ADVERTISEMENT

ವಿಶ್ವವ್ಯಾಪಿ ಮೈಲಾರಲಿಂಗ ಪರಂಪರೆ

ಮಂಜುಶ್ರೀ ಎಂ.ಕಡಕೋಳ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಸಂಪಾದಕ: ಎಫ್‌.ಟಿ.ಹಳ್ಳಿಕೇರಿ
ಸಂಪಾದಕ: ಎಫ್‌.ಟಿ.ಹಳ್ಳಿಕೇರಿ   

ಪುಸ್ತಕ: ಮೈಲಾರಲಿಂಗ ಪರಂಪರೆ

ಸಂಪಾದಕ: ಎಫ್‌.ಟಿ.ಹಳ್ಳಿಕೇರಿ

‍ಪುಟಗಳ ಸಂಖ್ಯೆ: 326

ADVERTISEMENT

ಬೆಲೆ: ₹ 280

ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

**

ಕುರುಬ ಸಮುದಾಯದ ಪ್ರಮುಖ ಆರಾಧ್ಯ ದೈವವಾಗಿರುವ ಮೈಲಾರಲಿಂಗನ ಕುರಿತು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಮೈಲಾರಲಿಂಗ ಪರಂಪರೆ’ ಹಾಲುಮತ ಸಂಸ್ಕೃತಿಯ ಒಳಹೊರಗನ್ನು ತೆರೆದಿಡುವ ಅಪರೂಪದ ಕೃತಿ.

ದಶಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠವು, ಮುಖ್ಯವಾಗಿ ಹಾಲುಮತ ಪರಂಪರೆಯ ದಾಖಲೀಕರಣ, ವಿಶ್ಲೇಷಣೆ, ಸಂಶೋಧನೆ ಮತ್ತು ಪ್ರಕಟಣೆ ಹೀಗೆ ನಾಲ್ಕು ಹಂತಗಳಲ್ಲಿ ಕಾರ್ಯನಿರತವಾಗಿದೆ. ಇದರ ಭಾಗವಾಗಿ ನಡೆದ ಏಳನೆಯ ಹಾಲುಮತ ಸಂಸ್ಕೃತಿ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಕಲನ ರೂಪದಲ್ಲಿ ವಿದ್ವಾಂಸ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸಂಪಾದಿಸಿರುವ ಕೃತಿಯೇ ‘ಮೈಲಾರಲಿಂಗ ಪರಂಪರೆ’.

ಮಲ್ಲಯ್ಯ, ಮಲ್ಲಣ್ಣ, ಗುಡದಯ್ಯ, ಮಲ್ಹಾರಿ, ಖಂಡೋಬಾ, ಮುಲ್ಲುಖಾನ್, ಅಜಮುತಖಾನ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮೈಲಾರಲಿಂಗನ ಮುಖ್ಯನೆಲೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ. ಕರ್ನಾಟಕವಷ್ಟೇ ಅಲ್ಲ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲೂ ಮೈಲಾರಲಿಂಗ ಭಕ್ತರ ಆರಾಧ್ಯದೈವ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮೈಲಾರದಲ್ಲಿ ನುಡಿಯುವ ಕಾರಣಿಕ ರಾಜ್ಯದ ಜನರ ಭವಿಷ್ಯವಾಣಿಯೆಂದೇ ಜನಜನಿತ. ಮೈಲಾರಲಿಂಗ ಬರೀ ದೈವವಲ್ಲ ಹಾಲುಮತದ ಒಬ್ಬ ಸಾಂಸ್ಕೃತಿಕ ನಾಯಕ ಕೂಡ.

ಒಂದರ್ಥದಲ್ಲಿ ವಿಶ್ವವ್ಯಾಪಿಯಾಗಿರುವ ಮೈಲಾರಲಿಂಗ, ದೇಶೀಯ ಮಾತ್ರವಲ್ಲದೇ ವಿದೇಶಿ ವಿದ್ವಾಂಸರ ಸಂಶೋಧನೆಗೂ ಆಕರ. ಶಂಬಾ ಜೋಶಿ, ಪಿ.ಬಿ.ದೇಸಾಯಿ, ರಾ.ಚಿಂ. ಢೇರೆ, ಎಂ.ಎಂ. ಕಲಬುರ್ಗಿ, ಎಂ.ಚಿದಾನಂದಮೂರ್ತಿ, ಜಿ.ಶಂ.ಪರಮಶಿವಯ್ಯ, ಹಿ.ಚಿ.ಬೋರಲಿಂಗಯ್ಯ, ಎಂ.ಬಿ. ನೇಗಿನಹಾಳ, ಪುರುಷೋತ್ತಮ ಬಿಳಿಮಲೆ, ಮಂಜುನಾಥ ಬೇವಿನಕಟ್ಟೆ ಮೊದಲಾದ ವಿದ್ವಾಂಸರು ಮೈಲಾರಲಿಂಗ ಪರಂಪರೆಯನ್ನು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಿಂದಗಿಯ ಡಾ.ಮಹಾದೇವಪ್ಪ ಮಲ್ಲಪ್ಪ ಪಡಶೆಟ್ಟಿ ಕುರುಬರ ಗುರುಪರಂಪರೆಯ ಕೊಂಡಿಯಾಗಿರುವ ‘ಒಡೆಯರು’ ಕುರಿತು ಪ್ರಕಟಿಸಿರುವ ‘ಹೇಳಕಿ ಮಾಡ್ಯಾರ ಒಡೆಯರು’ ಕಿರುಗ್ರಂಥ ಮಹತ್ವದ್ದು.

ಏಳನೆಯ ಹಾಲುಮತ ಸಂಸ್ಕೃತಿ ಸಮ್ಮೇಳನಾಧ್ಯಕ್ಷರಾಗಿ ಪಡಶೆಟ್ಟಿ ಅವರು ಆಡಿರುವ ಮಾತುಗಳಲ್ಲಿ ಮೈಲಾರಲಿಂಗನ ಕ್ಷೇತ್ರಗಳ ಪರಿವೀಕ್ಷಣೆಯ ಅಗತ್ಯವನ್ನು ಮನಗಾಣಿಸುತ್ತಾರೆ. ಕುರುಬ ಸಮುದಾಯದ ಮುಖ್ಯ ಆರಾಧ್ಯ ದೈವವಾಗಿದ್ದರೂ ಮೈಲಾರಲಿಂಗ ಜಾತಿ, ಮತ, ಪಂಥಗಳನ್ನು ಮೀರಿದ ವಿಶಿಷ್ಟ ದೈವ. ಅಂತೆಯೇ ಮೈಲಾರನ ಭಕ್ತರಲ್ಲಿ ಗೊರವರಿಗೆ ವಿಶೇಷ ಸ್ಥಾನವಿದೆ. ಸ್ಥಾವರ ಮೈಲಾರನ ಜಂಗಮ ಪ್ರತಿನಿಧಿಗಳಾಗಿರುವ ಗೊರವರು ಕಾರಣಿಕೋತ್ಸವದ ಮುಖ್ಯ ಆಕರ್ಷಣೆ. ಇವರ ಹೇಳಿಕೆಗಳನ್ನು ದೇವರ ಹೇಳಿಕೆಗಳೆಂದೇ ಭಕ್ತರು ನಂಬುತ್ತಾರೆ.

ಹೀಗೆ ಮೈಲಾರಲಿಂಗನ ಪರಂಪರೆಯ ಚರಿತ್ರೆ, ಇತಿಹಾಸದ ಒಳನೋಟಗಳನ್ನು ಕಟ್ಟಿಕೊಡುವ ಈ ಕೃತಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನೂ ಜಿಜ್ಞಾಸೆಗೊಳಪಡಿಸುತ್ತದೆ. ಮೈಲಾರಲಿಂಗ ಪರಂಪರೆಯಲ್ಲಿ ಕಾವ್ಯ–ಪುರಾಣ, ಕಲೆ–ವಾಸ್ತುಶಿಲ್ಪ, ಜಾತ್ರೆ–ಉತ್ಸವ, ಪಂಥ–ಪ್ರಭಾವ–ಪರಂಪರೆ, ಬಳ್ಳಾರಿ ಪರಿಸರದ ಕುರುಬರ ಸಂಸ್ಕೃತಿಯನ್ನು ಕೃತಿ ವಿವರವಾಗಿ ಕಟ್ಟಿಕೊಟ್ಟಿದೆ.

ಮೈಲಾರಲಿಂಗನ ಕುರಿತು ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಕೈಗೊಂಡ ಅಧ್ಯಯನದ ವಿವರಗಳನ್ನು ಈ ಕೃತಿ ಮುನ್ನೆಲೆಗೆ ತಂದಿದೆ. ತಳಸಮುದಾಯದ ಸಾಂಸ್ಕೃತಿಕ ಮತ್ತು ಧಾರ್ಮಿಕ ನಾಯಕರನ್ನು ಇತಿಹಾಸ ಮರೆತಿರುವಾಗ ಅಂಥವರನ್ನು ಸಾಂಸ್ಕೃತಿಕವಾಗಿ ಅಧ್ಯಯನ ಮಾಡುವ ಜರೂರತ್ತನ್ನು ಈ ಕೃತಿ ಮನಗಾಣಿಸುತ್ತದೆ. ಕನ್ನಡ ಕಾವ್ಯ, ಶಾಸನ ಹಾಗೂ ಮೌಖಿಕ ಪಠ್ಯಗಳನ್ನು ಮರುವಿಶ್ಲೇಷಣೆಗೆ ಒಳಪಡಿಸುವ ಅಗತ್ಯವನ್ನು ಕೃತಿ ಸಾರುತ್ತದೆ. ಲೇಖನಗಳಿಗೆ ಅನುಗುಣವಾಗಿ ಅಲ್ಲಲ್ಲಿ ಚಿತ್ರಗಳನ್ನೂ ಪ್ರಕಟಿಸಿದ್ದರೆ ಕೃತಿಯ ಮೌಲ್ಯ ಮತ್ತಷ್ಟು ವರ್ಧಿಸುತ್ತಿತ್ತು.

ಸಾಮಾನ್ಯವಾಗಿ ಸಮುದಾಯವೊಂದರ ಅಧ್ಯಯನ ಮಾಡುವಾಗ ಇತಿಹಾಸಕ್ಕೆ ಒತ್ತುಕೊಡುವ ಪರಿಪಾಠ ಸಹಜ. ಆದರೆ, ‘ಮೈಲಾರಲಿಂಗ ಪರಂಪರೆ’ ಕೃತಿ, ಆ ಚೌಕಟ್ಟನ್ನು ದಾಟಿ ಸಮುದಾಯವೊಂದರ ಭೂತದ ಜತೆಗೆ ವರ್ತಮಾನ ಮತ್ತು ಭವಿಷ್ಯದ ನೋಟಗಳನ್ನೂ ಕಟ್ಟಿಕೊಡುವಲ್ಲಿ ಸಫಲವಾಗಿದೆ. ಹಾಲುಮತ ಪರಂಪರೆಯ ಕುರಿತು ಅಧ್ಯಯನ ನಡೆಸುವವರಿಗೆ ಈ ಕೃತಿ ಉತ್ತಮ ಆಕರ ಗ್ರಂಥವಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.