ADVERTISEMENT

ಮೋಪೆಡ್‌ಗೆ ‘ಪ್ರಯಾಣಿಕ ವಾಹನದ’ ಲುಕ್‌

ಟೆಸ್ಟ್‌ಡ್ರೈವ್

ಉದಯ ಯು.
Published 16 ಆಗಸ್ಟ್ 2020, 19:30 IST
Last Updated 16 ಆಗಸ್ಟ್ 2020, 19:30 IST
ಟಿವಿಎಸ್‌
ಟಿವಿಎಸ್‌   

ದೇಶದ ಏಕೈಕ ಮೋಪೆಡ್‌ ತಯಾರಿಕಾ ಕಂಪನಿ ಟಿವಿಎಸ್‌, ತನ್ನ ಜನಪ್ರಿಯ ದ್ವಿಚಕ್ರ ವಾಹನ ಎಕ್ಸ್‌ಎಲ್‌ ಹೆವಿಡ್ಯೂಟಿ ಕಂಫರ್ಟ್‌ನ ‘ಬಿಎಸ್‌6’ ಆವೃತ್ತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಎಕ್ಸ್‌ಎಲ್‌ ಮೋಪೆಡ್‌ ಈವರೆಗೂ ಸರಕು ಸಾಗಾಣಿಕೆಗೆ ಬಳಸುವ ವಾಹನ ಎಂಬ ಇಮೇಜ್‌ ಅನ್ನು ಪಡೆದಿತ್ತು. ಆದರೆ ಎಕ್ಸ್‌ಎಲ್‌ ಹೆವಿಡ್ಯೂಟಿ ಕಂಫರ್ಟ್‌ ಮೂಲಕ ಈ ವಾಹನಕ್ಕೆ ‘ಕುಟುಂಬದ ಪ್ರಯಾಣಿಕ ವಾಹನ’ ಎಂಬ ಇಮೆಜ್‌ ಕೊಡುವ ಪ್ರಯತ್ನವನ್ನು ಕಂಪನಿ ಮಾಡಿದೆ. ಅದಕ್ಕೆ ತಕ್ಕಂತೆ ವಾಹನದ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿದೆ.

ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ನೋಡಿದಾಗ ‘ಪ್ರೀಮಿಯಂ ಲುಕ್‌’ ನೀಡುವಂತೆ ಹೊರಮೈನ ವಿನ್ಯಾಸಗಳನ್ನು ಮಾಡಿದೆ. ಕುಟುಂಬದ ಪ್ರಯಾಣಕ್ಕೆ ಮುಖ್ಯವಾಗಿ ಸೀಟ್‌ನಲ್ಲಿ ಬದಲಾವಣೆ ಬೇಕಾಗಿತ್ತು. ಹೊಸ ವಾಹನದಲ್ಲಿ ಅಗಲವಾದ, ದ್ವಿವರ್ಣದ ಸೀಟ್‌ ಜತೆಗೆ ಬ್ಯಾಕ್‌ ರೆಸ್ಟ್‌ ಅನ್ನೂ ನೀಡಲಾಗಿದೆ. ಸಾಮಾನ್ಯವಾಗಿ ಬೈಕ್‌ ಅಥವಾ ಸ್ಕೂಟರ್‌ಗಳ ಮುಂಭಾಗದಲ್ಲಿ ಬರುವಂತೆ, ಕಂಫರ್ಟ್‌ನಲ್ಲೂ ಆಕರ್ಷಕ ಡೂಮ್‌ ನೀಡಲಾಗಿದೆ. ಅದರಲ್ಲಿ ಕೆಳಭಾಗದಲ್ಲಿ ಎಲ್‌ಇಡಿ ದೀಪಗಳಿವೆ. ಹೆಡ್‌ಲೈಟ್‌ ಒಳಗೆ ಹಳೆಯ ಮಾದರಿಯ ದೀಪವೇ ಇದೆ.

ADVERTISEMENT

ಹೊಸ ವಾಹನದಲ್ಲಿ ಡ್ರಮ್‌ ಬ್ರೇಕ್‌ಗಳಿವೆ. ಎರಡೂ ಚಕ್ರಗಳಿಗೆ ಸಮಾನವಾಗಿ ಬ್ರೇಕ್ ಅನ್ವಯವಾಗುವಂಥ ಎಸ್‌ಬಿಟಿ ತಂತ್ರಜ್ಞಾನ ಅಳವಡಿಸಲಾಗಿದೆ. ಹಿಂದಿನ ಚಕ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬಹುದಾದಂಥ ಸಸ್ಪೆನ್ಷನ್‌ ಅಳವಡಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯ ಮತ್ತು ಗಮನಸೆಳೆಯುವ ಅಂಶವೆಂದರೆ ಇದರಲ್ಲಿ ಫ್ಯುಯೆಲ್‌ ಇಂಜೆಕ್ಷನ್‌ ತಂತ್ರಜ್ಞಾನ ಹಾಗೂ ಅಟೊ ಸ್ಟಾರ್ಟ್‌ ವ್ಯವಸ್ಥೆ ಅಳವಡಿಸಲಾಗಿದೆ. ಹೀಗಿದ್ದರೂ, ಕಿಕ್‌ಸ್ಟಾರ್ಟ್‌ನ ಆಯ್ಕೆಯನ್ನು ಉಳಿಸಿಕೊಳ್ಳಲಾಗಿದೆ. ವಾಹನದಲ್ಲಿ ಯುಎಸ್‌ಬಿ ಚಾರ್ಜಿಂಗ್‌ ವ್ಯವಸ್ಥೆ ಹೊಸ ಸೇರ್ಪಡೆಯಾಗಿದೆ. ಇಂಧನ ಎಷ್ಟು ಉಳಿದಿದೆ ಎಂದು ತೋರಿಸುವ ಇಂಡಿಕೇಟರ್‌ ಅನ್ನೂ ಅಳವಡಿಸಲಾಗಿದೆ.

ಪ್ರಯಾಣಿಕ ವಾಹನಕ್ಕೆ ಬೇಕಾದಂತೆ ಫೂಟ್‌ ರೆಸ್ಟ್‌, ಸಿಗ್ನಲ್ ದೀಪಗಳು, ಯುಟಿಲಿಟಿ ಬಾಕ್ಸ್‌ ಮುಂತಾದವುಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ವಾಹನದ ಸದ್ದೂ ಕಡಿಮೆಯಾಗಿದೆ ಎಂದು ಕಂಪನಿ ಹೆಳಿದೆ. ಆದರೆ ಆ ಬಗ್ಗೆ ಹೇಳಿಕೊಳ್ಳುವಂಥ ಬದಲಾವಣೆ ಕಾಣಿಸುವುದಿಲ್ಲ. ಪ್ರಯಾಣಿಕ ವಾಹನ ಎಂದರೂ ಸಾಮಗ್ರಿ ಇಡುವ ಜಾಗ ಕಡಿಮೆ ಮಾಡಿಲ್ಲ. ಬದಲಿಗೆ ಅದನ್ನು ಇನ್ನೂ ಸ್ವಲ್ಪ ಅಗಲಗೊಳಿಸಿ, ಆಕರ್ಷಕ ಮ್ಯಾಟ್‌ಗಳನ್ನು ಹಾಕಿ ಹೊಸ ಲುಕ್‌ ನೀಡಲಾಗಿದೆ.

ವಾಹನದ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ. ಮಾತ್ರ. ಆದ್ದರಿಂದ, ತುಂಬ ವೇಗವನ್ನು ಬಯಸುವವರಿಗೆ ಈ ವಾಹನ ಹಿಡಿಸಲಾರದು. ಆದರೆ ಫೂಟ್‌ರೆಸ್ಟ್‌, ಹ್ಯಾಂಡಲ್‌ ಹಾಗೂ ಸೀಟ್‌ನಲ್ಲಿ ಬದಲಾವಣೆ ಮಾಡಿರುವುದರಿಂದ ಸ್ವಲ್ಪ ದೀರ್ಘ ಅವಧಿಯವರೆಗೆ ವಾಹನ ಓಡಿಸಿದರೂ ಸುಸ್ತು ಎನಿಸುವುದಿಲ್ಲ.

ಎಂಜಿನ್‌ ಸಾಮರ್ಥ್ಯ;100 ಸಿಸಿ

ಇಂಧನ ಸಾಮರ್ಥ್ಯ;4ಲೀಟರ್‌ (ಪೆಟ್ರೋಲ್‌)

ಇಂಧನ ಕ್ಷಮತೆ; 67ಕಿ.ಮೀ/ಲೀಟರ್‌

ಭಾರ;89 ಕಿಲೊ

ಬೆಂಗಳೂರಿನಲ್ಲಿ ಎಕ್ಸ್‌ ಷೋರೂಂ ಬೆಲೆ; ₹ 47,059 (ಆನ್‌ರೋಡ್‌ ಸುಮಾರು ₹ 54,500)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.