ADVERTISEMENT

ಭಾರತಕ್ಕೆ ಬಂದ ಜಾಗ್ವಾರ್ ಐ–ಪೇಸ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 10:49 IST
Last Updated 7 ಜನವರಿ 2021, 10:49 IST
ಜಾಗ್ವಾರ್ ಐ–ಪೇಸ್
ಜಾಗ್ವಾರ್ ಐ–ಪೇಸ್   

ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್‌), ಸಂಪೂರ್ಣವಾಗಿ ವಿದ್ಯುತ್ ಚಾಲಿತ ಆಗಿರುವ ‘ಐ–ಪೇಸ್’ ಕಾರನ್ನು ಭಾರತಕ್ಕೆ ರವಾನಿಸಿದೆ. ಈ ಕಾರು ಈಗ ಮುಂಬೈ ಸಮೀಪದ ಜವಾಹರಲಾಲ್ ನೆಹರೂ ಬಂದರಿಗೆ ಬಂದಿಳಿದಿದೆ. ಈ ಕಾರನ್ನು ದೇಶದಾದ್ಯಂತ ಪರೀಕ್ಷಾರ್ಥವಾಗಿ ಬಳಕೆ ಮಾಡಲಾಗುತ್ತದೆ, ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ.

ಟಾಟಾ ಮೋಟರ್ಸ್‌ನ ಮಾಲೀಕತ್ವದಲ್ಲಿ ಇರುವ ಪ್ರತಿಷ್ಠಿತ ಜೆಎಲ್‌ಆರ್‌ ಕಂಪನಿ ತಯಾರಿಸಿರುವ, ಸಂಪೂರ್ಣವಾಗಿ ವಿದ್ಯುತ್ ಚಾಲಿತ ಆಗಿರುವ ಮೊದಲ ಕಾರು ಐ–ಪೇಸ್. ಇದು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ದಿನ ಹತ್ತಿರವಾಗುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಭಾರತಕ್ಕೆ ಬಂದಿಳಿದಿರುವ ಈ ಮಾದರಿಯ ಮೊದಲ ಕಾರಿನ ಚಿತ್ರಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ನಮಗೆ ಖುಷಿಯ ಸಂಗತಿ. ನಮ್ಮ ಕಂಪನಿಯ ಭಾರತದ ಪಯಣದಲ್ಲಿ ಇದು ಮಹತ್ವದ ಮೈಲಿಗಲ್ಲು. ವಿದ್ಯುತ್ ಚಾಲಿತ ವಾಹನಗಳ ಯುಗಕ್ಕೆ ನಾವು ಸಿದ್ಧರಾಗುತ್ತಿದ್ದೇವೆ’ ಎಂದು ಜೆಎಲ್‌ಆರ್‌ ಇಂಡಿಯಾದ ಅಧ್ಯಕ್ಷ ರೋಹಿತ್ ಸೂರಿ ಹೇಳಿದ್ದಾರೆ.

ADVERTISEMENT

ಜವಾಹರಲಾಲ್ ನೆಹರೂ ಬಂದರಿಗೆ ಬಂದಿಳಿದಿರುವ ಮೊದಲ ಐ–ಪೇಸ್ ಕಾರು ಕೆಂಪು ಬಣ್ಣದ್ದಾಗಿದೆ. ಇದರಲ್ಲಿ ಇರುವುದು 90 ಕಿಲೋವಾಟ್‌–ಅವರ್‌ನ ಲಿಥಿಯಂ ಅಯಾನ್‌ ಬ್ಯಾಟರಿ. ಕೇವಲ 4.8 ಸೆಕೆಂಡ್‌ಗಳಲ್ಲಿ ಈ ಕಾರು ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಬಲ್ಲದು ಎಂದು ಕಂಪನಿ ಹೇಳಿದೆ.

ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ 80ಕ್ಕೂ ಹೆಚ್ಚಿನ ಜಾಗತಿಕ ಪ್ರಶಸ್ತಿಗಳನ್ನು ಈ ಕಾರು ಗೆದ್ದುಕೊಂಡಿದೆ. 2019ರಲ್ಲಿ ವರ್ಷದ ಜಾಗತಿಕ ಕಾರು, ವರ್ಷದ ಅತ್ಯುತ್ತಮ ವಿನ್ಯಾಸದ ಕಾರು, ವರ್ಷದ ಪರಿಸರ ಸ್ನೇಹಿ ಕಾರು ಪ್ರಶಸ್ತಿಗಳು ಕೂಡ ಇದಕ್ಕೆ ಲಭಿಸಿವೆ. ಈ ಪ್ರಶಸ್ತಿಗಳಿಗೆ ಇರುವ 15 ವರ್ಷಗಳ ಇತಿಹಾಸದಲ್ಲಿ ಮೂರೂ ಪ್ರಶಸ್ತಿಗಳನ್ನು ಒಂದೇ ಬಾರಿಗೆ ಗೆದ್ದುಕೊಂಡ ಮೊದಲ ಕಾರು ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.