ADVERTISEMENT

ವಿಶ್ವದ ಮೊದಲ ಇ–ಟ್ರ್ಯಾಕ್ಟರ್‌ ಬಿಡುಗಡೆ

ಮೋನಾರ್ಕ್‌ ಟ್ರ್ಯಾಕ್ಟರ್‌ ಜತೆ ವಿಎಸ್‌ಟಿ ಟಿಲ್ಲರ್ಸ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:04 IST
Last Updated 10 ಫೆಬ್ರುವರಿ 2021, 19:04 IST
ವಿದ್ಯುತ್‌ಚಾಲಿತ ಮತ್ತು ಚಾಲಕನ ನೆರವಿಲ್ಲದೇ ಕಾರ್ಯನಿರ್ವಹಿಸುವ ‘ಇ–ಟ್ರ್ಯಾಕ್ಟರ್‌’
ವಿದ್ಯುತ್‌ಚಾಲಿತ ಮತ್ತು ಚಾಲಕನ ನೆರವಿಲ್ಲದೇ ಕಾರ್ಯನಿರ್ವಹಿಸುವ ‘ಇ–ಟ್ರ್ಯಾಕ್ಟರ್‌’   

ಬೆಂಗಳೂರು: ಟಿಲ್ಲರ್ಸ್‌ ಮತ್ತು ಕಾಂಪ್ಯಾಕ್ಟ್ ಟ್ರ್ಯಾಕ್ಟರ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಕೃಷಿ ವಲಯಕ್ಕೆ ನವೀನ ಉತ್ಪನ್ನಗಳನ್ನು ಒದಗಿಸುವ ವಿಎಸ್‌ಟಿ ಟಿಲ್ಲರ್ಸ್‌ ಟ್ರ್ಯಾಕ್ಟರ್ಸ್‌ ಸಂಸ್ಥೆಯು, ಮೋನಾರ್ಕ್ ಟ್ರ್ಯಾಕ್ಟರ್ಸ್‌ ಜತೆಗೆ ತಾಂತ್ರಿಕ ಸಹಭಾಗಿತ್ವ ಘೋಷಿಸಿದೆ.

ಎರಡೂ ಕಂಪನಿಗಳು ಜೊತೆಗೂಡಿ ಕಳೆದ ಒಂದು ವರ್ಷದಿಂದ ಮೊನಾರ್ಕ್ ಟ್ರ್ಯಾಕ್ಟರ್‌ಗೆ ಅಗತ್ಯವಾದ ತಾಂತ್ರಿಕ ಆವಿಷ್ಕಾರದತ್ತ ಕಾರ್ಯ ಪ್ರವೃತ್ತವಾಗಿವೆ.

ವಿಶ್ವದ ಪ್ರಥಮ ಸಂಪೂರ್ಣ ವಿದ್ಯುತ್‌ಚಾಲಿತ, ಸ್ಮಾರ್ಟ್ ಟ್ರ್ಯಾಕ್ಟರ್‌ ಅನ್ನು ಮೋನಾರ್ಕ್ ಟ್ರ್ಯಾಕ್ಟರ್ಅಮೆರಿಕದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡೂ ಕಂಪನಿಗಳು ಗ್ರಾಹಕರಿಗೆ ಕಾಂಪ್ಯಾಕ್ಟ್ ಟ್ರ್ಯಾಕ್ಟರ್‌ಗಳ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಲು ಜಂಟಿಯಾಗಿ ಪ್ರಯತ್ನಿಸುತ್ತಿವೆ.

ADVERTISEMENT

‘ವಿದ್ಯುತ್‌ ಚಾಲಿತ ಮತ್ತು ಚಾಲಕನ ಅಗತ್ಯವಿಲ್ಲದ ತಾಂತ್ರಿಕತೆಯು ಕೃಷಿ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಯಾಗಿದ್ದು, ಇದು ಟ್ರ್ಯಾಕ್ಟರ್ ತಂತ್ರಜ್ಞಾನದಲ್ಲಿ ಅಳವಡಿಕೆಯಾಗಿದೆ’ ಎಂದು ವಿಎಸ್‌ಟಿ ಸಂಸ್ಥೆಯ ಸಿಇಒ ಆ್ಯಂಟನಿ ಚೆರುಕರ ತಿಳಿಸಿದ್ದಾರೆ.

ವಿದ್ಯುತ್‌ಚಾಲಿತ ಈ ಟ್ರ್ಯಾಕ್ಟರ್‌ ಅನ್ನು ಚಾಲಕನ ನೆರವಿಲ್ಲದೇ ಚಲಾಯಿಸಬಹುದು. ಅಟೊನೋಮಸ್‌ ತಂತ್ರಜ್ಞಾನದ ನೆರವಿನಿಂದ ಈ ಟ್ರ್ಯಾಕ್ಟರ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

ಇದರಲ್ಲಿ ಅಳವಡಿಸಿರುವ 360 ಡಿಗ್ರಿ ಕ್ಯಾಮೆರಾಗಳು ಇದರ ಸ್ವತಂತ್ರ ಕಾರ್ಯನಿರ್ವಹಣೆಗೆ ನೆರವಾಗಲಿದ್ದು ಅವಘಡಗಳನ್ನೂ ತಪ್ಪಿಸಲಿವೆ. ಬಳಕೆದಾರರು ಟ್ರ್ಯಾಕ್ಟರ್‌ ಅನ್ನು ತಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸಬಹುದಾಗಿದೆ. ಸಣ್ಣ ರೈತರ ಉತ್ಪಾದನೆ ಹೆಚ್ಚಿಸಲು ನೆರವಾಗುವ ಬಗೆಯಲ್ಲಿ ಈ ‘ಇ–ಟ್ರ್ಯಾಕ್ಟರ್‌‘ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ.

ವಿಎಸ್‌ಟಿ ಟಿಲ್ಲರ್ಸ್‌ ಟ್ರ್ಯಾಕ್ಟರ‍್ಸ್ ಸಂಸ್ಥೆಯು ಈ ತಂತ್ರಜ್ಞಾನದ ಅಳವಡಿಕೆಯಲ್ಲಿ ಮೋನಾರ್ಕ್ ಟ್ರ್ಯಾಕ್ಟರ‍್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಲು ಉತ್ಸುಕವಾಗಿದೆ. ಈ ತಂತ್ರಜ್ಞಾನವನ್ನು ಭಾರತದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಳವಡಿಸಲು ಸಿದ್ಧತೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.