ADVERTISEMENT

ಸೌಂದರ್ಯವರ್ಧಕ ಹಳೆಯದನ್ನೇ ಬಳಸುತ್ತಿದ್ದೀರಾ?

ಅಮೃತ ಕಿರಣ ಬಿ.ಎಂ.
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ವರ್ಷದ ಹಿಂದೆ ಕೋವಿಡ್‌–19 ಶುರುವಾದಾಗ ಬಹುತೇಕರು ಮುಖಕ್ಕೆ ಮೇಕಪ್‌ ಮಾಡುವುದನ್ನು, ಕೈ– ಕಾಲಿಗೆ ಕ್ರೀಂ ಹಚ್ಚುವುದನ್ನು ಬಿಟ್ಟರು; ಮುಖಕ್ಕೆ ಮಾಸ್ಕ್‌ ಬಂದಿರುವಾಗ ಪೌಡರ್‌, ತುಟಿಗೆ ಲಿಪ್‌ಸ್ಟಿಕ್‌, ಕಣ್ಣಿಗೆ ಐಲೈನರ್‌ ಇನ್ನೇಕೆ ಎಂಬ ಧೋರಣೆ. ಆದರೆ ಕೋವಿಡ್‌ ಭಯ ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆ, ಸುತ್ತಾಟ, ಇತರ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ ಮೇಕಪ್‌, ಸೌಂದರ್ಯ ರಕ್ಷಣೆಯ ಉತ್ಪನ್ನಗಳು ಕೂಡ ಮತ್ತೆ ಸ್ಥಾನ ಪಡೆದುಕೊಂಡಿವೆ.

ಆದರೆ ಕಪಾಟಿನ ಡ್ರಾವರ್‌ನಲ್ಲಿ ಒಂದು ವರ್ಷದಿಂದ ಬೆಚ್ಚಗೆ ಕುಳಿತಿರುವ ಸೌಂದರ್ಯವರ್ಧಕಗಳನ್ನೇ ಮತ್ತೆ ಬಳಸಲು ಕೆಲವರು ಮುಂದಾಗುವುದು ಸಹಜ. ಹಳೆಯ ಲಿಪ್‌ಸ್ಟಿಕ್‌ ಅನ್ನೇ ಬಳಸಿದರೆ ತುಟಿಯ ನೈಸರ್ಗಿಕ ಬಣ್ಣವೇ ಹಾಳಾಗುವುದರ ಜೊತೆಗೆ ತ್ವಚೆಗೇ ಶಾಶ್ವತವಾಗಿ ಧಕ್ಕೆಯಾದೀತು ಎಂದು ಎಚ್ಚರಿಸುತ್ತಾರೆ ತಜ್ಞರು.

ಮೇಕಪ್‌ ಹಾಗೂ ತ್ವಚೆ ರಕ್ಷಣೆಗೆ ವರ್ಷದ ಹಿಂದೆ ಖರೀದಿಸಿದ್ದ ಉತ್ಪನ್ನಗಳ ಮೇಲಿನ ದಿನಾಂಕವನ್ನು ಗಮನಿಸಿ ಅವಧಿ ಮೀರಿದವುಗಳನ್ನು ಎಸೆಯುವುದು ಸೂಕ್ತ. ಉತ್ಪನ್ನಗಳ ಗುಣಮಟ್ಟ, ಅವುಗಳಲ್ಲಿ ಬಳಸಿರುವ ರಾಸಾಯನಿಕಗಳು, ಇತರ ಸಂಯುಕ್ತಗಳ ವಿವರಗಳನ್ನು ಗಮನಿಸಿದರೆ, ಬಹುತೇಕ ಉತ್ಪನ್ನಗಳನ್ನು ಒಂದು ವರ್ಷದೊಳಗೇ ಬಳಸಬೇಕಾಗುತ್ತದೆ. ಒಳ್ಳೆಯ ಕಂಪನಿಯ ಉತ್ಪನ್ನವಲ್ಲದಿದ್ದರೆ ಮೂರು ತಿಂಗಳಿಂದ ಆರು ತಿಂಗಳೊಳಗೆ ಬಳಸಬೇಕು. ಅಂದರೆ ಕಳೆದ ಮಾರ್ಚ್‌ ಅಥವಾ ಅದಕ್ಕಿಂತ ಮುಂಚೆ ಖರೀದಿಸಿದ್ದರೆ ಅವುಗಳನ್ನು ಎಸೆಯುವುದು ಸುರಕ್ಷಿತ ಎನ್ನುತ್ತಾರೆ ಚರ್ಮ ತಜ್ಞರಾದ ಡಾ. ಎನ್‌.ಎ. ಶಿವರಾಂ.

ADVERTISEMENT

ಅವಧಿ ಮುಗಿಯುವ ದಿನಾಂಕವಿರುವ ಪ್ಯಾಕ್‌ ನಿಮ್ಮ ಬಳಿ ಇಲ್ಲದಿದ್ದರೆ ಹಿಂದೆ ಬಳಸಿದ್ದ ಉತ್ಪನ್ನದ ಬಣ್ಣ ಮತ್ತು ಪರಿಮಳದ ಮೂಲಕ ಉತ್ಪನ್ನ ಸರಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಸೌಂದರ್ಯವರ್ಧಕ ಕ್ರೀಂ ಅನ್ನು ಒಳಗೊಂಡಿದ್ದರೆ ಅದು ಬಹು ಬೇಗ ಹಾಳಾಗುತ್ತದೆ. ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಕ್ರೀಂ ನೀರು ನೀರಾಗಿ ಸೋರಲು ಆರಂಭವಾಗುತ್ತದೆ.

ಇನ್ನೂ ಮುಚ್ಚಳ ತೆರೆಯದ ಉತ್ಪನ್ನವಾಗಿದ್ದರೆ ಅವಧಿ ಮೀರದಿದ್ದರೆ ಕೆಲವೊಮ್ಮೆ ಬಳಸಬಹುದು. ಉದಾಹರಣೆಗೆ ಮುಖಕ್ಕೆ ಹಚ್ಚುವ ಕಾಂಪ್ಯಾಕ್ಟ್‌ ಪೌಡರ್‌. ಗಾಳಿಯ ಜೊತೆ ಸೇರದ, ಬೆಚ್ಚಗೆ ಪ್ಯಾಕ್‌ನೊಳಗೇ ಕೂತ ಲೂಸ್‌ ಪೌಡರ್‌ ಅನ್ನು ಕೂಡ ಬಳಸಬಹುದು. ಆದರೆ ಲಿಪ್‌ಸ್ಟಿಕ್‌ ಅಥವಾ ಮೇಕಪ್‌ಗೆ ಬಳಸುವ ದ್ರವ ಫೌಂಡೇಷನ್‌ ಪ್ಯಾಕ್‌ನೊಳಗೇ ಇದ್ದರೂ ಅಷ್ಟು ಸುರಕ್ಷಿತವಲ್ಲ. ಮುಚ್ಚಳ ತೆರೆಯದೇ ಹಾಗೇ ಇಟ್ಟರೂ ಕೂಡ ದ್ರವ ಆರಿಹೋಗಿ ಗುಣಮಟ್ಟ ಕಡಿಮೆಯಾಗಿರುತ್ತದೆ. ಆದರೆ ರಾಸಾಯನಿಕರಹಿತವಾದ ಅಂದರೆ ನೈಸರ್ಗಿಕ ಉತ್ಪನ್ನಗಳನ್ನು ಬಳಸಿದ ಸೌಂದರ್ಯವರ್ಧಕಗಳು ಬೇಗ ಹಾಳಾಗುವುದಿಲ್ಲ.

ಫೌಂಡೇಷನ್‌, ಕನ್ಸೀಲರ್‌ ಸ್ಟಿಕ್‌ ಅನ್ನು ಒಂದು ವರ್ಷದವರೆಗೆ ಬಳಸಬಹುದು. ಆದರೆ ಲಿಪ್‌ಸ್ಟಿಕ್‌ಗೆ ಮಾತ್ರ ಆರು ತಿಂಗಳ ಆಯುಷ್ಯ ಅಷ್ಟೇ. ಹಾಗೆಯೇ ಕಾಡಿಗೆ, ರೆಪ್ಪೆಗೆ ಬಳಸುವ ಐಲೈನರ್‌, ಮಸ್ಕರಾ ಕೂಡ 3–6 ತಿಂಗಳು ಬಾಳಿಕೆ ಬರುತ್ತದೆ.

ಮೇಕಪ್‌ಗೆ, ಐಲೈನರ್‌ಗೆ ಬಳಸುವ ಬ್ರಷ್‌ನಲ್ಲಿ ಕೂಡ ಬ್ಯಾಕ್ಟೀರಿಯ, ಫಂಗಸ್‌ ಬೆಳೆಯಬಹುದು. ಹೀಗಾಗಿ ಅವುಗಳ ಮೇಲಿನ ಮೋಹವನ್ನು ಬಿಟ್ಟು ಹೊಸದನ್ನು ಖರೀದಿಸಿ ಎನ್ನುತ್ತಾರೆ ಡಾ.ಶಿವರಾಂ. ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು, ಅಲರ್ಜಿ ಉಂಟಾಗುವುದು ಬಹು ಬೇಗ. ಹೀಗಾಗಿ ಫಂಗಸ್‌, ಬ್ಯಾಕ್ಟೀರಿಯ ಇರುವ ಹಳೆಯ ಐಲೈನರ್‌, ಐ ಶಾಡೊ ಬಳಸಿದರೆ ಸೋಂಕಾಗುವುದು ನಿಶ್ಚಿತ. ಕಣ್ಣಿಗೆ ತುರಿಕೆ, ಕೆಂಪಗಾಗುವುದು, ನೋವು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇಂತಹ ಅಲರ್ಜಿ ಕಾಣಿಸಿಕೊಳ್ಳದಿದ್ದರೂ ಸಹ ಹಳೆಯ ಉತ್ಪನ್ನಗಳನ್ನು, ಅದರಲ್ಲೂ ಎಸ್‌ಪಿಎಫ್‌, ರೆಟಿನಾಲ್‌ ಮೊದಲಾದ ಅಂಶಗಳಿರುವ ಹಳೆಯ ಸೌಂದರ್ಯವರ್ಧಕಗಳನ್ನು ಎಸೆಯುವುದು ಒಳ್ಳೆಯದು. ಏಕೆಂದರೆ ದಿನ ಕಳೆದಂತೆ ಇಂತಹ ಅಂಶಗಳ ಪರಿಣಾಮ ಕಡಿಮೆಯಾಗುತ್ತ ಹೋಗುತ್ತದೆ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.