ADVERTISEMENT

ಕಥೆ: ಸತ್ತವರ ಸಂಚಾರದ ದಾರಿ

ಪ್ರಜಾವಾಣಿ ವಿಶೇಷ
Published 14 ಆಗಸ್ಟ್ 2021, 19:30 IST
Last Updated 14 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಿರೀಕ್ಷಿಸಿದುದಕ್ಕಿಂತ ಬಹು ಮುಂಚೆಯೇ ಮೈಕೆಲ್ ಓಬಿಯ ಅಭೀಪ್ಸೆ ಕೈಗೂಡಿದಂತಾಗಿತ್ತು. 1949ರ ಜನವರಿ ತಿಂಗಳಲ್ಲಿ ಆತನನ್ನು ಡ್ಯೂಮ್ ಸೆಂಟ್ರಲ್ ಸ್ಕೂಲಿನ ಮುಖ್ಯೋಪಾಧ್ಯಾಯನೆಂದು ನಿಯುಕ್ತಗೊಳಿಸಲಾಗಿತ್ತು. ಆ ಶಾಲೆಯೋ ಅತ್ಯಂತ ಹಿಂದುಳಿದದ್ದಾಗಿತ್ತು. ಆ ಕಾರಣಕ್ಕಾಗಿ ಮಿಶನ್ ಅಧಿಕಾರಿಗಳು ಆ ಶಾಲೆಯನ್ನು ಮುನ್ನಡೆಸಲು ಒಬ್ಬ ಹರೆಯದ ಉತ್ಸಾಹಿ ವ್ಯಕ್ತಿಯನ್ನು ಕಳುಹಿಸಲು ನಿರ್ಣಯಿಸಿತ್ತು. ಓಬಿ ಆ ಹೊಣೆಗಾರಿಕೆಯನ್ನು ಅತ್ಯುತ್ಸಾಹದಿಂದಲೇ ಒಪ್ಪಿಕೊಂಡಿದ್ದನು. ಅವನಲ್ಲಿ ಹಲವಾರು ರಮ್ಯ ಆಲೋಚನೆಗಳು ಇದ್ದವು. ಅವನ್ನೆಲ್ಲ ಕಾರ್ಯಗತಗೊಳಿಸಲು ಇದೊಂದು ಅವಕಾಶ ಎಂದು ಅವನು ಭಾವಿಸಿದ್ದನು. ಅವನು ಉತ್ಕೃಷ್ಟವಾದ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪಡೆದವನಾಗಿದ್ದ. ಅಲ್ಲದೆ, ಮಾಧ್ಯಮಿಕ ಶಾಲೆಗಳ ‘ಮೇಟಿಕಟ್ಟಿ’ಗೆ ಎಂದು ಅವನನ್ನು ಶಿಕ್ಷಣ ಇಲಾಖೆಯೂ ಗುರುತಿಸಿತ್ತು. ಮಿಶನ್ ಶಿಕ್ಷಣ ಕ್ಷೇತ್ರದಲ್ಲಿ ಅವನು ಅನ್ಯ ಮುಖ್ಯೋಪಾಧ್ಯರಿಗಿಂತ ಭಿನ್ನವಾಗಿದ್ದ. ಅಷ್ಟೇನು ಸುಶಿಕ್ಷಿತರಲ್ಲದ ಹಳೆ ತಲೆಮಾರಿನ ಶಿಕ್ಷಕರನ್ನು ಅವನು ನಿಷ್ಠುರವಾಗಿ ನಿಂದಿಸುತ್ತಿದ್ದ.

ಮುಖ್ಯೋಪಾಧ್ಯನಾಗಿ ಮುಂಬಡ್ತಿ ಸಿಕ್ಕ ಆದೇಶದ ಹಿಗ್ಗಿನ ಸುದ್ದಿ ತಿಳಿಯುತ್ತಿದ್ದಂತೆ ಅವನು, ‘ನಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ತೃಪ್ತಿಕರವಾಗಿ ಕೆಲಸ ಮಾಡಬಹುದಲ್ಲವೆ?’ ಎಂದು ತನ್ನ ಹರೆಯದ ಹೆಂಡತಿಯನ್ನು ಕೇಳಿದ.

‘ನಮ್ಮ ಶಕ್ತಿ ಮೀರಿ ಪ್ರಯತ್ನಿಸೋಣ. ಅಲ್ಲಿ ಒಂದು ಸುಂದರವಾದ ಹೂದೋಟವನ್ನು ನಿರ್ಮಿಸೋಣ. ಎಲ್ಲವನ್ನೂ ಅಹ್ಲಾದಕರವಾಗಿರುವಂತೆ ನೋಡಿಕೊಳ್ಳೋಣ. ಎಲ್ಲವನ್ನೂ ಹೊಚ್ಚ ಹೊಸದಾಗಿಸೋಣ’ ಎಂದು ಆತನ ಹೆಂಡತಿ ಉತ್ತರಿಸಿದಳು. ಅವರ ವಿವಾಹವಾಗಿ ಎರಡು ವರ್ಷಗಳು ಗತಿಸಿದ್ದವು. ಆ ಎರಡು ವರ್ಷಗಳಲ್ಲಿ ತನ್ನ ಗಂಡನ ಆಧುನಿಕ ಕಾರ್ಯಶೈಲಿಯ ಬಗೆಗಿನ ಉತ್ಸಾಹವನ್ನು ನೋಡಿ ಅವಳು ಸಂಪೂರ್ಣವಾಗಿ ಪ್ರಭಾವಿತಳಾಗಿದ್ದಳು. ಹಳೆಯ ಮಾದರಿಯಲ್ಲಿಯೇ ಸವೆದುಹೋದ ಶಿಕ್ಷಕರೆಲ್ಲ ಒನಿತ್ಸಾ ಸಂತೆಯಲ್ಲಿ ವ್ಯಾಪಾರ ಮಾಡುತ್ತ ಕುಳಿತುಕೊಳ್ಳಲು ಮಾತ್ರ ಯೋಗ್ಯರು ಎಂದು ಅವಳ ಗಂಡ ಅವಹೇಳನದ ಮಾತುಗಳನ್ನಾಡುತ್ತಿದ್ದ. ಇದು ಕೂಡ ಅವಳ ಮೇಲೆ ಪ್ರಭಾವ ಬೀರಿತ್ತು. ಅವಳೀಗ ಹರೆಯದ ಮುಖ್ಯೋಪಾಧ್ಯಾಯನ ಬಹು ಪ್ರಶಂಸಿತ ಹೆಂಡತಿಯಾದಂತೆ ಮತ್ತು ಆ ಶಾಲೆಯಲ್ಲಿ ಪಟ್ಟದ ರಾಣಿಯಾದಂತೆ ಭಾವಿಸತೊಡಗಿದಳು.

ಆ ಶಾಲೆಯ ಇನ್ನುಳಿದ ಶಿಕ್ಷಕರ ಹೆಂಡತಿಯಂದಿರು ತನಗೆ ದೊರೆಯಲಿರುವ ಸ್ಥಾನಮಾನದ ಬಗೆಗೆ ಮತ್ಸರಪಡುವುದು ನಿಶ್ಚಿತ; ತಾನಂತೂ ಅಲ್ಲಿನ ಎಲ್ಲ ವಿಷಯಗಳಲ್ಲೂ ನವೀನತೆಯನ್ನು ತರುವವಳಿದ್ದೇನೆ- ಎಂದೆಲ್ಲ ಯೋಚಿಸುತ್ತಿದ್ದಂತೆ ಅಲ್ಲಿನ ಶಾಲೆಯ ಶಿಕ್ಷಕರು ಇನ್ನೂ ಬ್ರಹ್ಮಚಾರಿಗಳೇ ಆಗಿದ್ದರೆ? ಎನ್ನುವ ಸಂಶಯ ಮೂಡಿತು ಅವಳಲ್ಲಿ. ನಿರೀಕ್ಷೆ ನಿರಾಸೆಗಳ ಮಧ್ಯೆ ಹೊಯ್ದಾಡುತ್ತ ತನ್ನ ಗಂಡನನ್ನು ಕೇಳಿಯೇ ಬಿಟ್ಟಳು. ಏನು ಉತ್ತರ ಕೊಡಬಹುದು ಎಂದು ಅವಳು ಕಾತುರದಿಂದ ಗಂಡನ ಕಡೆಗೆ ನೋಡತೊಡಗಿದಳು.
‘ನಮ್ಮ ಶಾಲೆಯ ಶಿಕ್ಷಕರೆಲ್ಲ ಹರೆಯದ ಬ್ರಹ್ಮಚಾರಿಗಳೇ ಆಗಿದ್ದಾರೆ’ ಎಂದು ಅವನು ಉತ್ಸಾಹದಿಂದ ಉತ್ತರಿಸಿದ. ಗಂಡನ ಆ ಉತ್ಸಾಹದಲ್ಲಿ ಅವಳಿಗೆ ಪಾಲ್ಗೊಳ್ಳುವುದು ಕಷ್ಟವಾಯಿತು. ಆದರೆ ಗಂಡನಾದವನು, ‘ಅವರು ಬ್ರಹ್ಮಚಾರಿಗಳಾಗಿರುವುದೇ ನನಗೆ ಅನುಕೂಲಕರ’ ಎಂದು ಮಾತು ಪೂರ್ಣಗೊಳಿಸಿದ.

‘ಹೇಗೆ?’ ಮಡದಿ ಪ್ರಶ್ನಿಸಿದಳು.
‘ಅವರು ಬ್ರಹ್ಮಚಾರಿಗಳಾಗಿರುವುದರಿಂದ ತಮ್ಮೆಲ್ಲ ಸಮಯ-ಸಾಮರ್ಥ್ಯವನ್ನು ಶಾಲೆಗಾಗಿಯೇ ಮೀಸಲಿಡುವರು.’
ಅವನ ಹೆಂಡತಿ ನ್ಯಾನ್ಸಿ ಈಗ ನಿರಾಸೆಯಿಂದ ಕುಗ್ಗಿಹೋದಳು. ಕೆಲ ಹೊತ್ತಿನವರೆಗೆ ಆ ಹೊಸ ಶಾಲೆಯ ಬಗೆಗೆ ಅವಳು ನಿರುತ್ಸಾಹಗೊಂಡಳು. ಆದರೆ ಅವಳ ನಿರುತ್ಸಾಹ ಕ್ಷಣಭಂಗುರವಾದುದಾಗಿತ್ತು. ತನ್ನ ವ್ಯಕ್ತಿಗತ ಬದುಕಿನ ಪುಟ್ಟ ದುರಾದೃಷ್ಟವು ಗಂಡನ ಹಿಗ್ಗಿನ ನಿರೀಕ್ಷೆಯನ್ನು ಮಸಕುಮಾಡಲಿಲ್ಲ.

ಕುರ್ಚಿಯಲ್ಲಿ ಕಾಲು ಮಡಿಚಿ ಕುಳಿತಿದ್ದ ಗಂಡನನ್ನು ಅವಳು ನೋಡಿದಳು. ಅವನ ಭುಜ ಬಾಗಿತ್ತು. ಅವನು ಕೃಶ ದೇಹಿಯಾಗಿದ್ದ. ಆದರೆ ಅವನ ದೈಹಿಕ ಶಕ್ತಿಯ ಸ್ಫೋಟವು ಸುತ್ತಲಿನ ಜನರನ್ನು ದಿಗಿಲುಗೊಳಿಸುವಂತಿತ್ತು. ಈಗ ಅವನನ್ನು ನೋಡುತ್ತಿದ್ದರೆ ಅವನ ದೇಹದ ಶಕ್ತಿಯೆಲ್ಲ ಅವನ ಆಳವಾದ ಕಣ್ಣುಗಳ ಹಿಂದೆ ಮಡುಗಟ್ಟಿನಿಂತಂತೆ ತೋರುತ್ತಿತ್ತು. ಎದುರಿಗಿದ್ದವರ ಮನಸ್ಸನ್ನು ಭೇದಿಸಬಲ್ಲ ಶಕ್ತಿ ಆ ಕಣ್ಣುಗಳಿಗೆ ಇತ್ತು. ಅವನಿಗೀಗ ಕೇವಲ ಇಪ್ಪತ್ತಾರರ ಹರೆಯ. ಅದಾಗ್ಯೂ ಅವನು ಮೂವತ್ತು ವರ್ಷ ಮೀರಿದವನ ಹಾಗೆ ಕಾಣಿಸುತ್ತಾನೆ. ಆದರೆ ಅವನು ಕುರೂಪಿಯಾಗಿರಲಿಲ್ಲ.

‘ಮೈಕೆಲ್, ಏನು ಯೋಚಿಸುತ್ತಿದ್ದಿ?’ ಮಹಿಳಾ ಮ್ಯಾಗಜಿನ್ ಓದಿದ ಮಹಿಳೆಯ ಶೈಲಿಯಲ್ಲಿ ಹೆಂಡತಿ ನ್ಯಾನ್ಸಿ ಕೇಳಿದಳು.
‘ಶಾಲೆಯೊಂದನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ಈ ಜಗತ್ತಿಗೆ ತೋರಿಸುವುದಕ್ಕೆ ನಮಗೆ ದೊರೆತ ಅವಕಾಶ ಇದು ಎಂದು ಯೋಚಿಸುತ್ತಿದ್ದೆ’, ಮೈಕೆಲ್ ಉತ್ತರಿಸಿದ.

ಡ್ಯೂಮ್ ಶಾಲೆ ಅತ್ಯಂತ ಹಿಂದುಳಿದುದ್ದಾಗಿತ್ತು. ಅದರ ಸುಧಾರಣೆಗೆ ಓಬಿ ತನ್ನೆಲ್ಲ ಶಕ್ತಿಯನ್ನು ಧಾರೆಯೆರೆದ. ಅವನ ಮಡದಿ ನ್ಯಾನ್ಸಿ ಕೂಡಾ. ಶಾಲೆಯ ಸುಧಾರಣೆಯ ವಿಷಯದಲ್ಲಿ ಓಬಿ ಎರಡು ಗುರಿಗಳನ್ನು ಹೊಂದಿದ್ದ. ಒಂದು, ಶಿಕ್ಷಕರು ನೀಡುವ ಬೋಧನೆಯ ಗುಣಮಟ್ಟ ಉತ್ತಮವಾಗಿರಬೇಕು. ಎರಡು, ಶಾಲೆಯ ಕಂಪೌಂಡು ಸರ್ವರೀತಿಯಿಂದಲೂ ಸುಂದರ ರೂಪ ಪಡೆಯಬೇಕು.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ನ್ಯಾನ್ಸಿಯ ಕನಸಿನ ತೋಟ ಮೈದಳೆದು ಅರಳತೊಡಗಿತು. ದಾಸವಾಳ ಮತ್ತು ಅಲಮಂಡ್ ಹೂವಿನ ಬೇಲಿಯಲ್ಲಿ ಅರಳಿನಿಂತ ಕಾಂತಿಭರಿತ ಕೆಂಪು ಮತ್ತು ಹಳದಿ ಬಣ್ಣದ ಹೂಗಳಿಂದ ಶೋಭಾಯಮಾನವಾಗಿ ಶಾಲಾವರಣ ಕಂಗೊಳಿಸುತ್ತಿತ್ತು. ಸುತ್ತಲಿನ ಕೊಳಕಾದ ನೆರೆಹೊರೆಯ ಪ್ರದೇಶದಿಂದ ಶಾಲೆಯ ಕಂಪೌಂಡ್‌ ಭಿನ್ನವಾಗಿ ಕಾಣಿಸುತ್ತಿತ್ತು.
ಹೀಗೆ ಒಂದು ಸಂಜೆ, ಓಬಿ ತನ್ನ ಪರಿಶ್ರಮವನ್ನು ಮನದಲ್ಲಿಯೇ ಹೊಗಳಿಕೊಳ್ಳುತ್ತ ಕುಳಿತಿರುವಂತೆ ಶಾಲೆಯ ಕಂಪೌಂಡಿನಲ್ಲಿ ಒಬ್ಬಳು ಮುದುಕಿ ಚೆಂಡುಹೂವಿನ ಮಡಿಯಗುಂಟ ಹಾಗೂ ಬೇಲಿಯ ಗುಂಟ ಕುಟುಂತ್ತ ನಡೆದು ಹೋಗುತ್ತಿರುವುದನ್ನು ಗಮನಿಸಿದ. ಅವನು ಅವಮಾನಿತನಾದಂತೆ ದಿಗಿಲುಗೊಂಡ. ಅವಸರಿಸಿ ಅಲ್ಲಿಗೆ ಹೋದ. ಹಳ್ಳಿಯಿಂದ ಈ ಕಂಪೌಂಡ್‌ ಮೂಲಕ ಹಾಯ್ದು ಆಚೆ ಬೆಳೆದ ಕುರುಚಲು ಕಂಟಿಗಳ ಕಡೆಗೆ ಹೋಗಲು ಇದ್ದ ದಾರಿಯ ಮಸುಕು ಮಸುಕಾದ ಗುರುತನ್ನು ಅಲ್ಲಿ ಕಂಡ.

ಕಳೆದ ಮೂರು ವರ್ಷಗಳಿಂದ ಇದೇ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕನ ಬಳಿ ಬಂದು, ‘ಹಳ್ಳಿಯ ಜನರನ್ನು ಈ ಕಾಲುದಾರಿಯಲ್ಲಿ ಏಕೆ ತಿರುಗಾಡಲು ಬಿಟ್ಟಿರುವಿರಿ? ಇದು ಸೋಜಿಗದ ಸಂಗತಿ. ನನಗೆ ಇದನ್ನು ನಂಬಲಾಗುತ್ತಿಲ್ಲ’ ಎಂದು ಹೇಳಿದ.
‘ಈ ದಾರಿ ಈ ಹಳ್ಳಿಯ ಜನರ ಪಾಲಿಗೆ ಬಹು ಮುಖ್ಯವಾದುದು ಸರ್. ಈ ದಾರಿಯನ್ನು ಅವರು ಕ್ವಚಿತ್ತವಾಗಿ ಬಳಸುತ್ತಾರೆ. ಈ ದಾರಿಯು ಹಳ್ಳಿಯಲ್ಲಿರುವ ಗುಡಿಯನ್ನು ಮತ್ತು ಕಂಪೌಂಡಿನ ಆಚೆಗಿರುವ ಸುಡುಗಾಡನ್ನು ಜೋಡಿಸುತ್ತದೆ’ ಎಂದು ತಪ್ಪೊಪ್ಪಿಕೊಳ್ಳುವ ರೀತಿಯಲ್ಲಿ ಆ ಶಿಕ್ಷಕ ಉತ್ತರಿಸಿದ.

‘ಗುಡಿಯಿಂದ ಸುಡುಗಾಡಿಗೆ ಹೋಗುವ ಆ ದಾರಿಗೂ ಶಾಲೆಯ ಈ ಕಂಪೌಂಡಿಗೂ ಏನು ಸಂಬಂಧ?’ ಮುಖ್ಯೋಪಾಧ್ಯಾಯ ಪ್ರಶ್ನಿಸಿದ.
‘ನನಗೆ ಅದೇನೂ ಗೊತ್ತಿಲ್ಲ’, ಶಿಕ್ಷಕ ಭುಜ ಹಾರಿಸುತ್ತ ಉತ್ತರ ನೀಡಿದ. ‘ಆದರೆ ಒಂದು ಸಾರಿ ನಾವು ಈ ದಾರಿಯನ್ನು ಮುಚ್ಚಲು ಪ್ರಯತ್ನಿಸಿದಾಗ ದೊಡ್ಡ ರಾದ್ಧಾಂತವೇ ನಡೆಯಿತು.’

‘ಅದೆಲ್ಲ ಹಳೆಯ ಕಾಲದ ಮಾತು. ಆದರೆ ಇನ್ನು ಮುಂದೆ ಅವರು ಈ ದಾರಿಯನ್ನು ಬಳಸಲಾರರು’ ಎಂದು ಹೇಳುತ್ತ ಓಬಿ ಅಲ್ಲಿಂದ ಹೊರಟು ಹೋದ. ‘ಮುಂದಿನ ವಾರ ಶಾಲಾ ತಪಾಸಣೆಗೆ ಸರಕಾರಿ ಶಿಕ್ಷಣಾಧಿಕಾರಿಗಳು ಬಂದರೆ ಏನು ಅಂದುಕೊಳ್ಳಲಿಕ್ಕಿಲ್ಲ? ಹೀಗೆಯೇ ಬಿಟ್ಟರೆ ಈ ಊರಿನ ಜನ ಅಧಿಕಾರಿಗಳ ಎದುರಿಗೇನೆ ಈ ಶಾಲೆಯ ಕೋಣೆಯಲ್ಲಿ ತಮ್ಮ ಅನಾಗರಿಕ ಧರ್ಮಾಚರಣೆಗಳನ್ನು ಆಚರಿಸಲು ಬಳಸಿಕೊಂಡು ಬಿಡುತ್ತಾರೆ. ಇದಕ್ಕೆ ಏನಾದರೂ ಮಾಡಲೇಬೇಕು.’

ಶಾಲೆಯ ಆವರಣದಲ್ಲಿನ ಆ ದಾರಿಯನ್ನು ಪ್ರವೇಸಿಸುವ ಹಾಗೂ ಅಲ್ಲಿಂದ ನಿರ್ಗಮಿಸುವ ದಾರಿಗೆ ಅಡ್ಡವಾಗಿ ದಪ್ಪನೆಯ ಕೋಲುಗಳನ್ನು ನೆಡಲಾಯಿತು. ಹಾಗೂ ಮುಳ್ಳಿನ ತಂತಿಯಿಂದ ಅವುಗಳನ್ನು ಭದ್ರಗೊಳಿಸಲಾಯಿತು.

ಇದಾದ ಮೂರು ದಿವಸಗಳ ನಂತರ ಆ ಊರಿನ ಅನಿ ದೇವರ ಪೂಜಾರಿಯು ಮುಖ್ಯೋಪಾಧ್ಯಾಯನನ್ನು ಭೇಟಿಯಾಗಲು ಬಂದ. ಪೂಜಾರಿ ಹಣ್ಣು ಹಣ್ಣು ಮುದುಕನಾಗಿದ್ದ. ಬೆನ್ನು ಬಾಗಿಸಿಕೊಂಡು ನಡೆಯುತ್ತಿದ್ದ. ಅವನ ಕೈಯಲ್ಲಿ ಗಟ್ಟಿಮುಟ್ಟಾದ ಕೋಲೊಂದು ಇತ್ತು. ತಾನು ಹೇಳುವ ಮಾತಿಗೆ ಒತ್ತು ಕೊಡುವಾಗಲೆಲ್ಲ ಹಾಗೂ ಹೊಸ ವಾದವನ್ನು ಮಂಡಿಸುವಾಗಲೆಲ್ಲ ಆ ಕೋಲಿನಿಂದ ಆ ಪೂಜಾರಿ ನೆಲಕ್ಕೆ ಕುಟ್ಟುತ್ತಿದ್ದ.

ಕುಶಲೋಪರಿಯ ಮಾತುಗಳು ಮುಗಿಯುತ್ತಿದ್ದಂತೆ, ‘ನಮ್ಮ ಪೂರ್ವಿಕರು ಬಳಸುತ್ತ ಬಂದ ದಾರಿಯನ್ನು ಇತ್ತೀಚೆಗೆ ಮುಚ್ಚಲಾಗಿದೆಯಂತೆ. . .’ ಎಂದು ಪೂಜಾರಿ ನೇರ ವಿಷಯಕ್ಕೆ ಬಂದ.

‘ಹೌದು, ನಮ್ಮ ಶಾಲೆಯ ಆವರಣದಲ್ಲಿ ಜನರು ಹೆದ್ದಾರಿಯಲ್ಲಿ ತಿರುಗಾಡಿದಂತೆ ಓಡಾಡಲು ಅವಕಾಶ ಕೊಡಲಾಗದು’, ಓಬಿ ಉತ್ತರಿಸಿದ.
ಪೂಜಾರಿ ತನ್ನ ಕೈಯಲ್ಲಿನ ಕೋಲನ್ನು ನೆಲಕ್ಕೆ ಕುಟ್ಟುತ್ತ ಹೇಳಿದ, ‘ನೀನಿನ್ನೂ ಬಹಳ ಸಣ್ಣವನಿದ್ದೀ. ಈ ದಾರಿ ನೀನು ಹುಟ್ಟುವುದಕ್ಕಿಂತಲೂ ಮೊದಲೇ, ಅಷ್ಟೇ ಏಕೆ ನಿನ್ನ ಅಪ್ಪ ಹುಟ್ಟುವುದಕ್ಕಿಂತಲೂ ಮುಂಚೆಯೇ ಇಲ್ಲಿ ಇತ್ತು. ಈ ಹಳ್ಳಿಯ ಜನರ ಬದುಕು ಈ ದಾರಿಯನ್ನು ನಂಬಿ ನಿಂತಿದೆ. ಇಲ್ಲಿ ಯಾರಾದರೂ ಸತ್ತರೆ ಅವರೆಲ್ಲ ಈ ದಾರಿಯ ಮೂಲಕವೇ ಹೋಗುತ್ತಾರೆ. ಮಡಿದುಹೋದ ನಮ್ಮ ಪೂರ್ವಜರು ಈ ದಾರಿಯ ಮೂಲಕವೇ ಬಂದು ನಮಗೆ ದರ್ಶನ ನೀಡುತ್ತಾರೆ. ಇನ್ನೂ ಮುಖ್ಯವಾದ ಸಂಗತಿ ಎಂದರೆ ಹೊಸದಾಗಿ ಜನಿಸಿ ಬರುವ ಮಕ್ಕಳೂ ಇದೇ ದಾರಿಯ ಮೂಲಕ ನಮ್ಮಲ್ಲಿಗೆ ಬರುತ್ತಾರೆ. . .’
ಓಬಿ ನಗುಮೊಗದಿಂದ ಪೂಜಾರಿಯ ಮಾತನ್ನು ಕೇಳಿಸಿಕೊಂಡ.

‘ನಮ್ಮ ಶಾಲೆಯ ಉದ್ದೇಶವೇ ಇಂತಹ ನಂಬಿಕೆಗಳನ್ನು ನಿರ್ಮೂಲನೆ ಮಾಡುವುದಾಗಿದೆ. ಸತ್ತು ಹೋದವರು ಈ ದಾರಿಯ ಮೇಲೆ ತಿರುಗಾಡಲು ಹೇಗೆ ಸಾಧ್ಯ? ನಿಮ್ಮ ಈ ನಂಬಿಕೆ ರಮ್ಯ ರೋಚಕವಾಗಿದೆ. ಇಂತಹ ನಂಬಿಕೆಗಳನ್ನು ನೋಡಿ ಗೇಲಿಮಾಡುವುದನ್ನು ನಿಮ್ಮ ಮಕ್ಕಳಿಗೆ ಕಲಿಸುವುದೇ ನಮ್ಮ ಕರ್ತವ್ಯವಾಗಿದೆ’, ಓಬಿ ಉತ್ತರಿಸಿದ.

‘ನೀನು ಹೇಳುತ್ತಿರುವುದು ನಿಜವಿರಬಹುದು. ಆದರೆ ನಾವು ನಮ್ಮ ಪೂರ್ವಜರು ಮಾಡುತ್ತ ಬಂದುದನ್ನು ಅನುಸರಿಸಿಕೊಂಡು ಬಂದಿದ್ದೇವೆ. ಈ ದಾರಿಯನ್ನು ಮೊದಲಿನಂತೆ ತೆರವುಗೊಳಿಸಿಬಿಟ್ಟರೆ ನಾವ್ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ. ಹದ್ದೂ ಕುಳಿತುಕೊಳ್ಳಲು ಅವಕಾಶವಿರಬೇಕು ಹಾಗೂ ಗಿಡುಗವೂ ಕುಳಿತುಕೊಳ್ಳಲು ಅವಕಾಶವಿರಬೇಕು. ಎಲ್ಲರ ಅಭಿಪ್ರಾಯಗಳಿಗೂ ಇಲ್ಲಿ ಅವಕಾಶವಿರಬೇಕು’ ಇಷ್ಟು ಹೇಳುತ್ತ ಪೂಜಾರಿ ಅಲ್ಲಿಂದ ಎದ್ದು ಹೊರಟು ಹೋದ.

‘ಅದೆಲ್ಲ ಸಾಧ್ಯವಿಲ್ಲ, ನನ್ನನ್ನು ಕ್ಷಮಿಸಿ’ ಎಂದ ಯುವ ಮುಖ್ಯೋಪಾಧ್ಯಾಯ. ‘ಇಷ್ಟಂತೂ ಸತ್ಯ ಶಾಲೆಯ ಆವರಣವು ಸಾರ್ವಜನಿಕ ರಸ್ತೆಯಾಗಲು ನಾನು ಬಿಡಲಾರೆ. ಹಾಗೆ ಮಾಡುವುದು ನಿಯಮ ಬಾಹಿರವಾದುದು. ಊರವರೆಲ್ಲ ಸೇರಿ ಈ ಕಂಪೌಂಡಿಗೆ ಹತ್ತಿರವೇ ಇನ್ನೊಂದು ಹೊಸ ದಾರಿಯನ್ನು ನಿರ್ಮಿಸಿಕೊಳ್ಳುವುದು ಒಳಿತು ಎನ್ನುವುದು ನನ್ನ ಸಲಹೆ. ಹಾಗೊಂದು ವೇಳೆ ನೀವು ಮಾಡಿಕೊಳ್ಳುವುದಾದರೆ ನಮ್ಮ ಶಾಲೆಯ ವಿದ್ಯಾರ್ಥಿಗಳೂ ದಾರಿ ನಿರ್ಮಾಣದಲ್ಲಿ ಕೈ ಜೋಡಿಸುತ್ತಾರೆ. ಸಣ್ಣ ಪ್ರಮಾಣದ ಈ ಬದಲಾವಣೆ ನಮ್ಮ ಪೂರ್ವಜರಿಗೆ ಹೊರೆಯಾಗಲಾರದು ಎಂದು ನನ್ನ ನಂಬುಗೆ.’

‘ನಿನ್ನೊಂದಿಗೆ ಮಾತಾಡಲು ನನ್ನಲ್ಲಿ ಮತ್ತೇನೂ ಉಳಿದಿಲ್ಲ’ ಎಂದು ಮುದುಕ ಪೂಜಾರಿ ಹೇಳಿದಾಗ ಶಾಲೆಯ ಆವರಣದಿಂದ ಆಗಲೇ ಹೊರಗೆ ಬಂದಿದ್ದ. ಇದಾದ ಎರಡು ದಿನಗಳ ನಂತರ ಆ ಊರಿನ ಯುವತಿಯೊಬ್ಬಳು ಹೆರಿಗೆ ಸಂದರ್ಭದಲ್ಲಿ ಮಡಿದು ಬಿಟ್ಟಳು. ಊರ ಜನರೆಲ್ಲ ತಕ್ಷಣವೇ ಭವಿಷ್ಯ ಹೇಳುವವನನ್ನು ಸಂಪರ್ಕಿಸಿದರು. ಬೇಲಿ ಹಾಕುವ ಮೂಲಕ ಅವಮಾನಿತವಾಗಿರುವ ಮೃತ ಆತ್ಮವನ್ನು ತೃಪ್ತಿ ಪಡಿಸಲು ಬೇಕಾದ ಆಹುತಿಗಳ ಯಾದಿಯನ್ನೇ ಆತ ಜನರೆದುರಿಗೆ ಇಟ್ಟ.

ಮರುದಿನ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ತಾನು ಇಷ್ಟು ದಿನಗಳ ಕಾಲ ಶ್ರಮವಹಿಸಿ ರೂಪಿಸಿದ ಆವರಣವೆಲ್ಲ ಧ್ವಂಸವಾಗಿ ಹೋಗಿತ್ತು. ಆ ದಾರಿಗೆ ಅಡ್ಡವಾಗಿ ನಿಲ್ಲಿಸಿದ್ದ ಸುಂದರವಾದ ಬೇಲಿ ಚೆಲ್ಲಾಪಿಲ್ಲಿಯಾಗಿ ಹೋಗಿದ್ದವು. ಅಲ್ಲಿ ಬೆಳೆದು ನಿಂತಿದ್ದ ಹೂವಿನ ಗಿಡಗಳನ್ನೆಲ್ಲ ತುಳಿದು ಧ್ವಂಸ ಮಾಡಲಾಗಿತ್ತು. ಶಾಲೆಯ ಕೋಣೆಯೊಂದರ ಮೇಲೆ ದಾಳಿ ಮಾಡಿ ಅದನ್ನೂ ಕೆಡುಹಲಾಗಿತ್ತು.

ಅದೇ ದಿನವೇ ಬಿಳಿ ಸಾಹೇಬ ಶಾಲಾ ತಪಾಸಣೆಗೆ ಬಂದ. ಇದನ್ನೆಲ್ಲ ನೋಡಿ ಶಾಲೆಯ ಆವರಣದ ಸ್ಥಿತಿಯನ್ನು ನೋಡಿ ಅಲ್ಲಿನ ಜನರ ಕುರಿತು ತುಂಬಾ ಗಂಭೀರವಾದ ವರದಿಯನ್ನು ಬರೆದ. ಆದರೆ ಅದಕ್ಕೂ ಗಂಭೀರವಾದ ವರದಿಯನ್ನು ಮುಖ್ಯೋಪಾಧ್ಯಾಯನ ನಿಲುವಿನ ಕುರಿತು ಬರೆದಿದ್ದ. ‘ಇಲ್ಲಿ ಸಂಭವಿಸಿದ ಊರ ಜನರ ಹಾಗೂ ಶಾಲೆಯ ನಡುವಿನ ‘ಬುಡಕಟ್ಟು ತಿಕ್ಕಾಟ’ವು ಹಾದಿತಪ್ಪಿಸುವಂತಿರುವ ಅತೀ ಉತ್ಸಾಹದ ಮುಖ್ಯೋಪಾಧ್ಯಾನ ಕಾರಣದಿಂದಲೇ ನಡೆದಿದೆ’ ಎಂಬ ಗಂಭೀರವಾದ ಷರಾ ಬರೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.