ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತುಶಿಲ್ಪಿಯ ಆಭರಣ ಪ್ರೇಮ

Last Updated 28 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಮನೆಗೊಂದು ರೂಪುರೇಷೆ ನೀಡಿ ಅಚ್ಚುಕಟ್ಟಾದ ವಿನ್ಯಾಸ ಒದಗಿಸುವುದು ನನ್ನ ಮೂಲ ವೃತ್ತಿ. ಆದರೆ ಹವ್ಯಾಸವಾಗಿ ಕೈಹಿಡಿದಿರುವುದು ಫ್ಯಾಷನ್ ಆಭರಣ ತಯಾರಿಕಾ ಕಲೆ. ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದ್ದ ಮೇಳಗಳಿಗೆ ಭೇಟಿ ನೀಡುತ್ತಿದ್ದಾಗ, ಕಣ್ಣಿಗೆ ವಿಭಿನ್ನವಾಗಿ ಕಾಣುವ ಕಿವಿಯೋಲೆ, ಸರಗಳನ್ನು ಕೊಂಡುಕೊಳ್ಳುತ್ತಿದ್ದೆ. ನಾನು ಇದನ್ನು ಏಕೆ ಮಾಡಬಾರದು ಎಂಬ ಪ್ರಶ್ನೆ ಮೂಡಿತು. ಈಗ ಆಭರಣಗಳನ್ನು ನಾನೇ ವಿನ್ಯಾಸಗೊಳಿಸಿ ತೊಟ್ಟುಕೊಳ್ಳುತ್ತೇನೆ, ಇನ್ನೊಬ್ಬರಿಗೂ ನೀಡುತ್ತೇನೆ. ಅದರಲ್ಲಿರುವ ಖುಷಿ ಹೇಳಲಸಾಧ್ಯ~ ಎಂದು ಕಣ್ಣರಳಿಸಿ ನಕ್ಕರು ಸರೋಜಿನಿ ಅರುಣಾಚಲ್ ಹೊಂಬಾಳಿ.

ಸರೋಜಿನಿ ಮೂಲತಃ ಆರ್ಕಿಟೆಕ್ಚರ್. ನಗರದ ಆರ್.ವಿ. ಕಾಲೇಜಿನಲ್ಲಿ `ಎಕೊ ಫ್ರೆಂಡ್ಲಿ~ ಹಾಗೂ `ಸಸ್ಟೇನಬಲ್ ಆರ್ಕಿಟೆಕ್ಚರ್~ ವಿಭಾಗದಲ್ಲಿ ಪದವಿ ಪಡೆದುಕೊಂಡಿರುವ ಸರೋಜಿನಿ ಅವರಿಗೆ ಪರಿಸರದ ಮೇಲೆ ಸಹಜವಾಗಿಯೇ ಆಸಕ್ತಿ. ಪರಿಸರಕ್ಕೆ ಪೂರಕವಾಗಿ ಮನೆ ನಿರ್ಮಾಣದಲ್ಲಿ ಸಹಕಾರಿಯಾಗುವ ಅವರಿಗೆ ಆಭರಣಗಳಲ್ಲೂ ಅದೇ ಚಿಂತನೆಯನ್ನು ಮೂಡಿಸುವ ಆಸೆಯಂತೆ. ದಿನದಿಂದ ದಿನಕ್ಕೆ ಫ್ಯಾಷನ್ ಬದಲಾಗುವುದರಿಂದ ಅದಕ್ಕೆ ತಕ್ಕಂತೆ ತಾವೂ ಏನನ್ನಾದರೂ ಮಾಡಬೇಕೆಂಬ ತುಡಿತ. ಹಾಗಾಗಿ ಬಿಡುವಿನ ಸಮಯದಲ್ಲಿ ಅವರು ತಮ್ಮನ್ನು ಆಭರಣಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

`ಮನೆ ವಿನ್ಯಾಸಕ್ಕೆಂದು ಬಳಸಿದ ರಟ್ಟನ್ನು ಬಿಸಾಡುತ್ತಿದ್ದೆವು. ಆದರೆ ಈಗ ಅದನ್ನೇ ಉಪಯೋಗಿಸಿಕೊಂಡು ಆಭರಣಗಳನ್ನು ತಯಾರಿಸುತ್ತೇನೆ. ಹೊಸ ವಿನ್ಯಾಸ ನೀಡುತ್ತೇನೆ. ಚಿನ್ನದ ಲೇಪ ನೀಡುತ್ತೇನೆ. ವಿನ್ಯಾಸದೊಂದಿಗೆ ಗುಣಮಟ್ಟದ ಬಗ್ಗೆಯೂ ಎರಡು ಯೋಚನೆ ಬೇಡ~ ಎಂದು ಆಭರಣಗಳನ್ನು ತೋರಿಸುತ್ತಿದ್ದರು.

ಟೆರಕೋಟಾ ಆಭರಣಗಳು ಈಗ ಸಾಮಾನ್ಯ. ಕಪ್ಪೆಚಿಪ್ಪು, ಶಂಖ, ಕವಡೆ, ಗ್ಲಾಸ್‌ನಿಂದ, ಮಣಿ, ಗೌರಿಬಳೆ, ಇನ್ನೂ ಹೊಸತೆಂದರೆ ಹುಣಸೇಬೀಜಗಳನ್ನು ಉಪಯೋಗಿಸಿಕೊಂಡು ಚೆಂದ ಚೆಂದದ ಕಿವಿಯೋಲೆ, ಸರ, ಬಳೆಗಳನ್ನು ಸರೋಜಿನಿ ಅವರು ತಯಾರಿಸಿದ್ದಾರೆ. `ಅಲಂಕೃತಾ~ ಎಂಬ ಹೆಸರಿನಲ್ಲಿ ಹಲವು ಪ್ರದರ್ಶನಗಳನ್ನೂ ನೀಡಿದ್ದಾರೆ.

`ಯಾವುದೇ ಕೆಲಸವಾಗಲಿ, ಅದನ್ನು ಹೇಗೋ ಮಾಡಿ ಮುಗಿಸಬೇಕೆಂದು ಹೊರಟರೆ ಅದು ತೃಪ್ತಿ ನೀಡುವುದಿಲ್ಲ. ಹೀಗೆಯೇ ಆಗಬೇಕು ಎಂದು ಬಯಸಿ ಪ್ರೀತಿಯಿಂದ ಮಾಡಿದರೆ ಸಿಗುವ ಆನಂದವೇ ಬೇರೆ. ಅದನ್ನೇ ನಾನು ವೃತ್ತಿ, ಪ್ರವೃತ್ತಿಯಲ್ಲೂ ಅಳವಡಿಸಿಕೊಂಡಿದ್ದೇನೆ. ಅದೇ ನನ್ನ ಯಶಸ್ಸಿಗೆ ಕಾರಣ~ ಎಂದು ಹೇಳಿಕೊಂಡರು.

`ಹೋದಲ್ಲೆಲ್ಲಾ ಕಣ್ಣಿಗೆ ಬಿದ್ದ ಚಿಕ್ಕ ಪುಟ್ಟ ವಸ್ತುಗಳನ್ನೂ ಖರೀದಿಸಿ ಬರುತ್ತೇನೆ. ಅದರಿಂದ ಹೊಸ ಹೊಸ ವಿನ್ಯಾಸದ ವೈವಿಧ್ಯಗಳನ್ನು ಕಂಡುಕೊಳ್ಳುತ್ತೇನೆ. ಎಲ್ಲಾ ವಯೋಮಾನದವರೂ ಇಷ್ಟಪಡುವಂತೆ ಆಭರಣದಲ್ಲಿ ವಿನ್ಯಾಸಗಳನ್ನು ಮೂಡಿಸುವ ಪ್ರಯತ್ನ ಮಾಡುತ್ತೇನೆ~ ಎಂದು ತಮ್ಮ ಬ್ಯಾಗ್‌ನಲ್ಲಿದ್ದ ಕಪ್ಪೆ ಚಿಪ್ಪುಗಳನ್ನು ಹೆಕ್ಕಿ ತೆಗೆದು ತೋರುತ್ತಿದ್ದರು. ನಾಲ್ಕು ತಿಂಗಳ ಅವಧಿಯಲ್ಲಿ ನನ್ನ ಮನಸ್ಸಿಗೆ ತೋಚಿದ ಹಲವು ವಿನ್ಯಾಸಗಳನ್ನು ಪರಿಚಯಿಸಿದ್ದೇನೆ. ಎಷ್ಟೋ ಮಂದಿಗೆ ಇವು ಅಚ್ಚುಮೆಚ್ಚಾಗಿವೆ. ನನ್ನ ವೃತ್ತಿಯ ಮೂಲವೂ ವಿನ್ಯಾಸದ್ದೇ ಆಗಿರುವುದರಿಂದ ಬಹುಶಃ ಅದೇ ಕಾರಣ ಆಭರಣದಲ್ಲೂ ಹಲವು ಶೈಲಿಗಳನ್ನು ಮೂಡಿಸಲು ಸಾಧ್ಯವಾಯಿತು~ ಎಂದು ಮಾತು ಹಂಚಿಕೊಂಡರು.

ಪ್ರಸ್ತುತ ಸರೋಜಿನಿ ಅವರು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಕಲಾ ಮೇಳದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಸರೋಜಿನಿ ಅವರ ಸಂಪರ್ಕಕ್ಕೆ : 9742423507.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT