ADVERTISEMENT

24 ಗಂಟೆಗಳಲ್ಲಿ ₹ 600 ಕೋಟಿಗೂ ಹೆಚ್ಚು ಮೌಲ್ಯದ ಸ್ಕೂಟರ್‌ಗಳನ್ನು ಮಾರಿದ ಓಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2021, 10:28 IST
Last Updated 16 ಸೆಪ್ಟೆಂಬರ್ 2021, 10:28 IST
ಓಲಾ ಎಸ್‌1 ಸ್ಕೂಟರ್ ಓಡಿಸುತ್ತಿರುವ ಭವೀಶ್ ಅಗರ್‌ವಾಲ್: ಸಂಗ್ರಹ ಚಿತ್ರ
ಓಲಾ ಎಸ್‌1 ಸ್ಕೂಟರ್ ಓಡಿಸುತ್ತಿರುವ ಭವೀಶ್ ಅಗರ್‌ವಾಲ್: ಸಂಗ್ರಹ ಚಿತ್ರ   

ನವದೆಹಲಿ: ಕೇವಲ 24 ಗಂಟೆಗಳಲ್ಲಿ ₹ 600 ಕೋಟಿಗೂ ಹೆಚ್ಚು ಮೌಲ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವುದಾಗಿ ಓಲಾ ಎಲೆಕ್ಟ್ರಿಕ್ ಕಂಪನಿ ಹೇಳಿದೆ.

‘ನಾವು ಪ್ರತಿ ಸೆಕೆಂಡಿಗೆ ನಾಲ್ಕು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ’ಎಂದು ಓಲಾ ಅಧ್ಯಕ್ಷ ಮತ್ತು ಗ್ರೂಪ್ ಸಿಇಒ, ಭವೀಶ್ ಅಗರ್‌ವಾಲ್ ಹೇಳಿದ್ದಾರೆ.

ಕಳೆದ ಎರಡು ತಿಂಗಳಿನಿಂದ ನಾವು ಬುಕಿಂಗ್ ಆರಂಭಿಸಿದ್ದು, ಲಕ್ಷಾಂತರ ಗ್ರಾಹಕರು ಕ್ರಾಂತಿಕಾರಕ ಓಲಾ ಎಸ್ 1 ಮತ್ತು ಎಸ್ 1 ಪ್ರೊ ಖರೀದಿಸಲು ಬುಕಿಂಗ್ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ನಿನ್ನೆ (ಬುಧವಾರ)ದಿಂದ ನಾವು ಸ್ಕೂಟರ್ ಖರೀದಿಗೆ ಅವಕಾಶ ನೀಡಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಭಾರೀ ಸಂಖ್ಯೆಯಲ್ಲಿ ಓಲಾ ಸ್ಕೂಟರ್‌ಗಳನ್ನು ಬುಕ್ ಮಾಡಿದ್ದಾರೆ’ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

‘ಗ್ರಾಹಕರ ಈ ಪ್ರತಿಕ್ರಿಯೆಯು ನಮ್ಮ ನಿರೀಕ್ಷೆಗೂ ಮೀರಿದ್ದಾಗಿದೆ. ಈ ಮೂಲಕ ಮುಂದಿನ ಉತ್ಪಾದನಾ ಯೋಜನೆ ರೂಪಿಸಲು ನಮಗೆ ಸಾಧ್ಯವಾಗಿದೆ. ಗ್ರಾಹಕರು ತಮ್ಮ ಓಲಾ ಎಸ್ 1 ಮತ್ತು ಎಸ್ 1 ಪ್ರೊ ಸ್ಕೂಟರ್‌ಗಳನ್ನು ಖರೀದಿಸಲು ಇಂದು (ಗುರುವಾರ) ಕೊನೆಯ ದಿನವಾಗಿರುತ್ತದೆ. ಈಗಾಗಲೇ ಕಾಯ್ದಿರಿಸಿದವರು ಇಂದು ಮಧ್ಯರಾತ್ರಿಯವರೆಗೆ ಖರೀದಿಸಬಹುದು. ಆ ಬಳಿಕ, ಖರೀದಿ ವಿಂಡೋ ಮುಚ್ಚಲಾಗುತ್ತದೆ. ಆದ್ದರಿಂದ, ಈಗಲೇ ಸ್ಕೂಟರ್ ಖರೀದಿಗಾಗಿ ಪರಿಚಯಾತ್ಮಕ ಬೆಲೆಯಲ್ಲಿ ಲಾಕ್ ಮಾಡಲು ಯೋಚಿಸುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ!’ಎಂದು ಭವೀಶ್ ಅಗರ್‌ವಾಲ್ ಹೇಳಿದ್ದಾರೆ

‘ಗ್ರಾಹಕರು ಖರೀದಿ ಸಾಲಿನಲ್ಲಿ ತಮ್ಮ ಸ್ಥಾನ ಕಾಯ್ದಿರಿಸುವುದನ್ನು ಮುಂದುವರಿಸಬಹುದು. ಓಲಾ ಆ್ಯಪ್‌ನಲ್ಲಿ ಮಾತ್ರ ಸ್ಕೂಟರ್ ಖರೀದಿಗೆ ಲಭ್ಯವಿದೆ’ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.