ADVERTISEMENT

ಪ್ರಕಾಶ್ ಖಾಡೆ ಅವರ ಕಥೆ: ಇಲ್ಲಿಂದ ಮೇಲೆ ಶಬ್ದವಿಲ್ಲ..

ಪ್ರಕಾಶ್ ಖಾಡೆ
Published 7 ಮೇ 2022, 20:30 IST
Last Updated 7 ಮೇ 2022, 20:30 IST
ಸಾಂದರ್ಭಿಕ ಕಲೆಕಲೆ: ವೆಂಕಟ್ರಮಣ ಭಟ್‌
ಸಾಂದರ್ಭಿಕ ಕಲೆಕಲೆ: ವೆಂಕಟ್ರಮಣ ಭಟ್‌   

ಮೊದಲ ಗುರುವಿನ ಸ್ಮರಣೆಯ ತಗದು

ಸರ್ವರಿಗೆ ಮಾಡುವೆ ನಮ ಶರಣೋ..
ನಿರಂಕಾರ ನಿರ ಬೈಲಿನೊಳಗ ಇದ್ದ
ಆದಿ ಮೂರುತಿಗಿ ನಮ ಶರಣೋ..

ಅಂತಾ ಜೋರಾಗಿ ಹಾಡ ಹೇಳಕೋತ, ಪೆಟಗಿ, ತಬಲಾ ನಾದದೊಂದಿಗೆ ವೇಷಗಾರ ಮಂದಿ, ಸಾಲಿ ಗೇಟ ದಾಟಿ ಹೆಡ್ ಮಾಸ್ತರ ರೂಮಿಗೆ ಎಂಟ್ರಿ ಕೊಟ್ಟರು. ಮೊದಲೇ ಲೆಖ್ಖ ತಪ್ಪಿ ಆಕಾಶಕ್ಕ ಮುಖಾ ಮಾಡಿ ಚಿಂತ್ಯಾಗ ಕುಂತಿದ್ದ ಹೆಡ್ ಮಾಸ್ತರು ಇವರ ಸವುಂಡ ಕೇಳಿ ಚಿಟ್ಟನ ಚೀರಿ, ‘ಯಾರ ಬರಾಕ ಹೇಳ್ಯಾರ ನಿಮಗ ಒಳಗ, ನಡಿರಿ ಅತ್ತಾಗ, ಯಾವ ಹಾಡು ಇಲ್ಲಾ ಯಾವ ಡ್ಯಾನ್ಸು ಇಲ್ಲಾ’ ಎಂದು, ಬಾಯಲಿದ್ದ ಗುಟಕಾ ಉಗುಳಿ, ಒಂದ ಸವನ ಜೋರ ಮಾಡಾಕ ಚಾಲೂ ಮಾಡಿದರು.

ADVERTISEMENT

ಮಗ್ಗಲ ತರಗತಿ ಕೋಣಿಯೊಳಗ ಓದುತಿದ್ದ ಹುಡುಗರು ಹೋ.. ಎಂದು ಚೀರಕೊಂತ ಹೊರಗ ಓಡಿ ಬಂದವು, ಹೆಮಾ (ಹೆಡ್ ಮಾಸ್ತರ) ಅವರಿಗೆ ಮತ್ತಷ್ಟು ಸಿಟ್ಟು ನೆತ್ತಿಗೇರಿ ಮೂಲ್ಯಾನ ಬಡಿಗಿ ತಗೊಂಡು ಹುಡಗರ ಮ್ಯಾಲ ಲಾಠಿ ಛಾರ್ಜಿಗೆ ನಿಂತರು. ಈ ಆಟವೆಲ್ಲಾ ಮೂಕವಿಸ್ಮಿತರಾಗಿ ನೋಡುತ್ತಿದ್ದ ಬಹಿರೂಪಗಾರ ಮಂದಿ, ಸಣ್ಣಂಗ ಬಾಯಿ ತೆಗೆದು, ‘ಮಾಸ್ತರ ನಾವು ಮಕ್ಕಳಿಗಿ ಹಾಡ ಹೇಳ್ಯಾಕ ಬಂದೇವು, ಒಂದಷ್ಟ ಚೆಂದಾಗಿ ಹಾಡ ಹೇಳಿ, ನೀವು ಕೊಟ್ಟಷ್ಟು ತಗೊಂಡ ಹೋಗತೀವಿ, ಹೀಂಗ್ಯಾಕ ಮೈಮ್ಯಾಲ ಹಾವ ಏರಿದಾಂಗ ಮಾಡಕ ಹತ್ತಿರಿ,’ ಅಂದ್ರು . ಈ ಮಾತು ಕೇಳಿ, ಮತ್ತೆ ಹೆಮಾ ಅವರ ಸಿಟ್ಟು ಬ್ರಹ್ಮಾಂಡಕ್ಕ ಏರಿ ಬಹಿರೂಪಗಾರರಿಗೆ ಮತ್ತಷ್ಟು ಕೇಳಬಾರದ ಪದಾ ಪ್ರಯೋಗ ಮಾಡಿ ಏದುಸಿರು ಬಿಡುತ್ತಾ ತೇಕ ಬಂದು ದೊಪ್ಪನ ಕೆಳಗ ಬಿದ್ದ ಬಿಟ್ಟರು.

ಆವಾಗ ಸುಮ್ಮನ ಮನರಂಜನಿ ನೋಡಕೋತ ನಿಂತಿದ್ದ ಅಸಿಸ್ಟಂಟ್ ಮಾಸ್ತರರು, ಇದು ತುಂಬಾ ಗಂಭೀರವಾಯ್ತು ಅಂತಾ ಓಡಿಬಂದು ಹೆಮಾ ಅವರನ್ನು ಎಬ್ಬಿಸಾಕ ನೋಡಿದರು. ಲತಾ ಮೆಡಮ್ ಓಡಿ ಹೋಗಿ ತನ್ನ ನೀರಿನ ಬಾಟ್ಲಿ ತಂದು ಮುಖಕ್ಕ ನೀರ ಗೊಜ್ಜಿದರು. ಆವಾಗ ಉಸ್ಸೆಪ್ಪಾ ಎಂದು ಜೀವ ಬಂದಾಂಗ ಆಗಿ ಹೆಮಾ ಎದ್ದು ಕುಂತರು. ಇದೆಲ್ಲಿ ಹೆಚ್ಚು ಕಡಿಮಿ ಆಗಿ ನಮ್ಮ ಮ್ಯಾಲ ಬಂದೀತ ಅಂತಾ ಬಹಿರೂಪಗಾರ ಮಂದಿ ಹಿಂದ ಹೊಳ್ಳಿ ನೋಡಲಾರದ ಓಡಿ ಹೋಗಿದ್ದರು.

ಇದಾಗಿ ನಡೆದು ವಾರ ಕಳೆದಿರಲಿಲ್ಲ ಮತ್ತ ಈ ಸಲಾ ಸರ್ಕಸ್ ಮಾಡಾವರು ಎಂಟ್ರಿ ಕೊಟ್ಟರು. ಬರುವಾಗ ಬಡಕಲಾದ ಮಂಗ್ಯಾನೂ ಕರಕೊಂಡ ಬಂದಿದ್ದರು. ಸೀದಾ ಹೆಮಾ ರೂಮಿಗಿ ಬಂದು, ತಮ್ಮ ಉದ್ದೇಶ ತಿಳಿಸಿದರು. ‘ಮಕ್ಕಳಿಗೆ ಮಧ್ಯಾಹ್ನ ಅಟ ಸರ್ಕಸ್ ತೋರಿಸ್ತೀವಿ. ಊಟಕ್ಕ ಬಿಟ್ಟಾಗ, ದುಡ್ಡ ತರಾಕ ಹೇಳ್ರೀ, ಮತ್ತ ನಿಮ್ಮ ಮಾಸ್ತರ ಮಂದಿ ಅಟ ಯಾರ ಹತ್ತ ಕೊಡ್ರಿ, ಯಾರ ಇಪ್ಪತ್ತ ಕೊಡ್ರಿ, ದುಡ್ಡ ಗ್ವಾಳೆ ಮಾಡಿ ಕೊಡ್ರಿ ಪುಣ್ಯಾ ಬರತೈತಿ’ ಅಂತಾ ತುಂಬಾ ದಹನೀಯವಾಗಿ ಕೇಳಿದರು. ತಮ್ಮ ಬ್ರಹ್ಮಾಂಡಕ್ಕೆ ಬೆಂಕಿ ಹತ್ತಿದ ಹಾಗೆ ಸಿಟ್ಟಿಗೆದ್ದ ಹೆಮಾ ‘ಬಿಲ್ ಕುಲ್ ಆಗಾಂಗಗಿಲ್ಲ ಸಾಲಿಯೇನ ಸಾರ್ವಜನಿಕ ಛತ್ರಾ ಮಾಡಿರೇನು, ಮೊದಲ ಇಲ್ಲಿಂದ ಹೋಗತಿರೋ, ಇಲ್ಲಾ ಪೊಲೀಸರಿಗೆ ಫೋನ ಮಾಡಿ ಜೀಪ ತರಿಸಿ ಒದ್ದ ಒಳಗ ಹಾಕಲೋ’ ಎಂದು ಒಂದೇ ಸವನೆ ಬಾಯಿ ಮಾಡಿ ಓಡಿಸಿಬಿಟ್ಟರು.

ಇದು ಸಹಪಾಠಿ ಶಿಕ್ಷಕರಿಗೆ ಹೊಸದೇನು ಆಗಿರಲಿಲ್ಲ. ಮೇಲಾಗಿ ಹೆಮಾರ ಕಿರಿ ಕಿರಿ ಅಂತೂ ಯಾರಿಗೂ ತಪ್ಪಿರಲಿಲ್ಲ. ಇದು ಸಾರ್ವಜನಿಕ ಸಾಲಿ, ಸರಕಾರದ್ದ ಅಂದಮ್ಯಾಲ ಇಂಥಾ ಕಲಾಕಾರ ಮಂದಿ ಬರವರ, ತಮ್ಮ ಕಲೆ ಅಷ್ಟು ಮಕ್ಕಳಿಗೆ ಪ್ರದರ್ಶನ ಮಾಡಿ ಸಿಕ್ಕಷ್ಟು ತೆಗೆದುಕೊಂಡು ಹೋಗೋ ಈ ಕಲಾಕಾರ ಮಂದಿ ಅಂದ್ರ ಈ ಹೆಮಾ ಉರದ ಬೀಳತಿದ್ದರು. ಇಂಥ ಮಂದಿಗಿ ಕೊಡಲಾರದ ಹೆಮಾ ಸಂಜೀಮುಂದ ಇಸ್ಪೇಟ್ ಆಡೋ ಗ್ಯಾಂಗನ್ಯಾಗ ಸೇರಿ ಕಳಕೊಂಡಿದ್ದ ಹೆಚ್ಚು.

*

ಏನಾತೋ ಗೊತ್ತಿಲ್ಲ ಹೆಮಾ ತೀವ್ರ ಜಡ್ಡಿಗಿ ಬಿದ್ರು, ಊರಾನ ಡಾಕ್ಟರಿಗೆ ತೋರಿಸಿದರು, ಅವರ ಕೊಟ್ಟ ಔಷಧಿಗಿ ಆರಾಮವಾಗಲಿಲ್ಲ. ಹುಬ್ಬಳ್ಳಿಗಿ ಕರಕೊಂಡ ಹೋಗ್ರಿ ಅಂತಾ ಊರಾನ ಡಾಕ್ಟರು ಸಲಹೆ ಮಾಡಿದರು, ಊರ ದವಾಖಾನಿ ಆಂಬುಲೇನ್ಸದಾಗ ಹೆಮಾರನ್ನ ಹಾಕ್ಕೊಂಡು ಕುಟುಂಬದವರು ಹುಬ್ಬಳ್ಳಿಗಿ ಹ್ವಾದರು. ಅಲ್ಲಿ ವಾರ ಒಪ್ಪತ್ತು ಚಿಕಿತ್ಸೆ ನಡೀತು. ಸಣ್ಣ ಆಪರೇಷನ್ನು ಆಯ್ತು. ಇತ್ತ ಹೆಮಾರ ಚಾರ್ಜು ಮಾಂತೂ ಮಾಸ್ತರಿಗಿ ಬಂತು. ಮಾಂತೂ ಮಾಸ್ತರ ಜಾರ್ಜ ತುಗೊಂಡ ಮ್ಯಾಲ ಸಾಲಿ ಸಣ್ಣಂಗ ಚಲೋ ನಡಿಯಾಕ ಚಾಲೂ ಆತು. ಹೆಮಾ ಇದ್ದಾಗ ದಿನಕ್ಕೊಂದು ರಾದ್ಧಾಂತ ಇದ್ದಿದ್ದ. ಮತ್ತ ಸರಿಯಾಗಿ ಸಾಲ್ಯಾಗ ಇರಲಾರದನ ಸಹಿ ಮಾಡಿ ಒಮ್ಮೊಮ್ಮಿ ಇಸ್ಪೇಟ್ ಆಡಾಕ ಹೋಗಿ ಬಿಡತಿದ್ದರು. ಮಾಂತೂ ಮಾಸ್ತರು ಚಾರ್ಜ ತುಗೊಂಡ ಮ್ಯಾಲ ಮತ್ತ ಕಲಾಕಾರ ಮಂದಿ ಬರೋದು ಚಾಲೂ ಆತು.

ಈ ಸಲ ಜುಬ್ಬಾ ತೊಟಗೊಂಡ ಒಬ್ಬ ಮನಷ್ಯಾ ಬಂದಾ, ಇನ್ ಚಾರ್ಜ ಹೆಮಾ ಮಾಂತೂ ಮಾಸ್ತರ ಕಂಡು ತನ್ನ ಪರಿಚಯ ಹೇಳಿಕೊಂಡ. ‘ಸರ್, ನಾನು ಯೋಗಾಸನ ಗುರು. ಶ್ರೀಪಾದ ಅಂತಾ ನನ್ನ ಹೆಸರು, ಬೆಳಗಾವದಾಗ ಎಂಜನೀಯರಿಂಗ್ ಮುಗಿಸಿನಿ. ನಮ್ಮ ಗುರುಗಳದು ಒಂದ ಆಶ್ರಮವಿದೆ, ಆ ಆಶ್ರಮದ ವತಿಯಿಂದ ನಾವು ಸಾಲಿಗೆ ಶನಿವಾರಕ್ಕೊಮ್ಮೆ ಬಂದು ಶಾಲಾ ಮಕ್ಕಳಿಗೆ ಯೋಗಾಸನ ಹೇಳಕೊಡಿತಿವಿ, ಉಚಿತವಾಗಿ ಹೇಳತಿವು, ನೀವು ದಯವಿಟ್ಟು ನಮಗ ಪರಮಿಶೆನ್ನು ಕೊಡಬೇಕು ಅಂದ್ರು’. ಆವಾಗ ಮಾಂತೂ ಮಾಸ್ತರರು ತಮ್ಮ ಶಿಕ್ಷಕರ ಮೀಟಿಂಗ್ ಕರೆದು ಶ್ರೀಪಾದರನ್ನು ಪರಿಚಯಿಸಿ ಬಂದ ಉದ್ದೇಶ ತಿಳಿಸಿದರು. ಎಲ್ಲ ಮಾಸ್ತರರು, ‘ಆಗಬಹುದು ನಮ್ಮ ಗ್ರಾಮೀಣ ಸಾಲಿ ಮಕ್ಕಳು ಯೋಗಾಸನ ಕಲಿತು ಸುಧಾರಿಸಿದರ ಸಾಕು’ ಅಂತಾ ಒಪ್ಪಿಗಿ ಕೊಟ್ಟರು. ಪರಮಿಶನ್ನ ತುಗೊಂಡ ಹ್ವಾದ ಶ್ರೀಪಾದರು ಶನಿವಾರಕ್ಕೊಮ್ಮಿ ಬಂದು ಎಲ್ಲಾ ಮಕ್ಕಳಿಗೆ ಯೋಗಾಸನ ಭಾಳ ಚೆಂದಾಗಿ, ನೀಟಾಗಿ ಕಲಿಸಾಕ ಚಾಲೂ ಮಾಡಿದರು. ಪ್ರತಿ ಸಲ ಮಧ್ಯಾನ ಸೂಟಿ ಬಿಟ್ಟಾಗ ಉಡಾಳಗತೆ ಓಡಾಡತಿದ್ದ ಮಕ್ಕಳು ಈಗ ಸುಧಾರಿಸಿದರು. ಇಡೀ ಕ್ಯಾಂಪಸ್ಸು ಒಂದ ನಮೂನಿ ಶಾಂತ ಕಾಣಾಕ ಚಾಲೂ ಆತು, ಮಕ್ಕಳು, ಶಿಕ್ಷಕರ ಮುಖದಾಗ ಒಂದ ನಮೂನಿ ರಾಜಕಳೆ ಮೂಡಿತು. ಎರಡ ಮೂರ ವಾರ ಬಂದ ಹ್ವಾದ ಮ್ಯಾಲ ಈ ಶನಿವಾರ ಶ್ರೀಪಾದರು ಬರಲಿಲ್ಲ, ಏನಾತು ಅಂತಾ ಮಕ್ಕಳು ಶಿಕ್ಷಕರು ಗಾಬರಿ ಬಿದ್ದು ಮಾಂತೂ ಮಾಸ್ತರಿಗೆ ಕೇಳಿದರು. ಮಾಂತೂ ಮಾಸ್ತರು ಶ್ರೀಪಾದರಿಗೆ ಫೋನು ಮಾಡಿದರು, ಪೋನು ಅದೇನೋ ತಿಳಿಲಾರದ ಭಾಷೆದಾಗ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಅಂತಾ ಹೇಳ್ತು. ಮಾಸ್ತರಿಗೆ ಗೊತ್ತಾತು. ಶ್ರೀಪಾದರು ನಮ್ಮ ಕಡೆ ಇಲ್ಲಾ ಬ್ಯಾರೆ ರಾಜ್ಯಕ್ಕ ಹೋಗ್ಯಾರು, ಬಂದ ಮ್ಯಾಲ ಕೇಳಿದರ ಆತಂತ ಸುಮ್ಮನಾದರು.

*

ಇತ್ತ ಹುಬ್ಬಳ್ಳಿಗೆ ಹೋಗಿದ್ದ ಹೆಮಾರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೇ ಹೈದರಾಬಾದಗೆ ಶಿಪ್ಟ್ ಮಾಡಿದ್ದರು. ತುಂಬಾ ಕೃಷವಾಗಿ, ಹೊಟ್ಟಿಗಿ ಆಹಾರ ತುಗೊಳ್ಳುದು ಕಡಿಮಿ ಆಗಿತ್ತು. ಇನ್ನೂ ತಿಂಗಳೊಪ್ಪತ್ತು ಅವರ ರಜಾ ಮುಂದುವರೆದಿತ್ತು. ಮಾಂತೂ ಮಾಸ್ತರ ಎಲ್ಲಾ ಚೆಂದಾಗಿ ಸಾಲಿ ನಡೆಸಿದ್ದರು, ಈ ಶನಿವಾರ ಶ್ರೀಪಾದರು ಸಾಲಿಗಿ ಬಂದ್ರು. ‘ಕ್ಷಮಿಸಬೇಕ್ರಿ ಸರ್, ನಿಮಗ ಹೇಳಲಾರದ ನಾನು ಕಳೆದ ಒಂದ ವಾರ ಊರಿಗೆ ಹೋಗಿದ್ದೆ, ಹೀಂಗಾಗಿ ಹ್ವಾದ ಶನಿವಾರ ಬರೋದು ಆಗಿರಲಿಲ್ಲ.’ ಅಂತಾ ಹೇಳಿ ಆವತ್ತಿಂದ ಯೋಗಾ ಕ್ಲಾಸು ಚೆಂದಾಗಿ ಮುಗಿಸಿದರು. ಎಲ್ಲರೂ ಹ್ವಾದ ಮ್ಯಾಲ ಇಬ್ಬರ ಹೆಮಾ ರೂಮಿನ್ಯಾಗ ಕುಂತ ಮಾತಾಡಕ ಚಾಲೂ ಮಾಡಿದರು. ‘ಯಾಕ್ರಿ ಶ್ರೀಪಾದರ ಒಂದ ವಾರ ಎಲ್ಲಿ ಹೋಗಿದ್ದಿರಿ’ ಅಂದಾಗ ‘ನಾನು ನಮ್ಮ ಆಶ್ರಮದ ವತಿಯಿಂದ ಕಾಶಿಗೆ ಹೋಗಿದ್ದೆ, ಅಲ್ಲಿ ಸತ್ಸಂಗ ಮುಗಿಸಿ ಮೊನ್ನಿ ಬಂದಿವಿ’ ಅಂದ್ರು. ಮಾಂತೂ ಮಾಸ್ತರಿಗೆ ಕುತೂಹಲ ಹುಟ್ಟಿತು, ‘ನೀವು ಹಾಂಗಾರ ಮ್ಯಾಲಿಂದ ಮ್ಯಾಲ ದೇಶಾ ಸುತ್ತತೀರಿ ಅಂದಾಂಗ ಆಯ್ತು, ನಮ್ಮನ್ನು ಒಂದ ಸಲಾ ಎಲ್ಲೇರ ಕರಕೊಂಡ ಹೋಗ್ರಿ, ನಿಮಗ ಎಲ್ಲಾ ಭಾಷೆ ಬರ‍್ತಾವು, ನಾವು ಇಲ್ಲೇ ಕುಳಬಾನ ಸುತ್ತ ಕುಳ್ಳ ಆರಿಸಿದಾಂಗ ಬರೇ ಬಾದಾಮಿ, ಐಹೊಳಿ, ಪಟ್ಟದಕಲ್ಲಾ ನೋಡೋದು ಆಗೈತಿ, ದೂರ ಪ್ರವಾಸ ಹ್ವಾದ್ರ ಹೇಳ್ರೀ ನಾವೂ ಬರ‍್ತೆವಿ, ನಿಮ್ಮ ಪುಣ್ಯೆಯಿಂದ ದೇಶರ ಹ್ಯಾಂಗ ಐತಿ ನೋಡೋಣ’ ಅಂದ್ರು. ಶ್ರೀಪಾದರು ‘ಇದೇ ಎಪ್ರೀಲ್ ತಿಂಗಳ ಎರಡನೆಯ ವಾರದಲ್ಲಿ ಮೂರ ದಿನಾ ಹರಿದ್ವಾರ ಒಳಗ ಗಂಗಾ ನದಿ ದಂಡಿಮ್ಯಾಲ ನಮ್ಮ ಸತ್ಸಂಗ ಐತಿ ಯರ‍್ಯಾರ ಬರತರ‍್ರೀ ಹೇಳ್ರೀ, ಯಾಕ ಅಂದ್ರ ತಿಂಗಳ ಅಗಾವ ರೇಲ್ವೇ ಬುಕ್ಕ ಮಾಡಬೇಕ, ಮತ್ತ ರಾಜ್ಯದ ಎಲ್ಲ ಭಾಗಗಳಿಂದ ಜನಾ ಬರ‍್ತಾರ ಅವರಿಗೆಲ್ಲಾ ಊಟ, ವಸತಿ ಆಗಬೇಕು’ ಎಂದರು. ‘ಆತ್ರೀ ಶ್ರೀಪಾದರ ನಿಮಗ ಸೋಮವಾರ ಸಂಜೀಕ ಹೇಳ್ತಿನ್ರಿ’ ಎಂದು ಅವರಿಗೆ ಪಾನಕಾ ಕುಡಿಸಿ ಬಿಳ್ಕೊಟ್ಟರು.

*

ಹೈದರಾಬಾದ ಕಡೆಯಿಂದ ಇನ್ನೂ ಹೆಮಾರ ಆರೋಗ್ಯದ ಬಗ್ಗೆ ಯಾವುದೇ ಪ್ರಗತಿಪರ ವರದಿ ಬಂದಿರಲಿಲ್ಲ. ಖರ್ಚು ಬೆಟ್ಟದಷ್ಟು ಏರಿತ್ತು. ಮಕ್ಕಳ ಬಟ್ಟಿ ಕಮಿಶನ್ನು, ಹೈಟೆಕ್ ಬಿಸಿ ಊಟದ ಕೋಣಿ ಕಟ್ಟಲಾರದ ಹಾಂಗ ಹಳೆ ಕಟ್ಟಡಕ್ಕ ಬಣ್ಣಾ ಬಳಿದ ಬ್ಯಾಗ ತುಂಬಿಕೊಂಡಿದ್ದ ದುಡ್ಡು, ಹೀಂಗ ಏನೆಲ್ಲಾ ನಮೂನಿ ಮಾಡಿ, ಮಕ್ಕಳಿಗಿ ತಲುಪಿಸಲಾರದ ಹೆಮಾರ ಪಾಪದ ದುಡ್ಡು ಅಲ್ಲಿ ಖಾಲಿಯಾಗಿ ಮತ್ತ ಇಲ್ಲಿ ಸಾಲಕ್ಕ ನಿಲ್ಲುವ್ಹಾಂಗ ಆಯ್ತು.

*

ಸೋಮವಾರ ಮಾಂತು ಮಾಸ್ತರ ತಮ್ಮ ಸಿಬ್ಬಂದಿ ಸಭೆ ಕರೆದು ಪ್ರವಾಸದ ವಿಷಯ ತಿಳಿಸಿದರು. ಹ್ಯಾಗೂ ಎಪ್ರಿಲ್ ತಿಂಗಳಲ್ಲಿ ನಮ್ಮ ಸಾಲಿ ಸೂಟಿ ಇರತಾವ, ಹೋಗಿ ಬಂದ್ರ ಆತು ಅಂತಾ ಒಪ್ಪಿಗಿ ಕೊಟ್ರು. ಅಷ್ಟ ಅಲ್ಲಾ ಫ್ಯಾಮಿಲಿ ಸಮೇತ ಎಲ್ಲಾರೂ ಸಜ್ಜ ಆದ್ರು. ಇಲಾಖಾ ಒಪ್ಪಿಗೇನು ತುಗೊಂಡ್ರು. ಶ್ರೀಪಾದರನ್ನು ಕರೆಸಿ, ಪ್ರವಾಸಕ್ಕೆ ಬರುವ ಎಲ್ಲರ ಹೆಸರು, ವಯಸ್ಸು ಬರೆದು ಕೊಟ್ಟು ರೇಲ್ವೇ ಬುಕ್ಕ ಮಾಡಾಕ ರೂಪಾಯಿನು ಕೊಟ್ಟರು. ಮೂರ ದಿನಾ ನಿಮ್ಮ ಸತ್ಸಂಗ ಮುಗಿದ ಮ್ಯಾಲ ನಾವು ಮತ್ತ ಸುತ್ತಮುತ್ತ ಪ್ರವಾಸ ಮಾಡಿರ‍್ತೇವಿ, ಅದಕ್ಕ ನಮ್ಮದು ಹೊಡಮರಳಿ ಬರೋ ತಿಕೀಟು ಹತ್ತ ದಿವಸದ್ದು ತುಗೋರಿ ಎಂದು ಶ್ರೀಪಾದರಿಗೆ ತಮ್ಮ ಕುಟುಂಬವರ್ಗದವರ ಲಿಸ್ಟು ಮತ್ತು ರೂಪಾಯಿ ಕೊಟ್ಟರು. ಶ್ರೀಪಾದ ಅವರು ಮಾಸ್ತರ ಮಂದೀ ಕುಟುಂಬ ವರ್ಗದವರದು ಸೇರಿ ಮತ್ತ ಇನ್ನೂ ಬರುವವರ ಒಟ್ಟ ಮೂವತ್ತ ಮಂದೀದು ಇಲ್ಲಿಂದ ದೆಹಲಿಗೆ ರಾಜಧಾನಿ ರೇಲ್ವೆ ಬುಕ್ ಮಾಡಿದರು. ಎಪ್ರೀಲ್ ತಿಂಗಳದಾಗ ಇಂಥಾ ದಿನಾ ಇಲ್ಲಿಂದ ಸೊಲ್ಲಾಪೂರಕ್ಕ ಹೋಗಿ ಅಲ್ಲಿ ಎಕ್ಸ್‌ಪ್ರೆಸ್ ಹಿಡಿದು ಪಯಣಿಸುವ ಎಲ್ಲ ಸಂಗತಿಗಳನ್ನು ತಿಳಿಸಿ ಪ್ರಯಾಣಕ್ಕೆ ಸಜ್ಜಾಗತೊಡಗಿದರು.

*

ಇತ್ತ ಹೈದರಾಬಾದದಲ್ಲಿ ಹೆಮಾರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತ್ತು. ಯಾವುದೇ ಪ್ರಗತಿ ಕಾಣಲಿಲ್ಲ, ಕುಟುಂಬವರ್ಗದವರು ಮುಂದೇನು ಮಾಡುವುದೆಂದು ಚಿಂತಿತರಾದರು. ಊಟಾ ಕಟ್ ಆಗಿತ್ತು, ಗಂಜೀಯ ಮೇಲೆ ಜೀವ ಹಿಡಿದಿದ್ದರು. ಕೋಮಾ ಸೇರಿ ಆಗಿತ್ತು, ಜರ್ಮನಿಯಿಂದ ಈ ವಾರ ಒಬ್ಬ ಡಾಕ್ಟರರು ಬರುವವರಿದ್ದು ಅವರಿಗೆ ತೋರಿಸಿ ಆರಾಮ ಮಾಡೋಣ ಎಂದು ಡಾಕ್ಟರರು ಭರವಸೆ ಕೊಟ್ಟಿದ್ದರು.

*

ಮಕ್ಕಳ ಪರೀಕ್ಷೆಗಳು ಮುಗಿದು, ರಿಸೆಲ್ಟ್ ಅನೌನ್ಸ ಆಗಿ, ಸಾಲಿ ಸೂಟಿ ಬಿಟ್ಟಿದ್ದರು. ಎಪ್ರೀಲ್ ಎರಡನೆಯ ವಾರ ಇವರ ಪ್ರವಾಸ ಚಾಲೂ ಆಯ್ತು. ಹೆಮಾ ಇನ್ನೂ ಹೈದರಾಬಾದದಲ್ಲಿ ಬೆಡ್ಡಿನ ಮೇಲಿದ್ದರು. ಇಲ್ಲಿಂದ ಸೋಲ್ಲಾಪುರಕ್ಕೆ ಹೋಗಿ ಅಲ್ಲಿ ಎಕ್ಸಪ್ರೆಸ್ ಹತ್ತಿ ಎರಡ ದಿನಕ್ಕ ದೆಹಲಿ ತಲುಪಿದರು, ಅಲ್ಲಿ ಉರಿ ಬಿಸಿಲು ಇವರನ್ನು ಬರಮಾಡಿಕೊಂಡಿತು. ಅಲ್ಲಿಂದ ಬಸ್ಸು ಹಿಡಿದು ರಾತ್ರಿ ಹೊತ್ತಿಗಿ ಹರಿದ್ವಾರ ತಲುಪಿದರು. ಹರಿದ್ವಾರದ ಗಂಗಾ ನದಿ ದಂಡಿಮ್ಯಾಲ ಇಳದುಕೊಳ್ಳಾಕ ಕಮೀಟಿಯವರು ನೂರಾರು ಗುಡಿಸಲ ರೀತಿ ಬಟ್ಟೆಯಿಂದ ಚೆಂದನ ಮನೆಗಳನ್ನು ಮಾಡಿದ್ದರು. ಸಾವಿರಾರು ಮಂದಿ ದೇಶದ ಎಲ್ಲಾ ಭಾಗಗಳಿಂದಲೂ ಬಂದಿದ್ದರು.

ಮಾಂತೂ ಮಾಸ್ತರ ಮತ್ತು ಅವರ ಎಲ್ಲ ಕುಟುಂಬ ವರ್ಗದವರಿಗೆ ಧನ್ಯತಾ ಭಾವ ಮನೆ ಮಾಡಿತು. ಮರುದಿನಾ ನಸುಕಿನ್ಯಾಗ ಎದ್ದ ತಣ್ಣನ ಗಂಗಾ ನದಿಯಾಗ ಜಳಕಾ ಮಾಡಿ ಬಿಳಿ ಬಿಳಿ ಬಟ್ಟೆ ತೊಟಗೊಂಡ ಸತ್ಸಂಗದೊಳಗ ಪಾಲ್ಗೊಂಡರು. ಸಂಜೀ ಮುಂದ ಹರಿದ್ವಾರದ ಗಂಗಾರತಿ ಪೂಜಾ ನೋಡಿದರು. ತಾವೂ ನದಿಯಾಗ ದೀಪಾ ಹಚ್ಚಿಬಿಟ್ಟರು. ಮರುದಿನಾ ಋಷಿಕೇಶಿಗಿ ಹೋಗಿ ರಾಮ ಝುಲಾ, ಲಕ್ಷ್ಮಣ ಝುಲಾ ಸೇತುವೆ ಮ್ಯಾಲ ಓಡಾಡಿದರು. ಅಲ್ಲಿನ ಗಂಗಾಮಾತೆಯ ಪ್ರಕೃತಿ ಸೌಂದರ‍್ಯ ನೋಡಿ ಕಣ್ಣು ತುಂಬಿಕೊಂಡರು. ಮುಂದ ಸತ್ಸಂಗ ಮುಗಿಸಿ, ಉಳಿದ ಮಂದಿ ಮರು ಪ್ರಯಾಣ ಮಾಡಿದರ, ಈ ಮಾಸ್ತರ ಮಂದಿ ಅಲ್ಲಿಂದ ಮತ್ತೆ ಕೇದಾರ, ಬದರಿನಾಥಕ್ಕ ಬಾಡಿಗಿ ಗಾಡಿ ಮಾಡಕೊಂಡ ಹ್ವಾದ್ರು.. ಗಾಡ್ಯಾಗ ಕುಂತ ಶ್ರೀಪಾದರನ್ನು ನೆನೆಸಿದರು.

‘ಆಕಸ್ಮಿಕವಾಗಿ ಸಾಲಿಗಿ ಬಂದ ಯೋಗಾಸನ ಗುರುಗಳಾದ ಶ್ರೀಪಾದರ ಪುಣ್ಯದಿಂದ ಇಲ್ಲಿಯವರೆಗೆ ಬರಾಕ ಸಾಧ್ಯವಾಯ್ತು ನೋಡು’ ಅಂತಾ ಮಾಂತೂ ಮಾಸ್ತರ ಎಲ್ಲಾರ ಮುಂದ ಹೇಳಿದರು. ಆದ್ರ ಉಳಿದ ಮಾಸ್ತರರು ಹೇಳಿದರು, ‘ಇಲ್ಲಾ ಮಾಂತೂ ಸರ್, ನೀವು ಆವತ್ತು ನಮ್ಮ ಹೆಡ್ ಮಾಸ್ತರ ಮಾಡಿದಾಂಗ ನಕಾರಾತ್ಮಕ ಮನೋಭಾವದಿಂದ ಬಂದವರನ್ನು ಹೊರಳಿ ಕಳಿಸಿದ್ದರ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ನೀವು ಇಂಥಾ ಮಂದಿ ಬಂದಾಗ ನಮ್ಮನ್ನೆಲ್ಲಾ ಕೂಡಿಸಿ ಮೀಟಿಂಗ್ ಮಾಡಿ ಇದನ್ನ ಸಾಧ್ಯ ಮಾಡಿದಿರಿ, ನಿಮ್ಮೊಳಗಿನ ಸಕಾರಾತ್ಮಕ ಭಾವನೆ, ಒಳ್ಳೆಯತನ ನಮಗೆಲ್ಲಾ ಒಳ್ಳೆಯದ ಮಾಡೇತಿ ನೋಡ್ರಿ,’ ಅಂದರು.
ನಾಲ್ಕೈದು ದಿನಾ ಕೇದಾರ, ಬದರೀನಾಥ ನೋಡಕೊಂಡ ಮತ್ತ ಸಂಜೀಕ ದಿಲ್ಲಿಗೆ ಬಂದ್ರು. ದಿಲ್ಲಿಯೊಳಗ ವಸ್ತಿ ಇದ್ದು ಮರುದಿನಾ ಗಾಂಧಿ ಸಮಾಧಿ, ಪಾರ್ಲಿಮೆಂಟು, ಕುತುಬ್ ಮಿನಾರ್ ಎಲ್ಲಾ ನೋಡಕೊಂಡ ಮತ್ತ ಮಾರ್ಕೆಟ್‌ಗೆ ಬಂದು ತಮಗ ಬೇಕಾದ್ದ ಖರೀದಿ ಮಾಡಿದರು. ರಾತ್ರಿ ರೇಲ್ವೆ ಸ್ಟೇಷನನ್ನಿಗಿ ಬಂದರು, ಮರಳಿ ಊರಿಗೆ ಬರಬೇಕಂತ ಗಾಡಿ ಕಾಯತಿದ್ದರು, ಇನ್ನೇನು ರೈಲು ಬರೋದು ಇತ್ತು, ಮಾಂತೂ ಮಾಸ್ತರ ಮೊಬೈಲ್‌ಗ ಒಂದ ಕರೆ ಬಂತು ‘ಹೆಮಾ ಅವರು ಹೋಗಿಬಿಟ್ಟರು’ ಅಂತಾ, ‘ಅಯ್ಯೋ ಪಾಪ’ ಎಂದು, ಎಲ್ಲಾರೂ ಒಂದ ನಿಮಿಷ ಮೌನಾಚರಣೆ ಮಾಡಿದರು. ಅಷ್ಟೊತ್ತಿಗೆ ರೈಲು ಬಂತು, ಎಲ್ಲಾರೂ ಹತ್ತಿದರು, ರಾತ್ರಿ ಪ್ರಯಾಣ ಶುರುವಾಯ್ತು, ಬಂದ ಮಂದ್ಯಾಗ ಯಾರದೋ ಮೊಬೈಲ್ ರಿಂಗ್‌ಟೋನ್ ಹಾಡತಿತ್ತು, ‘ಬದುಕಿದು ಜಟಕಾ ಬಂಡಿ…, ಇದು ವಿಧಿಯೋಡಿಸುವ ಬಂಡಿ..’. ಸರಿ, ಮತ್ತೆ ಹೇಳುವುದು ಏನಿದೆ, ಇಲ್ಲಿಂದ ಮೇಲೆ ಶಬ್ದವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.