ADVERTISEMENT

ಚಾಲನಾ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸನ್ಸ್‌: ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?

ಪಿಟಿಐ
Published 12 ಜೂನ್ 2021, 5:12 IST
Last Updated 12 ಜೂನ್ 2021, 5:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸದಿಲ್ಲಿ: ಇನ್ನು ಮುಂದೆ ಅಂಗೀಕೃತ ಕಲಿಕಾ ಕೇಂದ್ರದಲ್ಲಿ ನೀವು ವಾಹನ ಚಾಲನೆ ಕಲಿತರೆ ಪರೀಕ್ಷೆ ಇಲ್ಲದೆಯೇ ಡ್ರೈವಿಂಗ್ ಲೈಸನ್ಸ್ ಪಡೆಯಬಹುದಾಗಿದೆ.

ಹೌದು, ಇಂತಹದೊಂದು ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಗುಣಮಟ್ಟದ ಚಾಲನಾ ತರಬೇತಿ ಕೇಂದ್ರಗಳಲ್ಲಿ ಚಾಲನೆ ಕಲಿತರೆ ಪರವಾನಗಿ ನೀಡುವ ವೇಳೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ADVERTISEMENT

ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಲು ಈ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು ಮತ್ತು ಪ್ರತ್ಯೇಕ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್‌ಟಿಎಚ್) ತಿಳಿಸಿದೆ.

1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಈ ಕೇಂದ್ರಗಳಲ್ಲಿ ಕೋರ್ಸ್‌ಗಳನ್ನು ಪಡೆಯಬಹುದಾಗಿದೆ.

ಅಂಗೀಕೃತ ಚಾಲಕ ತರಬೇತಿ ಕೇಂದ್ರಗಳಲ್ಲಿ ಈ ನಿಯಮವು ಕಡ್ಡಾಯವಾಗಲಿದೆ. 2021 ಜುಲೈ 1ರಿಂದ ನಿಯಮ ಜಾರಿಗೆ ಬರಲಿದೆ. ಅಂತಹ ಕೇಂದ್ರಗಳಲ್ಲಿ ಕಲಿಯುವವರಿಗೆ ಸರಿಯಾದ ತರಬೇತಿ ಮತ್ತು ಜ್ಞಾನವನ್ನು ನೀಡಲು ಸಹಾಯ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಕೇಂದ್ರಗಳಲ್ಲಿ ಟೆಸ್ಟಿಂಗ್ ಯಶಸ್ವಿಯಾಗಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಡ್ರೈವಿಂಗ್ ಟೆಸ್ಟ್‌ನಿಂದ ವಿನಾಯಿತಿ ಪಡೆಯುತ್ತಾರೆ ಎಂದು ತಿಳಿಸಿದೆ.

ಸದ್ಯ ಡ್ರೈವಿಂಗ್ ಟೆಸ್ಟ್ ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಉಸ್ತುವಾರಿಯಲ್ಲಿ ನಡೆಸಲಾಗುತ್ತದೆ.

ಇದು ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಮುಗಿಸಿದ ಬೆನ್ನಲ್ಲೇ ಚಾಲಕರಿಗೆ ಚಾಲನಾ ಪರವಾನಗಿ ಪಡೆಯಲು ಸಹಾಯ ಮಾಡಲಿದೆ. ಈ ಕೇಂದ್ರಗಳಲ್ಲಿ ಸರಿಯಾಗಿ ತರಬೇತಿ ನೀಡಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ನುರಿತ ಚಾಲಕರ ಕೊರತೆಯು ಭಾರತದಲ್ಲಿ ಪ್ರಮುಖ ಸಮಸ್ಯೆಯಾಗಿದ್ದು,ದೇಶದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅವಘಡಗಳು ಸಂಭವಿಸಲು ಕಾರಣವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:

2019 ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) ಅಡಿಯಲ್ಲಿ ತರಬೇತಿ ಕೇಂದ್ರಗಳ ಮಾನ್ಯತೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಅಧಿಸೂಚನೆಯ ಪ್ರಕಾರ ಅಂಗೀಕೃತಚಾಲನಾತರಬೇತಿ ಕೇಂದ್ರಗಳ ಮಾನ್ಯತೆಯು ಐದು ವರ್ಷಗಳ ಅವಧಿಯ ವರೆಗೆ ಜಾರಿಯಲ್ಲಿರುತ್ತದೆ ಮತ್ತು ಅದನ್ನು ನವೀಕರಿಸಬಹುದಾಗಿದೆ.

ಅಂಗೀಕೃತ ಚಾಲಕ ತರಬೇತಿ ಕೇಂದ್ರಗಳಲ್ಲಿ ಲಘು ಮೋಟಾರು ವಾಹನ ಚಾಲನಾ ಕೋರ್ಸ್‌ನ ಅವಧಿಯು ಕೋರ್ಸ್ ಪ್ರಾರಂಭವಾದ ದಿನಾಂಕದಿಂದ ಗರಿಷ್ಠ 4 ವಾರಗಳ ಅವಧಿಯಲ್ಲಿ 29 ಗಂಟೆಗಳಿರುತ್ತದೆ. ಇದು ಥಿಯರಿ ಹಾಗೂ ಪ್ರಾಕ್ಟಿಕಲ್ ಒಳಗೊಂಡಿರಲಿದೆ. ಇದರಂತೆ ಮಧ್ಯಮ ಮತ್ತು ಘನ ಮೋಟಾರು ವಾಹನ ಚಾಲನಾ ಕೋರ್ಸ್‌ನ ಅವಧಿಯು ಆರು ವಾರಗಳ ಅವಧಿಯಲ್ಲಿ 38 ಗಂಟೆಗಳಿರುತ್ತದೆ ಎಂದು ಅಧಿಸೂಚನೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.