ADVERTISEMENT

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಇಳಿಕೆ

ಪಿಟಿಐ
Published 9 ನವೆಂಬರ್ 2020, 16:32 IST
Last Updated 9 ನವೆಂಬರ್ 2020, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟವು ಅಕ್ಟೋಬರ್‌ನಲ್ಲಿ ಶೇಕಡ 9ರಷ್ಟು ಇಳಿಕೆ ಆಗಿದ್ದು, 2.49 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಾಹಿತಿ ನೀಡಿದೆ.

ಪೂರೈಕೆ ಸಮಸ್ಯೆ ಇರುವುದರಿಂದಾಗಿ ಮಾರಾಟ ಕಡಿಮೆಯಾಗಿದೆ ಎಂದು ಅದು ತಿಳಿಸಿದೆ. ಎಲ್ಲಾ ಮಾದರಿಗಳನ್ನೂ ಒಳಗೊಂಡು ಒಟ್ಟಾರೆ ಮಾರಾಟ 18.59 ಲಕ್ಷದಿಂದ 14.13 ಲಕ್ಷಕ್ಕೆ, ಅಂದರೆ ಶೇ 23.99ರಷ್ಟು ಇಳಿಕೆಯಾಗಿದೆ.

‘ನವರಾತ್ರಿಯಲ್ಲಿ ವಾಹನಗಳ ನೋಂದಣಿಯಲ್ಲಿ ಉತ್ತಮ ಪ್ರಗತಿ ಆಗಿದೆ. ಆದರೆ, ನಕಾರಾತ್ಮಕ ಬೆಳವಣಿಗೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಕಳೆದ ವರ್ಷ ನವರಾತ್ರಿ ಮತ್ತು ದೀಪಾವಳಿ ಒಂದೇ ತಿಂಗಳಿನಲ್ಲಿ ಬಂದಿತ್ತು. ಹೀಗಾಗಿ ಉತ್ತಮ ಮಾರಾಟ ಸಾಧ್ಯವಾಗಿತ್ತು’ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ಪ್ರಯಾಣಿಕ ವಾಹನ ವಿಭಾಗದಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಮುಂದುವರಿದಿದೆ. ಎಂಟ್ರಿ ಲೆವೆಲ್‌ನ ಮೋಟರ್‌ಸೈಕಲ್‌ಗಳಿಗೆ ಬೇಡಿಕೆ ತಗ್ಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಸ್ಥಳೀಯವಾಗಿ ಸರಕು ಸಾಗಣೆ ಚಟುವಟಿಕೆಯು ಕೋವಿಡ್‌ ಮುಂಚಿನ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಸಣ್ಣ ಗಾತ್ರದ ವಾಣಿಜ್ಯ ವಾಹನಗಳಿಗೆ ಬೇಡಿಕೆ ಬರುತ್ತಿದೆ. ಆದರೆ, ಮಧ್ಯಮ ಮತ್ತು ಭಾರಿ ಗಾತ್ರದ ವಾಣಿಜ್ಯ ವಾಹನಗಳ ಬೆಡಿಕೆ ಇಳಿಮುಖವಾಗಿದೆ.

‘ಯುರೋಪ್‌ನ ಕೆಲವು ದೇಶಗಳಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಬಿಡಿಭಾಗಗಳ ಪೂರೈಕೆ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ ಭಾರತದಲ್ಲಿ ಪೂರೈಕೆ ಮತ್ತು ಬೇಡಿಕೆ ಮಧ್ಯ ಅಸಮತೋಲನ ಉಂಟಾಗಿದ್ದು, ಪ್ರಯಾಣಿಕ ವಾಹನ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಅವರು ಹೇಳಿದ್ದಾರೆ.

ಅಂಕಿ–ಅಂಶ

ಮಾರಾಟದ ವಿವರ

ದ್ವಿಚಕ್ರ;27% ಇಳಿಕೆ

ವಾಣಿಜ್ಯ ವಾಹನ;30.32% ಇಳಿಕೆ

ತ್ರಿಚಕ್ರ; 64.5% ಇಳಿಕೆ

ಟ್ರ್ಯಾಕ್ಟರ್‌;55% ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.