ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಠೋಪಕರಣ ಒಂದು ಉಪಯೋಗ ಎರಡು

Last Updated 4 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮೂಗಿಗೆ ಮೂಗುತಿ ಹೇಗೆ ಸಿಂಗಾರವೊ ಹಾಗೆ ಮನೆಯೊಂದಕ್ಕೆ ಪೀಠೋಪಕರಣ ಅಂದವನ್ನು ತಂದು ಕೊಡುತ್ತವೆ. ಸೋಫಾ ಸೆಟ್‌ ಹಾಗೂ ಸುಸಜ್ಜಿತ ಬೆಡ್‌ಗಳನ್ನು ಬಳಸುವ ಇಚ್ಛೆ ನಿಮಗಿದ್ದರೂ, ಮನೆಯ ಒಳಾಂಗಣದ ಕಡಿಮೆ ಜಾಗ ಅದಕ್ಕೆ ಅವಕಾಶ ಮಾಡಿ ಕೊಡದಿರಬಹುದು.

ಹಾಗಂತ ನೀವು ನಿರಾಶರಾಗಬೇಕಾಗಿಲ್ಲ, ಜನರ ಅನುಕೂಲತೆ ಹಾಗೂ ಅಗತ್ಯತೆಗೆ ತಕ್ಕಂತೆ ಪೀಠೋಪಕರಣವನ್ನು ತಯಾರಿಸುವ ಪ್ರವೃತ್ತಿಯನ್ನು ಫರ್ನಿಚರ್ ಕಂಪನಿಗಳು ಬೆಳೆಸಿಕೊಂಡಿವೆ. ಇದರ ಫಲವಾಗಿ ‘ಸೋಫಾ ಕಮ್ ಬೆಡ್’ ಹಾಗೂ ‘ದಿವಾನ್ ಕಮ್ ಬೆಡ್’ನಂತಹ ಪೀಠೋಪಕರಣ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದರಲ್ಲಿ ಬ್ಯಾಕ್ ರೆಸ್ಟ್ ಇರುವ ಹಾಗೂ ಇಲ್ಲದಿರುವ ಆಯ್ಕೆಗಳು ಇವೆ.

ವೈಶಿಷ್ಟ್ಯ: ಸೋಫಾ ಮತ್ತು ಬೆಡ್‌ಗಳು ಬೇರೆಬೇರೆಯಾಗಿದ್ದರೆ ಅವುಗಳನ್ನು ಜೋಡಿಸಲು ಮನೆಯಲ್ಲಿ ಹೆಚ್ಚು ಜಾಗವು ಇರಬೇಕು. ಆದರೆ ಟು ಇನ್ ಒನ್ ರೀತಿಯ ಸೋಫಾ ಕಮ್ ಬೆಡ್‌ ಅನ್ನು ಕಡಿಮೆ ಸ್ಥಳಾವಕಾಶದಲ್ಲೂ ಹೊಂದಿಸಬಹುದು. ನಾಲ್ಕು ಜನ ಕೂರಲು, ಹಾಗೆಯೇ ಇಬ್ಬರು ಆರಾಮದಾಯಕವಾಗಿ ಮಲಗಲು ಇವು ಹೇಳಿಮಾಡಿಸಿದಂತಿರುತ್ತವೆ.

ತಯಾರಿ: ಸಾಮಾನ್ಯವಾಗಿ ಇವನ್ನು ಗಟ್ಟಿ ಕಟ್ಟಿಗೆಯಾದ ರಬ್ಬರ್‌ವುಡ್ ಹಾಗೂ ಎಂ.ಡಿ.ಎಫ್.(ಮಿಡಿಯಮ್ ಡೆನ್ಸಿಟಿ ಫೈಬರ್‌ಬೋರ್ಡ್), ಫ್ಲೈವುಡ್‌ನಿಂದ ತಯಾರಿಸಲಾಗುತ್ತದೆ. ತಳಭಾಗದಲ್ಲಿ ಆಧಾರಕ್ಕಾಗಿ ಕಬ್ಬಿಣದ ಫ್ರೇಮ್‌ಗಳನ್ನು ಅಳವಡಿಸಿರುತ್ತಾರೆ. ಬಳಸಿದ ಕಟ್ಟಿಗೆಗೆ ಫಾಲಿಶ್ ಮಾಡುವುದರ ಜೊತೆಗೆ ಮಿಲಮೈನ್ ಬಣ್ಣ ಬಳಿದವು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

ರಚನೆ: ಹೊರನೋಟಕ್ಕೆ ಸೋಫಾ ಸೆಟ್‌ನಂತೆ ಕಾಣುವ ಇದರ ಕೆಳಭಾಗದಲ್ಲಿ ಮಂಚವೊಂದರ ರಚನೆಗೆ ಬೇಕಾದ ಪರಿಕರಗಳ ಜೋಡಣೆ ಇರುತ್ತದೆ. ಅದರಲ್ಲಿರುವ ಗಾಲಿಗಳ ರಚನೆಯ ಚಲಿಸುವಿಕೆಯಿಂದ ನಾವು ಮಂಚದ ಆಕಾರವನ್ನು ಪಡೆಯಬಹುದಾಗಿದೆ. ಹಾಗೆಯೇ ಇದರಲ್ಲಿ ತೆರೆದು ಮಡಚುವ ಆಯ್ಕೆಯ ರಚನೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಅಳತೆ: ಸ್ಟ್ಯಾಂಡರ್ಡ್ ಅಳತೆಯಲ್ಲಿನ ಸೋಫ್ ಕಮ್ ಬೆಡ್ ಪೀಠೋಪಕರಣವೊಂದು ಮಡಚಿರುವಾಗ ಉದ್ದಗಲ 2.5x6 ಅಡಿಗಳಿರುತ್ತದೆ. ಅದನ್ನು ಅಗಲಿಸಿದಾಗ 6x5 ಅಡಿ ಅಳತೆಯ ಸ್ಥಳವನ್ನು ಮಾತ್ರ ಆವರಿಸುತ್ತವೆ. ಹೀಗಾಗಿ ಚಿಕ್ಕ ಮನೆಯ ಆವರಣಕ್ಕೆ ಇದು ಹೊಂದುತ್ತದೆ. ಹಾಸಿಗೆಯ ಸಮತಟ್ಟಾದ ರಚನೆಗೆ ಸಹಕಾರಿಯಾಗಲೆಂದು ಇವುಗಳಿಗೆ 5 ಹಾಗೂ 3 ಇಂಚಿನ ಗಾದಿಗಳನ್ನು ಅಳವಡಿಸಲಾಗಿರುತ್ತದೆ.

ನಿರ್ವಹಣೆ: ಗಟ್ಟಿಮುಟ್ಟಾದ ಕಟ್ಟಿಗೆಗಳಿಂದ ತಯಾರಾದ ಸೆಟ್‌ಗಳನ್ನು ನಿರ್ವಹಿಸಲು ಅಷ್ಟೇನು ಶ್ರಮವಹಿಸಬೇಕಿಲ್ಲ. ಇವನ್ನು ಹಸಿ ಬಟ್ಟೆಯಿಂದ ಶುಚಿಗೊಳಿಸಲುಬಹುದು. ಪ್ರಿಲ್ಯಾಮಿನೇಟೆಡ್ ಮಾಡಿದ ಪೀಠೋಪಕರಣ ಬಳಕೆಯಿಂದ  ನೀರು ಬಿದ್ದರೆ ಹವಾಮಾನ ಬದಲಾದರೆ ಹಾನಿ ಆಗದು. ಅಗತ್ಯ ಬಿದ್ದಾಗ ಫಾಲಿಶ್ ಮಾಡಿಸುತ್ತ ಕುಷನ್ ಬದಲಾಯಿಸಿದರೆ ದೀರ್ಘಕಾಲಕ್ಕೆ ಇವು ಬಾಳಿಕೆಗೆ ಬರುತ್ತವೆ. ಕೆಲವೊಂದು ಫರ್ನಿಚರ್ ಶೋರೂಂಗಳು ಇಂತಿಷ್ಟು ವರ್ಷಗಳಿಗೆಂದು ಗ್ಯಾರಂಟಿಯನ್ನು ನೀಡುವುದರಿಂದ ನಿರ್ವಹಣೆಯ ಸಮಸ್ಯೆ ತಲೆದೋರದು.

ಬೆಲೆ: ಉತ್ತಮ ಗುಣಮಟ್ಟದ ದಿವಾನ್ ಕಮ್ ಬೆಡ್‌ ₹19 ರಿಂದ ₹30 ಸಾವಿರದವರೆಗೆ ಇದ್ದರೆ, ಸೋಫಾ ಕಮ್ ಬೆಡ್‌ನ ಬೆಲೆ ₹23ರಿಂದ ₹45 ಸಾವಿರದವರೆಗೂ ಇದೆ. ಅಂತರ್ಜಾಲದ ಮಾರಾಟ ಜಾಲತಾಣಗಳು ಸಹ ಇಂತಹ ಎರಡು ಉಪಯೋಗವಿರುವ ಮನೆಯ ಪರಿಕರಗಳನ್ನು ಮಾರಾಟ ಮಾಡುತ್ತಿವೆ. ಅಲ್ಲಿಯೂ ನಿಮ್ಮ ಅಭಿರುಚಿಯ ಆಯ್ಕೆಗಳನ್ನು ಪಡೆಯಬಹುದಾಗಿದೆ.

ಇವುಗಳ ಒಂದೇ ಒಂದು ಋಣಾತ್ಮಕ ಅಂಶವೆಂದರೇ ಗಟ್ಟಿಯಾದ ಕಟ್ಟಿಗೆಯಿಂದ ಇವನ್ನು ತಯಾರಿಸುವುದರಿಂದ ಈ ಪೀಠೋಕರಣ ತೂಕ ಹೆಚ್ಚಾಗಿರುತ್ತದೆ. ಹೀಗಾಗಿ ಮನೆ ಶುಚಿಗೊಳಿಸುವಾಗ ಹಾಗೂ ಮನೆ ಬದಲಿಸುವಾಗ ಇದರ ಸಾಗಣೆ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT