ADVERTISEMENT

ಗೊಬ್ಬರದ ಅಭಾವ ತಡೆಯಲು ಆಗ್ರಹ

ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ, ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:52 IST
Last Updated 12 ಜೂನ್ 2018, 11:52 IST

ಶಿಗ್ಗಾವಿ: ಖಾಸಗಿ ಕಂಪನಿಗಳಿಂದ ಬೀಜ, ಗೊಬ್ಬರದ ಕೃತಕ ಅಭಾವ ಉಂಟಾಗಿದ್ದು, ಇದನ್ನು ತಡೆಯಬೇಕೆಂದು ಆಗ್ರಹಿಸಿ ಇಲ್ಲಿನ ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್‌ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿರುವ ಬೀಜ, ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ತಮ್ಮ ಗೋದಾಮಿಯಲ್ಲಿ ಸಾಕಷ್ಟು ಬೀಜ, ಗೊಬ್ಬರವನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ತಮಗೆ ಬೇಕಾದ ವ್ಯಕ್ತಿಗಳಿಗೆ ಮಾತ್ರ ವಿತರಿಸುತ್ತಿದ್ದು, ಇತರರಿಗೆ ಅಭಾವ ತೋರಿಸುವ ಮೂಲಕ ಹೆಚ್ಚಿನ ಬೆಲೆ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ನಿಜವಾದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತರು ದೂರಿದರು. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಬೀಜ, ಗೊಬ್ಬರ ಮಾರಾಟ ಮಾಡುವ ಎಲ್ಲ ಅಂಗಡಿಗಳು ಮಾರಾಟದ ಬೀಜ, ಗೊಬ್ಬರಗಳ ಬೆಲೆ ಪಟ್ಟಿ ಹಾಕಬೇಕು. ಗೋದಾಮಿನಲ್ಲಿ ಸಂಗ್ರಹವಿರುವ ದಾಸ್ತಾನಿನ ಬಗ್ಗೆ ಮಾಹಿತಿ ನೀಡಬೇಕು. ಆದರೆ, ಯಾರೂ ಈ ನಿಯಮ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಬೆಲೆ ಹೆಚ್ಚು ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಂಥ ಕಂಪನಿಗಳ ಪರವಾನಗಿ ರದ್ದು ಮಾಡಬೇಕು ಎಂದರು. ಈ ಸಮಸ್ಯೆ ಪರಿಹರಿಸುವಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತ ಬಸವರಾಜ ಜಕ್ಕಿನಕಟ್ಟಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ADVERTISEMENT

ಮುಖಂಡರಾದ ಅಶೋಕ ಕಾಳೆ, ಸುರೇಶ ಹರಿಜನ, ದುರ್ಗಪ್ಪ ವಡ್ಡರ, ಹನುಮಂತಪ್ಪ ಬಂಡಿವಡ್ಡರ, ಗೋವಿಂದಪ್ಪ ಧಾರವಾಡ, ಗೀತಾ ಅಂಬಿಗೇರ, ಹನಮಂತಪ್ಪ ಮಾದರ, ಮಂಜು ಸೋಕನಪ್ಪನವರ, ಶಸಿಕಾಂತ ವಾಲಿಕಾರ, ಭೀಮಣ್ಣ ಹರಿಜನ ಮತ್ತಿತರರು ಇದ್ದರು.

ಡಿಎಪಿ ಗೊಬ್ಬರ ಪೂರೈಕೆಗೆ ಒತ್ತಾಯ

ಬ್ಯಾಡಗಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಿತ್ತನೆಗೆ ಅಗತ್ಯವಾಗಿರುವ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಡಿಎಪಿ ಗೊಬ್ಬರವನ್ನು ಪೂರೈಕೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ನೇಗಿಲಯೋಗಿ ಬಣ) ಕಾರ್ಯಕರ್ತರು ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಉಪತಹಶೀಲ್ದಾರ ಎಸ್.ಎನ್‌ಶೆಟ್ಟರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಚಂದ್ರು ಛತ್ರದ ಮಾತನಾಡಿ ‘ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿರುವ ವಿವಿಧ ಕಂಪನಿಗಳ ಗೋವಿನ ಜೋಳದ ಬೀಜಗಳು ಕಳಪೆಯಾಗಿವೆ. ಆದರೆ, ದಪ್ಪ ಕಾಳುಗಳನ್ನು ಖಾಸಗಿ ಕೃಷಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತನಿಖೆ ಕೈಗೊಳ್ಳಬೇಕೆಂದು’ ಎಂದು ಆಗ್ರಹಿಸಿದರು.

ರೈತ ಸಂಘದ ನಿರ್ದೆಶಕ ಅಶೋಕ ಛತ್ರದ, ರಾಜ್ಯ ಘಟಕದ ಉಪಾಧ್ಯಕ್ಷ ಶಂಭುಲಿಂಗಪ್ಪ ಎಲಿ, ರೆಹಮತ್‌ ಹಿತ್ತಲಮನಿ, ಮಹೇಶ ಉಜನಿ, ಸಿದ್ಧಲಿಂಗಪ್ಪ ಕುರವತ್ತಿ, ಜಗದೀಶ ಕುರಿಯವರ, ಮೌಲಾಸಾಬ ಶಿಡೇನೂರ, ಇನಾಯತ್ ನದಾಫ್, ಶಂಭು ಹೆಡಿಗ್ಗೊಂಡ, ರಾಘು ಪಾಟೀಲ ಇದ್ದರು.

ಬೀಜ,ಗೊಬ್ಬರದ ಕೃತಕ ಅಭಾವ ಮತ್ತು ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆ ಪಡೆಯುತ್ತಿರುವ ಖಾಸಗಿ ಕಂಪನಿಗಳ ಮಾಲೀಕರ ಮೇಲೆ ತಕ್ಷಣ ಕ್ರಮ ಕೈಗೊಳ್ಳತ್ತೇನೆ. ರೈತರು ಸಹಕಾರ ನೀಡಬೇಕು
- ವಿ.ಕೆ.ಶಿವಲಿಂಗಪ್ಪ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ, ಶಿಗ್ಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.