ADVERTISEMENT

ಬೀದರ್ ಬೆಡಗಿ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:02 IST
Last Updated 8 ಫೆಬ್ರುವರಿ 2021, 15:02 IST
ನವದೆಹಲಿಯಲ್ಲಿ ಭಾನುವಾರ ನಡೆದ ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಗೆದ್ದ ಬೀದರ್‌ನ ಅರುಣಾ ಪಾಟೀಲ
ನವದೆಹಲಿಯಲ್ಲಿ ಭಾನುವಾರ ನಡೆದ ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಗೆದ್ದ ಬೀದರ್‌ನ ಅರುಣಾ ಪಾಟೀಲ   

ಬೀದರ್: ರಾಜ್ಯದ ಗಡಿ ಜಿಲ್ಲೆ ಬೀದರ್ ಬೆಡಗಿ ಅರುಣಾ ಪಾಟೀಲ 2021ನೇ ಸಾಲಿನ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗ್ಲೋಬಲ್ ಪ್ಲೆಜೆಂಟ್ಸ್ ನವದೆಹಲಿಯಲ್ಲಿ ಆದಿತ್ಯ ಪೆಟ್ರೋಲಿಯಂ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಪ್ರಾಯೋಜಕ್ವತದಲ್ಲಿ
ಸಂಘಟಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮಿಸಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯು ಸಾಂಪ್ರದಾಯಿಕ ಸೌಂದರ್ಯ, ಬುದ್ಧವಂತಿಕೆ ಹಾಗೂ ಸೂಕ್ಷ್ಮತೆ ಆಧಾರಿತ ಸ್ಪರ್ಧೆಯಾಗಿದೆ. ಮಹಿಳೆ ಸಮುದಾಯ, ದೇಶ ಹಾಗೂ ಸಮಕಾಲೀನ ಜೀವನಕ್ಕೆ ನೀಡಿದ ಕೊಡುಗೆಯನ್ನೂ ಪರಿಗಣಿಸಲಾಗಿದೆ.

ADVERTISEMENT

ಜಗತ್ತಿಗೆ ಪ್ರೇರಣೆ ನೀಡುವ ಪರಿಪೂರ್ಣ ಮಹಿಳೆಯನ್ನು ಗುರುತಿಸುವುದು ಸ್ಪರ್ಧೆಯ ಉದ್ದೇಶವಾಗಿದೆ. ಸ್ಪರ್ಧೆಯ ವಿಜೇತರು ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ.

ಸ್ಪರ್ಧೆಯಲ್ಲಿ ಅರುಣಾ ಅವರು ಮಹಿಳೆ ಪ್ರತಿ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮನಾಗಿರುವುದನ್ನು ಉದಾಹರಣೆ ಸಹಿತ ವಿವರಿಸಿ ಎಲ್ಲರ ಕರತಾಡನಕ್ಕೆ ಪಾತ್ರರಾದರು.

ನವದೆಹಲಿಯ ದಿ ಸೂರ್ಯಾ ಹೋಟೆಲ್‌ನಲ್ಲಿ ಫೆ.4, 5 ಹಾಗೂ 6ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಅರುಣಾ ಅವರಿಗೆ ಗ್ಲೋಬಲ್ ಪ್ಲೆಜೆಂಟ್ಸ್ ಸಿಇಒ ಶ್ವೇತಾ ಅವರು ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಅರುಣಾ ಅವರು ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಅಷ್ಟೂರ್‌ ಅವರ ಪುತ್ರಿಯಾಗಿದ್ದಾರೆ. ಅವರ ಪತಿ ಪ್ರವೀಣ ತುಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ.

ಪ್ರಶಸ್ತಿ ದೊರೆತಿದ್ದಕ್ಕೆ ಅಚ್ಚರಿ ಜತೆಗೆ ಅತೀವ ಖುಷಿಯಾಗಿದೆ. ಇದು, ಬೀದರ್ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಸಂದ ಗೌರವವಾಗಿದೆ ಎಂದು ಅರುಣಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.