ADVERTISEMENT

ಮತ್ತೆ ಮರಳಿದ 80ರ ಫ್ಯಾಷನ್‌ ಟ್ರೆಂಡ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 8:19 IST
Last Updated 25 ಜೂನ್ 2020, 8:19 IST
80ರ ದಶಕದ ಟ್ರೆಂಡಿ ಉಡುಪು-  ಚಿತ್ರಕೃಪೆ:ಪಿನ್‌ಟ್ರೆಸ್ಟ್‌
80ರ ದಶಕದ ಟ್ರೆಂಡಿ ಉಡುಪು- ಚಿತ್ರಕೃಪೆ:ಪಿನ್‌ಟ್ರೆಸ್ಟ್‌   

ಫ್ಯಾಷನ್‌ ಕ್ಷೇತ್ರದಲ್ಲಿ ಇತ್ತೀಚೆಗೆ ಹಳೆಯ ಕಾಲದ ಫ್ಯಾಷನ್ ಟ್ರೆಂಡ್‌ಗಳೇ ಮತ್ತೆ ಮರುಕಳಿಸುತ್ತಿವೆ. ಅದರಲ್ಲೂ 80ರ ದಶಕದ ಟ್ರೆಂಡಿ ಉಡುಪುಗಳು ಈಗ ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿವೆ. ಅಲ್ಲದೇ ಈ ಟ್ರೆಂಡ್ ಲಲನೆಯರ ಮನಗೆದ್ದಿರುವುದು ಸುಳ್ಳಲ್ಲ.

ಸದಾ ಬದಲಾಗುವ ಫ್ಯಾಷನ್‌ ಕ್ಷೇತ್ರದಲ್ಲಿ ಮೊದಲೆಲ್ಲಾ ಬಣ್ಣ ಬಣ್ಣದ ಬೋಲ್ಡ್ ಎನ್ನಿಸುವಂತಹ ಬಟ್ಟೆಗಳನ್ನು ತೊಡಲು ಮಾನಿನಿಯರು ಇಷ್ಟ ಪಡುತ್ತಿದ್ದರು. ಆದರೆ ಈ ನಡುವೆ ಸರಳ ಸೊಬಗಿನ ಡ್ರೆಸ್‌ ಹೆಂಗಳೆಯರಿಗೆ ಇಷ್ಟವಾಗುತ್ತಿತ್ತು. ಜೊತೆಗೆ ಅರ್ಧಂಬರ್ಧ ಮೈ ಮುಚ್ಚುವ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಡ್ರೆಸ್‌ಗೆ ಮೊರೆ ಹೋಗುತ್ತಿದ್ದರು. ಆದರೆ ಈಗ ಫ್ಯಾಷನ್ ಟ್ರೆಂಡ್ ಬದಲಾಗಿದೆ. 80ರ ದಶಕದ ಪೂರ್ಣ ಮೈ ಮುಚ್ಚುವ ಗಾಢ ಬಣ್ಣದ ಉಡುಪುಗಳನ್ನು ಜನ ಮೆಚ್ಚುತ್ತಿದ್ದಾರೆ.80ದಶಕದಲ್ಲಿ ಪವರ್ ಸೂಟ್‌, ಸೀಕ್ವಿನ್‌ ಹಾಗೂ ಒನ್ ಶೋಲ್ಡರ್‌ ಸ್ಟೈಲ್‌ಗಳು ಟ್ರೆಂಡ್‌ ಸೃಷ್ಟಿಸಿದ್ದವು. ಈಗ ಆ ಟ್ರೆಂಡ್‌ ಮತ್ತೆ ಬಂದಿದೆ. 80ದಶಕದ ಫ್ಯಾಷನ್ ನೋಟದಲ್ಲಿ ನೀವು ಮಿಂಚಬೇಕು ಎಂದರೆ ಇಲ್ಲಿವೆ ಕೆಲವು ಡ್ರೆಸ್ ಕೋಡ್‌.

ಹಿಪ್‌ ಹಾಪ್‌ ಸ್ಟೈಲ್‌

ADVERTISEMENT

80ರ ದಶಕದಲ್ಲಿ ಹಿಪ್-ಹಾಪ್ ಸಂಗೀತದ ವ್ಯಾಮೋಹವು ಕಲ್ಪನೆಗೆ ಮೀರಿತ್ತು. ಸಲ್‌– ನ– ಪೆಪಾ, ಕ್ವೀನ್‌ ಲತಿಫ‌ ಮುಂತಾದ ಹಿಪ್‌–ಹಾಪ್‌ ಗಾಯಕರಿಂದ ಜನ ಸ್ಫೂರ್ತಿ ಪಡೆದಿದ್ದರು. ತಮ್ಮ ಸಂಗೀತಕ್ಕೆ ತಕ್ಕಂತೆ ಫ್ಯಾಷನ್‌ ದಿರಿಸುಗಳನ್ನು ತೊಡುತ್ತಿದ್ದ ಅವರು ಗಾಢ ಬಣ್ಣದ ಸಡಿಲವಾದ ದಿರಿಸುಗಳಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದರು. ನೀವು ಸಡಿಲವಾದ ಸಿಲೊಯೆಟ್‌ಗಳೊಂದಿಗೆ ಟ್ರ್ಯಾಕ್‌ ಪ್ಯಾಂಟ್‌ಗಳನ್ನು ಧರಿಸಬಹುದು. ಉದ್ದ ತೋಳಿನ ಬಣ್ಣ ಬಣ್ಣದ ಶರ್ಟ್‌ನೊಂದಿಗೆ ಜೀನ್ಸ್ ಧರಿಸುವುದು ಸೂಕ್ತ. ಹೊಟ್ಟೆಯ ಮೇಲ್ಭಾಗದವರೆಗೂ ಜೀನ್ಸ್‌ ಧರಿಸಿ ಬೆಲ್ಟ್‌ ಸಿಕ್ಕಿಸಿಕೊಂಡು ಇನ್‌ಶರ್ಟ್‌ ಮಾಡಿಕೊಳ್ಳುವುದು 80ರ ಟ್ರೆಂಡ್‌. ಸ್ಟ್ರೀಟ್‌ ಸ್ಟೈಲ್ ಆಗ ಹೆಚ್ಚು ಬೇಡಿಕೆಯಲ್ಲಿದ ಫ್ಯಾಷನ್ ಟ್ರೆಂಡ್ ಆಗಿತ್ತು.

ವರ್ಕೌಟ್ ಫ್ಯಾಷನ್‌

80ರ ದಶಕದ ವರ್ಕೌಟ್ ಫ್ಯಾಷನ್‌ ಬಗ್ಗೆ ನಿಮಗೆ ತಿಳಿಯಬೇಕು ಎನ್ನಿಸಿದರೆ ಅಂದಿನ ಎರೋಬಿಕ್ ವಿಡಿಯೊಗಳನ್ನು ನೋಡಬೇಕು. ಹೈ ರೈಸ್ ಬಾಡಿ ಸೂಟ್ಸ್‌, ನಿಯಾನ್ ಬ್ರೈಟ್‌ ಟೈಟ್ ಲೋವರ್‌, ಹೆಡ್‌ ಬ್ಯಾಂಡ್‌ ಹಾಗೂ ಬೈಕ್ ಶಾರ್ಟ್‌ಗಳು ಹೆಚ್ಚು ಜನಪ್ರೀಯತೆ ಗಳಿಸಿದ್ದವು. ಇವುಗಳನ್ನು ನೀವು ಧರಿಸಿ 80ರ ಫ್ಯಾಷನ್‌ಗೆ ಇನ್ನಷ್ಟು ರಂಗು ನೀಡಬಹುದು.

ಪಂಕ್ ಫ್ಯಾಷನ್‌

ಪಂಕ್ ಉಪಸಂಸ್ಕೃತಿಯಿಂದ ಪ್ರೇರೇಪಣೆಗೊಂಡು ಹುಟ್ಟಿದ ಫ್ಯಾಷನ್ ಇದು. 1970ರ ಆರಂಭದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದ ಫ್ಯಾಷನ್ ಟ್ರೆಂಡ್ ಆಗಿತ್ತು. ಟ್ಯಾಟುಗಳು ಹಾಗೂ ರಾಕಿಂಗ್‌ ದಿರಿಸುಗಳು ಪಂಕ್ ಫ್ಯಾಷನ್‌ನ ರೂಪಗಳಾಗಿದ್ದವು. ನಿಮಗೆ ಮಾದಕ ಸೆಳೆತದ ನೋಟ ಹೊಂದುವ ಇಚ್ಛೆ ಇದ್ದರೆ 80ರ ದಶಕದ ಈ ಫ್ಯಾಷನ್‌ ಅನ್ನು ರೂಢಿಸಿಕೊಳ್ಳಬಹುದು. ದಂಗೆಕೋರ ನೋಟ ಎಂದು ಈ ಡ್ರೆಸ್‌ಗೆ ಕರೆಯುತ್ತಿದ್ದರು. ರಿಪ್ಡ್‌ ಜೀನ್ಸ್‌, ಲೆದರ್ ಜಾಕೆಟ್‌, ದಪ್ಪನೆಯ ಬೂಟ್ಸ್‌ ಹಾಗೂ ಬ್ಯಾಂಡ್ ಟೀ ಶರ್ಟ್‌ ಪಂಕ್‌ ಫ್ಯಾಷನ್‌ನ ಟ್ರೆಂಡ್‌. ನೀವು ಇದನ್ನು ಧರಿಸಿ ಕೂದಲಿಗೆ ಬಣ್ಣ ಹಾಕಿಸಿಕೊಂಡರೆ 80 ಆ ಫ್ಯಾಷನ್‌ಗೆ ಮರುರೂಪ ನೀಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.