ADVERTISEMENT

ಪ್ರಯಾಣಿಕ ವಾಹನ ಮಾರಾಟ 10 ವರ್ಷಗಳ ಕನಿಷ್ಠ ಮಟ್ಟಕ್ಕೆ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿ

ಪಿಟಿಐ
Published 14 ಜನವರಿ 2021, 17:45 IST
Last Updated 14 ಜನವರಿ 2021, 17:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದ್ದು, ಮಾರಾಟ ಹೆಚ್ಚಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.

ಕೋವಿಡ್‌–19 ಬಿಕ್ಕಟ್ಟು ಮತ್ತು ಸೆಮಿಕಂಡಕ್ಡರ್‌ ಕೊರತೆಯಿಂದಾಗಿ ಉದ್ಯಮವು ಗರಿಷ್ಠ ಮಟ್ಟದ ಅನಿಶ್ಚಿತ ಸ್ಥಿತಿಯನ್ನು ಎದುರಿಸುತ್ತಿದೆ ಎಂದೂ ಹೇಳಿದೆ.

ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 16 ರಷ್ಟು ಇಳಿಕೆ ಕಂಡಿದ್ದು 17.77 ಲಕ್ಷ ವಾಹನಗಳು ಮಾರಾಟವಾಗಿವೆ. 2019–20ರ ಇದೇ ಅವಧಿಯಲ್ಲಿ 21.17 ಲಕ್ಷ ವಾಹನಗಳು ಮಾರಾಟವಾಗಿದ್ದವು.

ADVERTISEMENT

‘ಏಪ್ರಿಲ್‌–ಡಿಸೆಂಬರ್‌ ಅವಧಿಯ ಮಾರಾಟವನ್ನು ಗಮನಿಸಿದರೆ ದ್ವಿಚಕ್ರ ವಾಹನ ವಿಭಾಗವು ಏಳು ವರ್ಷಗಳ ಕನಿಷ್ಠ ಮಟ್ಟದಲ್ಲಿ ಇದೆ. ಅದೇ ರೀತಿ ಪ್ರಯಾಣಿಕ ವಾಹನ ಮಾರಾಟ 10 ವರ್ಷಗಳ ಕನಿಷ್ಠ ಮಟ್ಟದಲ್ಲಿ, ತ್ರಿಚಕ್ರವಾಹನ ವಿಭಾಗದ ಬೆಳವಣಿಗೆಯು 20 ವರ್ಷಗಳ ಹಿಂದಿನ ಮಟ್ಟದಲ್ಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಕೆನೆಚಿ ಅಯುಕವಾ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಏರಿಕೆ: 2020ರ ಡಿಸೆಂಬರ್‌ನಲ್ಲಿ 2.52 ಲಕ್ಷ ವಾಹನಗಳು ಮಾರಾಟ ಆಗಿದ್ದು, 2019ರ ಡಿಸೆಂಬರ್‌ಗೆ ಹೋಲಿಸಿದರೆ ಶೇ 13.59ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 14.44ರಷ್ಟು ಹೆಚ್ಚಾಗಿದೆ.

ಅಕ್ಟೋಬರ್–ಡಿಸೆಂಬರ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 14.44ರಷ್ಟು ಹೆಚ್ಚಾಗಿದ್ದು 7.84 ಲಕ್ಷದಿಂದ 8.97 ಲಕ್ಷಕ್ಕೆ ಏರಿಕೆಯಾಗಿದೆ.

‘ಮೂರನೇ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ಮತ್ತು ದ್ವಿಚಕ್ರವಾಹನ ಮಾರಾಟ ಒಂದಷ್ಟು ಚೇತರಿಕೆ ಕಂಡಿದೆ. ಆದರೆ, ವಾಣಿಜ್ಯ ವಾಹನ ಮತ್ತು ತ್ರಿಚಕ್ರ ವಾಹನ ವಿಭಾಗವು ಇನ್ನೂ ನಕಾರಾತ್ಮಕ ಮಟ್ಟದಲ್ಲಿಯೇ ಇವೆ’ ಎಂದು ಅವರು ಹೇಳಿದ್ದಾರೆ.

‘ಉಕ್ಕು, ಸರಕುಸಾಗಣೆ ಹಾಗೂ ಇತರೆ ಕಚ್ಚಾ ಸರಕುಗಳ ದರ ಏರಿಕೆಯುಉದ್ಯಮದ ಮೇಲೆಯೂ ಪರಿಣಾಮ ಬೀರಿದ. 2021ರಲ್ಲಿ ವಾಹನ ಉದ್ಯಮವು 2020ನೇ ವರ್ಷಕ್ಕಿಂತಲೂ ಉತ್ತಮವಾಗಿರುವ ನಿರೀಕ್ಷೆ ಮಾಡಲಾಗಿದೆ. ಕೋವಿಡ್‌–19 ಸಾಂಕ್ರಾಮಿಕವು ಇನ್ನೂ ಇರುವುದರಿಂದ ಭವಿಷ್ಯದ ಬಗ್ಗೆ ಅಂದಾಜು ಮಾಡುವುದು ಕಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ರಫ್ತು ಇಳಿಕೆ

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ 2020ರಲ್ಲಿ ವಾಹನಗಳ ರಫ್ತು ಶೇ 18.87ರಷ್ಟು ಇಳಿಕೆಯಾಗಿದೆ ಎಂದು ಎಸ್‌ಐಎಎಂ ಹೇಳಿದೆ.

2020ರ ಜನವರಿ–ಡಿಸೆಂಬರ್ ಅವಧಿಯಲ್ಲಿ 38.65 ಲಕ್ಷ ವಾಹನಗಳು ಮಾರಾಟ ಆಗಿವೆ. 2019ರ ಜನವರಿ–ಡಿಸೆಂಬರ್‌ ಅವಧಿಯಲ್ಲಿ 47.63 ಲಕ್ಷ ವಾಹನಗಳು ಮಾರಾಟ ಆಗಿದ್ದವು.

ಪ್ರಯಾಣಿಕ ವಾಹನ ರಫ್ತು ಶೇ 39.38ರಷ್ಟು ಇಳಿಕೆ ಆಗಿರುವುದೇ ವಾಹನಗಳ ಒಟ್ಟಾರೆ ರಫ್ತಿನಲ್ಲಿ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.