ADVERTISEMENT

ಮಾರುತಿ ಸುಜುಕಿಗೆ ₹ 200 ಕೋಟಿ ದಂಡ ವಿಧಿಸಿದ ಸ್ಪರ್ಧಾ ಆಯೋಗ

ಪಿಟಿಐ
Published 23 ಆಗಸ್ಟ್ 2021, 15:53 IST
Last Updated 23 ಆಗಸ್ಟ್ 2021, 15:53 IST

ನವದೆಹಲಿ: ಡೀಲರ್‌ಗಳು ನೀಡುವ ರಿಯಾಯಿತಿಯ ಮೇಲೆ ನಿರ್ಬಂಧ ಹೇರಿದ್ದಕ್ಕೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ (ಎಂಎಸ್‌ಐಎಲ್‌) ಕಂಪನಿಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಸೋಮವಾರ ₹ 200 ಕೋಟಿ ದಂಡ ವಿಧಿಸಿದೆ. ನ್ಯಾಯಸಮ್ಮತವಲ್ಲದ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂದು ಸಿಸಿಐ, ಮಾರುತಿ ಸುಜುಕಿ ಕಂಪನಿಗೆ ತಾಕೀತು ಮಾಡಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಡೀಲರ್‌ಗಳ ಜೊತೆ ಒಪ್ಪಂದವೊಂದನ್ನು ಮಾಡಿಕೊಂಡು, ತಾನು ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಡೀಲರ್‌ಗಳು ಗ್ರಾಹಕರಿಗೆ ನೀಡಬಾರದು ಎಂದು ಸೂಚಿಸಿತ್ತು. ಹೆಚ್ಚುವರಿ ರಿಯಾಯಿತಿ ನೀಡುವುದಿದ್ದರೆ ಡೀಲರ್‌ಗಳು ಕಂಪನಿಯಿಂದ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕಿತ್ತು ಎಂದು ಸಿಸಿಐ ಹೇಳಿದೆ.

ಈ ನಿಯಮ ಉಲ್ಲಂಘಿಸುವ ಡೀಲರ್‌ಗಳಿಗೆ, ಅವರಲ್ಲಿ ಕೆಲಸ ಮಾಡುವ ಮಾರಾಟ ಪ್ರತಿನಿಧಿಗಳಿಗೆ, ಪ್ರಾದೇಶಿಕ ಮ್ಯಾನೇಜರ್‌ಗಳಿಗೆ ಮತ್ತು ಷೋರೂಂ ಮ್ಯಾನೇಜರ್‌ಗಳಿಗೆ ದಂಡ ವಿಧಿಸುವುದಾಗಿ ಮಾರುತಿ ಸುಜುಕಿ ಹೇಳಿತ್ತು. ರಿಯಾಯಿತಿ ನಿಯಂತ್ರಣ ನಿಯಮವನ್ನು ಅನುಷ್ಠಾನಕ್ಕೆ ತರಲು ಕಂಪನಿಯ ಪ್ರತಿನಿಧಿಗಳು ಮಾರುವೇಷದಲ್ಲಿ ಡೀಲರ್‌ಗಳ ಬಳಿ ಬರುತ್ತಿದ್ದರು. ಗ್ರಾಹಕರ ಸೋಗಿನಲ್ಲಿ ಬಂದು, ಡೀಲರ್‌ಗಳು ಹೆಚ್ಚುವರಿಯಾಗಿ ರಿಯಾಯಿತಿ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದರು.

ADVERTISEMENT

‘ಹೆಚ್ಚುವರಿ ರಿಯಾಯಿತಿ ಕೊಡುತ್ತಿರುವುದು ಗೊತ್ತಾದಲ್ಲಿ, ಕಂಪನಿಯ ಪ್ರತಿನಿಧಿಗಳು ಸಾಕ್ಷ್ಯಗಳ ಜೊತೆ ಅದನ್ನು ಕಂಪನಿಗೆ ವರದಿ ಮಾಡುತ್ತಿದ್ದರು. ಕಂಪನಿಯು ಡೀಲರ್‌ಗಳಿಗೆ ಇ–ಮೇಲ್ ರವಾನಿಸಿ, ವಿವರಣೆ ಕೇಳುತ್ತಿತ್ತು. ಡೀಲರ್‌ಗಳು ನೀಡುವ ವಿವರಣೆ ತೃಪ್ತಿಕರ ಆಗದೆ ಇದ್ದರೆ ಅವರಿಗೆ ದಂಡ ವಿಧಿಸಲಾಗುತ್ತಿತ್ತು’ ಎಂದು ಸಿಸಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.