ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವಿಧ ಹವ್ಯಾಸ

ಹವ್ಯಾಸದ ಹಾದಿ
Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ತಿಂದೆಸೆದ ಚಮಚ ಹೂವಾಗಿ ಅರಳುತ್ತದೆ. ಬಾಳೆಗೊನೆಯಾಗಿ ನಳನಳಿಸುತ್ತದೆ. ಇನ್‌ಹೇಲರ್‌ನೊಳಗಿದ್ದ ಬಾಟಲಿ ಗಣಪನ ಮಂಟಪವಾಗಿ ಬೀಗುತ್ತದೆ. ಪಾಳುಬಿದ್ದ ಪೈಪ್‌ ಕಲಾಕೃತಿಯಾಗಿ ಮನೆಯ ಮೂಲೆಯನ್ನು ಸಿಂಗರಿಸುತ್ತದೆ. ಬೇಡದ ಪ್ಲಾಸ್ಟಿಕ್‌ ಕವರ್‌ಗೆ ಹೂವಿನ ಕಂಪು. ಬೇರೆಲ್ಲೋ ಬೇಡವಾಗಿ ಬಿದ್ದ ಈರುಳ್ಳಿ ಚೀಲದ ದಾರಕ್ಕೆ ಮಾಲೆಯ ಮೆರುಗು. ಹಾಳಾದ ಬಾಟಲಿಗೂ ಸೌಂದರ್ಯದ ಸೊಬಗು.

ಮನಸು ಬೇಡಿದ ಕಲಾಕೃತಿಗಳನ್ನು ಮಾಡುತ್ತಾ ಆನಂದಿಸುವ ಉತ್ತರ ಕನ್ನಡ ಮೂಲದ ಪಾರ್ವತಿ ಎಲ್‌. ಭಟ್‌ ಅವರ ಕೈಯಲ್ಲಿ ತ್ಯಾಜ್ಯವೂ ಕಲಾಕೃತಿಯಾಗುತ್ತದೆ. ಪೇಂಟಿಂಗ್‌, ಪ್ಯಾಚ್‌ ವರ್ಕ್‌, ಪಾಟ್‌ ಪೇಂಟಿಂಗ್‌, ವಿವಿಧ ಬಗೆಯ ಗೊಂಬೆ ತಯಾರಿ, ಪಿಸ್ತಾ ಸಿಪ್ಪೆ ಕಲಾಕೃತಿ, ಲೈನಿಂಗ್‌ ಬಟ್ಟೆಯಿಂದ ಹೂ ರಚನೆ, ಸ್ಟ್ರಾನಲ್ಲಿ ಹೂ, ಟೂತ್‌ಪೇಸ್ಟ್‌ ಕವರ್‌ನಿಂದ ಕಲಾಕೃತಿ...

ಹೀಗೆ ಬಗೆಬಗೆಯ ಹವ್ಯಾಸಕ್ಕೆ ತೆರೆದುಕೊಂಡ ಪಾರ್ವತಿ ಅವರಿಗೆ ಚಿಕ್ಕಂದಿನಿಂದಲೂ ಕಲೆಯೆಡೆಗೆ ಆಸಕ್ತಿ ಇತ್ತು. ಎಸ್ಸೆಸ್ಸೆಲ್ಸಿ ಓದಿರುವ ಅವರಿಗೆ ಗಣಪತಿ ಮೂರ್ತಿ ಮೂಡುತ್ತಿದ್ದ ಅಪ್ಪನೇ ಸ್ಫೂರ್ತಿ. ರಂಗೋಲಿ, ಶೇಡಿಯಲ್ಲಿ ಪೇಂಟಿಂಗ್‌ ಮಾಡುತ್ತಿದ್ದ ಅವರ ಆಸಕ್ತಿಗೆ ಮದುವೆಯ ನಂತರ ಪ್ರೋತ್ಸಾಹ ಸಿಕ್ಕಿತು. ಎಂಥದ್ದೇ ಕಲಾಕೃತಿ ಕಣ್ಣಿಗೆ ಬಿದ್ದರೂ ತಾನೂ ಮಾಡಬೇಕು ಎಂದು ಅವರ ಮನಸ್ಸು ಹಾತೊರೆಯುತ್ತಿತ್ತು. ಅದೇ ದಾರಿಯಲ್ಲಿ ನಡೆದ ಅವರ ಮನೆತುಂಬ ಈಗ ಕಲಾಕೃತಿಗಳದ್ದೇ ಕಲರವ.

‘ಚಿತ್ರಗಳ ಬಗ್ಗೆ ಮೊದಲಿನಿಂದಲೂ ಸೆಳೆತವಿತ್ತು. ಪ್ರಾರಂಭದ ದಿನಗಳಲ್ಲಿ ಹಣಕಾಸು ತೊಂದರೆ ತುಂಬಾ ಇದ್ದಿದ್ದರಿಂದ ತ್ಯಾಜ್ಯ ವಸ್ತುಗಳನ್ನು ಹಿಡಿದು ಮೆರುಗು ನೀಡಲು ಪ್ರಯತ್ನಿಸುತ್ತಿದ್ದೆ. ಅದರಿಂದ ಮನೆಯೂ ಸುಂದರವಾಯ್ತು. ಪರಿಸರಕ್ಕೂ ನನ್ನಿಂದಾದ ಕಾಣಿಕೆ ನೀಡಿದ ಸಾರ್ಥಕ್ಯ ನನಗೆ. ಟೀವಿ ಹಾಗೂ ವಿವಿಧ ಪತ್ರಿಕೆಗಳಲ್ಲಿ ಹವ್ಯಾಸಕ್ಕೆ ಸಂಬಂಧಿಸಿದ ಎಂಥದ್ದೇ ಚಿತ್ರ, ಬರವಣಿಗೆ ಬಂದರೂ ಅದನ್ನು ಕತ್ತರಿಸಿ ಇಟ್ಟುಕೊಳ್ಳುತ್ತೇನೆ. ಹೀಗೆ ನೋಡಿಯೇ ಅನೇಕ ಕಲಾಕೃತಿ ನಿರ್ಮಾಣದ ಕೌಶಲ ಅರಿತುಕೊಂಡೆ’ ಎನ್ನುವ ಪಾರ್ವತಿ ಸಂಗ್ರಹಿಸಿದ ಕೃತಿಗಳ ಸುಮಾರು 8–10 ಪುಸ್ತಕಗಳಿವೆ. ಅಡುಗೆ, ಔಷಧ, ರಂಗೋಲಿ, ಕರ ಕುಶಲ, ಪ್ರವಾಸಕ್ಕೆ ಸಂಬಂಧಿಸಿದ ಬರವಣಿಗೆಗಳ ಕಟ್ಟಿಂಗ್‌ ಇದ್ದು ಕಲಾದಾರಿಗೆ ಬೆಳಕು ತೋರುವ ಅನೇಕ ಮಾಹಿತಿಗಳು ಇಲ್ಲಿ ಲಭ್ಯವಿವೆ.

ಏಕಪಾತ್ರಾಭಿನಯ, ಪದಬಂಧ ಸ್ಪರ್ಧೆ ಹೀಗೆ ಒಂದಿಲ್ಲೊಂದು ವಿಷಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಾರ್ವತಿ ಅವರಿಗೆ ಅನೇಕ ಪ್ರಶಸ್ತಿಗಳೂ ಸಂದಿವೆ. ಹಲವಾರು ವರ್ಷಗಳಿಂದ ಕಲಾ ಪಯಣದಲ್ಲಿ ಹೊಸತರ ಸೃಷ್ಟಿಗೆ ಹಾತೊರೆಯುವ ಅವರ ಕಣ್ಣಿಗೆ ಬೀಳುವ ಎಲ್ಲಾ ವಸ್ತುಗಳಲ್ಲಿ ಕಲಾವಂತಿಕೆ ಕಾಣುತ್ತದೆಯಂತೆ. ಶಾಲಾ ಮಕ್ಕಳಿಗೆ ಕ್ರಾಫ್ಟ್‌ ಟೀಚರ್‌ ಆಗಿಯೂ ಕೆಲಸ ಮಾಡಿರುವ ಅವರು ಯೋಗ ಶಿಕ್ಷಕಿಯಾಗಿಯೂ  ಉಚಿತ ಸೇವೆ ಸಲ್ಲಿಸಿದವರು. ಸಸ್ಯಗಳ ಬಗೆಗೂ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದಲ್ಲದೆ  ತಾನು ಅರಿತಿದ್ದನ್ನು ಇನ್ನೊಬ್ಬರಿಗೆ ಹೇಳಿಕೊಡಲು ಉತ್ಸುಕರು ಅವರು.

ಕಲಾಸಕ್ತಿಗೆ ಕಟ್ಟುಬಿದ್ದು ಹಾತೊರೆಯುವ ಅವರ ಮನಸ್ಸು ಹಣ, ಸಮಯದ ಬಗ್ಗೆ ಹೆಚ್ಚು ಯೋಚಿಸುವುದೇ ಇಲ್ಲ. ‘ಏನೇ ನೋಡಿದರೂ ನಾನೂ ಮಾಡಬೇಕು ಎಂದೆನಿಸುತ್ತದೆ. ಅದು ಎಷ್ಟೇ ಕಷ್ಟವಿದ್ದರೂ ಪರವಾಗಿಲ್ಲ. ಅನೇಕ ಬಾರಿ ರಾತ್ರಿ ಎದ್ದು ಬಂದು ಮನಸ್ಸಿಗೆ ಹೊಳೆದ ಚಿತ್ರಗಳನ್ನು ಮಾಡುತ್ತಾ ಕೂತಿದ್ದಿದೆ. ಈರುಳ್ಳಿ ಚೀಲದಿಂದ ಮಾಲೆ ಮಾಡಬೇಕು ಎನಿಸಿದಾಗಲೂ ಅಷ್ಟೆ. ತುಸುವೂ ಬೇಸರವಿಲ್ಲದೆ ಅವುಗಳ ಒಂದೊಂದು ಎಳೆಯನ್ನೂ ಬಿಡಿಸಿದೆ. ಎಳೆಗಳನ್ನು ಜೋಡಿಸಿ ಮಾಲೆಯ ರೂಪು ಕೊಟ್ಟೆ. ಅದರ ಅಂದ ನೋಡಿ ತುಂಬಾ ಖುಷಿ ಎನಿಸಿತು. ಯಾವ ನೈಜ ಹೂವಿನ ಮಾಲೆಗಿಂತ ಇದು ಕಡಿಮೆ ಇಲ್ಲ. ಹೆಚ್ಚು ಬಾಳಿಕೆ ಬರುವ ಇದನ್ನು ಅಲಂಕಾರಕ್ಕೂ ಬಳಸಿಕೊಳ್ಳಬಹುದು. ಮಾಲೆ ಹೆಣೆಯುತ್ತಾ ಗಿನ್ನೆಸ್‌ ದಾಖಲೆ ಮಾಡಬೇಕು ಎಂಬ ಆಸೆಯೂ ಮನಸ್ಸಲ್ಲಿ ಇಣುಕಿತ್ತು’ ಎನ್ನುತ್ತಾರೆ.

ಪತಿಯ ತುಂಬು ಪ್ರೋತ್ಸಾಹದಿಂದಲೇ ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು ಎನ್ನುವ ಪಾರ್ವತಿ, ಉದಯ ಟೀವಿಯ ಸಿರಿ ಕಾರ್ಯಕ್ರಮದಲ್ಲೂ ಹವ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಕಣ್ಣಿಗೆ ಕಾಣುವ ಎಲ್ಲಾ ವಸ್ತುಗಳಲ್ಲೂ ಕಲಾಕೃತಿಯಾಗಬಲ್ಲ ಸೌಂದರ್ಯವಿದೆ. ಮನೆಯಲ್ಲಿ ಕುಳಿತು ಸುಮ್ಮನೆ ಕಾಲಹರಣ ಮಾಡುವ ಬದಲು ಹವ್ಯಾಸದ ದಾರಿಯಲ್ಲಿ ಪಯಣ ಬೆಳೆಸಿ. ತಾನು ಮಾಡಿದ್ದು ಎನ್ನುವ ಖುಷಿಯೊಂದಿಗೆ ಮನೆಯ ಅಂದವೂ ಹೆಚ್ಚುತ್ತದೆ. ಸಾಧ್ಯವಾದಷ್ಟು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಲಾಕೃತಿ ನಿರ್ಮಿಸಿ’ ಎಂದು ಸೂಚಿಸುತ್ತಾರೆ ಪಾರ್ವತಿ.

ಪೇಂಟಿಂಗ್‌, ಗೊಂಬೆ ತಯಾರಿ ಕುರಿತು ಪ್ರಾಥಮಿಕ ಪಾಠವನ್ನು ಹೇಳಿಸಿಕೊಂಡ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಕಲೆಯಲ್ಲಿ ಪಳಗಿದವರು. ಬೇಡದ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಿ ಹೂವಿನ ರೂಪು ನೀಡಿ ಪೇಂಟ್‌ನಿಂದ ತುಸು ಅಂದಗೊಳಿಸುವ ಕ್ರಿಯಾಶೀಲತೆಯೂ ಅವರಿಗಿದೆ. ಅಲ್ಲಿ ಇಲ್ಲಿ ನೋಡಿ ಅವರು ಕಲಿತಿರುವ ಹವ್ಯಾಸದ ಅನೇಕ ಪಟ್ಟುಗಳನ್ನು ಆಸಕ್ತರಿಗೆ ಕಲಿಸುವ ಬಯಕೆ ಅವರಲ್ಲಿದೆ. ಯಲಹಂಕ ಉಪನಗರದಲ್ಲಿರುವ ಪಾರ್ವತಿ ಅವರಲ್ಲಿ ಹವ್ಯಾಸದ ಸುಲಭ ದಾರಿ ಅರಿಯಬೇಕು ಎಂದಿರುವವರು 9632377162 ಸಂಪರ್ಕಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT