ADVERTISEMENT

ಕೋವಿಡ್‌: ಉತ್ತಮ ದಿರಿಸು ತೊಡಿ, ಮನೆಯಲ್ಲೇ ಸಂತೋಷವಾಗಿರಿ...

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:45 IST
Last Updated 9 ಏಪ್ರಿಲ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ನ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ಸರ್ಕಾರ ಈಗ ಮತ್ತೆ ಹಲವು ನಿರ್ಬಂಧಗಳನ್ನು ಪ್ರಕಟಿಸಿದೆ. ಕಳೆದ ವರ್ಷ ಈ ದಿನಗಳ ನೆನಪು ಇನ್ನೂ ಮರೆತಿಲ್ಲ; ಆಗಲೇ ಮತ್ತೆ ನಿರ್ಬಂಧಗಳು ನಮ್ಮನ್ನು ಬಂಧಿಸಲು ಶುರುಇಟ್ಟಿವೆ. ಮನೆಯಲ್ಲಿಯೇ ಸುರಕ್ಷಿತವಾಗಿ ಇರುವುದೇ ಲೇಸು ಎನ್ನುವ ಹಂತವನ್ನು ಮತ್ತೆ ತಲುಪಿದ್ದೇವೆ. ಹಾಗಾದರೆ, ಮತ್ತದೇ ಬೇಸರ, ಸ್ನೇಹಿತರ ಸಂಗ ಇಲ್ಲ, ಹೊರಗೆ ಹೋಗುವುದಿಲ್ಲ, ಮನರಂಜನೆ ಇಲ್ಲ– ಈ ಎಲ್ಲ ಇಲ್ಲದಿರುವ ಮಧ್ಯೆ ಉತ್ಸಾಹದ ದಿನಗಳನ್ನು ಕಳೆಯುವುದಾದರೂ ಹೇಗೆ? ಒಂದು ಉಪಾಯ ಇದೆ, ಅದು ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳುವುದು!

ಹೌದು, ಚೆನ್ನಾಗಿ ದಿರಿಸು ತೊಟ್ಟು, ಮೇಕಪ್ ಮಾಡಿಕೊಂಡು ರೆಡಿ ಆಗಿ, ಫೋಟೊ ತೆಗೆಸಿಕೊಂಡು ನಮ್ಮವರೊಂದಿಗೆ ಹಂಚಿಕೊಳ್ಳುವುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮುಖಾಂತರ ಮನೆಯಲ್ಲಿಯೇ ಉಳಿದುಕೊಳ್ಳುವ ಒತ್ತಡವನ್ನು ಕಮ್ಮಿ ಮಾಡಿಕೊಂಡು ಆರಾಮಾಗಿರಬಹುದು ಎಂದು ಕೆಲವು ಮನಶಾಸ್ತ್ರಜ್ಞರು ಹೇಳುತ್ತಾರೆ.

ಸಿನಿಮಾದಲ್ಲಿ ತಯಾರಾದ ಹಾಗೆ ತಯಾರಾಗಬೇಕು ಎಂದಲ್ಲ, ಫ್ಯಾನ್ಸಿ ಆಗಿ ಕೂಡ ತಯಾರಾಗಬಹುದು. ಒಟ್ಟು ನಿಮ್ಮ ಮನಸ್ಸಿಗೆ ಮುದ ನೀಡುವ ಯಾವುದೇ ದಿರಿಸು ಆದರೂ ಸರಿ. ಹೀಗೆ ಮಾಡುವುದರಿಂದ ನಮ್ಮೊಳಗೆ ಸಕಾರಾತ್ಮಕ ಭಾವನೆ ಹುಟ್ಟಿಕೊಳ್ಳುತ್ತದೆ; ತಜ್ಞರು. ಹೀಗೆ ಮಾಡುವುದರಿಂದ ನೂರಕ್ಕೆ ನೂರು ಪ್ರತಿಶತ ನಮ್ಮ ಮೆದುಳಿಗೆ ಒಳ್ಳೆಯದೇ ಆಗುತ್ತದೆ ಎನ್ನುತ್ತಾರೆ ತಜ್ಞರು.

ADVERTISEMENT

ನಿಮಗೆಲ್ಲಾ ನೆನಪಿರಬಹುದು. ಸಣ್ಣವರಿದ್ದಾಗ ತಂದೆ ಅಥವಾ ಅಣ್ಣನಿಗೆ ಜಟ್ಟು ಹಾಕಿ, ಲಿಪ್‌ಸ್ಟಿಕ್‌ ಹಾಕಿ ನಾವು ಸ್ಕೂಲಿಗೆ ಹೋಗುವಾಗ ಹೇಗೆ ತಯಾರಾಗುತ್ತಿದ್ದೆವೊ ಹಾಗೆ ತಯಾರು ಮಾಡುತ್ತಿದ್ದೆವು. ಇದು ನಮಗೆ ಒಂದು ಬಗೆಯ ಆಟ. ಆದರೆ, ಅದು ನೀಡುತ್ತಿದ್ದ ಮುದ ಅದಕ್ಕೇ ಸಾಟಿ. ಇಲ್ಲವಾದರೆ ಯಾವುದಾರೂ ಸಿನಿಮಾದಲ್ಲಿ ನಟಿಯೋ ನಟನೋ ಡ್ರೆಸ್‌ ಮಾಡಿಕೊಂಡ ಹಾಗೆ ನಾವೂ ಮಾಡಿಕೊಂಡು ಖುಷಿ ಪಟ್ಟಿದ್ದಿದೆ. ಇವೆಲ್ಲವೂ ನಮ್ಮ ಸಂತಸದ ಕ್ಷಣಗಳೇ ಆಗಿದ್ದವು.

ನಮ್ಮ ಉಡುಗೆಗೆ ತಕ್ಕ ನಡಿಗೆ, ಅದಕ್ಕೆ ತಕ್ಕ ಭಾವ ಹೀಗೆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ. ಕೋವಿಡ್‌ ಕಾರಣದಿಂದಾಗಿ ಜೀವನದ ಇಂಥ ಕ್ಷಣಗಳನ್ನು ಮರುಸೃಷ್ಟಿ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಜೀವನದ ಇಂಥ ಕ್ಷಣಗಳು ನಮ್ಮನ್ನು ಹೆಚ್ಚು ಉತ್ಸಾಹಭರಿತರನ್ನಾಗಿ ಮಾಡುತ್ತವೆ ಎನ್ನುತ್ತಾರೆ ತಜ್ಞರು. ಮನೆಯಲ್ಲೇ ಇರುವುದರಿಂದ ಕಾಡುವ ಒಂಟಿತನ, ಕೆಲವೊಮ್ಮೆ ಖಿನ್ನತೆಗಳಿಂದ ದೂರ ಉಳಿಯುವಂತೆ ಬದುಕಿನ ಇಂಥ ಕ್ಷಣಗಳು ಸಹಾಯ ಮಾಡುತ್ತವೆ.

ರೋಗದಿಂದ ಭಯ, ಮನೆಯಲ್ಲೇ ಇರಬೇಕಾದ ಒತ್ತಡ, ಅದರಿಂದ ಬರುವ ಒಂಟಿತನ, ನಂತರ ಬರುವ ಖಿನ್ನತೆ ಇವೆಲ್ಲವನ್ನು ನಾವು ಖುದ್ದು ಸರಿಪಡಿಸಿಕೊಳ್ಳಬಹುದು. ಸ್ನೇಹಿತರ ಸಂಗ, ಹೊರಗೆ ಸುತ್ತಾಡುವುದರಿಂದ ಮಾತ್ರವೇ ಇದರಿಂದ ಹೊರಬರುತ್ತೇವೆ ಎನ್ನುವುದು ಸುಳ್ಳು ಮತ್ತು ಇಂಥ ಸಂದರ್ಭದಲ್ಲಿ ಅದು ಅಸಾಧ್ಯ ಕೂಡ. ಹಾಗಾಗಿ, ಮನೆಯಲ್ಲಿಯೇ ಇದ್ದುಕೊಂಡು, ನಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ ಉತ್ಸಾಹದಿಂದ, ಸಂತೋಷದಿಂದ ಇರಬಹುದಾಗಿದೆ. ಮನೆಯಿಂದ ಹೊರಗೆ ನಾವು ಸಂತೋಷವನ್ನು ಹುಡುಕಬೇಕಾಗಿಲ್ಲ.

***

ವಿದೇಶಗಳಲ್ಲಿ ಕೆಲವರು ಲಸಿಕೆ ಪಡೆಯುವ ಸಂದರ್ಭವನ್ನು ಸದಾ ನೆನಪಿನಲ್ಲಿರಿಸಿಕೊಳ್ಳಲು ವಿಭಿನ್ನ ಉಡುಪಿನೊಂದಿಗೆ ತೆರಳಿ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆಯುವುದು ಎಂದರೆ ಈ ಸಂದರ್ಭದಲ್ಲಿ ಸಂಭ್ರಮಿಸಬೇಕಾದ ವಿಷಯವೇ ಸರಿ. ಆದರೆ, ಅದಕ್ಕಾಗಿ ದೊಡ್ಡ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ಆದ್ದರಿಂದ ಕೆಲವರು ವಿಭಿನ್ನವಾಗಿ ಉಡುಗೆ ತೊಟ್ಟು, ಲಸಿಕೆ ಪಡೆದು ಸಂಭ್ರಮಿಸಿದ್ದಾರೆ.
-ಡಾ. ಶರಣ್ಯ ರವಿ,ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.