ADVERTISEMENT

ಕತ್ತಿನ ಕಪ್ಪಿಗೆ ಮನೆಮದ್ದು

ಮನಸ್ವಿ
Published 22 ಜನವರಿ 2021, 19:30 IST
Last Updated 22 ಜನವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದಿನ ಯುವಜನರಲ್ಲಿ ಸೌಂದರ್ಯಪ್ರಜ್ಞೆ ಮುಂಚಿನವರಿಗಿಂತ ಕೊಂಚ ಹೆಚ್ಚೇ ಎಂದು ಹೇಳಬಹುದು. ಸದಾ ಕಲೆ, ಮೊಡವೆಗಳಿಲ್ಲದ ಅಂದದ ಮುಖ, ಹೊಳೆಯುವ ತ್ವಚೆ ತಮ್ಮದಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಶ್ರಮ ಪಡುತ್ತಾರೆ ಕೂಡ. ಆದರೆ ಮುಖದ ಚರ್ಮ ಬೆಳ್ಳಗಿದ್ದರೂ ಹಲವರಲ್ಲಿ ಕುತ್ತಿಗೆಯ ಸುತ್ತಲೂ ಕಪ್ಪಾಗಿರುತ್ತದೆ. ಇದು ಅವರ ಮುಖದ ಅಂದವನ್ನೂ ಕೆಡಿಸುತ್ತದೆ. ಕುತ್ತಿಗೆಯ ಸುತ್ತ ಕಪ್ಪಾಗುವುದಕ್ಕೆ ಮುಖ್ಯ ಕಾರಣ ಸರಿಯಾಗಿ ಸ್ವಚ್ಛ ಮಾಡಿಕೊಳ್ಳದೇ ಇರುವುದು. ಕೆಲವೊಮ್ಮೆ ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು ಹಾಗೂ ಮಾಲಿನ್ಯದ ಕಾರಣದಿಂದಲೂ ಆಗಬಹುದು. ಅದರಲ್ಲೂ ಬೇಸಿಗೆಯಲ್ಲಿ ಬಿಸಿಲಿನ ಕಾರಣದಿಂದ ಇನ್ನಷ್ಟು ಕಪ್ಪಾಗಿ ಕಾಣಬಹುದು. ಅದಕ್ಕಾಗಿ ಅಡುಗೆಮನೆಯಲ್ಲೇ ಸಿಗುವ ವಸ್ತುಗಳಿಂದ ಕುತ್ತಿಗೆಯ ಕಪ್ಪನ್ನು ನಿವಾರಿಸಿಕೊಳ್ಳಿ.

ಲೋಳೆಸರದ ತಿರುಳು
ಕುತ್ತಿಗೆಯ ಸುತ್ತಲಿನ ಕಪ್ಪುಕಲೆಯನ್ನು ಹೋಗಲಾಡಿಸಲು ಲೋಳೆಸರ ಉತ್ತಮ ಔಷಧಿ. ಈಗ ಹಲವರು ತಮ್ಮ ಮನೆಯ ಬಾಲ್ಕನಿಯಲ್ಲಿ ಲೋಳೆಸರ ಗಿಡವನ್ನು ಬೆಳೆದುಕೊಂಡಿರುತ್ತಾರೆ. ಇದರಲ್ಲಿರುವ ಖನಿಜಾಂಶ ಹಾಗೂ ವಿಟಮಿನ್ ಅಂಶಗಳು ತ್ವಚೆಯ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಚರ್ಮದಲ್ಲಿನ ಮೆಲನಿನ್ ಅಂಶದ ಉತ್ಪಾದನೆಗೂ ಕಡಿವಾಣ ಹಾಕುತ್ತವೆ. ಅದಕ್ಕಾಗಿ ಪ್ರತಿದಿನ ಲೋಳೆಸರದ ತಿರುಳನ್ನು ತೆಗೆದುಕೊಂಡು ಕುತ್ತಿಗೆ ಸುತ್ತ ಹಚ್ಚಿ. ಕೆಲವು ನಿಮಿಷಗಳ ಕಾಲ ಅದನ್ನು ಉಜ್ಜಿ. ನಂತರ ಒಂದು ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಅನುಸರಿಸಿ.

ಆ್ಯಪಲ್ ಸೈಡರ್ ವಿನೆಗರ್‌
ಆ್ಯಪಲ್ ಸೈಡರ್ ವಿನೆಗರ್ ಚರ್ಮದಲ್ಲಿ ಪಿಎಚ್ ಅಂಶವನ್ನು ಸಮತೋಲನದಲ್ಲಿಡುತ್ತದೆ. ಇದು ಚರ್ಮದಲ್ಲಿನ ಕಳೆಗುಂದಿದ ಜೀವಕೋಶಗಳನ್ನು ತೆಗೆದುಹಾಕಿ ಹೊಸ ಜೀವಕೋಶಗಳು ಬೆಳೆಯಲು ಸಹಾಯ ಮಾಡುತ್ತದೆ. ಸ್ವಲ್ಪ ನೀರಿಗೆ 2 ಚಮಚ ಆ್ಯಪಲ್ ಸೈಡರ್ ವಿನೆಗರ್ ಹಾಕಿ. ಹತ್ತಿಯನ್ನು ಅದರಲ್ಲಿ ಅದ್ದಿ, ಕುತ್ತಿಗೆಯ ಸುತ್ತಲಿನ ಭಾಗಕ್ಕೆ ಹಚ್ಚಿ. ಅದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

ADVERTISEMENT

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಅಧಿಕವಾಗಿದೆ. ಜೊತೆಗೆ ಇದರಲ್ಲಿ ಬ್ಲೀಚಿಂಗ್ ಅಂಶವೂ ಇದೆ. ಈ ಎರಡೂ ಅಂಶಗಳು ಚರ್ಮದ ಬಣ್ಣದ ಹೊಳಪು ಹೆಚ್ಚಿಸಲು ನೆರವಾಗುತ್ತವೆ. 4 ಹನಿ ಬಾದಾಮಿ ಎಣ್ಣೆಯನ್ನು ಕುತ್ತಿಗೆ ಸುತ್ತ ಲೇಪಿಸಿ, ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಅದನ್ನು ಹಾಗೇ ಬಿಡಿ. ಸ್ನಾನ ಮಾಡುವಾಗಲೋ ಮುಖ ತೊಳೆದುಕೊಳ್ಳುವಾಗಲೋ ತೊಳೆದು ಬಿಡಿ.

ಮೊಸರು
ಮೊಸರಿನಲ್ಲಿ ನೈಸರ್ಗಿಕ ಕಿಣ್ವಗಳಿದ್ದು ಅವು ಚರ್ಮದ ಹೊಳಪು ಹೆಚ್ಚಲು ನೆರವಾಗುತ್ತವೆ. ಎರಡು ಚಮಚ ಮೊಸರು ತೆಗೆದುಕೊಂಡು ಅದನ್ನು ಕುತ್ತಿಗೆ ಸುತ್ತಲೂ ಹಚ್ಚಿ ಚೆನ್ನಾಗಿ ತಿಕ್ಕಿ. ಅದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಆಲೂಗೆಡ್ಡೆ
ಆಲೂಗೆಡ್ಡೆಯಲ್ಲಿ ಬ್ಲೀಚಿಂಗ್ ಅಂಶ ಅಧಿಕವಾಗಿದ್ದು ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಒಂದು ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ. ಅಲೂಗೆಡ್ಡೆ ತುರಿಯನ್ನು ಹಿಂಡಿ ರಸ ತೆಗೆದು ಅದಕ್ಕೆ ಒಂದೆರಡು ಚಮಚ ಅರಿಸಿನ ಸೇರಿಸಿ. ಅದನ್ನು ಕುತ್ತಿಗೆಯ ಸುತ್ತಲೂ ಹಚ್ಚಿ. 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.