ್ದೆ.

"ಒಳ್ಕ್ವಾಣಿ ಹಾಸ್ಗೆ ಹಾಸಿದ್ದಿ ನೋಡು ಕತ್ಲಾಗೋತು. ಮನ್ಕ್ಯಾ ತಮಾ." ಎಂದಿತು. ಆಗಲೇ ಗೊತ್ತಾದದ್ದು ಅಜ್ಜಿ ನನ್ನನ್ನೇ ಸೀತಾರಾಮ ಎಂದು ತಿಳಿದು ಬಿಟ್ಟಿತ್ತು. ಅಜ್ಜಿಗೆ ತಿಳಿ ಹೇಳುವುದು ಹೇಗೆ ಎಂದು ಚಿಂತಿಸುತ್ತಾ ಮಜ್ಜಿಗೆ ಅನ್ನ ಉಣ್ಣುತಲಿದ್ದೆ. ಒಳ ಕೋಣೆಯಿಂದ ಸಣ್ಣ ಹಿತ್ತಾಳೆ ಪಟ್ಟಿಗೆಯೊಂದನ್ನು ಹಿಡಿದು ಬಂದು "ನೋಡು ಮಗಾ ಇದು ನಿನ್ ಅಪ್ಪಯ್ಯನ್ ಅಸ್ಥಿ. ಇದ್ನಾ ತೆಕಂಡ್ಹೋಗಿ ಗೋಕರ್ಣದಲ್ ವಿಸರ್ಜಿಸಕ್ಕೂ. ನೀ ಬಪ್ಪದನ್ನೆ ಕಾಯ್ತಾ ಇದ್ದಿದ್ದೆ ಮರಾಯ." ಎಂದು ನನ್ನ ಮುಂದಿಟ್ಟಿತು.

ಸುಬ್ಬಮ್ಮಜ್ಜಿಯ ಗಂಡ ಸತ್ತು ಕೆಲವು ವರುಷಗಳಾಗಿತ್ತು. ತನ್ನ ದುಃಖವನ್ನು ಎದೆಯೊಳಗಡಗಿಸಿಕೊಂಡಿತ್ತು. ತಂದೆ ಸತ್ತಾಗ ಬಂದಿದ್ದ ಸೀತಾರಾಮ ಮತ್ತೆ ಬಂದಿರಲಿಲ್ಲ. ಇಂದಜ್ಜಿಯ ದುಃಖದ ಕಟ್ಟೆಯೊಡೆಯಿತು. ಸುತ್ತಲಿನ ಕತ್ತಲಿನಲಿ ಹೊಳೆವ ಹಿತ್ತಾಳೆಯ ಕರಡಿಗೆ ನನ್ನ ಕೈಲಿತ್ತು. ಹಾಗೇ ಎಷ್ಟೋ ಹೊತ್ತು ಕತ್ತಲಿನಲಿ ನಿಂತೇ ಇದ್ದೆ. ಕಣ್ಣ ಬಿಂದುಗಳು ಜಾರಿ ಹೊಳೆವ ಪೆಟ್ಟಿಗೆ ಮೇಲೆ ಉದುರುತ್ತಾ ಇದ್ದಂತೆ ಬುಡ್ಡಿ ದೀಪ ನಿಧಾನಕ್ಕೆ ಮಂಜಾಗುತ್ತಾ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.