ADVERTISEMENT

100 ನಗರಗಳಿಗೆ ವಹಿವಾಟು ವಿಸ್ತರಣೆ: ಸ್ಕೋಡಾ

ಪಿಟಿಐ
Published 27 ಜುಲೈ 2021, 15:09 IST
Last Updated 27 ಜುಲೈ 2021, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಗಸ್ಟ್‌ ತಿಂಗಳ ಅಂತ್ಯದೊಳಗೆ ದೇಶದ 100 ನಗರಗಳಿಗೆ ವಹಿವಾಟು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಸ್ಕೋಡಾ ಕಂಪನಿ ಮಂಗಳವಾರ ಹೇಳಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕುಶಾಕ್‌ ಮೂಲಕ ಹೆಚ್ಚಿನ ಗ್ರಾಹಕರನ್ನು ಹೊಂದಲು ಕಂಪನಿ ಬಯಸುತ್ತಿದೆ. ಕಂಪನಿಯ ಪ್ರಕಾರ, ಕುಶಾಕ್‌ ಬಿಡುಗಡೆಯು ಮಾರಾಟ ಜಾಲವನ್ನು ವಿಸ್ತರಿಸುವ ಕಾರ್ಯತಂತ್ರದ ಒಂದು ಪ್ರಮುಖ ಭಾಗವಾಗಿದೆ.

ಆಗಸ್ಟ್‌ ಕೊನೆಯೊಳಗೆ ನೂರಕ್ಕೂ ಹೆಚ್ಚಿನ ನಗರಗಳಲ್ಲಿ ಸ್ಕೋಡಾ ಬ್ರ್ಯಾಂಡ್‌ ಕಾಣಿಸಿಕೊಳ್ಳಲಿದ್ದು, ಭಾರತದ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಅತಿಹೆಚ್ಚಿನ ವ್ಯಾಪ್ತಿಯನ್ನು ತಲುಪಿದಂತಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಈ ಮೂಲಕ ಕಂಪನಿಯು ಮಾರಾಟ ಮತ್ತು ಮಾರಾಟದ ನಂತರದ ಸೇವೆಗಳನ್ನೂ ಒಳಗೊಂಡು, ಭಾರತದಲ್ಲಿ 170ಕ್ಕೂ ಅಧಿಕ ಗ್ರಾಹಕ ಸಂಪರ್ಕ ಕೇಂದ್ರಗಳನ್ನು ಹೊಂದಲಿದೆ. ಮುಂದಿನ ವರ್ಷದೊಳಗೆ 225 ಮಳಿಗೆಗಳನ್ನೂ ಹೊಂದುವ ಗುರಿ ಇಟ್ಟುಕೊಂಡಿದೆ. ಸದ್ಯ ದೇಶದ 85 ನಗರಗಳಲ್ಲಿ ಕಂಪನಿ ವಹಿವಾಟು ನಡೆಸುತ್ತಿದೆ.

‘ಕುಶಾಕ್‌ ಬಿಡುಗಡೆಯು ಭಾರತದಲ್ಲಿ ಕಂಪನಿಗೆ ಹೊಸ ಯುಗದ ಆರಂಭವಾಗಿದೆ. ಈ ವಿಶ್ವ ದರ್ಜೆಯ ಎಸ್‌ಯುವಿಯ ಮೂಲಕ ಸ್ಕೋಡಾ ಬ್ರ್ಯಾಂಡ್‌ ಅನ್ನು ದೇಶಾದ್ಯಂತ ಹೊಸ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಆಲೋಚನೆ ಹೊಂದಿದ್ದೇವೆ. ಮುಂಬರುವ ತಿಂಗಳಿಂದ ನಾವು 100ಕ್ಕೂ ಹೆಚ್ಚು ನಗರಗಳಲ್ಲಿ ಇರಲಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ’ ಎಂದು ಸ್ಕೋಡಾ ಆಟೊ ಇಂಡಿಯಾದ ಬ್ರ್ಯಾಂಡ್‌ ನಿರ್ದೇಶಕ ಜಾಕ್‌ ಹೊಲಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.