ADVERTISEMENT

ವರ್ಷಾಂತ್ಯದ ಒಳಗೆ 135 ಕಡೆಗಳಲ್ಲಿ ಚಾರ್ಜಿಂಗ್‌ ಕೇಂದ್ರ: ಏಥರ್‌ ಎನರ್ಜಿ

ಪಿಟಿಐ
Published 13 ಅಕ್ಟೋಬರ್ 2020, 14:04 IST
Last Updated 13 ಅಕ್ಟೋಬರ್ 2020, 14:04 IST
ಏಥರ್ 450 ಎಕ್ಸ್‌
ಏಥರ್ 450 ಎಕ್ಸ್‌   

ಬೆಂಗಳೂರು: ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳುವ ಕೇಂದ್ರಗಳನ್ನು ದೇಶದ ಒಟ್ಟು 135 ಕಡೆಗಳಲ್ಲಿ ಸ್ಥಾಪಿಸುವ ಮೊದಲ ಹಂತದ ಯೋಜನೆಯನ್ನು ಈ ವರ್ಷಾಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರಿನ ನವೋದ್ಯಮ ‘ಏಥರ್‌ ಎನರ್ಜಿ’ ತಿಳಿಸಿದೆ. ಈ ಕಂಪನಿಯುವಿದ್ಯುತ್‌ ಚಾಲಿತ ಸ್ಕೂಟರ್‌ಗಳನ್ನು ತಯಾರಿಸುತ್ತಿದೆ.

ಹಂತ ಹಂತವಾಗಿ 2022ರ ವೇಳೆಗೆ ದೇಶದಾದ್ಯಂತ ಒಟ್ಟಾರೆ 6,500 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ. ಸದ್ಯ, ಬೆಂಗಳೂರಿನಲ್ಲಿ 37, ಚೆನ್ನೈನಲ್ಲಿ 13 ಕೇಂದ್ರಗಳನ್ನು ಒಳಗೊಂಡು 150 ವೇಗದ ಚಾರ್ಜಿಂಗ್ ಕೇಂದ್ರಗಳು ದೇಶದಲ್ಲಿವೆ. ಇಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಮಾರುಕಟ್ಟೆಗೆ ವಾಹನ ಬಿಡುಗಡೆ ಮಾಡುವುದಕ್ಕೂ ಮೊದಲೇ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿದ್ದೇವೆ. ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವ ಮೊದಲು ಅಲ್ಲಿ ಐದರಿಂದ 10 ವೇಗದ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲಾಗುವುದು. ಬೆಂಗಳೂರು ಮತ್ತು ಚೆನ್ನೈನಲ್ಲಿ ಚಾರ್ಜಿಂಗ್‌ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ‌ ರವನೀತ್ ಸಿಂಗ್ ಪೊಕೇಲಾ ತಿಳಿಸಿದ್ದಾರೆ.

ADVERTISEMENT

ತನ್ನ 125 ಸಿಸಿ ಏಥರ್‌ 450 ಎಕ್ಸ್ ಸ್ಕೂಟರ್‌ಅನ್ನು ಕಂಪನಿಯು ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೊದಲಿಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಈ ಸ್ಕೂಟರ್‌ ಲಭ್ಯವಾಗಲಿದೆ. ಬೆಂಗಳೂರಿನಲ್ಲಿ ಇದರ ಬೆಲೆ ₹ 1.59 ಲಕ್ಷ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.