ADVERTISEMENT

PV Web Exclusive: ಮತ್ತೆ ಡೀಸೆಲ್‌ನತ್ತ ಮಾರುತಿ ಮುಖ!

ಇ.ಎಸ್.ಸುಧೀಂದ್ರ ಪ್ರಸಾದ್
Published 16 ಡಿಸೆಂಬರ್ 2020, 12:15 IST
Last Updated 16 ಡಿಸೆಂಬರ್ 2020, 12:15 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ಕಾರು ತಯಾರಿಕಾ ಕಂಪನಿಯಲ್ಲಿ ಭಾರತದಲ್ಲೇ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಮತ್ತೆ ಡೀಸೆಲ್‌ನತ್ತ ಮರಳುತ್ತಿದೆಯೇ? ಹೀಗೊಂದು ಸುದ್ದಿ ಈಗ ವಾಹನ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಅದು ಮಾಡಿಕೊಂಡಿರುವ ಬದಲಾವಣೆಗಳೇನು?

‘ಭಾರತದ ವಾಹನ ಕ್ಷೇತ್ರದ ದಿಗ್ಗಜ ಕಂಪನಿ ಮಾರುತಿ ಸುಜುಕಿ ಡೀಸೆಲ್ ಕ್ಷೇತ್ರದತ್ತ ಮತ್ತೆ ಮುಖ ಮಾಡಿದೆ!’ ಹೀಗೊಂದು ಸುದ್ದಿ ವಾಹನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿದೆ.

2020ರ ಆರಂಭದಲ್ಲಿ ಸಾಕಷ್ಟು ಜಾಹೀರಾತು ನೀಡಿದ್ದ ಮಾರುತಿ, ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳ ಖರೀದಿ ಹಾಗೂ ನಿರ್ವಹಣೆಯ ಪಟ್ಟಿಯನ್ನು ನೀಡಿ, ಪೆಟ್ರೋಲ್ ಕಾರು ಡೀಸೆಲ್‌ಗಿಂತ ಅಗ್ಗ ಎಂದು ತೋರಿಸಿತ್ತು. ಇಷ್ಟು ಮಾತ್ರವಲ್ಲ, 2019ರ ಏಪ್ರಿಲ್‌ 1ರಿಂದ ಡೀಸೆಲ್ ಕಾರುಗಳ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಆದರೆ ಈಗ ಡೀಸೆಲ್‌ ಕಾರುಗಳತ್ತ ಮಾರುತಿ ಹೊರಳುತ್ತಿದೆ ಎಂಬ ಸುದ್ದಿ ಅಚ್ಚರಿಯ ಜತೆಗೆ, ಡೀಸೆಲ್ ಎಂಜಿನ್‌ ಪ್ರಿಯರಿಗೆ ಸಿಹಿ ಸುದ್ದಿಯಾಗಿಯೂ ಪರಿಣಮಿಸಿದೆ.

ADVERTISEMENT

ಹೊಸ ವಾಹನಗಳ ನೋಂದಣಿಗೆ ಬಿಎಸ್‌6 ಮಾನ್ಯತೆ ಕಡ್ಡಾಯಗೊಳಿಸಿದ ನಂತರ 2019ರ ಏಪ್ರಿಲ್‌ನಿಂದ ಪೆಟ್ರೋಲ್ ಎಂಜಿನ್‌ ವಾಹನಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಕಂಪನಿಯ ಮೂಲಗಳ ಪ್ರಕಾರ ತನ್ನ ಮನೆಸಾರ ತಯಾರಿಕಾ ಘಟಕದಲ್ಲಿ ಬಿಎಸ್‌6 ಮಾನ್ಯತೆಗೆ ಸರಿಹೊಂದುವ ಡೀಸೆಲ್‌ ಎಂಜಿನ್ ತಯಾರಿಕೆ ಆರಂಭಿಸಿದೆ. ಹೀಗಾಗಿ ಹೊಸ ಮಾದರಿಯ ಎಂಜಿನ್‌ಗಳನ್ನು ಹೊಂದಿರುವ ಕಾರುಗಳು 2021ರ ಮಧ್ಯದ ರಸ್ತೆಗಿಳಿಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಈ ಘಟಕದಲ್ಲಿ ಈ ಮೊದಲು ತನ್ನದೇ ಆದ ಬಿಎಸ್‌4 ಮಾನ್ಯತೆಗೆ ಸೂಕ್ತವಾದ 1500ಸಿಸಿ ಡೀಸೆಲ್ ಎಂಜಿನ್ ಉತ್ಪಾದಿಸಲಾಗುತ್ತಿತ್ತು. ಈ ಎಂಜಿನ್‌ಗಳನ್ನು ಸಿಯಾಜ್‌ ಹಾಗೂ ಅರ್ಟಿಗಾ ಕಾರುಗಳಲ್ಲಿ ಅಳವಡಿಸಿತ್ತು. ಉಳಿದಂತೆ ವಿಟೆರಾ ಬ್ರೀಜಾ, ಡಿಝೈರ್, ಸ್ವಿಫ್ಟ್‌, ಎಸ್‌–ಕ್ರಾಸ್ ಹಾಗೂ ಬಲೆನೊ ಕಾರುಗಳಲ್ಲಿ ಫಿಯೆಟ್‌ ಕಂಪನಿಯ 1300 ಸಿಸಿ ಡೀಸೆಲ್ ಎಂಜಿನ್‌ ಅಳವಡಿಸಲಾಗುತ್ತಿತ್ತು.

ಸದ್ಯ ಮಾರುತಿ ಸುಜುಕಿ ಕಂಪನಿ ಮಾರಾಟ ಮಾಡುತ್ತಿರುವ ಎಲ್ಲಾ ಕಾರುಗಳು ಬಿಎಸ್‌6 ಮಾನ್ಯತೆಯ 1 ಲೀ., 1.2ಲೀ. ಹಾಗೂ 1.5ಲೀ. ಪೆಟ್ರೋಲ್ ಎಂಜಿನ್‌ ವಾಹನಗಳೇ ಆಗಿವೆ. ಕೆಲ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯ ಕಾರುಗಳನ್ನೂ ಹೊಂದಿದೆ.ಅಷ್ಟಕ್ಕೂ 2012ರಲ್ಲಿ ಡೀಸೆಲ್ ಎಂಜಿನ್‌ ಪರಿಚಯಿಸುವ ಯೋಜನೆ ಹೊಂದಿರುವ ಮಾರುತಿ ಸುಜುಕಿ, ಆರಂಭದಲ್ಲಿ ಇದನ್ನು ಅರ್ಟಿಗಾ ಮತ್ತು ವಿಟೆರಾ ಬ್ರೀಜಾ ಕಾರುಗಳಲ್ಲಿ ಮಾತ್ರ ಅಳವಡಿಸುವ ಯೋಜನೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.ಆದರೆ ಈ ವಿಷಯವನ್ನು ಈವರೆಗೂ ಕಂಪನಿ ಎಲ್ಲಿಯೂ ಅಧಿಕೃತ ಹೇಳಿಲ್ಲ.

ಹೀಗಿದ್ದರೂ 2 ಲೀ. ಸಾಮರ್ಥ್ಯದೊಳಗಿನ ಕಾರುಗಳಲ್ಲಿ ಡೀಸೆಲ್‌ ಎಂಜಿನ್ಗಳಿಗೆ ಶೇ 23ರಷ್ಟು ಬೇಡಿಕೆ ಇದ್ದೇ ಇದೆ. ಕಾರುಗಳ ನಿರ್ವಹಣೆಯ ಅರ್ಥಶಾಸ್ತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದವರು ಡೀಸೆಲ್ ಕಾರುಗಳನ್ನು ಖರೀದಿಸುತ್ತಾರೆ.

ಹ್ಯುಂಡೈ ಡೀಸೆಲ್ ಕಾರುಗಳ ಪಾರುಪತ್ಯ

ಡೀಸೆಲ್ ಕಾರುಗಳನ್ನು ಹಿಂಪಡೆಯುವ ಕುರಿತು ಮಾರುತಿ ನಿರ್ಧಾರ ತೆಗೆದುಕೊಂಡಿತ್ತಾದರೂ, ಅದರ ಪ್ರತಿಸ್ಪರ್ಧಿ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರು ಕಂಪನಿ ಡೀಸೆಲ್ ಕಾರುಗಳನ್ನು ಮುಂದುವರೆಸಿದೆ. ಸದ್ಯ ಬಿಎಸ್‌6 ಮಾನ್ಯತೆ 1.2ಲೀ., 1.5ಲೀ., 2ಲೀ., ಸಾಮರ್ಥ್ಯದ ಡೀಸೆಲ್ ಎಂಜಿನ್‌ ಹೊಂದಿರುವ ಕಾರುಗಳ ಮಾರಾಟ ಮುಂದುವರಿಸಿದೆ. ಅಷ್ಟೇ ಅಲ್ಲ, ಅದರಲ್ಲಿ ಮಾರುತಿ ಕಂಪನಿಯ ಡೀಸೆಲ್ ಕ್ಷೇತ್ರವನ್ನು ನಿಧಾನಕ್ಕೆ ಆವರಿಸುತ್ತಿದೆ.

ಲಾಕ್‌ಡೌನ್‌ ನಂತರದಲ್ಲಿ ಎಸ್‌ಯುವಿ ಮಾದರಿಯ ಕಾರುಗಳಿಗೆ ಭಾರತದಲ್ಲಿ ಗರಿಷ್ಠ ಬೇಡಿಕೆ ಇದೆ. ಹ್ಯುಂಡೈ ತಮ್ಮ ಕ್ರೆಟಾ ಮಾದರಿಯ ಡೀಸೆಲ್ ಕಾರು ಮಾರಾಟ ಶೇ 60ರಷ್ಟಿದೆ. ಅದೇ ರೀತಿ ಶೇ 30ರಷ್ಟು ಗ್ರಾಹಕರು ಡೀಸೆಲ್ ಮಾದರಿಯ ವೆನ್ಯೂ ಕಾರುಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ ವರ್ನಾ ಮಾದರಿಯಲ್ಲೂ ಡೀಸೆಲ್ ಕಾರು ಖರೀದಿಸುವವರ ಪ್ರಮಾಣ ಶೇ 30ರಷ್ಟಿದೆ ಎಂದು ಅಂದಾಜಿಸಲಾಗಿದೆ.ಅದೇ ರೀತಿ ಕಿಯಾ ಮೋಟಾರ್ಸ್‌ ಕೂಡಾ ತನ್ನ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಬೇಡಿಕೆ ಹೆಚ್ಚು ಇದೆ.

ಬಿಎಸ್‌6 ಮಾನ್ಯತೆ ಕಡ್ಡಾಯಗೊಳಿಸಿದ ನಂತರ ಬಹಳಷ್ಟು ಕಾರು ತಯಾರಿಕಾ ಕಂಪನಿಗಳು ತಮ್ಮ ಸಣ್ಣ ಕಾರುಗಳಲ್ಲಿ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿವೆ. ಇದರಲ್ಲಿ ಟಾಟಾ ಮೋಟಾರ್ಸ್, ಟೊಯೊಟಾ ಮೋಟಾರ್ಸ್‌ ಕೂಡಾ ಸೇರಿವೆ. ಆದರೆ ದೊಡ್ಡ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಮುಂದುವರೆಸಿದೆ.

ಡೀಸೆಲ್ ಕಾರುಗಳ ನಿರ್ವಹಣೆ ಹೆಚ್ಚು ಎನ್ನುವುದು ಸರ್ವಕಾಲಿಕ. ಹೀಗಿದ್ದರೂ, ಇಂಧನ ಕ್ಷಮತೆ ಗ್ರಾಹಕರ ಮೊದಲ ಆದ್ಯತೆಯ ವಿಷಯವಾಗಿರುವುದರಿಂದ ಈ ವಿಷಯದಲ್ಲಿ ಪೆಟ್ರೋಲ್‌ ಎಂಜಿನ್‌ ಇನ್ನೂ ಡೀಸೆಲ್ ಎಂಜಿನ್‌ ಅನ್ನು ಹಿಂದಿಕ್ಕಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಅಂತರವೂ ಕಡಿಮೆಯಾಗುತ್ತಿರುವುದೂ ಖರೀದಿದಾರರ ಲೆಕ್ಕಾಚಾರವನ್ನು ಬದಲಿಸಿಲ್ಲ. ಹೀಗಾಗಿ ಈಗಲೂ ಕಾರುಗಳ ಮಾರಾಟ ಮಳಿಗೆಯಲ್ಲಿ ಗ್ರಾಹಕರು ಡೀಸೆಲ್ ಕಾರುಗಳನ್ನು ಕೇಳುವುದನ್ನೂ ಮರೆಯುತ್ತಿಲ್ಲ. ಸದ್ಯ ಮಾರುತಿ ಡೀಸೆಲ್ ಕಾರುಗಳನ್ನು ಮರಳಿ ಪರಿಚಯಿಸುತ್ತದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಆ ನಿಟ್ಟಿನಲ್ಲಿ ಗ್ರಾಹಕರ ನಿರೀಕ್ಷೆಯೂ ಮತ್ತೆ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.