ADVERTISEMENT

ಭಾರತದ ಮಾರುಕಟ್ಟೆಗೆ ಲ್ಯಾಂಡ್ ರೋವರ್ ಡಿಫೆಂಡರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 19:30 IST
Last Updated 21 ಅಕ್ಟೋಬರ್ 2020, 19:30 IST
ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ನೂತನ ಡಿಫೆಂಡರ್ ಅನ್ನು ಬಿಡುಗಡೆ ಮಾಡಿದರು
ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ನೂತನ ಡಿಫೆಂಡರ್ ಅನ್ನು ಬಿಡುಗಡೆ ಮಾಡಿದರು   

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಎಸ್‌ಯುವಿ, ಹೊಸ ತಲೆಮಾರಿನ ಡಿಫೆಂಡರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಡಿಫೆಂಡರ್ ಐಕಾನಿಕ್ ಮಾಡೆಲ್ ಆಗಿದ್ದು, 1948ರಲ್ಲಿ ಮೊದಲ ತಲೆಮಾರಿನ ಡಿಫೆಂಡರ್ ಬಿಡುಗಡೆಯಾಗಿತ್ತು. ಡಿಫೆಂಡರ್‌ನ ಎಲ್ಲಾ ಹೆಚ್ಚುಗಾರಿಕೆಗಳನ್ನು ಉಳಿಸಿಕೊಂಡು, 21ನೇ ಶತಮಾನಕ್ಕೆ ತಕ್ಕಂತೆ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಕಂಪನಿ ಹೇಳಿದೆ.

ಡಿಫೆಂಡರ್ 110 ಇಂಚು ಮತ್ತು 90 ಇಂಚಿನ ವ್ಹೀಲ್ ಬೇಸ್ ಮಾದರಿಗಳಲ್ಲಿ ಲಭ್ಯವಿದೆ. ಎರಡೂ ಮಾದರಿಗಳಲ್ಲಿ 2 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ನಾಲ್ಕು ಸಿಲಿಂಡರ್ ಇರುವ ಎಂಜಿನ್ 300 ಪಿಎಸ್ ಶಕ್ತಿ ಉತ್ಪಾದಿಸುತ್ತದೆ. ಗರಿಷ್ಠ 400 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ.

ADVERTISEMENT

ಅತ್ಯಾಧುನಿಕ ಟೆರೇನ್ ರೆಸ್ಪಾನ್ಸ್ ಸಿಸ್ಟಂ: ಲ್ಯಾಂಡ್ ರೋವರ್ ತನ್ನ ಟೆರೇನ್ ರೆಸ್ಪಾನ್ಸ್ ವ್ಯವಸ್ಥೆಯ (ಟಿಆರ್‌ಎಸ್‌) ಅತ್ಯಾಧುನಿಕ ಅವತರಣಿಕೆಯನ್ನು ಡಿಫೆಂಡರ್‌ನಲ್ಲಿ ಬಳಸಿದೆ. ಲ್ಯಾಂಡ್ ರೋವರ್‌ನ ಇತರ ಎಸ್‌ಯುವಿಗಳಲ್ಲಿ ಇರುವ ಟಿಆರ್‌ಎಸ್‌ನಲ್ಲಿ ಕೇವಲ ಡ್ರೈವ್ ಮೋಡ್‌ಗಳನ್ನು ಬದಲಾಯಿಸಲು
ಅವಕಾಶವಿದೆ.

ಡಿಫೆಂಡರ್‌ನಲ್ಲಿ ಡ್ರೈವ್ ಮೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರ ಜತೆಗೆ, ಪ್ರತಿ ಮೋಡ್‌ನಲ್ಲೂ ಸ್ಟೀರಿಂಗ್ ನಿಯಂತ್ರಣ, ಗಿಯರ್ ನಿಯಂತ್ರಣ, ಸಸ್ಪೆನ್ಷನ್ ಎತ್ತರ ಮತ್ತು ವರ್ತನೆಯನ್ನು ಸಂಯೋಜನೆ ಮಾಡಲು ಅವಕಾಶವಿದೆ. ಇದು ಆಫ್-ರೋಡಿಂಗ್‌ನಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ಕಂಪನಿ ಹೇಳಿದೆ.

ಡಿಫೆಂಡರ್‌ಗೆ 170 ಅಧಿಕೃತ ಆಕ್ಸೆಸರಿಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಬುಕ್ಕಿಂಗ್ ವೇಳೆಯೇ ಈ ಆಕ್ಸೆಸರಿಗಳನ್ನು ಖರೀದಿಸಲು ಅವಕಾಶವಿದೆ. ಏರ್ ಕಂಪ್ರೆಸರ್, ಸೈಡ್ ಸ್ಟೆಪ್, ರೂಫ್ ರ್‍ಯಾಕ್, ಜಂಪ್ ಸೀಟ್, ಸ್ಕಿಡ್ ಪ್ಲೇಟ್ ಮೊದಲಾದ ಆಕ್ಸೆಸರಿಗಳಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದೆ. ಆಕ್ಸೆಸರಿಗಳಲ್ಲಿ ಎಕ್ಸ್‌ಪ್ಲೋರರ್ ಪ್ಯಾಕ್, ಕಂಟ್ರಿ ಪ್ಯಾಕ್, ಅರ್ಬನ್ ಪ್ಯಾಕ್ ಮತ್ತು ಅಡ್ವೆಂಚರ್ ಪ್ಯಾಕ್ ಎಂಬ ಆಯ್ಕೆಗಳನ್ನು ನೀಡಲಾಗಿದೆ.

110 ಇಂಚಿನ ವ್ಹೀಲ್ ಬೇಸ್ ಮತ್ತು 5 ಬಾಗಿಲುಗಳ ಮಾದರಿಯಲ್ಲಿ ಲಭ್ಯವಿದೆ. ಈ ಮಾದರಿಯಲ್ಲಿ 5+1, 5+2 ಸೀಟುಗಳ ಸಂಯೋಜನೆ ಲಭ್ಯವಿದೆ. ಈ ಮಾದರಿಯು ತಕ್ಷಣವೇ ಡೆಲಿವರಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ. ಈ ಮಾದರಿಯು 5 ಅವತರಣಿಕೆಗಳಲ್ಲಿ ಲಭ್ಯವಿದೆ.

ಇವುಗಳ ಎಕ್ಸ್ ಷೋರೂಂ ಬೆಲೆ ₹ 79.94 ಲಕ್ಷದಿಂದ ₹ 90.46 ಲಕ್ಷದವರೆಗೆ ಇದೆ. 90 ಇಂಚಿನ ವ್ಹೀಲ್ ಬೇಸಿನ ಮಾದರಿಯ ಬುಕ್ಕಿಂಗ್ ಮಾತ್ರವೇ ಆರಂಭವಾಗಿದೆ. ಮೂರು ಬಾಗಿಲುಗಳ ಈ ಮಾದರಿಯಲ್ಲೂ ಐದು ಅವತರಣಿಕೆಗಳು ಇವೆ.

ಎಕ್ಸ್ ಷೋರೂಂ ಬೆಲೆ ₹ 73.98 ಲಕ್ಷದಿಂದ ₹ 84.63 ಲಕ್ಷದವರೆಗೆ ಇದೆ. ಈ ಮಾದರಿಯ ಡೆಲಿವರಿಯು 2021ರ ಮೊದಲ ತ್ರೈಮಾಸಿಕದಲ್ಲಿ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.