ADVERTISEMENT

ಸುಜುಕಿಯಿಂದ ಆರು ಎಲೆಕ್ಟ್ರಿಕ್‌ ವಾಹನ

ಪಿಟಿಐ
Published 26 ಜನವರಿ 2023, 17:44 IST
Last Updated 26 ಜನವರಿ 2023, 17:44 IST
   

ನವದೆಹಲಿ: 2029–30ನೆಯ ಹಣಕಾಸು ವರ್ಷಕ್ಕೆ ಮೊದಲು ಭಾರತದಲ್ಲಿ ಒಟ್ಟು ಆರು ಇ.ವಿ. (ವಿದ್ಯುತ್ ಚಾಲಿತ) ವಾಹನಗಳನ್ನು ಮಾರುಕಟ್ಟೆಗೆ ತರಲಾಗುವುದು ಎಂದು ಸುಜುಕಿ ಮೋಟರ್ ಕಾರ್ಪೊರೇಷನ್ ಗುರುವಾರ ಹೇಳಿದೆ.‌

ಇ.ವಿ. ಮಾತ್ರವೇ ಅಲ್ಲದೆ, ಇಂಗಾಲದ ಮಾಲಿನ್ಯ ಇಲ್ಲದ ಸಿಎನ್‌ಜಿ, ಜೈವಿಕ ಅನಿಲ ಹಾಗೂ ಎಥೆನಾಲ್‌ ಮಿಶ್ರಣದ ಇಂಧನ ಬಳಸುವ ವಾಹನಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

‘ಈ ವರ್ಷದ ಆಟೊ ಎಕ್ಸ್‌ಪೊದಲ್ಲಿ ನಾವು ಪರಿಚಯಿಸಿದ ಎಸ್‌ಯುವಿ ಇ.ವಿ.ಯನ್ನು ಮುಂಬರುವ ಹಣಕಾಸು ವರ್ಷದಲ್ಲಿ ಮಾರುಕಟ್ಟೆಗೆ ತರಲಾಗುತ್ತದೆ’ ಎಂದು ಕಂಪನಿ ಹೇಳಿದೆ. 2029–30ಕ್ಕೆ ಮೊದಲು ಕಂಪನಿಯ ಒಟ್ಟು ವಾಹನ ಉತ್ಪಾದನೆಯಲ್ಲಿ ಇ.ವಿ. ಪಾಲು ಶೇ 15ರಷ್ಟು, ಸಾಂಪ್ರದಾಯಿಕ ಎಂಜಿನ್‌ ಇರುವ ವಾಹನಗಳ ಪಾಲು ಶೇ 60ರಷ್ಟು ಹಾಗೂ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಪಾಲು ಶೇ 25ರಷ್ಟು ಇರಲಿದೆ ಎಂದು ತಿಳಿಸಿದೆ.

ADVERTISEMENT

ಭಾರತದಲ್ಲಿ ಜೈವಿಕ ಅನಿಲದ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ಕೂಡ ಅದು ಹೇಳಿದೆ. ಸಗಣಿಯಿಂದ ಪಡೆಯುವ ಅನಿಲವನ್ನು ಸುಜುಕಿಯ ಸಿಎನ್‌ಜಿ ಮಾದರಿಗಳಲ್ಲಿ ಬಳಸಲು ಸಾಧ್ಯವಿದೆ ಎಂದು ಕಂಪನಿಯು ವಿವರಿಸಿದೆ. ‘ಭಾರತದಲ್ಲಿ ಜೈವಿಕ ಅನಿಲದ ವಹಿವಾಟು ಕಾರ್ಬನ್ ಹೊರಸೂಸುವಿಕೆ ನಿಯಂತ್ರಿಸುವಲ್ಲಿ ನೆರವಾಗುವುದಷ್ಟೇ ಅಲ್ಲದೆ, ಆರ್ಥಿಕ ಪ್ರಗತಿಗೂ ಕೊಡುಗೆ ನೀಡುತ್ತದೆ’ ಎಂದು ಮಾರುತಿ ಸುಜುಕಿ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.