ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡದ ಮಾತು

ವಾಸ್ತು ಪ್ರಕಾರ
Last Updated 7 ಮೇ 2015, 19:30 IST
ಅಕ್ಷರ ಗಾತ್ರ

ಮನೆಯ ಸೊಬಗು ಹೆಚ್ಚಿಸುವ ಅಲಂಕಾರಿಕ ಸಾಮಗ್ರಿಗಳಿಗೆ ಲಕ್ಷ ಲಕ್ಷ ರೂಪಾಯಿ ಸುರಿಯುವವರಿದ್ದಾರೆ. ಈ ಅಲಂಕಾರಿಕ ಸಾಮಗ್ರಿಗಳು ಮನೆಯ ಚೆಲುವನ್ನು ಹೆಚ್ಚಿಸುವುದರ ಜೊತೆಗೆ, ಮನೆಯೊಡೆಯರ ಅಭಿರುಚಿ ಹಾಗೂ ಆರ್ಥಿಕ ಸ್ಥಾನಮಾನವನ್ನು ಸೂಚಿಸುವಂತೆ ಇರುತ್ತವೆ. ಇದರಾಚೆಗೆ ಈ ದುಬಾರಿ ವಸ್ತುಗಳಿಂದ ಏನಾದರೂ ಉಪಯೋಗ ಇದೆಯೇ? ಮಾನಸಿಕ ಅಥವಾ ದೈಹಿಕ ಆರೋಗ್ಯಕ್ಕೆ ಈ ಅಲಂಕಾರಿಕ ವಸ್ತುಗಳು ಪೂರಕ ಆಗಿವೆಯೇ?

ಮನೆಯವರ ಪ್ರತಿಷ್ಟೆಯ ಪೊಳ್ಳನ್ನು ಅಲಂಕಾರಿಕ ಸಾಮಗ್ರಿಗಳು ಹೆಚ್ಚಿಸಬಹುದಷ್ಟೇ! ಆರೋಗ್ಯದ ವಿಷಯಕ್ಕೆ ಬರುವುದಾದರೆ ನೀವು ಕೃತಕ ಸೌಂದರ್ಯದಿಂದ ಸಹಜ ಸೌಂದರ್ಯದತ್ತ, ಅರ್ಥಾತ್‌ ಪ್ರಾಕೃತಿಕ ಚೆಲುವಿನತ್ತ ಗಮನಹರಿಸಬೇಕು. ಮನೆಯೊಳಗೂ ಹೊರಗೂ ತಾರಸಿಯ ಮೇಲೂ– ಹೀಗೆ, ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ಗಿಡಗಳ ಕುಂಡಗಳನ್ನು ಇರಿಸುತ್ತಾ ಹೋಗಿ; ತಂತಾನೇ ಮನೆಯ ಚೆಲುವು ಇಮ್ಮಡಿಗೊಳ್ಳುತ್ತದೆ, ಮನಸ್ಸಿನ ಚೆಲುವೂ ವರ್ಧಿಸುತ್ತದೆ.

ಗಿಡಗಳನ್ನು ಬೆಳೆಸುವುದು ಮನೆಯನ್ನು ಅಲಂಕರಿಸುವ ಒಂದು ಕಲೆಯಾಗಿ ಮಾತ್ರವಲ್ಲದೆ, ಒಂದು ಹವ್ಯಾಸವಾಗಿ ಹಾಗೂ ದೈಹಿಕ ವ್ಯಾಯಾಮದ ರೂಪದಲ್ಲೂ ಮುಖ್ಯವಾದುದು. ಅಂದಹಾಗೆ, ಈ ಗಿಡಗಳ ಜೊತೆಗೆ ವಾಸ್ತುಗಿಡಗಳೂ ಇರಲಿ ಎನ್ನುವುದು ವಾಸ್ತುತಜ್ಞರ ಸಲಹೆ. ಈ ವಾಸ್ತುಗಿಡಗಳು ಅಲಂಕಾರಿಕವೂ ಹೌದು, ಶುಭದಾಯಕವೂ ಹೌದು ಎನ್ನುವುದವರ ವಿಶ್ಲೇಷಣೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ವಾಸ್ತು ಸಸಿಗಳು ಹೋಗಲಾಡಿಸುತ್ತವಂತೆ. ಧನಾತ್ಮಕ ಶಕ್ತಿಗಳ ಸಂಚಯದಿಂದಾಗಿ ಮನೆಯಲ್ಲಿ ಸಂತೋಷ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಮನೆಯ ಯಾವುದಾದರೂ ಭಾಗದಲ್ಲಿ ವಾಸ್ತುವಿನ ಅರೆಕೊರೆ ಇದ್ದಲ್ಲಿ, ಆ ಭಾಗದಲ್ಲಿ ಹೆಚ್ಚಿನ ವಾಸ್ತುಗಿಡಗಳನ್ನು ಇರಿಸುವ ಮೂಲಕ ದೋಷವನ್ನು ನೀಗಿಸಿಕೊಳ್ಳಬಹುದಂತೆ. ಹಾಂ, ಪೇಟೆಗೆ ಹೋದರೆ ವಾಸ್ತು ಹೆಸರಿನ ಸಾಕಷ್ಟು ಗಿಡಗಳು ಅವರವರ ಬಜೆಟ್‌ಗೆ ತಕ್ಕಂತೆ ದೊರಕುತ್ತವೆ.

ಮನೆಯ ಪರಿಸರದಲ್ಲಿ ಗಿಡಗಳನ್ನು ನೆಡುವ ಬಗ್ಗೆ ವಾಸ್ತುಶಾಸ್ತ್ರ ಕೆಲವು ಕಿವಿಮಾತುಗಳನ್ನು ಹೇಳುತ್ತದೆ. ಉದಾಹರಣೆಗೆ ತುಳಸಿ ಗಿಡವನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ಮನೆಗಳ ಮುಂದೆ ತುಳಸಿ ಗಿಡ ಕಾಣಿಸುತ್ತದೆ. ವಾಸ್ತುಶಾಸ್ತ್ರ ಕೂಡ ‘ತುಳಸಿಯನ್ನು ಬೆಳೆಸಿ’ ಎಂದು ಶಿಫಾರಸು ಮಾಡುತ್ತದೆ. ತುಳಸಿ ಪವಿತ್ರ ಮಾತ್ರವಲ್ಲ, ಔಷಧಿ ಸಸ್ಯವೂ ಹೌದು. ಇಂಥ ತುಳಸಿಯನ್ನು ದೇವಮೂಲೆಯಲ್ಲಿ ಇರಿಸುವುದು ಶ್ರೇಯಸ್ಕರವಂತೆ. ಆದರೆ, ಮನೆಯ ಪ್ರವೇಶದ್ವಾರಕ್ಕೆ ನೇರವಾಗಿ ತುಳಸಿ ಇರುವುದು ಬೇಡವಂತೆ.

ತುಳಸಿಯ ಜೊತೆಗೆ ದಾಳಿಂಬೆ, ದಾಲ್ಚಿನ್ನಿ, ತೆಂಗು, ನಿಂಬೆ, ಅಶೋಕ, ಗುಲಾಬಿ, ಬಕುಲ, ಸಂಪಿಗೆ, ಮುಂತಾದ ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸುವುದು ಶುಭಕರವಂತೆ. ಆದರೆ, ದೇಗುಲಗಳ ಪರಿಸರದಲ್ಲಿ ಬೆಳೆಸುವ ಅಶ್ವತ್ಥ ವೃಕ್ಷದಂಥ ಮರಗಳು ಮನೆಯ ಪರಿಸರಕ್ಕೆ ಹೊಂದುವುದಿಲ್ಲವಂತೆ. ಕ್ಯಾಕ್ಟಸ್‌ ವರ್ಗಕ್ಕೆ ಸೇರಿದ ಗಿಡಗಳು ಮನೆಯ ಅಂಗಳಕ್ಕೆ ಬೇಡವಂತೆ.

ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ಸಣ್ಣಪುಟ್ಟ ಗಿಡಮರಗಳನ್ನೇ ನೆಟ್ಟು ಪೋಷಿಸಲು ವಾಸ್ತು ತಜ್ಞರು ಶಿಫಾರಸು ಮಾಡುತ್ತಾರೆ. ಇದರ ಹಿಂದೆ, ದೊಡ್ಡ ಮರಗಳಾದರೆ ಬೆಳಕಿಗೆ ಅಡೆತಡೆ ಎನ್ನುವ ವೈಜ್ಞಾನಿಕ ಚಿಂತನೆ ಇರುವಂತಿದೆ. ಅಂತೆಯೇ, ಮನೆಯ ಪರಿಸರದಲ್ಲಿ ದೊಡ್ಡ ಮರಗಳು ಬೇಡವೇ ಬೇಡ ಎನ್ನುವ ಮಾತಿನಲ್ಲೂ ಬೆಳಕಿನ ಲೆಕ್ಕಾಚಾರ ಹಾಗೂ ಮನೆಯ ಸುಭದ್ರತೆಯ ಚಿಂತನೆ ಇರುವಂತಿದೆ.

ಒಟ್ಟಾರೆ ಸಾರಾಂಶ ಇಷ್ಟು. ನೀವು ವಾಸ್ತುವನ್ನು ನಂಬುವುದಾದರೆ ಮನೆಯ ಒಳಹೊರಗೆ ಗಿಡಗಳನ್ನು ಪೋಷಿಸಿ. ವಾಸ್ತುವನ್ನು ನಂಬುವುದಿಲ್ಲವಾದರೂ ಗಿಡಮರಗಳನ್ನು ಬೆಳೆಸಿ. ‘ಗಿಡ ನೆಡಿ ಗಿಡ ನೆಡಿ’ ಎನ್ನುವುದು ಪ್ರಕೃತಿ–ಮನುಷ್ಯನ ನಡುವಣ ಸಂಬಂಧ ಬೆಸೆಯುವುದರ ಜೊತೆಗೆ, ಅದು ಸಾಮಾಜಿಕ ಕಾಳಜಿಯ ಸ್ವರೂಪವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT