ADVERTISEMENT

ಸಾಕಾರದತ್ತ ಕೃತಕ ಬುದ್ಧಿಮತ್ತೆ ಕಾರು

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಸೆಪ್ಟೆಂಬರ್ 2019, 7:32 IST
Last Updated 19 ಸೆಪ್ಟೆಂಬರ್ 2019, 7:32 IST
   

ಮರ್ಸಿಡೀಸ್ ಬೆಂಜ್‌ನ ಒಂದು ಸಣ್ಣ ವಿಡಿಯೊ ತುಣುಕು ಇತ್ತೀಚೆಗೆ ತೀವ್ರ ಆಸಕ್ತಿ ಮೂಡಿಸುವಂತಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೊ ತುಣುಕಿನಲ್ಲಿ ಕಾರೊಂದು ಕತ್ತಲಿನಲ್ಲಿ ಸಾಗುತ್ತಿರುತ್ತದೆ. ಅಚಾನಕ್ಕಾಗಿ ವ್ಯಕ್ತಿಯೊಬ್ಬರು ರಸ್ತೆ ದಾಟಲು ಮುಂದಾಗುತ್ತಾರೆ. ತಕ್ಷಣ ನಿಲ್ಲುವ ಕಾರು, ತನ್ನ ಹೆಡ್‌ಲೈಟ್‌ ಮೂಲಕ ಝೀಬ್ರಾಕ್ರಾಸ್‌ ಅನ್ನು ರಸ್ತೆ ಮೇಲೆ ಮೂಡಿಸುತ್ತದೆ. ನಂತರ ತುಸು ಮುಂದಕ್ಕೆ ಹೋಗುತ್ತ, ಮುಂದೆ ಎಲ್ಲಿ ತಿರುವು ತೆಗೆದುಕೊಳ್ಳಬೇಕು ಎಂಬುದೂ ಹೆಡ್‌ಲೈಟ್ ಮುಲಕವೇ ರಸ್ತೆ ಮೇಲೆ ಮಾರ್ಗದರ್ಶನ ಮಾಡುತ್ತದೆ.

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ, ಹೆಡ್‌ಲೈಟ್‌ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಅದನ್ನು ಜನೋಪಯೋಗಿ ಬಳಕೆಗೆ ಅಭಿವೃದ್ಧಿಪಡಿಸಿರುವುದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಭಾರತದಲ್ಲಿ ಸದ್ಯದ ಆಟೊಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಸಂಕ್ರಮಣ ಕಾಲದಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ಕುರಿತು ಬಹಳಷ್ಟು ಕಾರು ತಯಾರಿಕಾ ಕಂಪನಿಗಳು ನಿರಂತರ ಸಂಶೋಧನೆ ಕೈಗೊಳ್ಳುತ್ತಲೇ ಇವೆ. ಕೃತಕ ಬುದ್ಧಿಮತ್ತೆಯನ್ನೂ ಬಳಸಿಕೊಂಡು ಹೊಸ ಸಾಧ್ಯತೆ ಕಡೆ ಹೊರಳುವ ಮುನ್ಸೂಚನೆಯನ್ನೂ ನೀಡಿವೆ.

ಕೃತಕ ಬುದ್ಧಿಮತ್ತೆ ಬಳಕೆ ಕುರಿತು ದಶಕದ ಹಿಂದೆ ಭಯದ ಭಾವ ಎಲ್ಲರಲ್ಲೂ ಇತ್ತು. ಮನುಷ್ಯನ ಅಗತ್ಯವೇ ಇಲ್ಲದೆ, ಎಲ್ಲವನ್ನೂ ಯಂತ್ರವೇ ನಿಯಂತ್ರಿಸುವುದನ್ನು ಒಪ್ಪಿಕೊಳ್ಳಲು ಹಿಂಜರಿಕೆಯೂ ಇತ್ತು. ಆದರೆ, ಕಾಲಚಕ್ರ ಉರುಳಿದಂತೆ ಅಂತಹ ತಂತ್ರಜ್ಞಾನ ಎಂದು ಬರುವುದೋ ಎಂದು ಎದುರು ನೋಡುವಂತಾಗಿದೆ. ತೊಡೆಮೇಲೆ ಲ್ಯಾಪ್‌ಟಾಪ್‌, ಒಂದು ಕೈಯಲ್ಲಿ ಮೊಬೈಲ್, ಮತ್ತೊಂದರಲ್ಲಿ ಟ್ಯಾಬ್‌ ಹೀಗೆ ದುಡಿಮೆಗೆ ಎರಡು ಕೈಗಳೂ ಸಾಲದು ಎಂಬ ಕಾಲದಲ್ಲಿ, ಸ್ವಯಂ ಚಾಲಿತ, ಬಹೂಪಯೋಗಿ ಕಾರುಗಳ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.

ADVERTISEMENT

ಚಾಲಕರ ರಹಿತ ಕಾರು, ಸಂಭಾಷಣೆ ಮೂಲಕ ಸಂಚರಿಸುವ ಕಾರುಗಳು ಇಂದಿನ ಸಾಮಾನ್ಯ ಚರ್ಚೆ ಎನ್ನುವಂತಾಗಿದೆ. ಈಗಾಗಲೇ ಬಹಳಷ್ಟು ಕಂಪನಿಗಳು ಈ ನಿಟ್ಟಿನಲ್ಲಿ ತಮ್ಮ ಪ್ರಯೋಗಗಳನ್ನು ಆರಂಭಿಸಿ, ಭಾಗಶಃ ಯಶಸ್ವಿಯೂ ಆಗಿವೆ. ಕೆಲವು ಕಂಪನಿಗಳು ಇವುಗಳನ್ನು ಜಾರಿಗೂ ತಂದಿವೆ. ಭಾರತದಲ್ಲಿ ಇನ್ನಷ್ಟೇ ಇದು ಪರಿಚಯಗೊಳ್ಳಬೇಕಿದೆ. ಅದಕ್ಕೆ ಕಾಲವೂ ಪಕ್ವವಾಗಿವೆ ಎಂದು ಪರಿಣತರು ಹೇಳುತ್ತಿದ್ದಾರೆ.

ಚಾಲಕ ರಹಿತ ಕಾರು
ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಹಾಗೂ ರಸ್ತೆಯ ಎಲ್ಲಾ ಮಾಹಿತಿಯನ್ನು ಅರಿತ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಿದು. ವಾಹನದಟ್ಟಣೆಯ ಪ್ರಮಾಣವನ್ನು ಅರಿತು, ಸಿಗ್ನಲ್ ದೀಪವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ವೇಗವನ್ನು ಹೆಚ್ಚುಕಡಿಮೆ ಮಾಡಿಕೊಳ್ಳಬಲ್ಲ ತಂತ್ರಜ್ಞಾನ ಇದಾಗಿದೆ. ಹೀಗಾಗಿ ಮನುಷ್ಯ ಸುಲಭವಾಗಿ ಇದರ ಮೇಲೆ ಅವಲಂಬಿಸಬಹುದು. ಸದ್ಯ ನಾವೇ ಚಾಲನೆ ಮಾಡುತ್ತೇವಾದರೂ, ಪಕ್ಕದಲ್ಲಿ ಮೊಬೈಲ್‌ನಲ್ಲಿ ನ್ಯಾವಿಗೇಷನ್ ಮ್ಯಾಪ್ ತೆರೆದುಕೊಂಡು ಅದರಲ್ಲಿನ ಮಾಹಿತಿ ಅನ್ವಯ ಚಾಲನೆ ಮಾಡುತ್ತಿದ್ದೇವೆ. ಇದೇ ಕೆಲಸವನ್ನು ಕೃತಕಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ತಂತ್ರಾಂಶ ಮಾಡಲಿದೆ.

ಚಾಟ್‌ ಬೋಟ್ಸ್‌
ಚಾಲಕ ರಹಿತ ಕಾರಿನಲ್ಲಿ ಇರಬಹುದಾದ ಚಾಟ್‌ಬೋಟ್‌, ಪ್ರಯಾಣಿಕರೊಂದಿಗೆ ನಿರಂತರ ಸಂಭಾಷಣೆಯಲ್ಲೂ ತೊಡಗುತ್ತದೆ. ಉದಾಹರಣೆಗೆ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಯಾಣಿಕನನ್ನು ಹತ್ತಿಸಿಕೊಳ್ಳುವ ಕಾರು, ಆತನ ಪ್ರಯಾಣ ಹೇಗಿತ್ತು, ಮುಂದೆ ಯಾವ ಹೋಟೆಲಿಗೆ ಅವರನ್ನು ಕರೆದುಕೊಂಡು ಹೋಗಬೇಕು, ಎಸಿ ಹಾಕಬೇಕೆ, ಹೌದು, ಎಂದಾದರೆ ಎಷ್ಟು ಇರಬೇಕು. ಯಾವ ರೀತಿಯ ಸಂಗೀತ ಕೇಳುವ ಮನಸ್ಸಿದೆ ಇತ್ಯಾದಿ ಮಾಹಿತಿಯನ್ನು ಸಂಭಾಷಣೆ ಮೂಲಕ ಸಂಗ್ರಹಿಸಿ ಅದಕ್ಕೆ ತಕ್ಕಂತೆ ಕೆಲಸ ಮಾಡಲಿದೆ.

ಕೃತಕ ಬುದ್ಧಿಮತ್ತೆ ತಂತ್ರಾಂಶ ಅಭಿವೃದ್ಧಿಗೆ ಸಾಕಷ್ಟು ಮಾಹಿತಿ ಸಂಗ್ರಹ ಅಗತ್ಯ. ಇದನ್ನು ಮನುಷ್ಯರೇ ನೀಡಬೇಕು. ಇದರ ಜತೆಗೆ ಕೃತಕ ಬುದ್ಧಿಮತ್ತೆಗೆ ಸರಿಯಾದುದ್ದನ್ನೇ ಹೇಳಿಕೊಡಬೇಷ್ಟೇ.

ಈ ಬದಲಾವಣೆಗೆ ಭಾರತದಲ್ಲಿರುವ ಆಟೊಮೊಬೈಲ್ ಕಂಪನಿಗಳು ಸಿದ್ಧತೆ ಆರಂಭಿಸಿವೆ. ಇದಕ್ಕಾಗಿ ಜಾಗತಿಕ ಮಟ್ಟದ ಹಲವು ಐಟಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುವ ಅವು, ಶೀಘ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯ ಕಾರುಗಳನ್ನು ರಸ್ತೆಗಿಳಿಸುವ ತವಕದಲ್ಲಿವೆ. ಆ ಮೂಲಕ ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುವುದು ಅವುಗಳ ಮುಂದಿರುವ ಸವಾಲು.

ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಸಹಾಯದಿಂದ ಸಂಚರಿಸುವ ಸ್ವಯಂ ಚಾಲಿತ ಕಾರುಗಳಿಂದಾಗಿ ಭಾರತದಂತ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ಹೇಳಲಾಗುತ್ತಿದೆ. ಸಂಚಾರ ನಿಯಮಗಳನ್ನು ಸರಿಯಾಗಿ ಅಳವಡಿಸಿದಲ್ಲಿ, ದಟ್ಟಣೆ ಉಂಟಾಗದು ಎನ್ನುವುದು ತಜ್ಞರ ಅಭಿಪ್ರಾಯ.

ಈ ಹೊಸ ಸಾಧ್ಯತೆ ಕಡೆಗೆ ಫೋರ್ಡ್ ಮತ್ತು ಫೋಕ್ಸ್‌ವ್ಯಾಗನ್‌ ಜತೆಗೂಡಿ ₹ 49 ಸಾವಿರ ಕೋಟಿ ಹೂಡಿಕೆ ಮಾಡಿ, ಸ್ವಯಂ ಚಾಲಿತ ವಾಹದ ಅಭಿವೃದ್ಧಿಗೆ ಕೈಹಾಕಿವೆ. ಈ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಉಭಯ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂ ಚಾಲಿತ ಕಾರನ್ನು ಪರಿಚಯಿಸುವ ಉದ್ದೇಶ ಹೊಂದಿವೆ. ಹೋಂಡಾ ಕಂಪನಿಯು ಗೂಗಲ್‌ನ ಮೂಲ ಸಂಸ್ಥೆಯಾದ ಆಲ್ಪಬೆಟ್‌ನ ವೇಮೊ ಜತೆಗೂಡಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 2020ರ ಹೊತ್ತಿಗೆ ಚಾಲಕ ರಹಿತ ಕಾರು ಪರಿಚಯಿಸುವುದು ಇದರ ಉದ್ದೇಶ. ಇದರ ಜತೆಯಲ್ಲೇ ಜನರಲ್‌ ಮೋಟರ್ಸ್‌ ಜತೆಗೂಡಿ ಇಂಥದ್ದೇ ಸಾಧ್ಯತೆಯತ್ತ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ₹ 5,250 ಕೋಟಿ ಹೂಡಿಕೆಗೂ ಮುಂದಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

2025ರೊಳಗೆ ಸಂಪೂರ್ಣ ಚಾಲಕ ರಹಿತ ಕಾರು ಅಭಿವೃದ್ಧಿ ಇದರ ಉದ್ದೇದಿಂದ ರೆನೊ ಮತ್ತು ನಿಸಾನ್ ಕಂಪನಿಗಳು ಜತೆಗೂಡಿ ಮೈಕ್ರೊಸಾಫ್ಟ್ ಜತೆಗೂಡಿ ಕೆಲಸ ಮಾಡುತ್ತಿವೆ. ಕೃತಕ ಬುದ್ಧಿಮತ್ತೆಗೆ ಭಾರಿ ಪ್ರಮಾಣದ ಮಾಹಿತಿ ಒದಗಿಸುವುದೇ ಅತಿದೊಡ್ಡ ಕೆಲಸ. ಅದನ್ನು ಸರಿಯಾದ ಸಮಯಕ್ಕೆ ಅನುಷ್ಠಾನಕ್ಕೆ ತರುವ ಚಾಕಚಕ್ಯತೆಯನ್ನು ಅಳವಡಿಸುವುದು ಸವಾಲಿನ ಕೆಲಸವೇ ಸರಿ. ಅದರಲ್ಲೂ ವೇಗವಾಗಿ ಚಲಿಸುವ ವಾಹನಗಳಲ್ಲಿ ತುಸುವೇ ಏರುಪೇರಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಿದ್ದರೂ ಕೃತಕ ಬುದ್ಧಿಮತ್ತೆ ಮೂಲಕ ಜಿಪಿಎಸ್‌ ವೀಕ್ಷಣೆ, ಕ್ರೂಸ್ ಕಂಟ್ರೋಲ್‌ನ ಯೋಜನಾ ಬದ್ಧ ಬಳಕೆ, ಪ್ರಯಾಣಿಕರನ್ನು ಎಚ್ಚರಿಸುವ ವ್ಯವಸ್ಥೆ, ಸ್ವಯಂಚಾಲಿಕ ಬ್ರೇಕಿಂಗ್ ವ್ಯವಸ್ಥೆ ಇತ್ಯಾದಿ ಕೃತಕ ಬುದ್ಧಿಮತ್ತೆ ಮೂಲಕವೇ ಆಗಲಿದೆ. ಇಷ್ಟು ಮಾತ್ರವಲ್ಲ, ಎರಡು ಬಗೆಯ ಇಂಧನ ಚಾಲಿತ (ಹೈಬ್ರಿಡ್‌) ಕಾರುಗಳಲ್ಲಿ, ಯಾವ ಸಂದರ್ಭದಲ್ಲಿ ಯಾವ ಇಂಧನ ಬಳಸಬೇಕು ಎಂಬುದನ್ನೂ ಕೃತಕ ಬುದ್ಧಿಮತ್ತೆಯೇ ನಿರ್ಧರಿಸಲಿದೆ.

ಹೀಗೆ ಕೃತಕ ಬುದ್ಧಿಮತ್ತೆಯ ಆಲ್ಗಾರಿದಮ್‌ ಮೂಲಕ ವಾಹನ ಪ್ರಪಂಚ ಹೊಸತಿನೆಡೆಗೆ ಹೊರಳುತ್ತಿದೆ. ಚೀನಾ, ಅಮೆರಿಕ, ಯುರೋಪ್‌ನ ಕೆಲ ರಾಷ್ಟ್ರಗಳಲ್ಲಿ ಈಗಾಗಲೇ ಇಂಥ ಬಗೆಯ ಕಾರುಗಳು ಬಳಕೆಯಲ್ಲಿದ್ದು, ಬೇಡಿಕೆಯೂ ಹೆಚ್ಚಿದೆ. ಭಾರತದಲ್ಲೂ ಇಂಥ ಕೃತಕ ಬುದ್ಧಿಯುಳ್ಳ ಕಾರುಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದನ್ನು ಕಾದುನೋಡಬೇಕಿದೆ. ಈ ನಿಟ್ಟಿನಲ್ಲಿ 2020ರಲ್ಲಿ ನವದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನ ಮೇಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.