ADVERTISEMENT

ಇಂಗ್ಲೆಂಡ್‌ಗೆ ಏಕದಿನ ಸರಣಿ

ಜೋಸ್‌ ಬಟ್ಲರ್‌–ಕ್ರಿಸ್‌ ವೋಕ್ಸ್ ನಡುವೆ ಏಳನೇ ವಿಕೆಟ್‌ಗೆ ಶತಕದ ಜೊತೆಯಾಟ

ಏಜೆನ್ಸೀಸ್
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‌ನ ಜೋಸ್ ಬಟ್ಲರ್ (ಬಲ) ಅವರನ್ನು ಕ್ರಿಸ್ ವೋಕ್ಸ್ ಅಭಿನಂದಿಸಿದರು. –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‌ನ ಜೋಸ್ ಬಟ್ಲರ್ (ಬಲ) ಅವರನ್ನು ಕ್ರಿಸ್ ವೋಕ್ಸ್ ಅಭಿನಂದಿಸಿದರು. –ಎಎಫ್‌ಪಿ ಚಿತ್ರ   

ಸಿಡ್ನಿ: ಅಮೋಘ ಆಟ ಮುಂದುವರಿಸಿದ ಇಂಗ್ಲೆಂಡ್ ಆಥಿತೇಯ ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯವನ್ನೂ ಗೆದ್ದು ಐದು ಪಂದ್ಯಗಳ ಸರಣಿಯನ್ನು ಕೈವಶಪಡಿಸಿಕೊಂಡಿತು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ಮುಂದಿಟ್ಟ 304 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರು ವಿಕೆಟ್‌ ಕಳೆದುಕೊಂಡು 286 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್‌ (62; 53 ಎ, 3 ಸಿ, 3 ಬೌಂ) ಮತ್ತು ಮಧ್ಯಮ ಕ್ರಮಾಂಕದ ಮಿಚೆಲ್ ಮಾರ್ಷ್ (55; 66 ಎ, 4 ಬೌಂ) ಹಾಗೂ ಮಾರ್ಕಸ್‌ ಸ್ಟೊಯಿನಿಸ್‌ (56; 43, 2 ಸಿ, 3 ಬೌಂ) ಅರ್ಧಶತಕ ಗಳಿಸಿ ಭರವಸೆ ಮೂಡಿಸಿದರು.

ನಾಯಕ ಸ್ಟೀವ್ ಸ್ಮಿತ್ 45 ರನ್ ಗಳಿಸಿ ಮಿಂಚಿದರು. ಆದರೆ ಅಂತಿಮ ಓವರ್‌ಗಳಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಎದುರಾಳಿಗಳ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿ ಜಯವನ್ನು ಕಸಿದುಕೊಂಡರು.

ADVERTISEMENT

44 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಆಸ್ಟ್ರೇ ಲಿಯಾ ಇನಿಂಗ್ಸ್‌ಗೆ ಫಿಂಚ್ ಮತ್ತು ನಾಯಕ ಸ್ಮಿತ್ ಜೀವ ತುಂಬಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 69 ರನ್ ಸೇರಿಸಿ ಮೊತ್ತವನ್ನು ಮೂರಂಕಿ ದಾಟಿಸಿದರು. ಫಿಂಚ್ ಔಟಾದ ನಂತರ ಸ್ಮಿತ್, ಮಾರ್ಷ್ ಮತ್ತು ಸ್ಟೊಯಿನಿಸ್‌ ಎದುರಾಳಿ ಬೌಲರ್‌ಗಳನ್ನು ದಂಡಿಸಿದರು. ಇವರ ಉತ್ತಮ ಆಟದ ನೆರವಿನಿಂದ ತಂಡ ಒಂದು ಹಂತದಲ್ಲಿ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಸ್ಪಿಮ್‌ ಮತ್ತು ವೇಗದ ದಾಳಿಯ ಮೂಲಕ ಇಂಗ್ಲೆಂಡ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಸ್ಫೋಟಿಸಿದ ಬಟ್ಲರ್‌: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ 107 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆರನೇ ವಿಕೆಟ್‌ಗೆ ನಾಯಕ ಮಾರ್ಗನ್‌ ಜೊತೆ 65 ರನ್‌ ಸೇರಿಸಿದ ಅವರು ಏಳನೇ ವಿಕೆಟ್‌ಗೆ ವೋಕ್ಸ್ ಜೊತೆ 113 ರನ್‌ ಸೇರಿಸಿದರು. ನಾಲ್ಕು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಅವರು 83 ಎಸೆತಗಳಲ್ಲಿ ಶತಕ ಪೂರೈಸಿದರು. ವೋಕ್ಸ್ 36 ಎಸೆತಗಳಲ್ಲಿ 53 ರನ್‌ ಗಳಿಸಿ ತಂಡ 300 ರನ್ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌:
50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 302 (ಜಾನಿ ಬೇಸ್ಟೊ 39, ಇಯಾನ್ ಮಾರ್ಗನ್‌ 41, ಜೋಸ್‌ ಬಟ್ಲರ್‌ 100, ಕ್ರಿಸ್‌ ವೋಕ್ಸ್‌ 53; ಜೋಶ್‌ ಹ್ಯಾಜಲ್‌ವುಡ್‌ 58ಕ್ಕೆ2); ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 286 (ಆ್ಯರನ್ ಫಿಂಚ್‌ 62, ಸ್ಟೀವ್‌ ಸ್ಮಿತ್‌ 45, ಮಿಚೆಲ್‌ ಮಾರ್ಷ್‌ 55, ಮಾರ್ಕಸ್‌ ಸ್ಟೊಯಿನಿಸ್‌ 56, ಟಿಮ್ ಪೈನೆ ಔಟಾಗದೆ 31; ಮಾರ್ಕ್‌ ವುಡ್‌ 46ಕ್ಕೆ2, ಕ್ರಿಸ್ ವೋಕ್ಸ್‌ 57ಕ್ಕೆ2, ಆದಿಲ್‌ ರಶೀದ್‌ 51ಕ್ಕೆ2).

ಫಲಿತಾಂಶ: ಇಂಗ್ಲೆಂಡ್‌ಗೆ 16 ರನ್‌ಗಳ ಜಯ; 5 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ. ಪಂದ್ಯಶ್ರೇಷ್ಠ: ಜೋಸ್ ಬಟ್ಲರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.