ADVERTISEMENT

ಕಥೆ: ನಿಹಾರ್

ರಂಜಿತ್‌ ಕವಲಪಾರ
Published 17 ಅಕ್ಟೋಬರ್ 2020, 19:30 IST
Last Updated 17 ಅಕ್ಟೋಬರ್ 2020, 19:30 IST
ಕಲೆ: ಮದನ್‌ ಸಿ.ಪಿ.
ಕಲೆ: ಮದನ್‌ ಸಿ.ಪಿ.   

ನಡುನೆತ್ತಿಯಿಂದ ಹೊರಟು ಬೆನ್ನಮೂಳೆಯಾಳದಲ್ಲೊಂದು ತಣ್ಣನೆಯ ಕಂಪನ ‘ಶಿಟ್. . . ಹಾಳಾದ್ದು’ ಎಂದು ಕುಳಿತಲ್ಲಿಂದ ಎದ್ದು ಭಯಂಕರ ನಿಶ್ಶಬ್ದ ಆವರಿಸಿದ್ದ ಆ ಕೋಣೆಯಲ್ಲಿ ಅನವಶ್ಯವಾಗಿ ಸದ್ದು ಮಾಡುತ್ತಾ ಚಲಿಸುತ್ತಿದ್ದ ಓಬೀರಾಯನ ಕಾಲದ ಗೋಡೆ ಗಡಿಯಾರ ನೋಡಿದ. ಸಮಯ ನಡುರಾತ್ರಿ ಕಳೆದು ಮುಕ್ಕಾಲು ತಾಸು ದೂರ ಹೊರಟು ಸಾಗಿತ್ತು.

ಸಣ್ಣಗೆ ಉರಿಯುತ್ತಿದ್ದ ದೀಪದ ಬೆಳಕು ಆ ಕೋಣೆಯನ್ನು ಮತ್ತಷ್ಟು ಮಂದಗತಿಯಾಗಿಸಿತ್ತು. ಬೇಜು ತಡಕಾಡಿ ಸಿಗರೇಟೊಂದನ್ನು ಗಿಟ್ಟಿಸಿಕೊಂಡು ಟೇಬಲಿನ ಮೇಲಿದ್ದ ಬೆಂಕಿಪೊಟ್ಟಣಕ್ಕೆ ಕಡ್ಡಿ ಗೀರಿ ಆ ಕ್ರಿಯೆಯಿಂದ ಉಂಟಾದ ಅಗ್ನಿಯಿಂದ ಸಿಗರೇಟನ್ನು ಸ್ಪರ್ಶಿಸಿ, ಉರಿಯುತ್ತಿದ್ದ ಸಿಗರೇಟಿನ ತುದಿಯನ್ನು ತುಟಿಗಳ ನಡುವೆ ಸಿಕ್ಕಿಸಿ, ದೀರ್ಘವಾಗೊಮ್ಮೆ ನಿಕೋಟಿನ್ ಬೆರೆತ ತಂಬಾಕಿನ ಹೊಗೆಯನ್ನು ಕಿಬ್ಬೊಟ್ಟೆವರೆಗೂ ಆವರಿಸುವಂತೆ ದೇಹದೊಳಕ್ಕೆ ಇಳಿಸಿಕೊಂಡ. ಇಳಿಸಿ ಒಂದೆರೆಡುಗಳಿಗೆ ಹೊಗೆಯನ್ನು ಉದರದೊಳಿಟ್ಟುಕೊಂಡು, ಅನ್ನನಾಳದ ಮೂಲಕ ಹೊರದೂಡಿದ. ಆ ದಟ್ಟ ಹೊಗೆ ಅವನ ಹೊಟ್ಟೆಯಿಂದ ಹೊರಟು ಮೂಗು, ಬಾಯಿಗಳಿಂದ ಹೊರಚೆಲ್ಲಿ ಆ ಕೋಣೆಯನ್ನು ಪೂರ ಆವರಿಸಿ ನರ್ತಿಸತೊಡಗಿತು. ಹಾಗೆ ದೇಹದಿಂದ ಬೇರ್ಪಟ್ಟ ಆ ಹೊಗೆ ಗಾಳಿ ಸಂಚಾರ ತೀರ ಕಡಿಮೆ ಇರುವ ಆ ಕೋಣೆಯಲ್ಲಿ ಚಿತ್ರವಿಚಿತ್ರ ಆಕಾರ ತಾಳಿ ವಿಕಾರವಾಗಿ ಆ ಮಂದ ಬೆಳಕನ್ನು ಅಣುಕಿಸುತ್ತಿತ್ತು.
ನಿದ್ರೆಯನ್ನು ಮೀರಿದ ಒಂದು ತೆರೆನಾದ ದಣಿವು ಅವನನ್ನು, ಅವನ ದೇಹವನ್ನು ಆವರಿಸಿ ಒಮ್ಮೆ ಮೈಮುರಿದ. ಆತ ಉದ್ದೇಶಿಸಿ ಕೂತ ವಿಚಾರ ಮಸ್ತಕಕ್ಕೆ ಧಿಡೀರ್ ಹೊಳೆದು ತಲೆ ಅತೀವ ಒತ್ತಡಕ್ಕೆ ಕೆಲಕಾಲ ಈಡಾಯಿತು. ‘ಥಥ್ ತೇರೀಕೆ. . .’ ಎಂದು ಉಸುರಿ. ಮುಂದೆ ಆ ಮಂದಬೆಳಕಿನಡಿ ಅವನನ್ನೇ ನೋಡಿ ಅಣಕಿಸುವಂತಿದ್ದ ಬರೆಯುವ ಟೇಬಲಿನ ಮೇಲಿದ್ದ ಪೆನ್ನನ್ನು ಸರಕ್ಕನೆ ಎತ್ತಿ ದೂರಕ್ಕೆ ಎಸೆದ, ಅದು ಎರಡು ಹೋಳಾಗಿ, ಅದರೊಳಗಿದ್ದ ಇಂಕು ಗೋಡೆಯ ಮೇಲೆಲ್ಲಾ ಮೂಡಿ, ಸಣ್ಣ ಸದ್ದಿನೊಂದಿಗೆ ಅಸುನೀಗಿತ್ತು.

ಮರುಕ್ಷಣವೆ ಆ ಪೆನ್ನಿಗೆ ಅಡಿಪಾಯದಂತೆ ಮಲಗಿದ್ದು, ಒಂದಷ್ಟು ಈತನಿಂದಲೇ ಗೀಚಿಸಿಕೊಂಡಿದ್ದ ಹಾಳೆಯೊಂದು ಅವನ ಆವೇಶಕ್ಕೆ ರದ್ದಿಮುದ್ದೆಯಾಗಿ ಮೂಲೆ ಸೇರಿತ್ತು.

ADVERTISEMENT

ಅಸಲಿಗೆ ಅವನು ಲೆಕ್ಕವಿಲ್ಲದಷ್ಟು ಕಥೆಗಳ ಒಡೆಯ, ಆತ ಬರೆದದ್ದೆಲ್ಲ ಹಿಟ್ ಕಥೆಗಳು, ಸಾರಸ್ವತಲೋಕದಲ್ಲಿ ಸತತ ನಾಲ್ಕು ದಶಕಗಳಿಂದ ಪ್ರಚಲಿತ ಹೆಸರಿರುವ ಮೇರು ಲೇಖಕ. ಅವನ ಕಥೆಗಳು ಅವನನ್ನು ದೇಶ, ವಿದೇಶ ಸುತ್ತಿಸಿತ್ತು. ಬಡತನದಿಂದ ಪಾರು ಮಾಡಿ ಸಿರಿವಂತಿಕೆ ಒದಗಿಸಿತ್ತು. ಆತನ ಪುಸ್ತಕಗಳಿಗಾಗಿ ಪ್ರಕಾಶಕರು ಮುಗಿಬೀಳುತ್ತಿದ್ದರು. ಹುಡುಗಿಯರು ಅವನ ಸುತ್ತ ಗಾಳಿಯಂತೆ ಆವರಿಸುತ್ತಿದ್ದರು.

ಅವನನ್ನು ಮೆಚ್ಚಿಸಲೆಂದೇ ಆಡಳಿತ ಪಕ್ಷ ಬದಲಾದಂತೆಲ್ಲಾ ಪ್ರಶಸ್ತಿಗಳು ಅವನನ್ನು ಬಂದು ಸೇರುತ್ತಿತ್ತು. ಹುಚ್ಚು ಅಭಿಮಾನಿಗಳು ಅವನಿಗೆ, ಅವನ ಕಥಾಸೃಷ್ಟಿಗಳು ಜೀವತಳೆದು ನರ್ತಿಸುವಂತಿತ್ತು. ಸದಾ ಆಂಗ್ಲ ಪುಸ್ತಕದ ಹುಳುವಾಗಿದ್ದ ಅವನು ಕನ್ನಡದಲ್ಲಿ ಸಲೀಸಾಗಿ ಬರೆದು ಓದುಗರನ್ನು ಮಾಯಲೋಕಕ್ಕೆ ಸಾಗಿಸುತ್ತಿದ್ದ.

ಆತ, ವ್ಯಸನಿಯೆಂದು, ಮದುವೆಯಾಗಿಲ್ಲವೆಂದು, ದಿನಕೊಬ್ಬಳೊಂದಿಗೆ ಸುಖಿಸುತ್ತಿದ್ದನೆಂದು, ಮದುವೆಯಾಗಿ ಅವನ ಹೆಂಡತಿಯನ್ನು, ಮಕ್ಕಳನ್ನು ವಿದೇಶದಲ್ಲಿ ಬಚ್ಚಿಟ್ಟಿದ್ದಾನೆಂದು, ಅವನೊಬ್ಬ ಕಣ್ಣಿನಲ್ಲಿ ರಕ್ತವಿಲ್ಲದಂತಹ ಕ್ರೂರಿ ಎಂದು, ಎಳೆಯ ಪ್ರಾಯದ ‘ಹುಡುಗ’ರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿರುವ ‘ಗೇ’ ಅವನು ಎಂದು ಆಗದವರು ಊರುತುಂಬ ಹಬ್ಬಿಸಿದ್ದರು. ಹಬ್ಬಿಸಿದವರೇ ಅವನ ಕಥೆಗಳಿಗೆ ಮತ್ತೆ ಮತ್ತೆ ಮಾರು ಹೋಗುತ್ತಿದ್ದರು.

ಅವನು ಕೆಲವರ್ಷಗಳಿಂದ ಎಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ತಮಿಳುನಾಡಿನ ಊಟಿಯಲ್ಲಿ ಹಳೆಯ ಬ್ರಿಟಿಷ್ ಬಂಗ್ಲೊ ಹಾಗೂ ಕೊಂಚ ಟೀ ಎಸ್ಟೇಟ್ ಖರೀದಿಸಿ ಆತ ಅಲ್ಲಿಂದಲೇ ಕನ್ನಡದಲ್ಲಿ ಕಥೆ ಬರೆಯುತ್ತಿದ್ದ. ಈಗ ವಯಸ್ಸು 60 ದಾಟಿದೆ, ಒಂಟಿಯಾಗಿರುತ್ತಾನೆ. ಕೆಲವರು ಅವನು ಹುಚ್ಚನಾಗಿದ್ದಾನೆ ಎಂದು ಆಡಿಕೊಳ್ಳುವುದೂ ಉಂಟು. ಆತ ಒಂದು ಕತೆ ಬರೆದು ಇಂದಿಗೆ ವರುಷ ಐದಾಗಿತ್ತು. ಆತ ಬರೆದ ಹಳೆಯ ಕಥೆಗಳನ್ನೇ ಮರು ಮುದ್ರಿಸಿ ಪ್ರಕಾಶಕರು ದುಡ್ಡುಮಾಡಿಕೊಳ್ಳುತ್ತಿದ್ದರು.

ಎಸ್ಟೇಟಿನಲ್ಲಿ ತೀರ ಒಂಟಿಯಾಗಿ ಕಳೆಯುತ್ತಿದ್ದ ಆತ ಯಾರನ್ನು ಕಾಣಲು ಇಚ್ಛಿಸುತ್ತಿರಲಿಲ್ಲ. ಒಂದು ರೀತಿಯಲ್ಲಿ ಭೂಗತನಂತೆ ಬದುಕುತ್ತಿದ್ದ. ಕೆಲವರು ಅವನು ಸತ್ತೇ ಹೋದನೆಂದು ಗುಲ್ಲೆಬ್ಬಿಸಿ ಆ ಸುದ್ದಿ ಪತ್ರಿಕೆಗಳಲ್ಲೂ ಪ್ರಕಟವಾಗಿ ಅಚಾತುರ್ಯ ನಡೆದುಹೋಗಿತ್ತು.

ಕುಳಿತಲ್ಲಿ ಕುಳಿತಿರಲಾಗದೆ ಚಡಪಡಿಸಿ ಪ್ರಪಂಚದ ಮೂಲೆ ಮೂಲೆ ಅಲೆದು, ಸತತ 40 ವರ್ಷ ಬರೆದ, ಬರೆದದ್ದೆಲ್ಲಾ ಒಂದಕ್ಕಿಂತ ಒಂದು ಹಿಟ್ ಆಗುತ್ತಲೇ ಹೋಯ್ತು. ಅವನಿಗೆ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವಂತಹ ಶೃಂಗಕ್ಕೇರಿ ಮೆರೆದ.
ಹಣ, ಪ್ರಶಸ್ತಿ, ಪುರಸ್ಕಾರ, ಅಭಿಮಾನಿಗಳ ಹಿಂಡು ಅವನನ್ನು ಉಸಿರುಗಟ್ಟಿಸುವಷ್ಟಿತ್ತು. ಸಮಯವು ಅಷ್ಟೇ ವೇಗವಾಗಿ ಓಡುತ್ತಿತ್ತು. ಅಷ್ಟಕ್ಕೂ ಅದನ್ನು ತಡೆಯುವವರ‍್ಯಾರು?

ಪೇರುಸಿರೊಂದನ್ನು ಹೊರಚೆಲ್ಲಿ, ಚಡಪಡಿಸಿ ಕೈಯಲ್ಲಿ ಕರಗುತ್ತಿದ್ದ ಸಿಗರೇಟನ್ನು ಕೆಡವಿ ಹೆಬ್ಬೆರಳಿನಿಂದ ಅದರ ಅಗ್ನಿಗೆ ಅಂತ್ಯಹಾಡಿ, ಮುಚ್ಚಿದ್ದ ಕೋಣೆಯ ಬಾಗಿಲನ್ನು ದಡಕ್ಕನೆ ತೆರೆದು, ಬಂಗಲೆಯ ವರಾಂಡಕ್ಕೆ ತಲುಪಿದ. ಪೂರ್ಣ ಚಂದ್ರನಿಗೆ ಇನ್ನೇನು ಎರಡೇ ಗೇಣು ಅನ್ನುವಂತಿದ್ದ ಚಂದಿರ ಆಕಾಶದಲ್ಲಿ ಈತನನ್ನೇ ಅಣಕಿಸುವಂತೆ ನಿಂತುಕೊಂಡಿದ್ದ, ತಾರ ಮಣಿಗಳು ಲಕಲಕನೆ ಹೊಳೆದವು.

ಅದೆಲ್ಲಿಂದಲೋ ಹೊರಟು ಇವನನ್ನು ಆವರಿಸಿ ತಣಿಸಿಬಿಟ್ಟಿತ್ತು ಹಿತವಾದ ತಂಗಾಳಿ, ತಂಗಾಳಿಯೊಂದಿಗೆ ಬೆರೆತಿದ್ದ ಮಂಜಿನ ಹನಿಗಳು ಅವನ ಮೈಯನ್ನು ಕೊಂಚ ನಡುಗಿಸಿತು.

ವೆರಾಂಡದಲ್ಲಿ ನಿಂತು ಆ ಚಂದಿರನ ಬೆಳಕಿಗೆ ಬಂಗಲೆಯ ಎದುರಿಗೆ ನೆರಳಿನಂತೆ ಕಾಣಿಸುತ್ತಿದ್ದ ಮರಗಳತ್ತ ದೃಷ್ಟಿನೆಟ್ಟ, ಅವುಗಳು ಇವನನ್ನು ಗಮನಿಸದೆ ತನ್ನ ಪಾಡಿಗೆ ತಾನೆಂಬಂತೆ ನಿಂತುಕೊಂಡಿದ್ದವು. ಸುಮಾರು 40 ವರ್ಷಗಳಿಗೂ ಹಿಂದೆ ನೆಟ್ಟಿರಬಹುದಾದ ವಿದೇಶಿ ಮರಗಳವು. ಹೆಚ್ಚು ಕಡಿಮೆ ಈತನ ಸಾಹಿತ್ಯ ಕೃಷಿಯಷ್ಟು ಹಳತು ಅವುಗಳು. ಸಾಧ್ಯವಾದಷ್ಟು ಎತ್ತರಕ್ಕೆ ಬೆಳೆದು ಅಲ್ಲಿಂದಾಚೆ ಬೆಳೆಯಲು ನನ್ನಿಂದ ಸಾಧ್ಯವೇ ಇಲ್ಲ ಎನ್ನುವಂತೆ ಆ ಮರಗಳು ನಿಂತುಕೊಂಡಿದ್ದವು.

ಮರಗಳನ್ನೇ ಗಮನಿಸುತ್ತಾ ನಿಂತ. ಯಾಕೋ ಆ ಐದು ವರ್ಷಗಳಲ್ಲಿ ಆತನಿಗೆ ಆ ಮರಗಳು ಇದೇ ಮೊದಲೆಂಬಂತೆ, ಭಾವನೆಗಳಿಗೆ ತೆರೆದುಕೊಳ್ಳುತ್ತಿರುವಂತೆ ಅನ್ನಿಸತೊಡಗಿತು. ನಲವತ್ತು ವರ್ಷಗಳು ನಿಂತಲ್ಲೇ ನಿಂತ ಮರಗಳು ಒಡಲೊಳಗೇ ಎಷ್ಟೆಲ್ಲಾ ಕಥೆಗಳನ್ನು ಇಟ್ಟುಕೊಂಡಿರಬೇಡ? ಅನಿಸಿತು ಅವನಿಗೆ. ಅವನೊಳಗಿದ್ದ ಕಥೆಗಾರ ಜಾಗೃತನಾದನಾ? ಅವನನ್ನೇ ಅಣಕಿಸಿತು ಅವನ ಮನಸ್ಸು.

ಅದೋ ಆ ತಿಂಗಳ ಬೆಳಕಿನಲ್ಲಿ ಯಾರೋ ನಡೆದು ಹತ್ತಿರಾಗುತ್ತಿದ್ದಾರೆ, ಯಾಕೋ ಇತ್ತೀಚೆಗೆ ಕಣ್ಣು ಮೊದಲಿನಷ್ಟು ಸಹಕರಿಸುತ್ತಿಲ್ಲ. ನೆರಳಿನಂತೆ ಹತ್ತಿರಾಗುತ್ತಿದ್ದ ಆಕೃತಿ ಯಾವುದೆಂದು ನೋಡಲು ಅವನ ಕಣ್ಣುಗಳು ಕನ್ನಡಕಕ್ಕಾಗಿ ತಡಕಿದವು, ಕೈಗಳು ಪೈಜಾಮದ ಬಲ ಜೇಬಿಗೆ ಚಲಿಸಿ ಅದರೊಳಗಿಂದ ರೀಡಿಂಗ್ ಗ್ಲಾಸ್ ಅನ್ನು ಹೊರಕ್ಕೆ ತೆಗೆದವು, ಪೈಜಾಮದ ಉದರಕ್ಕೆ ಅಭ್ಯಾಸವೆಂಬಂತೆ ಕನ್ನಡಕದ ಕನ್ನಡಿಗಳನ್ನು ತಿಕ್ಕಿ, ಬಾಯಿಗೆ ಹತ್ತಿರತಂದು ಆತ ‘ಉಫ್. . ಉಫ್. . .’ ಎಂದು ಎರಡು ಬಾರಿ ಊದಿ ಕನ್ನಡಕವನ್ನು ಮೂಗಿಗೇರಿಸಿ ನೆರಳಿನಂತೆ ಚಲಿಸಿ ಹತ್ತಿರಾಗುತ್ತಿದ್ದ ದಿಕ್ಕಿಗೆ ಕಣ್ಣಾಯಿಸಿದ. ಅಲ್ಲೇನು ಇರಲಿಲ್ಲ. ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆತ ಮತ್ತೊಮ್ಮೆ ರೆಪ್ಪೆಗೆ ರೆಪ್ಪೆ ಹಚ್ಚದೆ ಅಲ್ಲೇ ದೃಷ್ಟಿನೆಟ್ಟು ಗಮನಿಸಿದ. ಇಲ್ಲ ಯಾರು ಇಲ್ಲ, ‘ಈ ಹಾಳಾದ್ ಕಣ್ಣಿಗೆ ಥೂ...’ ಎಂದು ಗೊಣಗುತ್ತಾ ಹಾಗೆ ನಿಂತಲ್ಲೇ ನಿಂತು ಏನನ್ನೋ ಗಹನವಾಗಿ ಆಲೋಚಿಸತೊಡಗಿದ.

ಅವನಿಗೆ ಅವನ ಮೊಟ್ಟ ಮೊದಲ ಕಥೆ ‘ನಿಹಾರ್’ ನೆನಪಾದಳು, ಅದೊಂದು ಪ್ರೇಮಕಥೆ, ತನ್ನ ಮೊದಲ ಕಾಮೋನ್ಮಾದದ ಅನುಭವವನ್ನು ಅವನು ಚಾಚೂತಪ್ಪದೆ ಹಾಗೇ ಬರೆದಿದ್ದ. ಅವನಿಗಾಗ 16ರ ಪ್ರಾಯ, ಎಸ್‌ಎಸ್ಎಲ್‌ಸಿ ಓದುವಾಗ ಅವನಿಗಿಂತ ಎರಡು ವರ್ಷದ ಹಿರಿಯಾಕೆ, ಪಕ್ಕದ ಮನೆಯ ಹುಡುಗಿಯೊಂದಿಗಿನ ಮೊದಲ ಅನುಭವವನ್ನು ಆತ ಕೊಂಚ ತಿರುಚಿ ಹೆಸರು, ಸ್ಥಳ ಬದಲಿಸಿ ಬರೆದಿದ್ದ. ಬರೆಯುವಾಗ ಅವನಿಗದು ಕಥೆಯಾದೀತು ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ, ಆ ಹಿತಾನುಭವ ಎಂದಿಗೂ ಮರೆಯದಿರಲಿ ಎನ್ನುವ ಉದ್ದೇಶದಿಂದ ಆತ ಬರೆದು, ಬರೆದದ್ದನ್ನು ಬೇರೊಂದು ಹೆಸರಿನಲ್ಲಿ ಸ್ಥಳೀಯ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದ. ‘ಮೋಹನ’ ಎನ್ನುವ ನಕಲಿ ಹೆಸರಿನಲ್ಲಿ ಆ ಕಥೆ ಭಾನುವಾರದ ವಿಶೇಷ ಸಂಚಿಕೆಯಲ್ಲಿತ್ತು.

ಆತ ತನ್ನ ಪೈಜಾಮ ಸರಿಸಿ ತನ್ನ ರೋಮಮಯ ಎದೆಗೂಡನ್ನು ಸವರಿದ ಅಲ್ಲಿ ಸಣ್ಣದೊಂದು ಗಾಯದ ಗುರುತು ಅವನ ಕೈಗೆ ತಡವಿತು. ‘ನಿಹಾರ್’ ಮತ್ತಷ್ಟು ನೆನಪಾದಳು. ಹೀಗೆ ಕೆಲವರ್ಷಗಳ ಹಿಂದೆ ಇಂತದ್ದೇ ಒಂದು ನಡುರಾತ್ರಿ ಅವಳು ನೆನಪಾಗಿ ಅವಳ ಮನೆ ಹುಡುಕಿಕೊಂಡು ಹೋಗಿದ್ದ. ಅವಳು ಇವನ ಕಥೆಯಲ್ಲಿ ಮಾತ್ರ ಜೀವಂತವಾಗಿದ್ದಳು. ಅವಳ ಹದಿಹರೆಯದ ಮೊಮ್ಮಗಳು ‘ಅಜ್ಜಿ ತೀರಿಹೋಗಿದ್ದಾಳೆ’ ಎಂದು ಹೇಳುವಾಗ ‘ಈ ಹುಡುಗಿ ಅದೆಷ್ಟು ಅವಳ ಹಾಗೇ ಇದ್ದಾಳೆ’ ಅನಿಸಿ, ಅಲ್ಲಿಂದ ಮರಳಿದ್ದ.

ಹೀಗೆ ಕಥೆ ಬರೆಯಲು ತೊಡಗಿದ ಈ ಕಥೆಗಾರನಿಗೆ ಅನುಭವಿಸಿ ಬರೆಯುವುದು ಪ್ರಸಿದ್ಧಿ ನೀಡುತ್ತದೆ ಎನ್ನುವುದು ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಆತ ಅನುಭವಿಸಿ ಪ್ರವಾಸ ಕಥೆಗಳನ್ನು, ಯುದ್ಧ ಸಂಭವಿಸುವಾಗಲೇ ಅಲ್ಲಿಗೆ ಧಾವಿಸಿ ಅಲ್ಲಿನ ಕಥೆಗಳನ್ನು, ವೇಶ್ಯೆಯರ ಸಂಗಮಾಡಿ ಅವರ ಕಥೆಗಳನ್ನು, ಎಳೆಯ ಪ್ರಾಯದ ಹುಡುಗಿಯರನ್ನು ಭೋಗಿಸಿ ಶೃಂಗಾರ ಕಥೆಗಳನ್ನು, ‘ಗೇ’ಗಳ ಕಥೆಗಳನ್ನೂ ಆತ ಬರೆದ. ಹೀಗೆ ಆತ ಬರೆದ ಕಥೆಗಳೆಲ್ಲವೂ ಸ್ವತಃ ಅವನ ಅನುಭವ ಎನ್ನುವಂತೆ ಗೀಚಿದ. ಹೀಗೆ ಬರೆಯುತ್ತಾ.. ಬರೆಯುತ್ತಾ ಅವನಿಗೆ ಮೊದಲರಾತ್ರಿಯ ಅನುಭವ ಬರೆಯಬೇಕು ಅನಿಸಿ ಮದುವೆ ಆದ, ಅದನ್ನೂ ಬರೆದ. ಕೊಂಚ ಕಾಲ ಮಾತ್ರ ಈತನನ್ನು ಸಹಿಸಿಕೊಂಡಿದ್ದ ಅವಳು ಡಿವೋರ್ಸ್‌ ಕೇಳಿದಳು. ಕೊಟ್ಟ. ಆ ಅನುಭವವನ್ನೂ ಬರೆದು ಪ್ರಕಟಿಸಿದ.

ಡಿವೋರ್ಸ್‍ಗೆ ಮಡದಿ ಇವನು ‘ಗಂಡಸೇ ಅಲ್ಲ’ ಅನ್ನುವ ಕಾರಣಕೊಟ್ಟು ಅದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಡಿವೋರ್ಸಿಯಾಗಿ, ಒಂಟಿಯಾಗಿ ದಿನದೂಡತೊಡಗಿದ. ಜನ ಇವನಿಗಿಂತ ಚೆನ್ನಾಗಿ ಇವನದೇ ಕಥೆಕಟ್ಟತೊಡಗಿದರು. ವಿಚ್ಛೇದನ ಪಡೆದವಳು ವಿದೇಶಕ್ಕೆ ಹಾರಿದಳು. ಈತ ಅದನ್ನು ತೀರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಥೆಗಳಲ್ಲಿ, ಅನುಭವಗಳಲ್ಲಿ ಸಂಚರಿಸತೊಡಗಿದ. ಮತ್ತಷ್ಟು ಬರೆದ ಅವನ ಬರವಣಿಗೆಗೆ ಅಷ್ಟರ ಶಕ್ತಿ ಆತನ ಉಳಿದೆಲ್ಲ ನ್ಯೂನ್ಯತೆಗಳನ್ನು ಒಂದು ಕಥೆ ಮರೆಸಿ ಹಾಕುತ್ತದೆ. ಆತ ಕಥೆ ಬರೆದು ನಂತರ ಆ ಕಥೆಯ ಕಡೆ ಮುಖಮಾಡುವುದಿಲ್ಲ, ಅವನು ಅದನ್ನು ಮರೆತು ಹೊಸ ಅನುಭವಕ್ಕೆ ಹೊರಳುತ್ತಾನೆ.

ದೀರ್ಘಾಲೋಚನೆಯಿಂದ ಹೊರಕ್ಕೆ ಜಿಗಿದು, ಮರಳಿ ಅವನ ಬಂಗಲೆಯ ವರಾಂಡಕ್ಕೆ ಮರಳಿದ. ಅಲ್ಲಿದ್ದ ಸಕಲವೂ ಅವನ ಮನದಾಳದ ಕಥೆಯನ್ನು ಕೇಳಿಸಿಕೊಂಡಂತೆ ನಿಂತುಕೊಂಡಿತ್ತು. ಮರಳಿ ತನ್ನ ಕೋಣೆಯೆಡೆಗೆ ಹೆಜ್ಜೆ ಹಾಕಿದ, ಹೆಬ್ಬಾಗಿಲಿನ ಬದಿಯಲ್ಲಿ ‘ಚಾಲ್ರ್ಸ್ ಡುಪ್ಲಿಸ್’ ಎನ್ನುವ ನಾಮಫಲಕ. ಈ ಆಂಗ್ಲರ ಹೆಸರುಗಳೇ ಎಷ್ಟು ಅಟ್ರ್ಯಾಕ್ಟಿವ್ ಅಂದುಕೊಂಡ. ಅದು ಆ ಬಂಗಲೆಯ ಹಳೆಯ ಒಡೆಯನ ಹೆಸರು. ಆತನ ಮೊಮ್ಮಗನಿಂದ ಇವನು ಆ ಬಂಗಲೆಯನ್ನು ಖರೀದಿಸಿದ್ದ, ಅಲ್ಲೇ ಕೂತು ಕಡೆಯದಾಗಿ ತನ್ನ ಆತ್ಮಚರಿತ್ರೆ ಬರೆದು ಮುಗಿಸಿ, ನಂತರ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದ. ಸತತ ಐದು ವರ್ಷಗಳಿಂದ ಅವನಿಗೆ ರಾತ್ರಿಗಳಲ್ಲಿ ನಿದ್ರೆ ಹತ್ತುತ್ತಿಲ್ಲ. ಖಾಲಿ ಹಾಳೆ ಮುಂದಿಟ್ಟು ಕುಳಿತರೆ ಏನು ಬರೆಯವುದೆಂದು, ಎಲ್ಲಿಂದ ಪ್ರಾರಂಭಿಸಬೇಕೆಂದು ತೋಚುತ್ತಿಲ್ಲ. ಬರೆಯಲು ಕುಳಿತಾಗಲೆಲ್ಲ ಚಡಪಡಿಸಿಬಿಡುತ್ತಿದ್ದ, ಡ್ರಾಯರ್ ಒಳಗಿಂದ ಖಾಲಿ ಹಾಳೆಯೊಂದನ್ನು ತೆಗೆದ. ಮರದ ಚೇರಿಗೆ ಅಂಡೂರಿ, ಬೆನ್ನನ್ನು ನಿಟಾಗಿ ಚೇರಿನ ಹಿಂಬಂದಿಗೆ ಆನಿಸಿ ಕುಳಿತು, ಹೊಸ ಲೇಖನಿಯೊಂದನ್ನು ಕೈಗೆತ್ತಿಕೊಂಡು


ಅಧ್ಯಾಯ ಒಂದು;

‘ನಿಹಾರ್’ ಎಂದು ಪ್ರಾರಂಭಿಸಿದ.

ಅವನ ಜೀವನ ಚರಿತ್ರೆಯ ಭಾಗ ಮರಳಿ ಅವನ ಮೊದಲ ಕಥೆಯಿಂದ ಶುರುವಾಯಿತು. ಸತತ ಮೂರು ಗಂಟೆಗಳ ಸುದೀರ್ಘ ಬರವಣಿಗೆ. ನಿಟ್ಟುಸಿರು ಹೊರಚೆಲ್ಲಿ, ಎದ್ದು ಸಿಗರೇಟಿಗೆ ಅಗ್ನಿ ಸ್ಪರ್ಶಿಸಿದ. ಅಧ್ಯಾಯ ಒಂದು ಮುಗಿಸಿದ ಹುಮ್ಮಸ್ಸಿನಲ್ಲಿ ಆತ ಸಿಗರೇಟಿನ ಗಾಟನ್ನು ಗಾಢವಾಗಿ ಒಳಕ್ಕೆಳೆದು ಉದರ ಕಾಣಿಸಿದ.

ಆ ಅಧ್ಯಾಯದ ಕೊನೆಗೆ ಆತನ ಜೀವನದಲ್ಲಿ ಎರಡನೇ ಬಾರಿ ಮರಳಿ ನಕಲಿ ಹೆಸರೊಂದು ಬರೆಯಲ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.