ADVERTISEMENT

ವಾಣಿಜ್ಯ ವಾಹನ ಮಾರಾಟ ಹೆಚ್ಚಾಗಲು ಬೇಕಿದೆ ಸಮಯ: ಇಂಡಿಯಾ ರೇಟಿಂಗ್ಸ್‌

ಪಿಟಿಐ
Published 28 ಡಿಸೆಂಬರ್ 2020, 11:19 IST
Last Updated 28 ಡಿಸೆಂಬರ್ 2020, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ವಾಣಿಜ್ಯ ವಾಹನಗಳ ಮಾರಾಟ ಚೇತರಿಸಿಕೊಳ್ಳಲು ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಅಭಿಪ್ರಾಯಪಟ್ಟಿದೆ

ಇ–ಕಾಮರ್ಸ್‌ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಲಘು ವಾಣಿಜ್ಯ ವಾಹನಗಳ (ಎಲ್‌ಸಿವಿ) ಮಾರಾಟದಲ್ಲಿ ಚೇತರಿಕೆ ಆರಂಭವಾಗಿದೆ. ಆದರೆ ಮಧ್ಯಮ ಮತ್ತು ದೊಡ್ಡ ಗಾತ್ರದ ವಾಣಿಜ್ಯ ವಾಹನಗಳ (ಎಂಎಚ್‌ಸಿವಿ) ಮಾರಾಟವು 2021–22ರ ನಾಲ್ಕನೇ ತ್ರೈಮಾಸಿಕಕ್ಕಿಂತ ಮೊದಲು ಚೇತರಿಕೆ ಕಾಣುವುದಿಲ್ಲ ಎಂದು ಹೇಳಿದೆ.

2020–21ರಲ್ಲಿ ಎಂಎಚ್‌ಸಿವಿ ಮಾರಾಟವು ಶೇ 35 ರಿಂದ ಶೇ 45ರಷ್ಟು ಕುಸಿತ ಕಾಣಲಿದೆ ಎನ್ನುವುದನ್ನು ಪುನರುಚ್ಚರಿಸಿದೆ. ಆದರೆ, ಎಲ್‌ಸಿವಿಎ ಮಾರಾಟದಲ್ಲಿನ ಇಳಿಕೆಯು ಶೇ 20 ರಿಂದ ಶೇ 25ರ ಒಳಗಿರಲಿದೆ. 2021–22ರಲ್ಲಿ ಉದ್ಯಮವು ಎರಡಂಕಿ ಪ್ರಗತಿ ಕಾಣಲಿದೆ ಎಂದು ಹೇಳಿದೆ.

ADVERTISEMENT

2020ರ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣ ಶೇ 56ರಷ್ಟು ಇಳಿಕೆ ಕಂಡಿದ್ದರೆ ಎಂಎಚ್‌ಸಿವಿ ಮಾರಾಟ ಶೇ 76ರಷ್ಟು ಕುಸಿತ ಕಂಡಿದೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ವಾಣಿಜ್ಯ ವಾಹನಗಳ ರಿಟೇಲ್‌ ಮಾರಾಟ ಶೇ 13ರಷ್ಟು ಹೆಚ್ಚಾಗಿದೆ. ಹೀಗಿದ್ದರೂ ವರ್ಷದಿಂದ ವರ್ಷಕ್ಕೆ ನವೆಂಬರ್‌ ತಿಂಗಳ ಮಾರಾಟವು ಶೇ 31ರಷ್ಟು ಇಳಿಮುಖವಾಗಿದೆ ಎಂದು ಆಟೊಮೊಬೈಲ್‌ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಾಹಿತಿ ನೀಡಿದೆ.

ವಾಣಿಜ್ಯ ವಾಹನಗಳ ಉದ್ಯಮವು ಕೈಗಾರಿಕಾ ಚಟುವಟಿಕೆಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಕೈಗಾರಿಕಾ ಚಟುವಟಿಕೆಗಳು ನಿಧಾನವಾಗಿ ಸುಧಾರಿಸುತ್ತಿವೆ. 2020ರ ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ 3.6ರಷ್ಟಾಗಿದೆ. ಮೂಲಸೌಕರ್ಯದ 8 ಕೈಗಾರಿಕೆಗಳ ಬೆಳವಣಿಗೆಯುಅಕ್ಟೋಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 2.5ರಷ್ಟು ಇಳಿಕೆ ಕಂಡಿದ್ದರೂ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ತಯಾರಿಕಾ ವಲಯದ ಚೇತರಿಕೆಯು ಹಬ್ಬದ ಋತುವಿನ ಬೇಡಿಕೆಯಾಗಿರುವ ಸಾಧ್ಯತೆ ಇದೆ. ಹೀಗಾಗಿ ನಿಜವಾದ ಚೇತರಿಕೆ ಕಾಣಲು ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಹೇಳಿದೆ.

ತಯಾರಿಕಾ ಕಂಪನಿಗಳು ಆರಂಭದಲ್ಲಿ ತಮ್ಮ ಬಂಡವಾಳ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದವು. ಆರ್ಥಿಕ ಚಟುವಟಿಕೆಗಳು ಆರಂಭವಾಗಿರುವುದರಿಂದ ಇದೀಗ ಮತ್ತೆ ಯೋಜನೆಗಳ ಬಗ್ಗೆ ಗಮನ ಹರಿಸಲಾರಂಭಿಸಿವೆ. ಇದರಿಂದಾಗಿ ಸರಕು ಸಾಗಣೆ ಹೆಚ್ಚಾಗುವ ಅಂದಾಜು ಮಾಡಲಾಗಿದೆ ಎಂದೂ ತಿಳಿಸಿದೆ.

ಸಕಾರಾತ್ಮಕ ಅಂಶಗಳು

* ತಯಾರಿಕಾ ವಲಯದ ಚೇತರಿಕೆ

* ಬಂಡವಾಳ ಹೂಡಿಕೆ ಯೋಜನೆಗಳತ್ತ ತಯಾರಿಕಾ ಕಂಪನಿಗಳ ಗಮನ

* ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಸುಧಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.