ADVERTISEMENT

ಇಂದಿನಿಂದ ಅಂತರ ವಿ.ವಿ. ಕೊಕ್ಕೊ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST

ಮೈಸೂರು: ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕೊಕ್ಕೊ ಚಾಂಪಿಯನ್‌ಷಿಪ್‌ ಜನವರಿ 22 ರಿಂದ 24ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯಲಿದೆ.

ಕರ್ನಾಟಕದ ಮೂರು ವಿ.ವಿಗಳ ತಂಡಗಳು ಒಳಗೊಂಡಂತೆ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಆತಿಥೇಯ ಮೈಸೂರು ವಿ.ವಿ, ಮಂಗಳೂರು ವಿ.ವಿ ಮತ್ತು ದಾವಣಗೆರೆ ವಿ.ವಿ ತಂಡಗಳು ಕರ್ನಾಟಕದ ಭರವಸೆಯಾಗಿವೆ.

ಶನಿವಾರ ಇದೇ ತಾಣದಲ್ಲಿ ಕೊನೆಗೊಂಡ ದಕ್ಷಿಣ ವಲಯ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಮೈಸೂರು ವಿ.ವಿ ಮತ್ತು ರನ್ನರ್ ಅಪ್ ಸ್ಥಾನ ಪಡೆದಿದ್ದ ಮಂಗಳೂರು ವಿ.ವಿ. ತಂಡಗಳು ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿವೆ. ದಕ್ಷಿಣ ವಲಯದಿಂದ ಕೇರಳದ ಕಲ್ಲಿಕೋಟೆ ವಿ.ವಿ ತಂಡವೂ ಈ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.

ADVERTISEMENT

ಉತ್ತರ ವಲಯ, ಪೂರ್ವವಲಯ ಮತ್ತು ಪಶ್ಚಿಮ ವಲಯಗಳಿಂದ ತಲಾ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಕಳೆದ ಬಾರಿಯ ಚಾಂಪಿಯನ್ ಮಹಾರಾಷ್ಟ್ರದ ನಾಂದೇಡ್‌ನ ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿ.ವಿ (ಎಸ್‌ಆರ್‌ಟಿಎಂ) ತಂಡ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿವೆ.

ಕಳೆದ ಬಾರಿಯ ರನ್ನರ್ ಅಪ್ ಮುಂಬೈ ವಿ.ವಿ ಮತ್ತು ಮೂರನೇ ಸ್ಥಾನ ಪಡೆದಿದ್ದ ಕೊಲ್ಲಾಪುರದ ಶಿವಾಜಿ ವಿ.ವಿ ತಂಡಗಳೂ ಈ ಬಾರಿಯ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ.

16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.