ADVERTISEMENT

ಕನ್ನಡದ ಕಚಗುಳಿಗೆ ಸ್ಟ್ಯಾಂಡ್‌–ಅಪ್ ನಗೆಗುಳಿಗೆ

ವಿಶಾಖ ಎನ್.
Published 21 ಮೇ 2022, 19:30 IST
Last Updated 21 ಮೇ 2022, 19:30 IST
   

ಹಾಸ್ಯವಲ್ಲರಿಗೀಗ ಸ್ಟ್ಯಾಂಡ್–ಅಪ್ ಸಿರಿ. ಬೇರೆ ಭಾಷೆಗಳಿಗೆ ಇದು ಹೊಸತಲ್ಲ. ಕನ್ನಡದ ಮಟ್ಟಿಗೆ ಮೈಕ್ ಮುಂದೆ ನಿಂತು ಮಾತಿನ ಕಚಗುಳಿ ಇಡುತ್ತಿರುವವರಿಗೆ ಇದು ಒಳ್ಳೆಯ ಕಾಲ. ಅವರಲ್ಲಿ ಯುವಕ–ಯುವತಿಯರ ದನಿಗಳದ್ದೇ ಕಾರುಬಾರು. ಉತ್ತರ ಕರ್ನಾಟಕದ ಭಾಷೆಯ ಹಾಸ್ಯದ ಸ್ವೀಕೃತಿ ಕೋವಿಡ್ ಕಾಲಘಟ್ಟದಿಂದ ಗಮನಾರ್ಹ ಆಗುವಲ್ಲಿ ಮನೆಯಲ್ಲೇ ಕುಳಿತು ಯೂಟ್ಯೂಬ್‌ನಲ್ಲಿ ಅಂತಹ ಹಾಸ್ಯ ರಸಾಯನ ಉಂಡ ರಸಿಕರ ಕಾಣ್ಕೆ ಇದೆ.

ತರ್ಲೆ ಬಾಕ್ಸ್, ಲೋಲ್‌ ಬಾಗ್ (LoL Bag), ನಮ್ದು ಕೆ, ಒಂದು ಜೋಕ್ ಹೇಳಲಾ ಎಂಬ ಸಮೂಹಗಳು ಸ್ಟ್ಯಾಂಡ್–ಅಪ್ ವಸ್ತುವಿಷಯಗಳ ಮೂಲಕ ವ್ಯಾಪಕವಾಗಿ ಕಚಗುಳಿ ಇಡುತ್ತಿವೆ. ಅವು ಲೈವ್ ಷೋಗಳನ್ನು ನೀಡುವುದಷ್ಟೆ ಅಲ್ಲ, ಯುಟ್ಯೂಬ್‌, ಫೇಸ್‌ಬುಕ್‌ನಲ್ಲೂ ಚಾಲ್ತಿಯಲ್ಲಿವೆ. ಸದಾಕಾಲ ಪ್ರೇಕ್ಷಕರನ್ನು ಹಿಡಿದಿಡಬೇಕೆಂಬ ಉದ್ದೇಶದಿಂದ ‘ರೀಲ್ಸ್‌’ ಮಾಡುವುದು ಅದರ ಭಾಗವೇ. ಇಂತಹ ತಂಡಗಳಲ್ಲಿ ಇರುವ ಬಹುತೇಕರು ಬೇರೆ ಬೇರೆ ವೃತ್ತಿಗಳಲ್ಲಿ ನಿರತರು. ಬೋನಸ್ ರೂಪದಲ್ಲಿ ಹಾಸ್ಯದ ಹೊಸ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡವರು ಅವರು.

ಕನ್ನಡದ ಮಟ್ಟಿಗೆ ಸ್ಟ್ಯಾಂಡ್–ಅಪ್ ಕಾಮಿಡಿಯ ಅಗ್ರಜ ಎನ್ನಬಹುದಾದವರು ಡ್ಯಾನಿಷ್‌ ಸೇಠ್‌. ಅವರು ಹಾಸ್ಯ ಮಾಧ್ಯಮದ ಹೊಸ ಸಾಧ್ಯತೆಗಳನ್ನೆಲ್ಲ ದುಡಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿವೃಂದವನ್ನು ವಿಸ್ತರಿಸಿಕೊಂಡವರು.ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರಂಥವರು ಡ್ಯಾನಿಷ್ ಪ್ರತಿಭೆ ಗುರುತಿಸಿ, ಸಿನಿಮಾಗೂ ಕರೆತಂದ ಇತ್ತೀಚಿನ ಇತಿಹಾಸವನ್ನು ನಾವು ಕಂಡಿದ್ದೇವೆ.

ADVERTISEMENT

ಡ್ಯಾನಿಷ್ ಹೇಳುವಂತೆ, ‘ಕನ್ನಡದ ಸ್ಟ್ಯಾಂಡ್–ಅಪ್ ಹಾಸ್ಯದ ಸಾಧ್ಯತೆ ಉಜ್ವಲ ಎನ್ನುವಂತೆ ಕಾಣುತ್ತಿದೆ. ಸುಹಾಸ್, ನಿರೂಪ್ ತರಹದ ಕನ್ನಡದ ಹುಡುಗರನ್ನು ಭವಿಷ್ಯ ಇರುವ ಕನ್ನಡದ ಸ್ಟ್ಯಾಂಡ್–ಅಪ್‌ ಕಾಮಿಡಿಯನ್‌ಗಳು’ ಎಂದು ಅವರು ಗುರುತಿಸುತ್ತಾರೆ.

ಕನ್ನಡವನ್ನು ಬಳಸುತ್ತಾ, ಅದಕ್ಕೆ ಹದವರಿತಂತೆ ಬೇರೆ ಭಾಷೆಯ ಉಪಧ್ವನಿಗಳನ್ನೂ ಅಳವಡಿಸುತ್ತಾ ತಾವು ಮಾಡಿದ ಪ್ರಯೋಗದ ಬಗೆಗೆ ಡ್ಯಾನಿಷ್‌ ಮುಕ್ತವಾಗಿ ಮಾತನಾಡಿದರು.

‘ಹತ್ತು ಹನ್ನೆರಡು ವರ್ಷಗಳ ಹಿಂದೆ ನಾನು ಸ್ಟ್ಯಾಂಡ್‌ ಅಪ್‌ನ್ನು ಇಂಪ್ರೂವ್ ಮಾಡತೊಡಗಿದಾಗ ಪರಿಸ್ಥಿತಿ ಹೀಗಿರಲಿಲ್ಲ. 200 ರೂಪಾಯಿ ಟಿಕೆಟ್ ಇಟ್ಟರೆ ಕೊಳ್ಳುವವರು ಕಡಿಮೆ ಇದ್ದರು. ಪಬ್‌ಗಳಲ್ಲಿ ನನ್ನಂಥವರನ್ನು ಷೋ ನೀಡಲು ಕರೆಯುವವರು ಆಗ ಸುಲಭಕ್ಕೆ ಸಿಗುತ್ತಿರಲಿಲ್ಲ. ನಾನೂ ಆಗ ಸೈಕಲ್ ಹೊಡೆದೆ. ಕ್ರಮೇಣ ಈ ಹಾಸ್ಯ ಪ್ರಕಾರವನ್ನು ವ್ಯಾಪಾರದ ದೃಷ್ಟಿಯಿಂದ ಪ್ರಚುರ ಪಡಿಸುವುದು ಹೇಗೆ ಎಂದು ಯೋಚಿಸಿದೆ. ಅದು ನಿಧಾನವಾಗಿ ಕ್ಲಿಕ್ ಆಗತೊಡಗಿತು. ಈಗಿನ ಕೆಲವು ಸ್ಟ್ಯಾಂಡ್–ಅಪ್ ಕಾಮಿಡಿಯನ್‌ಗಳು ಷೋಗೆ 500 ರೂಪಾಯಿ ಟಿಕೆಟ್ ಇಡುವಷ್ಟು ಬೆಳೆದಿರುವುದನ್ನು ಕಂಡರೆ ಖುಷಿಯಾಗುತ್ತದೆ. ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರೇಕ್ಷಕರು ತುಂಬುವಂತೆ ಮಾಡಲು ಬಹಳ ಹಿಂದೆ ನಾನು ಪಟ್ಟಿದ್ದ ಕಷ್ಟ ಈಗ ಯಶಸ್ವಿ ಮಾರ್ಕೆಟಿಂಗ್ ತಂತ್ರದ ಇತಿಹಾಸವಾಗಿದೆ’ ಎನ್ನುತ್ತಾರೆ ಡ್ಯಾನಿಷ್‌.

ತಮ್ಮ ಹಾಸ್ಯ ಹಾಗೂ ಕನ್ನಡದ ಮಿತಿಯ ಅರಿವು ಡ್ಯಾನಿಷ್‌ ಅವರಿಗೆ ಇದೆ. ‘ನನಗೆ ಧಾರವಾಡ ಕನ್ನಡ ಅಥವಾ ಮಂಗಳೂರು ಕನ್ನಡ ಮಾತನಾಡಲು ಬರೋದಿಲ್ಲ. ನಗರ ಕೇಂದ್ರಿತ ಪ್ರೇಕ್ಷಕರೇ ನನ್ನನ್ನು ಹೆಚ್ಚು ಫಾಲೋ ಮಾಡೋದು. ಇನ್‌ಸ್ಟಾಗ್ರಾಂನಲ್ಲಿ ಒಂದೂಕಾಲು ಲಕ್ಷ ಜನ ನನ್ನನ್ನು ಫಾಲೋ ಮಾಡುತ್ತಾರೆ. ಅವರಲ್ಲಿನ ಭಿನ್ನಾಭಿಪ್ರಾಯಗಳನ್ನೆಲ್ಲ ಸೂಕ್ಷ್ಮವಾಗಿ ನಾನು ಗಮನಿಸುವೆ. ಒಂದು ಹಾಸ್ಯ ಒಬ್ಬರಿಗೆ ರುಚಿಸಬಹುದು. ಇನ್ನೊಬ್ಬರಿಗೆ ಬಾಲಿಶ ಎನ್ನಿಸಬಹುದು. ಮತ್ತೊಬ್ಬರು ಅದರಲ್ಲಿ ಇನ್ನೂ ಏನೋ ಇದೆ ಎಂದು ಯೋಚಿಸತೊಡಗುತ್ತಾರೆ. ಈಗ ಧಾರವಾಡ ಭಾಷೆ, ಉತ್ತರ ಕರ್ನಾಟಕದ ಶೈಲಿಯ ಹಾಸ್ಯವೆಲ್ಲ ನೋಡಲು–ಕೇಳಲು ಸಿಗುತ್ತಿರುವುದು ಖುಷಿಯ ವಿಷಯ’ ಎನ್ನುತ್ತಾರೆ ಅವರು.

ಕನ್ನಡದಲ್ಲಿ ಮಿಮಿಕ್ರಿ ದಯಾನಂದ್ ಅವರನ್ನೇ ಮೊದಲ ಯಶಸ್ವಿ ಸ್ಟ್ಯಾಂಡ್–ಅಪ್ ಕಲಾವಿದ ಎಂದು ಡ್ಯಾನಿಷ್‌ ಗುರುತಿಸುತ್ತಾರೆ. ‘ಅವರ ಹಾಸ್ಯದ ಟೈಮಿಂಗ್ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ವಿಷಯಗಳನ್ನು ಪ್ರಸ್ತುತ ಪಡಿಸಿದ್ದ ರೀತಿಯೂ ಕಾರಣ. ಸಿನಿಮಾದಲ್ಲಿ ಸಾಧು ಕೋಕಿಲ ರಂಜನೆಯನ್ನು ಇಷ್ಟಪಡುವ ವರ್ಗ ಇರುವ ರೀತಿ ಸ್ಟ್ಯಾಂಡ್‌–ಅಪ್‌ನಲ್ಲಿ ದಯಾನಂದ್ ಅವರಿಗಿತ್ತು. ಅವರನ್ನು ಈ ವಿಷಯದಲ್ಲಿ ಆಗಿನ ಲೆಜೆಂಡ್ ಎನ್ನಬಹುದು’ ಎನ್ನುವುದನ್ನೂ ಡ್ಯಾನಿಷ್ ಹಂಚಿಕೊಂಡ ನೆನಪು.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್ ಕ್ರಿಕೆಟ್ ತಂಡದೊಟ್ಟಿಗೆ ಓಡಾಡುತ್ತಾ ಸಣ್ಣ ಸಣ್ಣ ಹಾಸ್ಯ ಪ್ರಸಂಗಗಳನ್ನು ಸೃಷ್ಟಿಸುವ ಡ್ಯಾನಿಷ್‌, ಅಲ್ಲಿ ತಾವು ಬಳಸುವ ಪಂಚ್ ಕನ್ನಡದ ಧ್ವನಿ ವಿರಾಟ್ ಕೊಹ್ಲಿ ತರಹದವರಿಗೂ ಅರ್ಥವಾಗುವುದೊಂದು ಬೆರಗು ಎನ್ನುತ್ತಾರೆ. ಭಾಷೆ ಎನ್ನುವ ಟೂಲ್ ಅನ್ನು ನಾವು ಈ ರೀತಿ ಬ್ಲೆಂಡ್ ಮಾಡುವುದರಿಂದ ಕನ್ನಡದ ಕಂಪು ಬೇರೆ ಬೇರೆ ದೇಶಗಳಿಗೂ ಹರಡುತ್ತದೆ ಎಂದು ನಂಬಿದ್ದಾರೆ.

ಕನ್ನಡದ ಯಾವುದೇ ‘ಕಂಟೆಂಟ್’ ಅನ್ನು ವ್ಯಾಪಕವಾಗಿ ಬೇರೆ ದೇಶ, ಭಾಷೆಗಳಿಗೂ ತಲುಪಿಸುವ ವ್ಯಾಪಾರಿ ತಂತ್ರ ಡ್ಯಾನಿಷ್‌ ಪ್ರಕಾರ ‘ಹಾರ್ಟ್‌ಲ್ಯಾಂಡ್‌ಗೆ ತಲುಪುವುದು’. ‘ಕೆಜಿಎಫ್2’ ಚಿತ್ರವನ್ನು ಯಶ್ ಆ ರೀತಿ ಹಾರ್ಟ್‌ಲ್ಯಾಂಡ್‌ಗೆ ತಲುಪಿಸಿದ್ದನ್ನು ಅವರು ಉದಾಹರಣೆಯಾಗಿ ನೀಡುತ್ತಾರೆ. ಪುನೀತ್ ರಾಜ್‌ಕುಮಾರ್‌ ಕೂಡ ಇಂತಹ ಸಾಧ್ಯತೆಗಳ ಶೋಧಿಸಿದ್ದನ್ನು ನೆನೆದು ಅವರು ಭಾವುಕರಾಗುತ್ತಾರೆ.

ಬೇರೆ ಬೇರೆ ಭಾಷೆಯವರು ಸ್ಟ್ಯಾಂಡ್‌–ಅಪ್‌ನಲ್ಲಿ ಗೊತ್ತುಪಡಿಸಿ ಇಟ್ಟಿರುವ ಯಶಸ್ಸಿನ ಮಾನದಂಡವನ್ನು ಕನ್ನಡದವರೂ ತಲುಪುವ ದಾರಿಗಳೀಗ ಗೋಚರಿಸುತ್ತಿವೆ. ಮುಂದೆ ಅಲ್ಲಿ ಭವಿಷ್ಯ ಖಂಡಿತ ಇದೆ ಎನ್ನುವ ತಮ್ಮ ಆಶಾವಾದಕ್ಕೆ ಡ್ಯಾನಿಷ್‌, ಸಂಗೀತದಲ್ಲಿ ರಘು ದೀಕ್ಷಿತ್ ಮಾಡಿದ ಮಾರುಕಟ್ಟೆ ತಂತ್ರವನ್ನು ಉದಾಹರಣೆಯಾಗಿ ನೀಡುತ್ತಾರೆ.

‘ನಮ್ದು ಕೆ’ ಸ್ಟ್ಯಾಂಡ್‌–ಅಪ್ ಟೀಮ್‌ನ ಭಾಗವಾಗಿ ಮೊದಲಿನಿಂದಲೂ ಅದನ್ನು ಬೆಳೆಸಿದ, ಯುಟ್ಯೂಬ್‌ಗೂ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾ ಬಂದಿರುವ ಶ್ರವಣ್ ನಾರಾಯಣ್ ಐತಾಳ್, ಡ್ಯಾನಿಷ್‌ ಅವರ ಅಭಿಪ್ರಾಯವನ್ನು ಸ್ವಾನುಭವದೊಂದಿಗೆ ಸಮರ್ಥಿಸುತ್ತಾರೆ. ಕೋವಿಡ್‌ ಲಾಕ್‌ಡೌನ್‌ನಲ್ಲಿ ತಮ್ಮ ತಂಡದ ಸ್ಟ್ಯಾಂಡ್‌–ಅಪ್‌ ವಿಡಿಯೊಗಳ ಪ್ರೇಕ್ಷಕರ ಸಂಖ್ಯೆ ಮುಪ್ಪಟ್ಟಾದಾಗ ಸಂಭ್ರಮಪಟ್ಟಿದ್ದರು. ಲಾಕ್‌ಡೌನ್‌ ತೆರವಾದ ಮೇಲೆ ಕೆಲವು ಷೋಗಳಿಗೆ ಬಂದ ಪ್ರೇಕ್ಷಕರನ್ನು ಕಂಡು ಆ ಖುಷಿ ಕೂಡ ಮುಪ್ಪಟ್ಟಾಗಿತ್ತು. ಈಗ ವಿಡಿಯೊಗಳನ್ನು ನೋಡುವವರ ಸಂಖ್ಯೆ ಮತ್ತೆ ಸ್ವಲ್ಪ ಕಡಿಮೆಯಾಗುತ್ತಿರುವುದು ಅವರನ್ನು ಕಾಡಲಾರಂಭಿಸಿದೆ.

‘ಯುಟ್ಯೂಬ್‌ನಲ್ಲಿ ಒಂದು ವಿಡಿಯೊ ಒಂದು ಲಕ್ಷ ವ್ಯೂ ದಾಟಿದರೆ ಅದನ್ನೊಂದು ರೆವೆನ್ಯೂ ಮಾಡ್ಯೂಲ್ ಎಂದು ಪರಿಗಣಿಸಬಹುದು. ಖುದ್ದು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನನಗೆ ಇಲ್ಲಿನ ವಿಡಿಯೊಗಳನ್ನು ಜನಪ್ರಿಯಗೊಳಿಸುವ ಅಲ್‌ಗಾರಿದಂ ಅರ್ಥ ಮಾಡಿಕೊಳ್ಳುವುದು ಸವಾಲೆನಿಸುತ್ತಿದೆ. ಕಂಟೆಂಟ್‌ ಕೂಡ ಏಕರೀತಿ ಆಗಕೂಡದು. ಒಂದು ಕ್ಲಿಕ್ ಆಯಿತೆಂದರೆ ಅದನ್ನೇ ಅನುಕರಿಸಿದರೆ ಪೆಟ್ಟು. ಸಣ್ಣ ವಿಷಯಗಳನ್ನು ಸ್ಟ್ಯಾಂಡ್‌–ಅಪ್ ಕಾಮಿಡಿಗಳನ್ನು ನಾವೊಂಚೂರು ಉತ್ಪ್ರೇಕ್ಷೆ ಮಾಡಿ ಹೇಳುತ್ತಿರುತ್ತೇವೆ. ಇದು ಕೂಡ ಜನರಿಗೆ ಒಂದು ಹಂತದ ನಂತರ ಬೇಡವಾಗುವುದನ್ನು ಕಂಡಿದ್ದೇವೆ. ಹಾನಗಲ್ ಹುಡುಗಿ ಶ್ವೇತಾ ದೊಡ್ಡಮನಿ ತರಹದವರು ಮಾಡುವ ಅಶ್ಲೀಲವೇ ಅಲ್ಲದ ಹಾಸ್ಯ ಸರಕು ಹೊಸತೆನ್ನುವಂತೆ ಕಂಡಿದೆ. ರಾಘವೇಂದ್ರ ಆಚಾರ್ಯ ಅವರ ಶೈಲಿ ಜನರಿಗೆ ಹಿಡಿಸಿದೆ. ಇವೆಲ್ಲವೂ ಉತ್ತರ ಕರ್ನಾಟಕದ ಭಾಷೆಯ ಬಗೆಗೆ ಇದ್ದ ಸೀಮಿತವಾದ ಮಿಥ್‌ಗಳನ್ನು ಒಡೆದಿವೆ’ ಎನ್ನುವುದು ಶ್ರವಣ್ ಅನುಭವ ನುಡಿ.

ಸ್ಟ್ಯಾಂಡ್‌–ಅಪ್‌ನಲ್ಲಿ ಕನ್ನಡ ಇನ್ನೂ ಹೆಚ್ಚು ಬೆಳೆಯಬೇಕಾದರೆ ಜಾಗತಿಕ ಮಟ್ಟದ ವಸ್ತುವಿಷಯಗಳನ್ನು ಡ್ಯಾನಿಷ್‌ ಮಾದರಿಯಲ್ಲಿ ಸೃಷ್ಟಿಸಬೇಕು ಎಂದು ಹೇಳುತ್ತಾರೆ.

ಕನ್ನಡದ ವಿವಿಧ ಭಾಗಗಳ ಜನರು ಹಾಸ್ಯ ಪ್ರಸಂಗಗಳ ಯುಟ್ಯೂಬ್ ವಿಡಿಯೊಗಳನ್ನು ರೂಪಿಸುತ್ತಿದ್ದಾರೆ. ಪತಂಗ ಎನ್ನುವ ಚಾನೆಲ್ ಕುಂದಾಪುರ ಕನ್ನಡದಲ್ಲಿ ವಿಡಿಯೊಗಳನ್ನು ಮಾಡಿದರೆ, ಗಣೇಶ್ ಕಾಮತ್ ಎನ್ನುವವರು ಮಂಗಳೂರು ಭಾಷೆಯಲ್ಲಿ ಕ್ರಿಕೆಟ್‌ನ ಹಾಸ್ಯಭರಿತ ವಿಶ್ಲೇಷಣೆ ಮಾಡುತ್ತಾ, ಜೀವನಶೈಲಿಯ ಕೆಲವು ವ್ಲಾಗ್‌ಗಳನ್ನೂ ಮಾಡುತ್ತಿದ್ದಾರೆ.

ಪವನ್ ವೇಣುಗೋಪಾಲ್, ನಿರೂಪ್ ಮೋಹನ್, ರಾಘವೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಹೆಗಡೆ, ಕಾರ್ತಿಕ್ ಪತ್ತಾರ್, ಶ್ರವಣ್ ಪಿ., ಗಣೇಶ್ ಕಶ್ಯಪ್, ಸಂದೇಶ್ ಕುಮಾರ್ ಆರ್, ನಿತಿನ್ ಕಾಮತ್, ದಿಲೀಪ್ ಶಂಕರ್, ವಾದಿರಾಜ್ ಬಬಲಾಡಿ, ಅಕ್ಷಯ್ ಕುಮಾರ್, ಗೌತಮ್ ಶ್ರವಣ್ ಕುಮಾರ್ ಇವರೆಲ್ಲ ಸ್ಟ್ಯಾಂಡ್‌–ಅಪ್ ಹಾಸ್ಯದ ಮೂಲಕ ಜನಮನಸೂರೆಗೊಳ್ಳಲು ತವಕಿಸುತ್ತಿರುವ ಹೊಸಕಾಲದ ಹುಡುಗರು. ಸೋನು ವೇಣುಗೋಪಾಲ್ ಅವರಂಥ ಧಾರವಾಡಿ ಶೈಲಿಯಲ್ಲಿ ಮಾತನಾಡುವ ಯುವತಿ ಸಹ ಈ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಸ್ಟ್ಯಾಂಡ್‌–ಅಪ್ ಕಾಮಿಡಿ ಯೊಂದರಿಂದಲೇ ಬದುಕು ಕಟ್ಟಿಕೊಳ್ಳಲು ಈಗ ಸಾಧ್ಯವೇ ಎಂಬ ಪ್ರಶ್ನೆಗೆ ಮಾತ್ರ ಅನೇಕರಲ್ಲಿ ಮಿಶ್ರ ಉತ್ತರಗಳಿವೆ. ‘ಬಂದೇ ಬರತಾದ ಕಾಲ’ ಎನ್ನುವುದು ಈ ಎಲ್ಲರ ಆಶಾವಾದ.

ಬೀಚಿ ಓದಿ ಬೆಳೆದ ರಾಘವೇಂದ್ರ: ಕೊಪ್ಪಳದ ಬಳಿಯ ಕುಷ್ಟಗಿ ಮೂಲದವರು ರಾಘವೇಂದ್ರ ಆಚಾರ್ಯ. ಬೆಳೆದದ್ದು ರಾಯಚೂರಿನಲ್ಲಿ. ಬೀಚಿ ಪುಸ್ತಕಗಳನ್ನು ಓದಿ ಅಲ್ಲಿನ ವ್ಯಂಗ್ಯೋಕ್ತಿಗಳನ್ನು ಜೀರ್ಣಿಸಿಕೊಂಡು ಸಹಜವಾಗಿಯೇ ತಮ್ಮಲ್ಲಿ ಹಾಸ್ಯಪ್ರಜ್ಞೆ ಮೂಡಿತೆನ್ನುವವರು. ಆರು ವರ್ಷ ಅವರು ಪತ್ರಕರ್ತರಾಗಿ ಕೆಲಸ ಮಾಡಿದರು. ಸಂಯಕ್ತ ಕರ್ನಾಟಕ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳಲ್ಲಿ ವಿಜ್ಞಾನ ಸಂಶೋಧನಾ ಬರಹಗಳ ವಿಷಯದಲ್ಲಿ ಸಾಣೆಗೆ ಒಡ್ಡಿಕೊಂಡರು. ಮೈಕ್ರೋಬಯಾಲಜಿ ಓದಿರುವ ಇವರಿಗೆ ಸ್ಟ್ಯಾಂಡ್–ಅಪ್ ತುಡಿತ. ಲಾಕ್‌ಡೌನ್‌ ಸಂದರ್ಭದಲ್ಲಿ ಯೂಟ್ಯೂಬ್‌ನಲ್ಲಿ ಇವರು ಹಾಕಿದ್ದ ‘ಡೇಂಜರ್ ನಾಗ’ ಎಂಬ ವಿಡಿಯೊಗೆ ಸುಮಾರು ಎಂಟು ಲಕ್ಷ ವ್ಯೂಸ್ ಬಂದಿವೆ. ವಿವಿಧೆಡೆಯ ಕನ್ನಡ ಸಂಘಗಳು ಅದನ್ನು ಕಂಡೇ ಇವರಿಗೆ ಆನ್‌ಲೈನ್‌ ಮೂಲಕವೇ ಹಾಸ್ಯ ರಸಾಯನ ಉಣಬಡಿಸಲು ಆಹ್ವಾನ ನೀಡಿದ್ದವು. ಪಾಕೆಟ್‌ಎಫ್‌ಎಂ ಎಂಬ ಒಟಿಟಿ ವೇದಿಕೆಯಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ಆಚಾರ್ಯ ಉತ್ತರ ಕರ್ನಾಟಕದ ಭಾಷೆಯಲ್ಲಿ ಹಾಸ್ಯ ಪ್ರಸಂಗಗಳನ್ನು ಹೇಳುತ್ತಾರೆ.

‘ನನ್ನ ಹಾಸ್ಯದಲ್ಲಿ ಸ್ವಾನುಭವವೇ ಹೆಚ್ಚು. ಇನ್ನೊಬ್ಬರು ನಮಗೆ ಹೇಳಿದ ಜೋಕನ್ನೇ ಹೇಳಿದರೆ ಸ್ಟ್ಯಾಂಡ್‌–ಅಪ್‌ನಲ್ಲಿ ಗಿಟ್ಟೊಲ್ಲ. ಎಷ್ಟೆಲ್ಲ ಜನ ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಸ್ಯ ಮಾಡಿದರಾದರೂ ಉಳಿದವರು ಪ್ರಾಣೇಶ್. ಅಂತೆಯೇ ಈಗ ಇಲ್ಲೊಂದು ಸ್ಪರ್ಧೆಯಿದೆ. ಯಾರು ಒಳ್ಳೆಯ ರಂಜನೀಯ ಹಾಸ್ಯ ಕೊಡುವರೋ ಅವರಿಗೆ ಉಳಿಗಾಲ. ಮಂಡ್ಯ, ಮಂಗಳೂರು ಹೀಗೆ ವಿವಿಧ ಶೈಲಿಯ ಕನ್ನಡದ ಸ್ಟ್ಯಾಂಡ್‌–ಅಪ್‌ಗಳೂ ಖಂಡಿತ ಬರಲಿವೆ. ಓಪನ್‌ ಮೈಕ್ ಎಂಬ ಅವಕಾಶ ನೀಡುವುದು ಈಗ ಹೆಚ್ಚಾಗಿರುವುದರಿಂದ ಥಟ್ಟನೆ ಯಾರೋ ಒಬ್ಬ ಪ್ರತಿಭೆ ಮಿಂಚುವುದು ನಡೆಯುತ್ತಿದೆ. ಬೆಂಗಳೂರು ಪ್ರೇಕ್ಷಕರು ಮುಕ್ತ ಮನಸ್ಸಿನವರಾದ್ದರಿಂದ ನಮ್ಮ ಭಾಷೆಯ ಹಾಸ್ಯವನ್ನು ಸಲೀಸಾಗಿ ಸ್ವೀಕರಿಸುತ್ತಿದ್ದಾರೆ’ ಎನ್ನುತ್ತಾರೆ ರಾಘವೇಂದ್ರ ಆಚಾರ್ಯ.

ಶೈಶವಾವಸ್ಥೆಯ ಮಾಧ್ಯಮದಲ್ಲಿ ನಾನು: ತಮ್ಮ ತಾಯಿಯ ಜತೆ, ಕುಟುಂಬದವರ ಜತೆ, ಮೆಟ್ರೊ ರೈಲಿನಲ್ಲಿ ಆದ ಅನುಭವಗಳನ್ನೆ ಹಾಸ್ಯ ಪ್ರಸಂಗಗಳಾಗಿಸಿ ಧಾರವಾಡಿ ಭಾಷೆಯಲ್ಲಿ ಪ್ರಸ್ತುತ ಪಡಿಸಿದವರು ಸೋನು ವೇಣುಗೋಪಾಲ್. ‘ಇಂಡಿಯನ್ ಪೇರೆಂಟ್ಸ್’ ಎಂಬ ಇವರ ಸ್ಟ್ಯಾಂಡ್–ಅಪ್ ಕಾಮಿಡಿಯು ಯೂಟ್ಯೂಬ್‌ನಲ್ಲಿ 8 ಲಕ್ಷ ವ್ಯೂಸ್ ಪಡೆದುಕೊಂಡಿದೆ. ಸದ್ಯಕ್ಕೆ ಕೆಲವು ಬ್ರ್ಯಾಂಡ್‌ಗಳಿಗೆ ಮೀಡಿಯಾ ಪ್ರೊಮೋಷನ್ಸ್ ಮಾಡುತ್ತಿರುವ ಸೋನು, ಮನರಂಜನೆಯ ವಿವಿಧ ಮಜಲುಗಳಲ್ಲಿ ಗುರುತಾಗುತ್ತಿದ್ದಾರೆ. ಆರ್‌ಜೆ ಆಗಿ ಕೆಲಸ ಮಾಡಿದ್ದ ಇವರಿಗೆ ಕೆಟ್ಟ ಪದಗಳನ್ನು ಉಪಯೋಗಿಸದೆ ಹಾಸ್ಯ ಪ್ರಸಂಗಗಳನ್ನು ಕಟ್ಟಬೇಕೆಂಬುದು ಮಹತ್ವಾಕಾಂಕ್ಷೆ.

ಹಿಂದಿನ ಹಾಸ್ಯೋತ್ಸವಗಳಲ್ಲಿ ಯುವಕ–ಯುವತಿಯರು ಹೆಚ್ಚಾಗಿ ಇರಲಿಲ್ಲ. ಸ್ಟ್ಯಾಂಡ್‌–ಅಪ್ ಕಾಮಿಡಿ ಅಂತಹ ಮನಸ್ಸುಗಳನ್ನು ಹೆಚ್ಚು ಹೊರಗೆ ತರುತ್ತಿದೆ ಎನ್ನುತ್ತಾರೆ ಸೋನು.

ಕನ್ನಡದ ಮಟ್ಟಿಗೆ ಸ್ಟ್ಯಾಂಡ್–ಅಪ್ ಕಾಮಿಡಿ ಎನ್ನುವುದು ಶೈಶವಾವಸ್ಥೆಯಲ್ಲಿದೆ ಎನ್ನುವ ಸೋನು, ಹೆಣ್ಣುಮಕ್ಕಳು ತಮ್ಮ ಅನುಭವಗಳನ್ನೇ ಮುಕ್ತವಾಗಿ ನಿರ್ಭಿಡೆಯಿಂದ ಹಾಸ್ಯವಾಗಿಸಿ ಹೇಳಬಲ್ಲ ಸಾಧ್ಯತೆಯ ಬಗೆಗೆ ಹೆಮ್ಮೆಪಡುತ್ತಾರೆ.

ಬೇರೆ ಬೇರೆಡೆ ಇರುವವರೂ ಸ್ಥಳೀಯ ಕನ್ನಡವನ್ನು ಬಳಸುವ, ಅದರೊಟ್ಟಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ಸ್ಟ್ಯಾಂಡ್‌–ಅಪ್‌ ಕಾಮಿಡಿಯನ್ನು ವಿಸ್ತರಿಸುತ್ತಿದ್ದಾರೆ ಎನ್ನುವುದು ಅವರ ವಿಶ್ಲೇಷಣೆ. ಪ್ರದರ್ಶನ ಕಲೆಗಾರರಾಗಿ ಸದಾ ಜೀವಂತಿಕೆ ಉಳಿಸಿಕೊಂಡು ಪ್ರಸಂಗಗಳನ್ನು ರೂಪಿಸಬೇಕಾದ ಈ ಪ್ರಕಾರವನ್ನು ಅವರು ಹಚ್ಚಿಕೊಂಡಿದ್ದಾರೆ.

ಚಂದಾದಾರರೆಷ್ಟು?
ಡ್ಯಾನಿಷ್‌ ಸೇಟ್‌ ಅವರ ಯುಟ್ಯೂಬ್ ಚಾನೆಲ್‌ಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಇನ್ನು ತರ್ಲೆ ಬಾಕ್ಸ್‌ ಚಾನೆಲ್‌ಗೆ 4.89 ಲಕ್ಷ, ಲೋಲ್‌ ಬಾಗ್‌ಗೆ 1.7 ಲಕ್ಷ , ಒಂದು ಜೋಕ್‌ ಹೇಳ್ಲಾ ಚಾನೆಲ್‌ಗೆ ಸುಮಾರು 20 ಸಾವಿರ ಚಂದಾದಾರರಿದ್ದಾರೆ. ಕೆಲವು ವಿಡಿಯೊಗಳಿಗೆ ಬರುವ ವ್ಯೂಗಳ ಸಂಖ್ಯೆಗೂ ಚಂದಾದಾರರ ಸಂಖ್ಯೆಗೂ ಸಂಬಂಧ ಇರುವುದಿಲ್ಲ. ಚಂದಾದಾರರಾಗದೆಯೂ ಹೆಚ್ಚು ಜನ ಹಾಸ್ಯ ರಸಾಯನವನ್ನು ಉಣ್ಣುತ್ತಿದ್ದಾರೆನ್ನುವುದಕ್ಕೆ ಇದೇ ಸಾಕ್ಷಿ.

ಕುನಾಲ್ ನುಡಿ
‘ನಮ್ಮ ದೇಶದಲ್ಲಿ ಜನ ಸದಾ ಕೋಪದಿಂದಲೇ ಇರುತ್ತಾರೆ. ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದಾಗ ಅವರ ಮೇಲೆ ಕೋಪ. ಈಗ ಪ್ರಧಾನಿ ಮೋದಿ ಇರುವಾಗಲೂ ಇನ್ಯಾವುದಕ್ಕೋ ಕೋಪ. ಇತಿಹಾಸವನ್ನಂತೂ ಒಬ್ಬೊಬ್ಬ ರಾಜಕಾರಣಿ ಇಲ್ಲಿ ತನ್ನ ಮೂಗಿನ ನೇರಕ್ಕೆ ಬಳಸುತ್ತಾ ಇರುತ್ತಾನೆ. ನಾನು ಅದಕ್ಕೇ ನಿರ್ದಿಷ್ಟವಾದ ಪಥವನ್ನು ಆಯ್ಕೆ ಮಾಡಿಕೊಂಡೆ. ನಾನು ಮೋದಿ ವಿರೋಧಿ ಎಂದೇ ಅನೇಕರು ಬಿಂಬಿಸಿದ್ದಾರೆ. ಆದರೆ, ನನಗಿರುವುದು ಮೂಲ ಪ್ರಶ್ನೆಗಳು. ಅವಕ್ಕೆ ಉತ್ತರ ಕೊಡದೆ ಸುಮ್ಮನೆ ಜಟಾಪಟಿಗೆ ಇಳಿಯುವ ಮಂದಿಗೆ ಎಂದೂ ಹೆದರಲಿಲ್ಲ. ಅದು ಆತ್ಮವಿಶ್ವಾಸ ಹೆಚ್ಚಿಸಿತು’ ಎಂದು ಕುನಾಲ್ ಪ್ರತಿಕ್ರಿಯಿಸಿದ್ದರು.

ಅಂದೇನು...ಇಂದೇನು?
ಭಾರತದಲ್ಲಿ 17ನೇ ಶತಮಾನದಲ್ಲೇ ತಿರುವನಂತಪುರದಲ್ಲಿ ಚಕ್ಯಾರ್‌ ಕೂತು ಎಂಬ ಸ್ಟ್ಯಾಂಡ್‌–ಅಪ್‌ ಕಾಮಿಡಿಯನ್‌ ಇದ್ದ ಎನ್ನಲಾಗುತ್ತದೆ. ಆದರೆ, ಅದು ನಮ್ಮ ದೇಶದಲ್ಲಿ ವ್ಯವಸ್ಥಿತ ಫಾರ್ಮ್‌ ಕಂಡುಕೊಂಡದ್ದು 2005ರ ನಂತರ. 1986ರಲ್ಲಿ ಹಿಂದಿ ಚಿತ್ರನಟ ಜಾನಿ ಲಿವರ್ ‘ಹೋಪ್ 86’ ಎಂಬ ಚಾರಿಟಿ ಶೋನಲ್ಲಿ ಸ್ಟ್ಯಾಂಡ್‌–ಅಪ್‌ ಕಾಮಿಡಿ ಪ್ರದರ್ಶಿಸಿದ್ದರು. ‘ದಿ ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್’ ಟಿವಿ ಕಾರ್ಯಕ್ರಮ 2005ರಲ್ಲಿ ಪ್ರಸಾರವಾದದ್ದೇ ರಾಜು ಶ್ರೀವಾಸ್ತವ್‌, ಕಪಿಲ್‌ ಶರ್ಮ, ಸುನೀಲ್ ಪಾಲ್ ತರಹದ ಹೊಸ ಪ್ರತಿಭೆಗಳಿಗೆ ಜನಮನ್ನಣೆ ಸಿಗತೊಡಗಿತು. ಅವರೆಲ್ಲ ಹಿಂದಿಯಲ್ಲೇ ಹಾಸ್ಯ ಚಟಾಕಿಗಳನ್ನು ಹಾರಿಸಿ ರಂಜಿಸಿದವರು.

ಬಿಸ್ವ ಕಲ್ಯಾಣ್ ರಥ್, ಕೆನ್ನಿ, ಕನನ್, ಝಾಕಿರ್ ಖಾನ್, ವೀರ್‌ ದಾಸ್ ಇವರೆಲ್ಲ ಸ್ಟ್ಯಾಂಡ್‌–ಅಪ್‌ ಕಾಮಿಡಿಯನ್‌ಗಳಾಗಿಯೂ ಹೆಸರು ಮಾಡಿದವರು. ವೀರ್‌ ದಾಸ್‌ ಅವರು ಚಿತ್ರರಂಗದಲ್ಲೂ ಪರಿಚಿತ ಹೆಸರು. ಅದಿತಿ ಮಿತ್ತಲ್, ಸುಮುಖಿ ಸುರೇಶ್‌ ಕಾಮಿಡಿ ಸ್ಕೆಚ್‌ಗಳ ಮೂಲಕ ಮೊದಲು ಅಡಿಯಿಟ್ಟು, ಆಮೇಲೆ ಯುಟ್ಯೂಬ್‌ ಚಾನೆಲ್‌ನಲ್ಲೂ ಸದ್ದು ಮಾಡಿದವರು. ಬೆಂಗಳೂರಿನಲ್ಲೇ ಕೆಲಸ ಮಾಡುವ ಸುಮುಖಿ ‘ಹಂಬಲ್‌ ಪೊಲಿಟಿಷಿಯನ್ ನೊಗರಾಜ್’ ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ‘ಬೆಹ್ತೀ ನಾಕ್...’ ಹಿಂದಿ ಚುಟುಕು ಸರಣಿಗಳ ಮೂಲಕ ಅವರು ಯುಟ್ಯೂಬ್‌ನಲ್ಲೂ ಜನಪ್ರಿಯರಾಗಿ ವರ್ಷಗಳೇ ಉರುಳಿವೆ. ಮುನಾವರ್ ಫರೂಕಿ ಪ್ರಭುತ್ವದ ವಿರುದ್ಧದ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದ ಕಾಲವಿದು. ಕುನಾಲ್ ಕಾಮ್ರಾ ಅವರಂತೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿದ ಜೋಕ್‌ಗಳು ಅವರಿಗೆ ಜೀವ ಬೆದರಿಕೆಗಳನ್ನೇ ತಂದವು. ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳು ಈಗ ಯಾಕೆ ಮುಖ್ಯ ಎನ್ನುವುದಕ್ಕೆ ಇವೆಲ್ಲ ಕೆಲವು ಉದಾಹರಣೆಗಳಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.