ADVERTISEMENT

ಬಾಲನ್‌ ಎಂಜಿನಿಯರಿಂಗ್‌ನಿಂದ ಕಡಿಮೆ ಬೆಲೆಯ ವಿದ್ಯುತ್ ಚಾಲಿತ ವಾಹನಗಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 15:30 IST
Last Updated 23 ಸೆಪ್ಟೆಂಬರ್ 2021, 15:30 IST

ಬೆಂಗಳೂರು: ಬೆಂಗಳೂರಿನ ಬಾಲನ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕಡಿಮೆ ಬೆಲೆಯು ವಿದ್ಯುತ್‌ ಚಾಲಿತ ವಾಹನಗಳನ್ನು ಪರಿಚಯಿಸಿದೆ. ಈ ವಾಹನಗಳು ನಾಲ್ಕು ವರ್ಷಗಳ ಮೋಟರ್‌, ಕಂಟ್ರೋಲರ್‌ ಮತ್ತು ಬ್ಯಾಟರಿ ವಾರಂಟಿ ಹೊಂದಿವೆ. ಪ್ರಯಾಣಿಕ, ಸರಕು ಸಾಗಣೆ ಉದ್ದೇಶಕ್ಕಷ್ಟೇ ಅಲ್ಲದೆ, ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆಗೂ ಬಳಸಬಹುದಾಗಿದೆ ಎಂದು ಕಂಪನಿಯು ತಿಳಿಸಿದೆ.

ಎಲ್ಲ ವಾಹನಗಳೂ ಇಂಟರ್‌ನ್ಯಾಷನಲ್‌ ಸೆಂಟರ್ ಫಾರ್ ಆಟೊಮೊಟಿವ್‌ ಟೆಕ್ನಾಲಜಿಯಿಂದ (ಐಸಿಎಟಿ) ಪ‍್ರಮಾಣೀಕೃತವಾಗಿವೆ. ಬಾಳಿಕೆ ಮತ್ತು ಹಣಕ್ಕೆ ತಕ್ಕ ಮೌಲ್ಯ ಎನ್ನುವ ಎರಡು ತತ್ವಗಳ ಆಧಾರದ ಮೇಲೆ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ನಿರ್ದೇಶಕ ಬಾಲಕೃಷ್ಣನ್‌ ತಿಳಿಸಿದ್ದಾರೆ.

ಆತ್ಮನಿರ್ಭರ ಭಾರತ ಯೋಜನೆಯಡಿ ಇವುಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದೆ. ವಿಶ್ವಾಸಾರ್ಹತೆಯು ವಾಹನದ ವಿನ್ಯಾಸದ ಅಡಿಪಾಯ ಆಗಿರುವುದರಿಂದ ವಾಹನಕ್ಕೆ ‘ವಿಶ್ವಾಸ್’ ಎಂದು ಹೆಸರಿಡಲಾಗಿದೆ. ಐಸಿಎಟಿ ಫೇಮ್‌ ಪರೀಕ್ಷೆ ವೇಳೆ ಒಂದು ಬಾರಿ ಚಾರ್ಜ್‌ ಮಾಡಿದಾಗ 140 ಕಿಲೋ ಮೀಟರ್‌ ಚಲಿಸಿದೆ. ಪ್ರತಿ ಕಿ.ಮೀ.ಗೆ 0.30 ರಿಂದ 0.35 ಪೈಸೆ ಖರ್ಚು ಬರುತ್ತದೆ. ಬೆಂಗಳೂರಿನಲ್ಲಿ ಈ ವಾಹನಗಳ ಎಕ್ಸ್‌ ಷೋರೂಂ ಬೆಲೆ ಜಿಎಸ್‌ಟಿಯನ್ನೂ ಒಳಗೊಂಡು ₹ 1.85 ಲಕ್ಷ. ಈ ವಾಹನಗಳಿಗೆ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸದ್ಯ ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿದ್ದು, ಬಾಗಲಕೋಟೆಯಲ್ಲಿ 50 ಸಾವಿರ ವಾಹನ ತಯಾರಿಕಾ ಸಾಮರ್ಥ್ಯದ ದೊಡ್ಡ ಘಟಕ ನಿರ್ಮಾಣವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.