ADVERTISEMENT

ಶುಭ ಸಮಾರಂಭಕ್ಕೆ ಒಪ್ಪುವ ಬನಾರಸಿ ಸೀರೆ

ಪ್ರಜಾವಾಣಿ ವಿಶೇಷ
Published 9 ಏಪ್ರಿಲ್ 2021, 19:45 IST
Last Updated 9 ಏಪ್ರಿಲ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅದು ಗಿಳಿ ಹಸಿರು ಬಣ್ಣದ, ಕಡುಗೆಂಪು ಅಂಚಿನ ಜರಿ ಸೀರೆ. ಒಡಲ ತುಂಬ ಜರಿಯ ಬುಟ್ಟಾ; ಸೆರಗು ಮತ್ತು ಅಂಗೈ ಅಗಲದ ಅಂಚಿನಲ್ಲಿ ಜರಿಯಿಂದ ಹೆಣೆದ ಮೀನಾಕರಿ ವಿನ್ಯಾಸ. ನ್ಯಾಫ್ತಾ ಗುಳಿಗೆಗಳ ಪರಿಮಳ ಸೂಸುವ ಮಡಿಚಿಟ್ಟ ಸೀರೆ ಎತ್ತಿ ನೋಡಿದರೆ ಕೊಂಚ ಭಾರವೇ. ಎಂಥವರಿಗಾದರೂ ಒಮ್ಮೆ ಉಟ್ಟುಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುವಾಸೆ ಸಹಜ ಕೂಡ. ಈ ಸೀರೆಯ ವಯಸ್ಸು ಎಷ್ಟು ಗೊತ್ತೇ? ಬರೋಬ್ಬರಿ 70 ವರ್ಷ! 14ನೆಯ ವಯಸ್ಸಿನಲ್ಲಿ ಅಮ್ಮನ ಮದುವೆಯಾದಾಗ ಸೊಸೆಗೆಂದು ಅಜ್ಜ ಕೊಟ್ಟ ನಿಸ್ತಾಂಬರ (ಈಗಿನವರ ರಿಸೆಪ್ಶನ್‌ ಸೀರೆ) ಸೀರೆ. ಇಷ್ಟೊಂದು ವಯಸ್ಸಾದರೂ ಮಿಂಚುವ ಈ ಸೀರೆ ಅಪ್ಪಟ ಬನಾರಸಿ ರೇಷ್ಮೆ ಸೀರೆ.

‘ಕೈಮಗ್ಗ ಸೀರೆಗಳ ರಾಣಿ’ ಎಂದೇ ಕರೆಯಲಾಗುವ ಬನಾರಸಿ ಸೀರೆ ಎಂದಿನಿಂದಲೂ ಮದುವೆ ಹೆಣ್ಣಿನ ನೆಚ್ಚಿನ ಸೀರೆ. ಹಿಂದೆಲ್ಲ ಮಲೆನಾಡಿನ ಕೆಲವು ಭಾಗದಲ್ಲಿ ತಮಿಳುನಾಡಿನ ಕಾಂಚೀಪುರಂ ಊರಿಗೆ ಹೋದರೆ ಮಾತ್ರ ಕಾಂಜೀವರಂ ಸೀರೆ ತಂದುಕೊಳ್ಳುವ ರೂಢಿಯಿತ್ತು. ಅದು ಬಿಟ್ಟರೆ ಬಹಳ ವರ್ಷಗಳ ಕಾಲ ಬಾಳಿಕೆ ಬರುತ್ತದೆಂದು ಮದುವೆಯಲ್ಲಿ ವಧುವಿಗೆ ಕೊಡುವುದು ಬನಾರಸಿ ಸೀರೆಯೇ ಆಗಿತ್ತು.

ಗುಣಮಟ್ಟದ ರೇಷ್ಮೆ, ಮನಮೋಹಕ ವಿನ್ಯಾಸ, ಅಪ್ಪಟ ಚಿನ್ನ, ಬೆಳ್ಳಿ ಅಂಶವಿರುವ ಜರಿಯಿಂದ ಮಾಡಿದ ಮೀನಾಕರಿ ಕುಸುರಿ ಕೆಲಸದಿಂದ ಮಿಂಚುವ ಈ ಸೀರೆ ರಾಯಲ್‌ ಲುಕ್‌ ನೀಡುತ್ತದೆ. ಬಹಳ ಹಿಂದಿನಿಂದಲೂ ಅಂದರೆ ಮೊಗಲರ ಕಾಲದಿಂದಲೂ ಉತ್ತರ ಪ್ರದೇಶದ ವಾರಾಣಸಿ (ಬನಾರಸ್‌) ಯಲ್ಲಿ ಕೈಮಗ್ಗದಲ್ಲಿ ತಯಾರಾಗುತ್ತಿದ್ದ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದ್ದರೂ ಅದೇ ಹೊಳಪು, ವಿನ್ಯಾಸ, ಮೃದುತ್ವ ಉಳಿಸಿಕೊಳ್ಳಲಾಗಿದೆ. ಅಪ್ಪಟ ರೇಷ್ಮೆ (ಕತಾನ್‌), ಆರ್ಗಂಜಾ (ಕೋರಾ), ಜಾರ್ಜೆಟ್‌, ಶತ್ತಿರ್‌ ಮೊದಲಾದ ನೂಲಿನಲ್ಲಿ ಹೆಣೆದು ವೈವಿಧ್ಯತೆ ಮೆರೆಯಲಾಗುತ್ತಿದೆ. ಹಾಗೆಯೇ ನೇಯ್ಗೆ ಮತ್ತು ವಿನ್ಯಾಸದ ಮೇಲೆ ಜಾಂಗ್ಲಾ, ತಾಂಚೋಯ್‌, ಕಟ್‌ವರ್ಕ್‌, ಬುಟ್ಟಾ ಎಂದು ವಿಂಗಡಿಸಲಾಗಿದೆ.

ADVERTISEMENT

ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬನಾರಸಿ ಸೀರೆಗಳ ಸಂಗ್ರಹವೇ ಲಭ್ಯ. ಆದರೆ ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಶುದ್ಧ ಬನಾರಸಿ ಸೀರೆ 5600 ನೂಲುಗಳನ್ನು ಹೊಂದಿದ್ದು, ಒಂದೊಂದು ನೂಲೂ ಅಗಲವಾಗಿರುತ್ತದೆ. ಒತ್ತೊತ್ತಾಗಿ ಜರಿಯ ನೇಯ್ಗೆ ಇದ್ದಷ್ಟೂ ಅದರ ಬೆಲೆಯೂ ಹೆಚ್ಚು. ಬನಾರಸಿ ಸೀರೆಯ ಜರಿ ಕೆಲವೊಮ್ಮೆ ಕಪ್ಪಾದರೂ ಪಾಲಿಶ್‌ ಮಾಡಿಸಿದರೆ ಹೊಳಪನ್ನು ಉಳಿಸಿಕೊಳ್ಳಬಹುದು.

ಎಲ್ಲಾ ರೀತಿಯ ದೇಹ ಹೊಂದಿದ ಹೆಣ್ಣುಮಕ್ಕಳಿಗೂ ಬನಾರಸಿ ಸೀರೆ ಚೆನ್ನಾಗಿಯೇ ಕಾಣುತ್ತದೆ. ಆದರೂ ಫ್ಯಾಷನ್‌ ಬಗ್ಗೆ ಜಾಸ್ತಿ ಒಲವು ಇರುವವರು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸಪೂರ ಹಾಗೂ ಎತ್ತರವಿರುವವರು ಗಾಢ ರಂಗಿನ, ಅಗಲವಾದ ವಿನ್ಯಾಸವಿರುವ, ಅಗಲ ಅಂಚಿನ ಸೀರೆ ಉಡಬಹುದು. ದಪ್ಪ ಹಾಗೂ ಎತ್ತರ ಕಮ್ಮಿ ಇರುವವರು ತಿಳಿ ವರ್ಣದ, ಸಣ್ಣ ಅಂಚಿನ, ಸಣ್ಣ ವಿನ್ಯಾಸದ ಸೀರೆ ಉಟ್ಟರೆ ಲಾವಣ್ಯಮಯವಾಗಿ ಕಾಣುತ್ತಾರೆ.

ಮಾಸಲು ಬಣ್ಣದವರು ಗುಲಾಬಿ, ಚಿನ್ನದ ಬಣ್ಣ, ಹಳದಿ, ನೀಲಿ ಅಥವಾ ಪೀಚ್‌ ರಂಗಿನ ಬನಾರಸಿ ಸೀರೆ ಖರೀದಿಸಿ. ಗೋಧಿ ಬಣ್ಣದ ತ್ವಚೆಗೆ ಕೆಂಪು, ಮೆಂತ್ಯ, ಬಾಟಲ್‌ ಹಸಿರು, ರಾಯಲ್‌ನೀಲಿ, ಕಪ್ಪು ರಂಗಿನ ಸೀರೆ ಹೊಂದಿಕೆಯಾಗುತ್ತದೆ. ಕಂದು ಚರ್ಮಕ್ಕೆ ಇಟ್ಟಿಗೆ ಕೆಂಪು, ಚಿನ್ನ, ಬೆಳ್ಳಿ ಅಥವಾ ಕಂಚಿನ ರಂಗಿನ ಸೀರೆ ಓಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.