ADVERTISEMENT

PV Web Exclusive: ಛಾಬ್ರಿಯಾ ವಿರುದ್ಧ ‘ಚಾರ್‌ಸೋ ಬೀಸ್‌’ ಏಕೆ?

‘ಡಿಸಿ’ ವಿರುದ್ಧ 420 ಪ್ರಕರಣ ಯಾಕೆ?

ಇ.ಎಸ್.ಸುಧೀಂದ್ರ ಪ್ರಸಾದ್
Published 6 ಜನವರಿ 2021, 11:34 IST
Last Updated 6 ಜನವರಿ 2021, 11:34 IST
ಡಿಸಿ ಅವಂತಿ
ಡಿಸಿ ಅವಂತಿ   

ಮುಂಬೈನಲ್ಲಿ ಖರೀದಿಸುವ ಕಾರುಗಳ ಮೂಲ ಕಂಪನಿಯ ಲಾಂಛನಗಳಿಗಿಂತ ಅದರ ಜಾಗದಲ್ಲಿ ಡಿಸಿ ಎಂಬ ಲಾಂಛನವಿದ್ದರೆ ಅದರ ಘನತೆ ಹೆಚ್ಚು ಎಂದು ಈಗಲೂ ನಂಬಲಾಗುತ್ತದೆ. ಆದರೆ ಅದರ ಹಿಂದಿನ ಶಿಲ್ಪಿ ವಿರುದ್ಧ ಈಗ ಭಾರತೀಯ ದಂಡ ಸಂಹಿತೆ 420, 465, 467, 468, 471, 120 ಬಿ ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

16 ವರ್ಷಗಳ ಹಿಂದೆ ತೆರೆಕಂಡ ‘ಟಾರ್ಜನ್ ದಿ ವಂಡರ್‌ ಕಾರ್‘ ಸಿನಿಮಾ ನೋಡದವರು ವಿರಳ. ಅಜಯ್ ದೇವಗನ್, ವತ್ಸಲ್ ಸೇಥ್, ಆಯೇಷಾ ಠಾಕಿಯಾರಂತ ತಾರಾಗಣವಿದ್ದರೂ, ಆ ಚಿತ್ರದಲ್ಲಿ ನಾಯಕನ ಸ್ಥಾನ ನಿಭಾಯಿಸಿದ್ದು ಟಾರ್ಜನ್ ಎಂಬ ಆ ಸ್ಪೋರ್ಟ್ಸ್‌ ಕಾರು. ಅಬ್ಬಾಸ್ ಮಸ್ತಾನ್ ನಿರ್ದೇಶನಕ್ಕಿಂತಲೂ ಆ ಕಾರು ಸಿದ್ಧಪಡಿಸಿದ ದಿಲೀಪ್‌ ಛಾಬ್ರಿಯಾ ಅಲಿಯಾಸ್ ಡಿಸಿ ಕುರಿತ ಚರ್ಚೆಗಳೇ ಹೆಚ್ಚಾಗಿತ್ತು. ಆದರೆ ಅಂಥ ವಿನ್ಯಾಸಕಾರ ವಂಚನೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವುದು ವಾಹನ ಕ್ಷೇತ್ರ ಮಾತ್ರವಲ್ಲ, ಹಣಕಾಸು ಸಂಸ್ಥೆಯಲ್ಲೂ ತೀವ್ರ ಚರ್ಚಿತ ವಿಷಯವಾಗಿದೆ.

ಕಾರು ವಿನ್ಯಾಸದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ‘ಡಿಸಿ’ ದಿಲೀಪ್ ಛಾಬ್ರಿಯಾ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು. ಹೀಗೇ ಒಮ್ಮೆ ಕಾರುಗಳ ನಿಯತಕಾಲಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದಾಗ ಕಂಡ ಒಂದು ಜಾಹಿರಾತು ಇವರನ್ನು ವಾಹನಕ್ಷೇತ್ರದೆಡೆ ಕರೆತಂದಿತು. ತಕ್ಷಣವೇ ಅಮೆರಿಕಾಕ್ಕೆ ತೆರಳಿ ವಿನ್ಯಾಸ ಕುರಿತು ತರಬೇತಿ ಪಡೆದರು. ಅಮೆರಿಕದ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಜನರಲ್ ಮೋಟಾರ್ಸ್‌ನಲ್ಲಿ ನೌಕರಿಯನ್ನು ಗಿಟ್ಟಿಸಿಕೊಂಡರು. ಆದರೆ ಭಾರತದಲ್ಲಿ ತನ್ನ ನೈಪುಣ್ಯತೆ ತೋರಿಸಬೇಕು ಎಂಬ ಮಹದಾಸೆಯಿಂದ ವಿನ್ಯಾಸ ಘಟಕವನ್ನು ಆರಂಭಿಸಿದರು. ಇಲ್ಲಿ ಇವರ ಕೈಯಲ್ಲಿ ಹೊಸರೂಪ ಪಡೆದ ಪ್ರೀಮಿಯರ್ ಪದ್ಮಿನಿ ಮೂರು ದಶಕಗಳ ಹಿಂದೆ ಬಹುದೊಡ್ಡ ಸುದ್ದಿ.

ADVERTISEMENT

ಆನಂತರ ಛಾಬ್ರಿಯಾ ಹಿಂದೆ ನೋಡಿದ್ದೇ ಇಲ್ಲ. ಕೈನೆಟಿಕ್ ಎಂಜಿನಿಯಿರಿಂಗ್‌ ಕಂಪನಿಯ ಜತೆ ಹೊಸ ಸ್ಕೂಟರ್ ವಿನ್ಯಾಸ, ದುಬೈನಲ್ಲಿ ಕಾರುಗಳ ವ್ಯಕ್ತಿಗತ ವಿನ್ಯಾಸ ಘಟಕ, ಮಹೀಂದ್ರಾ ಕಂಪನಿಯ ರೇವಾ ಎನ್‌ಎಕ್ಸ್‌ಆರ್ ಕಾರಿನ ವಿನ್ಯಾಸದ ಮೂಲಕ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದರು. ಇವರ ಕೈಚಳಕದಲ್ಲಿ ವಿಲಾಸಿ ರೂಪ ಪಡೆದದ್ದು ಕಾರುಗಳು ಮಾತ್ರವಲ್ಲ, ಬಸ್ಸು ಹಾಗೂ ವಿಮಾನಗಳು ಐಷಾರಾಮಿ ಸ್ವರೂಪ ಪಡೆದವು. ‘ಡಿಸಿ’ ಎಂದರೆ ವಿಲಾಸಿ ಎನ್ನುವಷ್ಟರಮಟ್ಟಿಗೆ ಜನಪ್ರಿಯತೆ ಸಾಧಿಸಿದರು. ಬೆಂಗಳೂರಿನ ಕೋರಮಂಗಲವೂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವರ ವಿನ್ಯಾಸ ಮಳಿಗೆಗಳನ್ನು ತೆರೆದರು.

ಇಷ್ಟೆಲ್ಲಾ ಸಾಧಿಸಿದ ಛಾಬ್ರಿಯಾ ಜೈಲು ಸೇರಿದ್ದೇಕೆ?

ಛಾಬ್ರಿಯಾಗೆ ಈಗ 68ರ ಇಳಿ ವಯಸ್ಸು. ಹಲವು ಕಂಪನಿಗಳ ಕಾರುಗಳಿಗೆ ಹೊಸರೂಪ ನೀಡುತ್ತ, ಮೂಲ ವಿನ್ಯಾಸವನ್ನೇ ಮರೆಸುತ್ತಿದ್ದ ಇವರಿಗೆ ತಮ್ಮದೇ ವಿನ್ಯಾಸದ ಕಾರು ರಸ್ತೆಗಿಳಿಸುವ ಇಂಗಿತವಿತ್ತು. ಹೀಗಾಗಿಯೇ ಸಾಕಷ್ಟು ಸಂಶೋಧನೆ ನಂತರ ‘ಡಿಸಿ ಅವಂತಿ’ ಎಂಬ ಕಾರನ್ನು 2016ರಲ್ಲಿ ರಸ್ತೆಗಿಳಿಸಿದರು. ಇದಕ್ಕೆ ಭಾರತೀಯ ವಾಹನ ಸಂಶೋಧನಾ ಒಕ್ಕೂಟದ ಅನುಮತಿಯನ್ನೂ ಪಡೆದರು. ದೇಶ ವಿದೇಶಗಳಲ್ಲಿ ಇವರ ಸುಮಾರು 120 ಅವಂತಿ ಕಾರುಗಳು ರಸ್ತೆಗಿಳಿದಿವೆ. ಎರಡೇ ಆಸನಗಳ ಈ ಸ್ಪೋರ್ಟ್ಸ್ ಕಾರಿನ ಬೆಲೆ ₹35ಲಕ್ಷ.

ಭಾರತದಲ್ಲಿ ಅಭಿವೃದ್ಧಿಗೊಂಡ ಮೊದಲ ಸ್ಪೋರ್ಟ್ಸ್ ಕಾರು ಡಿಸಿ ಅವಂತಿ. ಎರಡು ಆಸನಗಳ ಈ ಕಾರು, ರಿನೊ ಕಂಪನಿಯ 2.0 ಲೀ ಸಾಮರ್ಥ್ಯದ 4 ಸಿಲೆಂಡರ್‌ವುಳ್ಳ ಟರ್ಬೋಚಾರ್ಚ್‌ ಪೆಟ್ರೋಲ್ ಎಂಜಿನ್ ಹೊಂದಿತ್ತು. 180 ಅಶ್ವಶಕ್ತಿ ಹಾಗೂ 340 ಎನ್‌ಎಂ ಟಾರ್ಕ್‌ ಉತ್ಪತ್ತಿ ಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. ಪ್ರತಿಗಂಟೆಗೆ 0ಯಿಂದ 100 ಕಿ.ಮೀ, ವೇಗ ತಲುಪಲು ಇದು ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ 6 ಸೆಕೆಂಡ್‌ಗಳು.

ಆದರೆ ಹೀಗೆ ಸಾಧನೆ ಮತ್ತು ಜನಪ್ರಿಯತೆ ಉತ್ತುಂಗದಲ್ಲಿದ್ದ ಛಾಬ್ರಿಯಾ ಹಣಗಳಿಕೆಯ ಅನ್ಯಮಾರ್ಗವನ್ನು ಆಯ್ದುಕೊಂಡರು ಎಂಬ ಆರೋಪದ ಮೇಲೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಕಾರುಗಳನ್ನು ಎರೆಡೆರಡು ಕಡೆ ನೋಂದಣಿ ಮಾಡಿಸಿ, ಅದಕ್ಕೆ ಎರಡೂ ಕಡೆ ಸಾಲವನ್ನು ಪಡೆದು, ಅದನ್ನು ಮರುಪಾವತಿಸದೆ ಮರಳಿ ಅದೇ ಕಾರನ್ನು ಬೇರೊಬ್ಬರಿಗೆ ಮಾರಾಟ ಮಾಡುವ ದೊಡ್ಡ ಜಾಲವನ್ನು ಛಾಬ್ರಿಯಾ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇದಕ್ಕಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿಲ್ಲದ ಹಣಕಾಸು ಸಂಸ್ಥೆಗಳನ್ನೇ ಆಯ್ಕೆಮಾಡಿಕೊಂಡು ಸಾಲ ಪಡೆದು ಮರುಪಾವತಿಸಿಲ್ಲ. ಈ ವಂಚನೆಯ ಒಟ್ಟು ಮೊತ್ತ ಬರೊಬ್ಬರಿ ₹100ಕೋಟಿ ಎಂದೆನ್ನಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬಂದಿದ್ದಾದರೂ ಹೇಗೆ?

ತಮಿಳುನಾಡಿನಲ್ಲಿ ನೋಂದಣಿಯಾದ ಕಾರೊಂದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿಕೊಂಡಿತ್ತು. ಅಲ್ಲಿನ ಪೊಲೀಸರು ಚಾಲಕನಿಗೆ ದಂಡ ವಿಧಿಸುವ ಸಮಯದಲ್ಲಿ ಇದೇ ಕಾರು ಹರಿಯಾಣದಲ್ಲೂ ನೋಂದಣಿಯಾಗಿರುವುದನ್ನು ‘ವಾಹನ್’ ಜಾಲತಾಣದ ಮೂಲಕ ಪತ್ತೆ ಮಾಡಿದ್ದರು. ಇದು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ಮುಂಬೈನ್ ನರಿಮನ್ ಪಾಯಿಂಟ್, ಕೊಲಾಬಾದ ತಾಜ್‌ ಹೋಟೆಲ್ ಬಳಿಯೂ ಡಿಸಿ ಕಾರುಗಳನ್ನು ತಡೆದಿದ್ದ ಪೊಲೀಸರು ಎರಡು ಕಡೆ ನೋಂದಣಿಯಾಗಿರುವುದನ್ನು ಪತ್ತೆ ಮಾಡಿದ್ದರು.

ಒಂದೇ ಚಾಸೀಸ್ ಸಂಖ್ಯೆಯ ಕಾರು ಎರಡು ನೋಂದಣಿ ಸಂಖ್ಯೆ ಹೊಂದುವಂತಿಲ್ಲ ಎಂಬುದು ನಿಯಮ. ಆದರೆ ಅದನ್ನು ಯಾಮಾರಿಸಲಾಗಿತ್ತು. ಹೀಗೆ ಎರಡು ರಾಜ್ಯಗಳಲ್ಲಿ ನೋಂದಣಿಯಾಗಿದ್ದು ಒಂದೋ ಅಥವಾ ಎರಡೋ ಕಾರುಗಳಲ್ಲ. ಬರೋಬ್ಬರಿ 90 ಕಾರುಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಕಾರು ದಿಲೀಪ್ ಛಾಬ್ರಿಯಾ ಅವರ ಕಂಪನಿಯಲ್ಲಿ ತಯಾರಾಗಿದ್ದು ಎಂಬುದನ್ನು ಮೊದಲು ಪತ್ತೆ ಮಾಡಿದರು. ನಂತರ ಪ್ರಕರಣದ ತನಿಖೆ ಮುಂಬೈ ಪೊಲೀಸರು ವಹಿಸಿಕೊಂಡರು. ತನಿಖೆಯಲ್ಲಿ ಸಾಲ ನೀಡಿದವರಲ್ಲಿ 3ರಿಂದ 4 ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒಳಪಡದ ಹಣಕಾಸು ಸಂಸ್ಥೆಗಳನ್ನು ಹುಡುಕಿದರು. ಅದೂ ಅಲ್ಲದೇ ಕಾರು ನೋಂದಣಿಗೂ ಪೂರ್ವದಲ್ಲೇ ಸಾಲ ಮಂಜೂರಾಗಿರುವುದೂ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಇಲ್ಲಿ ದಿಲೀಪ್ ಛಾಬ್ರಿಯಾ ಅವರೊಂದಿಗೆ ಇಂಥ ಹಣಕಾಸು ಸಂಸ್ಥೆಗಳಲ್ಲಿನ ಕೆಲವರೂ ಕೈಜೋಡಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇಷ್ಟು ಮಾತ್ರವಲ್ಲ, ಈ ಕಾರಿನಲ್ಲಿ ಅಳವಡಿಸಲಾಗಿರುವ ಎಂಜಿನ್‌ ಆಮದು ಮಾಡಿಕೊಂಡಿದ್ದು. ಭಾರತದಲ್ಲಿ ಮಾರಾಟವಾಗುವ ಬೆಲೆಗಿಂತ ಕೆಲ ದೇಶಗಳಲ್ಲಿ ಕಡಿಮೆ ಬೆಲೆಗೆ ಈ ಕಾರುಗಳು ಮಾರಾಟವಾಗಿವೆ. ಹೀಗಾಗಿ ಅಬಕಾರಿ ಸುಂಕದಲ್ಲೂ ವಂಚನೆಯಾಗಿದೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

ಛಾಬ್ರಿಯಾ ವಿರುದ್ಧ ಪ್ರಕರಣಗಳಿದ್ದವೇ?

ದಿಲೀಪ್ ಛಾಬ್ರಿಯಾ ವಿರುದ್ಧ ಈ ಹಿಂದೆ ಇಂಥ ಯಾವುದೇ ಪ್ರಕರಣಗಳೂ ದಾಖಲಾಗಿರಲಿಲ್ಲ. ಆದರೆ 2015ರಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಡಿಸಿ ಕಾರು ಕಾಯ್ದಿರಿಸಿದ್ದರು. ನಂತರ ಟೆಸ್ಟ್‌ ಡ್ರೈವ್ ನಡೆಸಿ ತಮ್ಮ ಅಪೇಕ್ಷೆಗೆ ತಕ್ಕಂತಿಲ್ಲ ಎಂದು ಮುಂಗಡ ಹಣ ₹5ಲಕ್ಷ ಪಾವತಿಸುವಂತೆ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಕಾರುಗಳಿಗೆ ಹಣ ನೀಡಿದ ಬಿಎಂಡಬ್ಲೂ ಹಣಕಾಸು ಸಂಸ್ಥೆ ಮೂಲಕ 41 ಕಾರುಗಳಿಗೆ ಸಾಲ ಪಡೆಯಲಾಗಿದೆ. ಇವುಗಳಲ್ಲಿ 16 ಕಾರುಗಳು ಆರ್‌ಟಿಒ ನಲ್ಲಿ ನೋಂದಣಿಯೇ ಆಗಿರಲಿಲ್ಲ. ಪ್ರತಿ ನೋಂದಣಿಗೂ ಹೊಸ ಸಾಲವನ್ನು ಪಡೆಯಲಾಗುತ್ತಿತ್ತು ಎಂದೆನ್ನಲಾಗಿದೆ.

ಮುಂಬೈನಲ್ಲಿ ಖರೀದಿಸುವ ಕಾರುಗಳ ಮೂಲ ಕಂಪನಿಯ ಲಾಂಛನಗಳಿಗಿಂತ ಅದರ ಜಾಗದಲ್ಲಿ ಡಿಸಿ ಎಂಬ ಲಾಂಛನವಿದ್ದರೆ ಅದರ ಘನತೆ ಹೆಚ್ಚು ಎಂದು ಈಗಲೂ ನಂಬಲಾಗುತ್ತದೆ. ಆದರೆ ಅದರ ಹಿಂದಿನ ಶಿಲ್ಪಿ ವಿರುದ್ಧ ಈಗ ಭಾರತೀಯ ದಂಡ ಸಂಹಿತೆ 420, 465, 467, 468, 471, 120 ಬಿ ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಛಾಬ್ರಿಯಾರನ್ನು ಬಂಧಿಸಿದ ಪೊಲೀಸರು ಹಲವಾರು ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಆದರೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ವ್ಯಕ್ತಿಯೊಬ್ಬರು ದಿಢೀರ್ ಬಂಧನಕ್ಕೊಳಗಾಗಿದ್ದು ಅವರ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.