ADVERTISEMENT

PV Web Exclusive | ಬಿಎಂಡಬ್ಲೂ: ನಿರ್ವಹಣೆ ಗೊಡವೆ ಇಲ್ಲದ ಬೈಕ್ ಚೈನ್ ಅಭಿವೃದ್ಧಿ

ಬಿಎಂಡಬ್ಲೂ ಎಂ–ಎಂಡ್ಯೂರೆನ್ಸ್ ಬೈಕ್ ಚೈನ್‌

ಇ.ಎಸ್.ಸುಧೀಂದ್ರ ಪ್ರಸಾದ್
Published 3 ಸೆಪ್ಟೆಂಬರ್ 2020, 7:12 IST
Last Updated 3 ಸೆಪ್ಟೆಂಬರ್ 2020, 7:12 IST
ಬಿಎಂಡಬ್ಲೂ ಎಂ–ಎಂಡ್ಯೂರೆನ್ಸ್ ನಿರ್ವಹಣೆ ಅಗತ್ಯವಿಲ್ಲದ ಚೈನ್‌ (ಚಿತ್ರ– ಬಿಎಂಡಬ್ಲೂ ಮೋಟೊರಾಡ್‌)
ಬಿಎಂಡಬ್ಲೂ ಎಂ–ಎಂಡ್ಯೂರೆನ್ಸ್ ನಿರ್ವಹಣೆ ಅಗತ್ಯವಿಲ್ಲದ ಚೈನ್‌ (ಚಿತ್ರ– ಬಿಎಂಡಬ್ಲೂ ಮೋಟೊರಾಡ್‌)   

ಧಾರವಾಡ: ಸೈಕಲ್‌ನಿಂದ ಹಿಡಿದು ಬೈಕ್‌ಗಳವರೆಗೂ ದ್ವಿಚಕ್ರ ವಾಹನಗಳ ಚಾಲನೆಗೆ ಚೈನ್ ಪಾತ್ರ ಮಹತ್ವದ್ದು. ಹೀಗಾಗಿ ಅವುಗಳ ನಿರ್ವಹಣೆಯೂ ಅಷ್ಟೇ ಅನಿವಾರ್ಯ. ಆದರೆ ಬಿಎಂಡಬ್ಲೂ ಕಂಪನಿ, ನಿರ್ವಹಣೆಯೇ ಬೇಡದ ಚೈನ್ ಅಭಿವೃದ್ಧಿಪಡಿಸಿದೆ.

‘ಎಂ–ಎಂಡ್ಯೂರೆನ್ಸ್‌’ ಎಂಬ ಈ ಚೈನ್‌ಗೆ ಲೂಬ್ರಿಕೆಂಟ್ ಅಗತ್ಯವಿಲ್ಲ, ಪದೇ ಪದೇ ಸಡಿಲಗೊಳ್ಳುವ ಸಮಸ್ಯೆಯೂ ಇಲ್ಲ. ಇದರಲ್ಲಿ ಬಳಸಿರುವ ರಾಸಾಯನಿಕ ಪದಾರ್ಥಗಳಿಂದ ಒಣ ಲೂಬ್ರಿಕೆಂಟ್ ಮೂಲಕವೇ ಚೈನ್‌ ನಿರ್ವಹಣೆ ಆಗುತ್ತಲಿರುತ್ತದೆ ಎನ್ನುವುದು ಈ ಆವಿಷ್ಕಾರದ ಸಂಕ್ಷಿಪ್ತ ಸಾರಾಂಶ.

ಇಡೀ ಜಗತ್ತಿನಲ್ಲಿ ಬಹುತೇಕ ಬೈಕ್‌ಗಳು ಚೈನ್‌ಗಳಿಂದಲೇ ಚಲಿಸುತ್ತವೆ. ಕಡಿಮೆ ವೆಚ್ಚ ಹಾಗೂ ಶೇ 3ರಷ್ಟು ಮಾತ್ರ ಇಂಧನ ನಷ್ಟ ಇದರ ಉತ್ತಮ ಅಂಶಗಳು. ಆದರೆ ಕಾಲಕಾಲಕ್ಕೆ ನಿರ್ವಹಣೆ ಇದಕ್ಕೆ ಅಗತ್ಯ. ಬಿಎಂಡಬ್ಲೂ ಆವಿಷ್ಕಾರ ಮಾಡಿದ ಚೈನ್‌ಗೆ ನಿರ್ವಹಣೆಯ ಅಗತ್ಯವೇ ಇಲ್ಲ. ಹೀಗಾಗಿ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಇದು ಭಾರೀ ಸದ್ದು ಮಾಡುತ್ತಿದೆ.

ADVERTISEMENT

ಸುಮಾರು 97 ವರ್ಷಗಳ ಹಿಂದೆ ಅಂದರೆ 1923ರಲ್ಲಿ ಬಿಎಂಡಬ್ಲೂ ಕಂಪನಿಯು ಶಾಫ್ಟ್‌ ಡ್ರೈವ್ಸ್‌ ಅಭಿವೃದ್ಧಿಪಡಿಸಿತ್ತು. ಕಾರುಗಳಲ್ಲಿ ಇರಬಹುದಾದ ಪ್ರೊಪೆಲರ್ ಶಾಫ್ಟ್ ಡ್ರೈವ್ ಮಾದರಿಯಲ್ಲೇ ಇರುವ ಇದೂ ದ್ವಿಚಕ್ರ ವಾಹನಗಳಲ್ಲಿ ಈಗಲೂ ಬಳಕೆಯಾಗುತ್ತಿದೆ. ಬಿಎಂಡಬ್ಲೂ, ಹೊಂಡಾ ಇತ್ಯಾದಿ ಕಂಪನಿಗಳು ಐಷಾರಾಮಿ ಬೈಕ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಇದು ದೀರ್ಘಕಾಲ ಬಾಳಿಕೆ ಬರುತ್ತದೆ ಎಂಬುದೇನೋ ಹೌದು. ಆದರೆ ಇದರಲ್ಲಿ ಶೇ 31ರಷ್ಟು ಇಂಧನ ನಷ್ಟವಾಗುವುದರಿಂದ ಅಗ್ಗದ ಬೆಲೆಯ ಬೈಕ್‌ಗಳಲ್ಲಿ ಇದನ್ನು ಅಳವಡಿಸುವುದು ಅಸಾಧ್ಯ ಎಂದು ತಂತ್ರಜ್ಞರು ಹೇಳುತ್ತಾರೆ.

ಬರೋಬ್ಬರಿ ನೂರು ವರ್ಷಗಳ ಅಂತರದಲ್ಲಿ ನಂತರ ಇದೀಗ ಬಿಎಂಡಬ್ಲೂ ಮೊಟಾರ್ಡ್‌ ‘ಎಂ–ಎಂಡ್ಯೂರೆನ್ಸ್‌’ ಎಂಬ ನಿರ್ವಹಣೆ ಬೇಡದ ಚೈನ್ ಅಭಿವೃದ್ಧಿಪಡಿಸುವ ಮೂಲಕ ಮತ್ತೆ ಸುದ್ದಿಯಲ್ಲಿದೆ.

ಬಿಎಂಡಬ್ಲೂ ಎಸ್‌1000ಎಕ್ಸ್ಆರ್‌ ಹಾಗೂ ಎಸ್1000ಎಕ್ಸ್‌ಆರ್‌ ಮಾದರಿ ದ್ವಿಚಕ್ರವಾಹನಗಳಲ್ಲಿ ಇದು ಲಭ್ಯ. ಅಷ್ಟಕ್ಕೂ ಈ ಬಿಎಂಡಬ್ಲೂ ಎಂ–ಎಂಡ್ಯೂರೆನ್ಸ್ ಚೈನ್‌ ನಿರ್ವಹಣೆಯೇ ಬೇಡದ ತಂತ್ರಜ್ಞಾನ ಹೊಂದಲು ಬಹುಮುಖ್ಯ ಕಾರಣ, ಇದರ ಚೈನ್‌ನಲ್ಲಿರುವ ಎಕ್ಸ್‌–ರಿಂಗ್ಸ್‌, ರೋಲರ್‌ ಹಾಗೂ ಪಿನ್ಸ್‌ಗಳ ನಡುವೆ ಶಾಶ್ವತ ಲೂಬ್ರಿಕೆಂಟ್‌ ಸಿಗುವ ತಂತ್ರಜ್ಞಾನ. ಕೈಗಾರಿಕಾ ಡೈಮಂಡ್‌ ಕೋಟಿಂಗ್‌ ಎಂದೇ ಕರೆಯಲಾಗುವ ಟೆಟ್ರಾಹೆಡ್ರಾಲಿ ಅಮಾರ್ಫಸ್ ಕಾರ್ಬನ್ (ta-C) ಇದರಲ್ಲಿ ಬಳಸಲಾಗಿದೆ. ಇದರಿಂದ ಚೈನ್‌ ಲಿಂಕ್‌ಗಳ ನಡುವಿನ ಘರ್ಷಣೆ ತಗ್ಗುವುದರಿಂದ ಸವಕಳಿ ಪ್ರಮಾಣ ತಗ್ಗಲಿದೆ ಎಂದು ಕಂಪನಿ ಹೇಳಿದೆ.

ಈ ಹೊಸ ತಂತ್ರಜ್ಞಾನದಿಂದಾಗಿ ಎಂ–ಎಂಡ್ಯೂರೆನ್ಸ್ ಚೈನ್‌ಗೆ ಲೂಬ್ರಿಕೆಂಟ್ ಮಾತ್ರವಲ್ಲ, ಚೈನ್‌ ಟೈಟ್ ಮಾಡಿಸುವುದು ಅಥವಾ ಲಿಂಕ್ ಕ್ಲಿಪ್ ಹಾಕಿಸುವ ಇತ್ಯಾದಿ ಗೊಡವೆಯೇ ಇರುವುದಿಲ್ಲ.

ಈಗಾಗಲೇ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಮೂರು ಬಗೆಯ ತಂತ್ರಜ್ಞಾನಗಳು ಲಭ್ಯ. ಚೈನ್, ಬೆಲ್ಟ್‌ ಹಾಗೂ ಡ್ರೈವ್ ಶಾಫ್ಟ್ ತಂತ್ರಜ್ಞಾನಗಳನ್ನು ಬೈಕ್‌ಗಳಲ್ಲಿ ಬಳಸಲಾಗಿದೆ. ಆದರೆ ಭಾರತದಲ್ಲಿ ಚೈನ್ ಇರುವ ಬೈಕ್‌ಗಳೇ ಹೆಚ್ಚು. ಇದಕ್ಕೆ ಹಣ ಉಳಿತಾಯ ಪ್ರಮುಖ ಕಾರಣ. ಆದರೆ ಖರೀದಿಸುವವರು ಪ್ರತಿ 350 ಕಿ.ಮೀ. ಕ್ರಮಿಸಿದ ನಂತರ ಚೈನ್‌ಗಳನ್ನು ಮರುಹೊಂದಾಣಿಸಿಕೊಳ್ಳಬೇಕು. ವಾರಕ್ಕೊಮ್ಮೆಯಾದರೂ ಚೈನ್ ತೊಳೆದು ಲೂಬ್ರಿಕೆಂಟ್ ಹಾಬೇಕು. 30 ಸಾವಿರ ಕಿ.ಮೀ. ಕ್ರಮಿಸಿದ ನಂತರ ಅದನ್ನು ಬದಲಿಸುವ ಅನಿವಾರ್ಯತೆಯೂ ಇದರದ್ದು.

ಆದರೆ ಬೆಲ್ಟ್ ಬಳಕೆ ದೀರ್ಘಕಾಲಿಕ. ಹಾರ್ಲೆ ಡೆವಿಡ್ಸನ್‌ ಕಂಪನಿಯ ಬಹುತೇಕ ಬೈಕ್‌ಗಳು ಇದೇ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಕಡಿಮೆ ಶಬ್ದ, ದೀರ್ಘ ಬಾಳಿಕೆ ಇದರ ಸಾಮರ್ಥ್ಯ. ಇದಕ್ಕೆ ಲೂಬ್ರಿಕೆಂಟ್ ಹಾಕಿಸುವ ಅಗತ್ಯವಿಲ್ಲವಾದ್ದರಿಂದ ಇದರ ನಿರ್ವಹಣೆ ಸುಲಭ. 50ಸಾವಿರದಿಂದ 1ಲಕ್ಷ ಕಿಲೋಮೀಟರ್‌ವರೆಗೂ ಇದನ್ನು ಬದಲಿಸದೇ ಬಳಸಬಹುದು. ಬೆಲ್ಟ್ ಬಳಕೆಯಿಂದ ಶೇ 11ರಷ್ಟು ಹೆಚ್ಚು ಇಂಧನ ಖರ್ಚಾಗಲಿದೆ. ಎಂ–ಎಂಡ್ಯೂರೆನ್ಸ್ ಚೈನ್‌ನಲ್ಲಿ ಬಳಸಲಾಗಿರುವ ಟೆಟ್ರಾಹೆಡ್ರಾಲಿ ಅಮಾರ್ಫಸ್ ಕಾರ್ಬನ್‌ನಿಂದ ಘರ್ಷಣೆ ಪ್ರಮಾಣವನ್ನು ಕಡಿತಗೊಳಿಸಲಿದೆ. ಇದರಿಂದ ಬೈಕ್‌ನ ಕಾರ್ಯಕ್ಷಮತೆ ಹೆಚ್ಚಲಿದೆ. ಲೂಬ್ರಿಕೆಷನ್ ಗುಣಲಕ್ಷಣಗಳನ್ನು ಇದು ಹೊಂದಿರುವುದರಿಂದ ಸವಕಳಿ ತಗ್ಗಲಿದೆ.

ಆದರೆ ಇದರ ಬೆಲೆ ಕುರಿತು ಬಿಎಂಡಬ್ಲೂ ಇಂದ ಯವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಎಂ–ಎಂಡ್ಯೂರೆನ್ಸ್ ಚೈನ್ ಬಿಎಂಡಬ್ಲೂ ಮೋಟಾರ್ಡ್‌ನ ಇತರ ಮಾದರಿಗಳಿಗೂ ಲಭ್ಯವಾಗುವಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.