ADVERTISEMENT

ಹಾಲೋವಿನ್‌ ನೇಲ್‌ ಡಿಸೈನ್‌ ಟ್ರೆಂಡ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 19:30 IST
Last Updated 29 ಏಪ್ರಿಲ್ 2020, 19:30 IST
ಉಗುರು ಬಣ್ಣ
ಉಗುರು ಬಣ್ಣ   

‘ನೇಲ್‌ ಆರ್ಟ್‌’ –ಫ್ಯಾಷನ್ ಜಗತ್ತಿನ ವಿಭಿನ್ನಪ್ರಯೋಗಗಳಿಗೆ ಹೊಸತಾಗಿ ಸೇರ್ಪಡೆಯಾಗಿದೆ. ಅಂದದ ನೀಳ ಉಗುರಿನ ಮೇಲೆ ಬಗೆಬಗೆಯ ಉಗುರು ಬಣ್ಣಗಳನ್ನು ಬಳಸಿ ಕಾಮನಬಿಲ್ಲು, ವಾಟರ್‌ ಕಲರ್‌, ಅಕ್ರಾಲಿಕ್‌, ನಿಯಾನ್‌, ಎಚ್‌ಡಿ ನೇಲ್‌ ಆರ್ಟ್‌– ಹೀಗೆ ವಿವಿಧ ಬಗೆಯ ವಿನ್ಯಾಸಗಳನ್ನು ಮಾಡಿಕೊಳ್ಳುವುದು ಇಂದಿನ ಟ್ರೆಂಡ್‌.

ಉಗುರನ್ನು ಕುಂಚ ಮಾಡಿಕೊಂಡ ಕಲಾವಿದ, ಬಣ್ಣಗಳನ್ನು ಬಳಸಿ ಬಗೆಬಗೆಯ ವಿನ್ಯಾಸ ಮೂಡಿಸುವುದು ಬೆರುಗು ಉಂಟು ಮಾಡುತ್ತದೆ.ಈಗ ಹಾಲೋವಿನ್‌ ನೇಲ್‌ ಆರ್ಟ್‌ ಟ್ರೆಂಡ್‌ ಆರಂಭವಾಗಿದೆ. ಯುವತಿಯರು ತಮ್ಮ ಉದ್ದದ ಉಗುರಿಗೆ ಚಿತ್ರವಿಚಿತ್ರ ವಿನ್ಯಾಸಗಳನ್ನು ಮಾಡಿಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಹಾಲೋವಿನ್‌ ನೇಲ್‌ ಡಿಸೈನ್‌ಗಳದ್ದೇ ಹೊಸ ಟ್ರೆಂಡ್.

‘ಕೆಂಪು, ಕಪ್ಪು, ನೀಲಿಯಂತಹ ಗಾಢ ಬಣ್ಣಗಳನ್ನು ಉಪಯೋಗಿಸಿಕೊಂಡು ಉಗುರಿನಲ್ಲಿ ರಕ್ತದ ಕಲೆಯಂತೆ, ರಕ್ತ ತೊಟ್ಟಿಕ್ಕುವಂತೆ, ನೋಡಿದ ಕೂಡಲೇ ದೆವ್ವದಂತೆ ಕಾಣುವ, ಮನಸ್ಸಿಗೆ ರೇಜಿಗೆ ಹುಟ್ಟಿಸುವಂಥ ವಿನ್ಯಾಸಗಳನ್ನು ಬಿಡಿಸುತ್ತಿದ್ದಾರೆ. ಹಾಲೋವಿನ್‌ ವಿನ್ಯಾಸ ಮಾಡಿಕೊಂಡಾಗ ಬೆರಳಿಗೆ ಸುರುಳಿಯಾಕಾರದ ಉಂಗುರಗಳನ್ನು ತೊಟ್ಟರೆ ಹಾಲೋವಿನ್‌ ನೇಲ್‌ ಆರ್ಟ್‌ ಎದ್ದು ಕಾಣುತ್ತದೆ. ಪಾರ್ಟಿಗಳಿಗೆ ಹೋಗುವ ವೇಳೆ ‌ ವಿನ್ಯಾಸ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಬೆಂಗಳೂರಿನ ನೇಲ್‌ ಆರ್ಟಿಸ್ಟ್‌ ಕಲಾವಿದ ಅಬ್ದುಲ್ಲಾ.

ADVERTISEMENT

‘ಹಾಲೋವಿನ್‌ ನೇಲ್ ಡಿಸೈನ್‌ ಮಾಡುವಾಗ ಬಣ್ಣಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ಇಂತಹ ವಿನ್ಯಾಸಕ್ಕೆ ತಿಳಿ ಉಗುರು ಬಣ್ಣ ಎದ್ದು ಕಾಣುವುದಿಲ್ಲ. ಭಯ, ಭೀಬತ್ಸ ಈ ವಿನ್ಯಾಸದಲ್ಲಿರಬೇಕು. ಹಾಗಾಗಿ ಗಾಢ ಬಣ್ಣಗಳೇ ಸೂಕ್ತ’ ಎಂಬುದು ಅವರ ಸಲಹೆ.

ಅಕ್ರಾಲಿಕ್‌‌, ನಿಯಾನ್‌ ನೇಲ್‌ ಆರ್ಟ್‌ಗೆ ಹೋಲಿಸಿದರೆ ಹಾಲೋವಿನ್‌ ನೇಲ್‌ ಆರ್ಟ್‌ ಮಾಡಿಕೊಳ್ಳಲು ಸುಲಭವಂತೆ. ಬ್ಯೂಟಿ ಪಾರ್ಲರ್‌ ಅಥವಾ ನೇಲ್‌ ಆರ್ಟಿಸ್ಟ್‌ ಬೇಕಿಲ್ಲ. ಲಾಕ್‌ಡೌನ್‌ ಅವಧಿಯೂ ಆಗಿರುವುದರಿಂದ ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಇರುವ ಟೂತ್‌ಪಿಕ್ಕರ್‌, ಐಲೈನರ್‌ ಬ್ರಷ್‌‌ನಿಂದ ಉಗುರಿನಲ್ಲಿ ತರಹೇವಾರಿ ವಿನ್ಯಾಸ ಮಾಡಿಕೊಳ್ಳಬಹುದು. ‘ಯಾವ ಬಗೆಯ ವಿನ್ಯಾಸ ಮಾಡಿಕೊಳ್ಳಬಹುದು ಎಂದು ಮೊದಲು ಯೋಚಿಸಿಕೊಂಡು ನಂತರ ಉಗುರನ್ನು ನೀಟಾಗಿ ಕತ್ತರಿಸಿ ಕೊಂಡು, ಶೇಪ್‌ ಕೊಟ್ಟು ಮೊದಲು ವಾಟರ್‌ ಕಲರ್‌ ನೇಲ್‌ಪಾಲಿಷ್‌ ಹಚ್ಚಿಕೊಳ್ಳಬೇಕು. ನಂತರ ಅದರ ಮೇಲೆ ಹಾಲೋವಿನ್‌ ಥೀಮ್‌ಗೆ ಸರಿಯಾಗಿ ಗಾಢ ಬಣ್ಣಗಳನ್ನು ಬಳಸಿ ವಿನ್ಯಾಸ ಮಾಡಿಕೊಂಡರಾಯಿತು. ಇದಕ್ಕೆ ಸಂಬಂಧಿಸಿ ಈಗ ಯೂಟ್ಯೂಬ್‌ಗಳಲ್ಲಿ ವಿಡಿಯೊಗಳು ಲಭ್ಯವಿವೆ’ ಎನ್ನುತ್ತಾರೆ ಅಬ್ದುಲ್ಲಾ.

ನೇರ ಉಗುರಿನ ಮೇಲೆ ಪ್ರಯೋಗ ಮಾಡಲು ಇಷ್ಟ ಇಲ್ಲದಿದ್ದರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ನ ಕೃತಕ ಉಗುರು ಸಿಗುತ್ತದೆ. ಅದರ ಮೇಲೆ ವಿನ್ಯಾಸ ಮಾಡಿ ಅಂಟಿಸಿ ಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.