ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕ್ಕೆ ತಕ್ಕ ವರ್ಣಾಲಂಕಾರ

Last Updated 23 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಋತುವಿಗೂ ಒಂದು ವಿಶೇಷತೆ ಇದೆ. ಹಾಗೆಯೇ ಆ ಋತುವಿಗೆ ತಕ್ಕಂತೆ ಮನೆಯನ್ನೂ ವಿನ್ಯಾಸಕ್ಕೆ ಒಗ್ಗಿಸಿಕೊಂಡರೆ ಮನೆಯಲ್ಲೂ ವಿಶೇಷತೆ ಎದ್ದು ತೋರುತ್ತದೆ. ಆದರೆ ಅದು ಹೇಗೆ ಸಾಧ್ಯ ಎಂಬುದರ ಕುರಿತು ಗೊಂದಲವಿದ್ದರೆ, ಈ ಕೆಳಗಿನ ಅಂಶಗಳನ್ನು ಗಮನಿಸಿ.

ವಿನ್ಯಾಸ ಎಂದಾಕ್ಷಣ ನೆನಪಿಗೆ ಬರುವುದು ಬಟ್ಟೆ. ಬೇಸಿಗೆಗೆ ತೆಳು ಬಟ್ಟೆಯನ್ನು ವಿನ್ಯಾಸಕ್ಕೆ ಉಪಯೋಗಿಸಿದರೆ, ಚಳಿಗಾಲಕ್ಕೆ ಬೆಚ್ಚಗೆನಿಸುವ ಉಣ್ಣೆ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಆದರೆ ವಿನ್ಯಾಸ ಎಂಬುದು ಇಷ್ಟಕ್ಕೇ ಸೀಮಿತವಲ್ಲ. ಮನೆಯಲ್ಲಿ ಬಳಸುವ ಭಿತ್ತಿ ಚಿತ್ರ, ಬಣ್ಣ, ಪೀಠೋಪಕರಣ ಹೀಗೆ ಹಲವು ಅಂಶಗಳು ಗಣನೆಗೆ ಬರುತ್ತವೆ.

ನಿಮಗೆ ಬಣ್ಣಗಳ ಬಗ್ಗೆ ತುಂಬಾ ಆಸಕ್ತಿ ಇದ್ದಲ್ಲಿ ಸಮಕಾಲೀನ ರೀತಿಯ, ಬೇಸಿಗೆ ಮತ್ತು ಚಳಿಗಾಲ ಎರಡಕ್ಕೂ ಹೊಂದುವಂಥ ಬಣ್ಣಗಳನ್ನೇ ಆರಿಸಿ. ಹಲವು ಪರಿಣತರ ಪ್ರಕಾರ, ಕಂದು ಬಣ್ಣ, ಪೀಚ್‌, ತಿಳಿ ನೀಲಿ  ಬಣ್ಣಗಳು ಈ ಕಾಲದಲ್ಲಿ ಚೆಂದ ಕಾಣುತ್ತವೆ. ಒಳಾಂಗಣಕ್ಕೆಂದು ಹಲವು ಬಗೆಯ ಟೆಕ್ಸ್‌ಚರ್‌ಗಳು ಇರುತ್ತವೆ.

ಪೋರ್ಟಿಕೊ ನ್ಯೂಯಾರ್ಕ್‌ನ ನಿರ್ದೇಶಕ ಅರುನಾಂಶು ಅಗರ್‌ವಾಲ್‌ ಅವರು ಈ ವರ್ಷದ ಬಣ್ಣಗಳ ಟ್ರೆಂಡ್‌ಗಳ ಬಗ್ಗೆ ಹೀಗೆ ಹೇಳುತ್ತಾರೆ: ‘2015 ತಿಳಿ ಬಣ್ಣಗಳು, ಫ್ಯೂಷನ್‌ ಬಣ್ಣಗಳು ಪ್ರಚಲಿತದಲ್ಲಿವೆ. ದಿಂಬು, ಹಾಸಿಗೆ ಹೊದಿಕೆಗಳಾಗಿಯೂ ಈ ಬಣ್ಣಗಳನ್ನು ಬಳಸಬಹುದು. ಇದರೊಂದಿಗೆ ಹವಳ, ತಿಳಿ ಹಸಿರು, ನೀಲಿಯಂಥ  ಬಣ್ಣಗಳು ಕೋಣೆಗಳಿಗೆ ಇನ್ನಷ್ಟು ಮೆರುಗು ನೀಡಬಲ್ಲವು. ಅರ್ಧ ವರ್ಷದ ನಂತರ ವೈನ್‌ ಕೆಂಪು, ಬಿಳಿ ಬಣ್ಣವನ್ನು ಬಳಸಿದರೆ ಮನಸ್ಸನ್ನು ಆರಾಮಗೊಳಿಸುತ್ತವೆ’.

ಸ್ಟುಡಿಯೊ ಕ್ರಿಯೋದ ಕ್ರಿಯೇಟಿವ್ ನಿರ್ದೇಶಕ ಪಾರುಶ್ನಿ ಅಗರ್‌ವಾಲ್‌ ಅವರ ಪ್ರಕಾರ ಇತ್ತೀಚೆಗೆ ತುಂಬಾ ಜನರು ಬಿಳಿ ಬಣ್ಣವನ್ನು ಹೆಚ್ಚು ಬಳಸುತ್ತಿದ್ದಾರಂತೆ. ‘ಗೋಡೆ, ನೆಲ,  ಸೀಲಿಂಗ್ ಎಲ್ಲವೂ ಬಿಳಿಯದ್ದಾಗಿರುತ್ತದೆ. ಆದರೆ ಈ ಬಾರಿ, ಸ್ವಲ್ಪ ಕಡು ಬಣ್ಣಗಳ ಕಡೆಗೆ ಗಮನ ಹರಿಸಿ. ನೇವಿ ಬ್ಲೂ, ಇದ್ದಿಲು ಬಣ್ಣ, ಹಸಿರು ಈ ಬಣ್ಣಗಳೂ ವಿಭಿನ್ನವೆನಿಸುತ್ತವೆ. ಟೈಲ್ಸ್‌ ಮತ್ತು ಮೌಲ್ಡಿಂಗ್‌ಗಳಿಗೂ ಬಣ್ಣಗಳನ್ನು ಬಳಸಬಹುದು’ ಎಂದು ಸಲಹೆ ನೀಡುತ್ತಾರೆ.

ಮನೆಗಳಿಗೆ ಬಳಸುವ ಬಟ್ಟೆಗಳ ವಿನ್ಯಾಸಕ್ಕೆ ಬಂದರೆ ಚುಕ್ಕೆ ಮತ್ತು ಹೂವಿನ ವಿನ್ಯಾಸ ಈ ಕಾಲಕ್ಕೆ ಸೂಕ್ತ. ಅದರಲ್ಲೂ ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಮೂಡಿರುವ ಹೂಗಳ ವಿನ್ಯಾಸ ಗೋಡೆಗಳಿಗೆ ಮೆರುಗು ನೀಡುತ್ತವೆ. ಸೋಫಾ, ಕಿಟಕಿ ಪರದೆಗಳಿಗೂ  ಹೂವಿನ ವಿನ್ಯಾಸದ ಬಟ್ಟೆಗಳನ್ನು ಬಳಸಬಹುದು.

ಕುಕೂನ್‌ ಫೈನ್‌ ರಗ್‌ನ ವ್ಯವಸ್ಥಾಪಕ ನಿರ್ದೇಶಕ ಆಯುಷ್ ಚೌಧರಿ ಅವರ ಪ್ರಕಾರ, ಜಿಯೊಮೆಟ್ರಿಯ ಷಟ್‌ಭುಜಾಕೃತಿ, ಹನಿ ಕಾಂಬ್ ಆಕಾರಗಳು  ಈ ಹೊತ್ತಿನ ಟ್ರೆಂಡ್‌. ಟೈಲ್‌ ಆಗಿರಬಹುದು, ಬಟ್ಟೆಯಲ್ಲಿರಬಹುದು, ಇದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹಲವರು ಗ್ರಾಮ್ಯ ವಿನ್ಯಾಸವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಜೊತೆಗೆ ಸ್ವಾತಂತ್ರ್ಯ, ಕ್ರಿಯಾಶೀಲತೆ ಬಿಂಬಿಸುವ ಗರಿಗಳನ್ನೂ ವಿನ್ಯಾಸವಾಗಿ ಬಳಸುತ್ತಿದ್ದಾರೆ.

ಅಲಂಕಾರದಲ್ಲಿ ಮುಂದಿರುವ ವಿಷಯವೆಂದರೆ ವಾಲ್‌ಪೇಪರ್. ಅಡುಗೆಮನೆ, ಲಿವಿಂಗ್ ರೂಂ, ಬಾತ್‌ರೂಂ, ಡೈನಿಂಗ್ ರೂಂ ಹೀಗೆ ಎಲ್ಲಿಯಾದರೂ ಒಳ್ಳೆ ವಾಲ್‌ಪೇಪರ್ ಬಳಸಬಹುದು.  ಪೀಠೋಪಕರಣ ಮತ್ತು ಗೋಡೆ ಬಣ್ಣಕ್ಕೆ ಹೊಂದುವಂತೆ ಅವುಗಳನ್ನು ಆಯ್ಕೆ ಮಾಡಬೇಕು ಅಷ್ಟೆ.

ಫ್ಲೋರಿಂಗ್‌ನಲ್ಲಿ ರಗ್‌ ಮತ್ತು ಕಾರ್ಪೆಟ್‌ಗಳು ತುಂಬಾ ಮುಖ್ಯ. ‘ರಗ್‌ಗಳಲ್ಲಿ ಹಲವು ಹೊಸ ವಿನ್ಯಾಸಗಳು ಬಂದಿದ್ದು, ಸುರುಳಿ ಸುತ್ತಿದ, ಸಾದಾ ಸೀದ ಬಟ್ಟೆಗಳೂ ಇವೆ’ ಎನ್ನುತ್ತಾರೆ ಆಯುಷ್.  ವಿನ್ಯಾಸದ ಭಾಗವಾಗಿರುವ ಬೆಳಕಿನ ವಿನ್ಯಾಸದಲ್ಲಿ ತುಂಬಾ ಆಸಕ್ತಿದಾಯಕ ವಿಷಯಗಳಿವೆ. ಹಣ ಉಳಿತಾಯ ಹಾಗೂ ಅಲಂಕಾರ ಎರಡಕ್ಕೂ ಹೊಂದುವ ಎಲ್‌ಇಡಿ ಬಳಕೆ ಹೆಚ್ಚಿದೆ. ಪೆಂಡೆಂಟ್ ಲೈಟಿಂಗ್ ಹಾಗೂ ತೂಗು ದೀಪಗಳು ಸದ್ಯದ ಹೊಸತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT